ADVERTISEMENT

ಪ್ರಜಾಪ್ರಭುತ್ವಕ್ಕೇ ಆಪರೇಷನ್‌!

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 2:41 IST
Last Updated 11 ಮಾರ್ಚ್ 2020, 2:41 IST
   
""
""
""
""
""

ಮಧ್ಯ ಪ್ರದೇಶದಲ್ಲಿ ಕಮಲನಾಥ್‌ ನೇತೃತ್ವದ ಸರ್ಕಾರದ ವಿರುದ್ಧದ ‘ಆಪರೇಷನ್‌ ಕಮಲ’ ಮತ್ತೆ ಸದ್ದು ಮಾಡಿದೆ. 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಪ್ರಯೋಗ ಮೊದಲ ಸಲ ನಡೆದಿದ್ದರಿಂದ ‘ಆಪರೇಷನ್‌ ಕಮಲ’ಕ್ಕೆ ‘ಕರ್ನಾಟಕ ಮಾದರಿ’ ಎಂಬ ವಿಶೇಷಣವೂ ಅಂಟಿಕೊಂಡಿದೆ. ‘ಆಯಾ ರಾಮ್‌, ಗಯಾ ರಾಮ್‌’ ಪರಂಪರೆಗೆ ಕಡಿವಾಣವನ್ನು ಹಾಕಲು ಮೂರೂವರೆ ದಶಕಗಳಷ್ಟು ಹಿಂದೆಯೇ ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದ್ದರೂ ರಂಗೋಲಿ ಕೆಳಗೆ ತೂರುವ ಪ್ರಯತ್ನಗಳು ನಡೆದೇ ಇವೆ. ಪಕ್ಷಾಂತರದ ಹಲವು ಪ್ರಕರಣಗಳು ಸುಪ್ರೀಂ ಕೋರ್ಟ್‌ನ ವಿಚಾರಣೆಯನ್ನು ಎದುರಿಸಿದರೂ ಕಾನೂನಿನ ವ್ಯಾಖ್ಯಾನದ ಕುರಿತ ಕಗ್ಗಂಟುಗಳು ಹಾಗೇ ಉಳಿದಿವೆ. ಪಕ್ಷಾಂತರ ನಿಷೇಧದ ಕಾನೂನನ್ನೇ ಅಣಕಿಸುವಂತೆ ಮತ್ತೆ ಮತ್ತೆ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಗೋವಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನಡೆದ ಸರ್ಕಾರ ರಚನೆ ಪ್ರಹಸನಗಳೇ ಇದಕ್ಕೆ ಸಾಕ್ಷಿ...

***

ಆಪರೇಷನ್‌ ಕಮಲಕರ್ನಾಟಕ ಮಾದರಿ
‘ಆಪರೇಷನ್‌ ಕಮಲ’ ಎಂಬ ಪದಪುಂಜವನ್ನು ಹುಟ್ಟುಹಾಕಿದ್ದು ಕರ್ನಾಟಕದ ರಾಜಕಾರಣ.2008ರ ವಿಧಾನಸಭೆ ಚುನಾವಣೆ ಮುಗಿದಾಗ ‘ಆಪರೇಷನ್‌ ಕಮಲ’ಕ್ಕೆ ಬಿ.ಎಸ್‌. ಯಡಿಯೂರಪ್ಪ ಮುನ್ನುಡಿ ಬರೆದರು. ಗಣಿ ಉದ್ಯಮದಿಂದ ಸಾವಿರಾರು ಕೋಟಿ ಸಂಪಾದಿಸಿದ್ದ ಗಾಲಿ ಜನಾರ್ದನ ರೆಡ್ಡಿ, ಆಗ ಅವರಿಗೆ ಸಾಥ್‌ ನೀಡಿದ್ದರು.

ADVERTISEMENT

2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿತ್ತು. ಆರು ಜನ ಪಕ್ಷೇತರರ ಬೆಂಬಲ ಪಡೆದ ಯಡಿಯೂರಪ್ಪ ನೇತೃತ್ವದ ಸರ್ಕಾರ ಸರಳ ಬಹುಮತ ಗಳಿಸಿತು. ಅಧಿಕಾರಕ್ಕೇರಲು ಪಕ್ಷೇತರರನ್ನು ಊರುಗೋಲಾಗಿ ಬಳಸಿಕೊಳ್ಳುವುದು, ಬಳಿಕ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬೇಕಾದ ಬಲವನ್ನು ಕ್ರೋಡೀಕರಿಸುವುದು ಯಡಿಯೂರಪ್ಪ ಲೆಕ್ಕಾಚಾರವಾಗಿತ್ತು. ಮೊದಲ ಹಂತದಲ್ಲಿ ಕಾಂಗ್ರೆಸ್‌ನಿಂದ ಮೂವರು ಹಾಗೂ ಜೆಡಿಎಸ್‌ನಿಂದ ನಾಲ್ವರು ಶಾಸಕರಿಂದ ರಾಜೀನಾಮೆ ಕೊಡಿಸಿ, ಬಿಜೆಪಿ ಟಿಕೆಟ್‌ ಮೇಲೆ ಮರು ಚುನಾವಣೆಗೆ ನಿಲ್ಲಿಸಲಾಯಿತು. ಅದರಲ್ಲಿ ಐವರು ಗೆದ್ದುಬಂದರು.

ಆಪರೇಷನ್‌ ಕಮಲ 2.0
ದಶಕದ ಬಳಿಕ 2019ರಲ್ಲಿ ಯಡಿಯೂರಪ್ಪ ಮತ್ತದೇ ದಾರಿ ಹಿಡಿದರು. ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಗೆದ್ದ ಬಿಜೆಪಿ, ಬಹುಮತ ಪಡೆಯಲು ಇನ್ನೊಂದು ಸುತ್ತಿನ ಆಪರೇಷನ್‌ ಕಮಲ ನಡೆಸಿತು. ಕಾಂಗ್ರೆಸ್‌ನ 13, ಜೆಡಿಎಸ್‌ನ ಮೂರು ಹಾಗೂ ಇಬ್ಬರು ಪಕ್ಷೇತರ ಶಾಸಕರನ್ನು ಸೆಳೆದು, ರಾಜೀನಾಮೆ ಕೊಡಿಸಲಾಯಿತು. ಬಿಜೆಪಿಯತ್ತ ಗುಳೆ ಹೊರಟ 17 ಶಾಸಕರನ್ನು ಆಗಿನ ಸ್ಪೀಕರ್‌ ರಮೇಶಕುಮಾರ್‌ ಅನರ್ಹಗೊಳಿಸಿದರು.

ರಾಜೀನಾಮೆ ಕೊಟ್ಟ ಶಾಸಕರ ಪೈಕಿ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಚುನಾವಣೆಯ ವಿವಾದ ಕೋರ್ಟ್‌ನಲ್ಲಿ ಇರುವುದರಿಂದ ಉಪ ಚುನಾವಣೆ ನಡೆಯಲಿಲ್ಲ. 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದಿತು. ಎರಡರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದರು. ಯಡಿಯೂರಪ್ಪ ತಮ್ಮ ಬಲ ಹೆಚ್ಚಿಸಿಕೊಂಡು ಅಧಿಕಾರ ಭದ್ರ ಪಡಿಸಿಕೊಂಡರು.

ಅರುಣಾಚಲ ಪ್ರದೇಶ: ಒಂದೇ ವರ್ಷದಲ್ಲಿ 3 ಪಕ್ಷಗಳಿಂದ ಸಿಎಂ
2016ರಸೆ‍ಪ್ಟೆಂಬರ್ ತಿಂಗಳಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಬೃಹತ್ ಪಕ್ಷಾಂತರ ಪರ್ವ ನಡೆಯಿತು. ಸ್ವತಃ ಮುಖ್ಯಮಂತ್ರಿ ಜತೆ ಇಡೀ ಮಂತ್ರಿಮಂಡಲವೇ ಪಕ್ಷ ತೊರೆದು ಬೇರೊಂದು ಪಕ್ಷ ಸೇರಿತು. ಮುಖ್ಯಮಂತ್ರಿ ಪೆಮಾ ಖಂಡು ಹಾಗೂಕಾಂಗ್ರೆಸ್‌ನ 44 ಶಾಸಕರು ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ ಎಂಬಪ್ರಾದೇಶಿಕ ಪಕ್ಷ ಸೇರಿದರು.

ಪಕ್ಷ ಬಿಟ್ಟುಹೋಗದ ಏಕೈಕ ಸದಸ್ಯ ಎಂದರೆ, ಮಾಜಿ ಮುಖ್ಯಮಂತ್ರಿ ನಬಮ್ ತುಕಿ. ಮೂರನೇ ಎರಡರಷ್ಟು ಸದಸ್ಯರು ಪಕ್ಷ ತೊರೆದ ಕಾರಣ ಇವರಿಗೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗಲಿಲ್ಲ. ಪೆಮಾ ಖಂಡು ಅವರು ಅದೇ ವರ್ಷದ ಡಿಸೆಂಬರ್‌ನಲ್ಲಿ 33 ಶಾಸಕರ ಜತೆ ಬಿಜೆಪಿಗೆ ಹಾರಿ ಸರ್ಕಾರ ರಚಿಸಿದರು. ಒಂದೇ ವರ್ಷದ ಅವಧಿಯಲ್ಲಿ ಅವರು ಮೂರೂ ಪಕ್ಷಗಳಿಂದ ಮುಖ್ಯಮಂತ್ರಿ ಆಗುವಂತಾಯಿತು.

ಮಹಾರಾಷ್ಟ್ರದಲ್ಲಿ ಹೈಡ್ರಾಮಾ
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಮುಖ್ಯಮಂತ್ರಿ ಪಟ್ಟಕ್ಕೆ ಶಿವಸೇನಾ ಪಟ್ಟು ಹಿಡಿದಿದ್ದರಿಂದ ಬಿಜೆಪಿಯು ಎನ್‌ಸಿಪಿಯ ಅಜಿತ್ ಪವಾರ್‌ಗೆ ಗಾಳ ಹಾಕಿತು. ಸೂರ್ಯ ಮೂಡುವ ಹೊತ್ತಿಗೆ ಬಿಜೆಪಿ ಸರ್ಕಾರ ರಚನೆಯಾಯಿತು. ಆದರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇದಕ್ಕೆ ಒಪ್ಪಲಿಲ್ಲ.

ಎನ್‌ಸಿಪಿ ಶಾಸಕರು ಅಜಿತ್ ಪವಾರ್‌ ಜತೆ ಬರಲಿಲ್ಲ. ಅಂದುಕೊಂಡಂತೆ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಕೇವಲ ಎರಡೇ ದಿನಗಳಲ್ಲಿ ಸರ್ಕಾರ ಪತನವಾಯಿತು. ಇದಾದ ಬಳಿಕ ಎನ್‌ಸಿಪಿ–ಕಾಂಗ್ರೆಸ್–ಶಿವಸೇನಾ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಗೋವಾ: ಬಲಗೊಂಡಿತು ಸರ್ಕಾರ
2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಗದಿದ್ದರೂ ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರರನ್ನು ಸೇರಿಸಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತು. ರಕ್ಷಣಾ ಸಚಿವರ ಹುದ್ದೆಗೆ ರಾಜೀನಾಮೆ ನೀಡಿದ್ದ ಮನೋಹರ್ ಪರ‍್ರಿಕರ್, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ನಿಧನಾನಂತರ, ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾದರು.

ಸರ್ಕಾರವನ್ನು ಬಲಪಡಿಸುವ ಯತ್ನದ ಭಾಗವಾಗಿ, ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಶಾಸಕರು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದರು. ಮೂರನೇ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿದ್ದರಿಂದ ಇವರಿಗೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗಲಿಲ್ಲ.

ತೆಲಂಗಾಣದಲ್ಲೂ ನಾಟಕ
ಕಳೆದ ಜೂನ್‌ನಲ್ಲಿ ತೆಲಂಗಾಣದ ಕಾಂಗ್ರೆಸ್‌ ಪಕ್ಷ ಒಡೆಯಿತು. 119 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 19 ಸದಸ್ಯರು ಇದ್ದರು. ಈ ಪೈಕಿ 12 ಶಾಸಕರು ಆಡಳಿತಾರೂಢ ಟಿಆರ್‌ಎಸ್ ಪಕ್ಷದಲ್ಲಿ ವಿಲೀನಗೊಂಡರು. ಇವರಿಗೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗಲಿಲ್ಲ.

ಮೂರನೇ ಎರಡರಷ್ಟು ಸದಸ್ಯರು ಪಕ್ಷದಿಂದ ಹೊರಬಂದಿದ್ದ ಕಾರಣ, ರಾಜೀನಾಮೆ ನೀಡುವ ಅಗತ್ಯ ಕಾಣಿಸಲಿಲ್ಲ.

ರೆಸಾರ್ಟ್‌ ರಾಜಕಾರಣ
ಶಾಸಕನೊಬ್ಬ ಪಕ್ಷವನ್ನು ಬದಲಿಸುವ ಪ್ರಕ್ರಿಯೆ ಈಗ ಹೊಸರೂಪ ಪಡೆದಿದೆ. ‘ಆಯಾರಾಮ್‌ ಗಯಾರಾಮ್‌’ ಎಂದು ಗುರುತಿಸಿಕೊಳ್ಳುತ್ತಿದ್ದ ಈ ಪ್ರಕ್ರಿಯೆಯು ಪಕ್ಷಾಂತರ ನಿಷೇಧ ಕಾನೂನು ಜಾರಿಯಾದ ಮೂರೂವರೆ ದಶಕಗಳಲ್ಲಿ ‘ರೆಸಾರ್ಟ್‌ ರಾಜಕಾರಣ’ವಾಗಿ ರೂಪಾಂತರಗೊಂಡಿದೆ.

ರಾಜಕೀಯ ಪಕ್ಷವೊಂದರ ಕೆಲವು ಶಾಸಕರನ್ನು ಇನ್ನೊಂದು ಪಕ್ಷದವರು ಕರೆದೊಯ್ದು ಐಷಾರಾಮಿ ರೆಸಾರ್ಟ್‌ಗಳಲ್ಲಿ ಕೆಲವು ದಿನಗಳ ಕಾಲ ಇಡುವ ಈ ‘ರಾಜಕಾರಣ’ ಈಗ ಬಹುತೇಕ ಎಲ್ಲಾ ರಾಜ್ಯಗಳಿಗೆ ವ್ಯಾಪಿಸಿದೆ. ಅವರಿರುವ ರೆಸಾರ್ಟ್‌ಗೆ ಭದ್ರತೆ ನೀಡಲಾಗುತ್ತದೆ. ಬಹುಮತ ಸಾಬೀತುಪಡಿಸುವಂದು ಅವರನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತದೆ.

ಏನಿದು ಪಕ್ಷಾಂತರ ನಿಷೇಧ ಕಾನೂನು?
ಶಾಸಕರು ಅಥವಾ ಸಂಸದರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದನ್ನು ತಡೆಯಲುರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ (1985ರಲ್ಲಿ) ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೆ ತರಲಾಯಿತು. ಸಂವಿಧಾನಕ್ಕೆ52ನೇ ತಿದ್ದುಪಡಿ ತಂದು,10ನೇ ಶೆಡ್ಯೂಲ್‌ನಲ್ಲಿಇದನ್ನು ಸೇರಿಸಲಾಯಿತು. ಸಂವಿಧಾನದ 91ನೇ ತಿದ್ದುಪಡಿ ಮೂಲಕ ಕಾನೂನಿಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು.

‘ರಾಜಕೀಯ ಪಕ್ಷಾಂತರವು ರಾಷ್ಟ್ರೀಯ ಕಾಳಜಿಯ ವಿಷಯ. ಇದರ ವಿರುದ್ಧ ಹೋರಾಡದಿದ್ದರೆ, ಅದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಅದರ ತತ್ವಗಳನ್ನು ಹಾಳುಗೆಡವುವ ಅಪಾಯವಿದೆ...’ – ಪಕ್ಷಾಂತರವನ್ನು ನಿಷೇಧಿಸುವ ಉದ್ದೇಶದಿಂದ ಸಂವಿಧಾನಕ್ಕೆ ಸೇರಿಸಲಾದ ಹತ್ತನೇ ಶೆಡ್ಯೂಲ್‌ನ ಮುನ್ನುಡಿಯಲ್ಲಿರುವ ಮಾತುಗಳಿವು.

ಯಾವುದು ಪಕ್ಷಾಂತರ?
* ಶಾಸಕ/ಸಂಸದ ತನ್ನ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದೇ ಬೇರೆ ಪಕ್ಷಕ್ಕೆ ಸೇರ್ಪಡೆ ಆಗುವುದು
* ಸದನದಲ್ಲಿ ಮತದಾನದ ವೇಳೆ ಜನಪ್ರತಿನಿಧಿಯು ತನ್ನ ಪಕ್ಷದ ನಿರ್ದೇಶನ/ವಿಪ್ ಉಲ್ಲಂಘಿಸುವುದು
* ಮಸೂದೆಗಳ ಮೇಲೆ ನಡೆಯುವ ಮತದಾನದಿಂದ ಶಾಸಕ/ಸಂಸದ ದೂರ ಉಳಿಯುವುದು

ಯಾವುದು ಪಕ್ಷಾಂತರವಲ್ಲ?
* ಪಕ್ಷವೊಂದರ ಮೂರನೇ ಎರಡರಷ್ಟು ಶಾಸಕರು/ಸಂಸದರು ಬೇರೆ ಪಕ್ಷದಲ್ಲಿ ವಿಲೀನವಾಗುವುದು
* ಶಾಸಕ/ಸಂಸದರು ಪಕ್ಷದಿಂದ ಹೊರಬಂದು, ಬೇರೊಂದು ಬಣವಾಗಿ ಗುರುತಿಸಿಕೊಳ್ಳುವುದು
* ಸಭಾಪತಿ, ಸ್ಪೀಕರ್‌, ಪ್ರತಿನಿಧಿಸುವ ಪಕ್ಷಕ್ಕೆ ರಾಜೀನಾಮೆ ನೀಡುವುದು

ಪಕ್ಷಾಂತರದ ಹಾದಿ...
* 1967ರ ಬಳಿಕ ಅನೇಕ ರಾಜ್ಯಗಳಲ್ಲಿ ಸರ್ಕಾರ ಉರುಳಲು ಮತ್ತು ಹೊಸ ಸರ್ಕಾರ ರಚನೆಗೆ ಪಕ್ಷಾಂತರಿಗಳು ಕಾರಣರಾದರು. ಈ ಬೆಳವಣಿಗೆ ಒಂದು ರೀತಿಯ ಅಸ್ಥಿರತೆಗೆ ಕಾರಣವಾಯಿತು, ಅಭಿವೃದ್ಧಿ ಹಿಂದೆಸರಿಯಿತು

* 1967ರಲ್ಲಿ ಹರಿಯಾಣದ ಶಾಸಕ ಗಯಾ ಲಾಲ್‌ ಎಂಬುವರು ಒಂದೇ ದಿನ ಎರಡು ಬಾರಿ ಪಕ್ಷಾಂತರ ನಡೆಸಿದರು. 15 ದಿನಗಳ ಬಳಿಕ ಅವರು ಮತ್ತೊಮ್ಮೆ ಪಕ್ಷ ಬದಲಿಸಿ ‘ಆಯಾರಾಮ್‌ ಗಯಾರಾಮ್‌’ ನುಡಿಗಟ್ಟು ಹುಟ್ಟಿಕೊಳ್ಳಲು ಕಾರಣರಾದರು

* 1967ರಿಂದ 1971ರವರೆಗಿನ ಅವಧಿಯಲ್ಲಿ ಸಂಸತ್ತಿನಲ್ಲಿ 142 ಹಾಗೂ ವಿವಿಧ ವಿಧಾನಸಭೆಗಳಲ್ಲಿ ಪಕ್ಷಾಂತರದ 1,969 ಘಟನೆಗಳು ನಡೆದಿದ್ದವು. ಇವರಲ್ಲಿ 212 ಮಂದಿ ಶಾಸಕರಿಗೆ ಮಂತ್ರಿ ಪದವಿ ಲಭಿಸಿತ್ತು.

* 1967ರಿಂದ 1983ರ ಅವಧಿಯಲ್ಲಿ ಪಕ್ಷಾಂತರದ 2,700 ಘಟನೆಗಳು ನಡೆದಿದ್ದವು. ಅವರಲ್ಲಿ 15 ಮಂದಿ ಪಕ್ಷಾಂತರಿಗಳು ಮುಖ್ಯಮಂತ್ರಿ ಸ್ಥಾನ ಪಡೆದಿದ್ದರು.

ಸ್ಪೀಕರ್‌ಗೆ ಅನರ್ಹಗೊಳಿಸುವ ಪರಮಾಧಿಕಾರ
* ಶಾಸಕ/ಸಂಸದ ಪಕ್ಷಾಂತರ ಮಾಡಿದರೆ, ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸ್ಪೀಕರ್‌ಗೆ
* ನಿಯಮ ಉಲ್ಲಂಘಿಸುವ ಜನಪ್ರತಿನಿಧಿಯನ್ನು ಸ್ಪೀಕರ್ ವಿಚಾರಣೆ ನಡೆಸಬಹುದು
* ಈ ಕಾನೂನು ಉಲ್ಲಂಘಿಸುವ ಜನಪ್ರತಿನಿಧಿಯನ್ನು ಸ್ಪೀಕರ್ ಅನರ್ಹಗೊಳಿಸಬಹುದು

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೇನು?
ಕರ್ನಾಟಕ ವಿಧಾನಸಭೆಯ ಆಗಿನ ಸ್ಪೀಕರ್‌ ರಮೇಶಕುಮಾರ್‌ ಅವರು 17 ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪಕ್ಷಾಂತರ ನಿಷೇಧ ಕಾನೂನು ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮವನ್ನು ಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ, ಪ್ರಸಕ್ತ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಅವರು ಮತ್ತೆ ಸ್ಪರ್ಧಿಸುವಂತಿಲ್ಲ ಎನ್ನುವ ಆದೇಶವನ್ನು ವಜಾಗೊಳಿಸಿತ್ತು.

ಸ್ಪೀಕರ್‌ ಹುದ್ದೆಯ ದುರುಪಯೋಗ
ಆಡಳಿತದಲ್ಲಿರುವ ಪಕ್ಷಗಳು ಸ್ಪೀಕರ್‌ ಹುದ್ದೆಯ ದುರುಪಯೋಗ ಮಾಡಿಕೊಂಡು, ಪಕ್ಷಾಂತರ ನಿಷೇಧ ಕಾನೂನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ದೂರುಗಳು ವ್ಯಾಪಕವಾಗಿವೆ. ಶಾಸಕರು ನೀಡಿದ ರಾಜೀನಾಮೆಯನ್ನು ತಕ್ಷಣ ಸ್ವೀಕರಿಸುವಂತೆ ಇಲ್ಲವೆ ನಿರ್ಣಯ ಕೈಗೊಳ್ಳಲು ಬೇಕಂತಲೇ ವಿಳಂಬ ಮಾಡುವಂತೆ ಸ್ಪೀಕರ್‌ ಕಚೇರಿಯನ್ನು ಬಳಸಿಕೊಂಡ ಕುರಿತು ಇತ್ತೀಚಿನ ದಿನಗಳಲ್ಲಿ ದೂರುಗಳು ಹೆಚ್ಚಿವೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ‘ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ಗೆ ಇರಬೇಕೇ ಎಂಬ ವಿಷಯವಾಗಿ ಸಂಸತ್ತು ಮರುಚಿಂತನೆ ನಡೆಸಬೇಕು. ಪಕ್ಷಾಂತರ ನಿಷೇಧ ಕಾನೂನು ಕುರಿತ ಪ್ರಕರಣಗಳ ವಿಚಾರಣೆಗೆ ಒಂದು ನ್ಯಾಯಮಂಡಳಿ ರಚನೆಗೂ ಚಿಂತಿಸಬೇಕು’ ಎಂದು ಸಲಹೆಯನ್ನೂ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.