ಸಂವಿಧಾನದ ರಚನೆ ಆಗುತ್ತಿದ್ದಾಗ ನಡೆದ ಹಲವು ಚರ್ಚೆಗಳಲ್ಲಿ ಮುಖ್ಯವಾಗಿದ್ದೊಂದನ್ನು ಗುರುತಿಸ ಬೇಕು. ಆಗ ಡಾ.ಬಿ.ಆರ್. ಅಂಬೇಡ್ಕರ್ ಅವರು ಜಮೀನನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಹೇಳಿದ್ದರು. ಯಾರೂ ಜಮೀನಿನ ಮಾಲೀಕತ್ವ ಹೊಂದಿರಬಾರದು, ಕೃಷಿಉದ್ದೇಶಕ್ಕೆ ಜಮೀನನ್ನು ಎಲ್ಲರಿಗೂ ಹಂಚಿಕೆ ಮಾಡಬೇಕು ಎಂದು ಅವರು ಹೇಳಿದ್ದರು. ಸಮಾನತೆ ಸಾಧಿಸಲು ಇದು ಅಗತ್ಯ ಎಂದಿದ್ದರು. ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ವಿರೋಧ ವ್ಯಕ್ತಪಡಿಸಿದ್ದರು. ಏಕೆಂದರೆ, ಕಾಂಗ್ರೆಸ್ಸಿನ ಬಹುತೇಕರು ಆಗ ಜಮೀನ್ದಾರರಾಗಿದ್ದರು!
ಉಳುವವನೇ ಹೊಲದೊಡೆಯ ಆಗಬೇಕು ಎಂಬ ಬೇಡಿಕೆ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಕೂಡ ಇತ್ತು. ಸ್ವಾತಂತ್ರ್ಯ ಸಿಕ್ಕ ತಕ್ಷಣ ಈ ಚರ್ಚೆ, ಬೇಡಿಕೆ ಮುಖ್ಯ ನೆಲೆಗೆ ಬಂತು. ಹಲವು ರಾಜ್ಯಗಳು ಭೂಸುಧಾರಣೆ ಕಾನೂನು ಜಾರಿಗೊಳಿಸಲು ಆರಂಭಿಸಿದವು. ಎಲ್ಲವೂ ವೈಜ್ಞಾನಿಕವಾಗಿದ್ದವು ಎನ್ನಲಾಗದು. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುವುದು ಆರಂಭವಾಯಿತು. ಆಗ, ಆಸ್ತಿ ಹಕ್ಕು ಮೂಲಭೂತ ಹಕ್ಕಾಗಿತ್ತು. ಹೀಗಿರುವಾಗ, ಭೂಸುಧಾರಣೆ ಕಾಯ್ದೆಯ ಅಡಿಯಲ್ಲಿ ವ್ಯಕ್ತಿಯ ಆಸ್ತಿಯನ್ನು (ಅಂದರೆ, ಮೂಲಭೂತ ಹಕ್ಕನ್ನು) ಕಿತ್ತುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನ್ಯಾಯಾಲಯಗಳಲ್ಲಿ ಇರಿಸಲಾಯಿತು.
ಇದು ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿತು. ಕಾಮೇಶ್ವರ ಸಿಂಗ್ ಪ್ರಕರಣದಲ್ಲಿ ಬಿಹಾರದ ಭೂಸುಧಾರಣೆ ಕಾಯ್ದೆಯನ್ನು ಪ್ರಶ್ನಿಸಲಾಯಿತು. ಆಸ್ತಿ ಮೂಲಭೂತ ಹಕ್ಕಾಗಿರುವಾಗ ಅದನ್ನು ಕಿತ್ತುಕೊಳ್ಳಲಾಗದು, ಬಿಹಾರ ಸರ್ಕಾರದ ಭೂಸುಧಾರಣೆ ಕಾಯ್ದೆ ಸರಿಯಿಲ್ಲ ಎಂದು ಪಟ್ನಾ ಹೈಕೋರ್ಟ್ ಹೇಳಿತು. ಬೇರೆ ಬೇರೆ ರಾಜ್ಯಗಳೂ ಇದೇ ಮಾದರಿಯ ಕಾನೂನು ತಂದಿದ್ದವು. ಇವೆಲ್ಲವೂ ಸುಪ್ರೀಂ ಕೋರ್ಟ್‌ಗೆ ಬಂದವು. ಭೂಸುಧಾರಣೆಗೆ ಸಂಬಂಧಿಸಿದ ಕಾನೂನುಗಳನ್ನು ನೆಹರೂ ನೇತೃತ್ವದ ಕೇಂದ್ರ ಸರ್ಕಾರ 9ನೆಯ ಶೆಡ್ಯೂಲ್ ಅಡಿ ತಂದಿತು – ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟಗಳನ್ನು ಕೊನೆಗೊಳಿಸುವ ಉದ್ದೇಶದಿಂದ.
ಭೂಸುಧಾರಣೆ ಕಾಯ್ದೆಗಳನ್ನು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ನಾವು ಹೇಳಿರುವ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಪರಿಗಣಿಸಬೇಕು. ಅದೇ ನೆಲೆಯಲ್ಲಿ ಅಂದಿನ ನ್ಯಾಯಾಲಯಗಳೂ ಅವುಗಳನ್ನು ಪರಿಗಣಿಸಿದ ಕಾರಣ, ಭೂಸುಧಾರಣಾ ಕಾಯ್ದೆಗಳು ಉಳಿದುಕೊಂಡವು. ಸಾಮಾಜಿಕ ನ್ಯಾಯದ ನೆಲೆಯಲ್ಲಿಯೇ ಕರ್ನಾಟಕದಲ್ಲಿ ಇನಾಂ ರದ್ದತಿ ಕಾಯ್ದೆಗಳು ಬಂದವು. ವಿಲೇಜ್ ಆಫೀಸರ್ಸ್ ಅಬಾಲಿಷನ್ ಆ್ಯಕ್ಟ್ ಕೂಡ ಬಂತು.
ಇವೆಲ್ಲ ಆಗುತ್ತಿದ್ದಾಗ, ಬಹುತೇಕ ಶಾಸಕರು ಜಮೀನ್ದಾರರೂ ಆಗಿದ್ದರು. ಭೂಸುಧಾರಣೆ ಬಹಳಷ್ಟು ರಾಜ್ಯಗಳಲ್ಲಿ ಆಗಲಿಲ್ಲ. ಆಗ ವಿನೋಭಾ ಭಾವೆ ಅವರು ಜಮೀನು ಹೆಚ್ಚಿದ್ದವರು ಅದನ್ನು ವಿಶಾಲ ಮನೋಭಾವದಿಂದ, ಜಮೀನು ಇಲ್ಲದವರಿಗೆ ಕೊಡಬೇಕು ಎಂಬ ಚಳವಳಿ ಆರಂಭಿಸಿದರು.
ಕರ್ನಾಟಕದಲ್ಲಿನ ಸಮಾಜವಾದಿ ಚಳವಳಿ ಕೂಡ ಭೂಸುಧಾರಣೆ ಮೇಲೆ ಪ್ರಭಾವ ಬೀರಿತು. ದೇವರಾಜ ಅರಸು ಅವರ ಮೂಲಕ ಕರ್ನಾಟಕದಲ್ಲಿ ಬದಲಾವಣೆ ಬಂತು. ಅತ್ಯಂತ ಅದ್ಭುತವಾದ ಕಾನೂನು ಬಂದಿದ್ದು ಅವರ ಕಾಲದಲ್ಲಿ. ಇದು ಜಮೀನು ಮಾಲೀಕತ್ವದ ವಿಚಾರವನ್ನು ಒಂದೇ ಬಾರಿಗೆ, ಎಲ್ಲ ಕಾಲಕ್ಕೂ ಸಲ್ಲುವಂತೆ ಪರಿಹರಿಸಿತು. ದೇಶದ ಎಲ್ಲಿಯೂ ಇಷ್ಟೊಂದು ಬದಲಾವಣೆ ತಂದಂತಹ ಕಾನೂನು ಇಲ್ಲ. ಉಳುವವ ಹೊಲದ ಒಡೆಯನಾದ. ಕರ್ನಾಟಕದಲ್ಲಿ ಗೇಣಿ ಪದ್ಧತಿಯನ್ನು ನಿರ್ನಾಮ ಮಾಡಲಾಯಿತು. ಮಠ, ಟ್ರಸ್ಟ್, ಕಂಪನಿಗಳು ಕೃಷಿ ಜಮೀನನ್ನು ಖರೀದಿ ಮಾಡುವ ಅವಕಾಶ ಇಲ್ಲವಾಗಿಸಲಾಯಿತು. ಕೃಷಿ ಜಮೀನು ಕೃಷಿಗೆ ಮಾತ್ರ ಎಂಬ ಕ್ರಾಂತಿಕಾರಿ ಪರಿಕಲ್ಪನೆಯನ್ನು ಕರ್ನಾಟಕ ಅನುಷ್ಠಾನಕ್ಕೆ ತಂದಿತು. ಜಮೀನು ಮಾಲೀಕತ್ವದ ಪ್ರಮಾಣಕ್ಕೆ ಮಿತಿ ಹೇರಿತು. ಇಷ್ಟೆಲ್ಲ ಬದಲಾವಣೆಗಳು ಆದ ನಂತರವೂ ಭಾರಿ ಪ್ರಮಾಣದಲ್ಲಿ ಜಮೀನು ಮಾಲೀಕತ್ವ ಹೊಂದಿದ ಕುಟುಂಬಗಳು ಇದ್ದವು ಎಂಬುದು ಬೇರೆ ಮಾತು.
ಕೃಷಿಕನಲ್ಲದವ ಕೃಷಿ ಜಮೀನು ಖರೀದಿ ಮಾಡದಂತೆ ನಿಯಮ ರೂಪಿಸಲಾಯಿತು. ಕೃಷಿ ಜಮೀನನ್ನು ಅನ್ಯ ಉದ್ದೇಶಗಳ ಬಳಕೆಗೆ ಪರಿವರ್ತನೆ ಮಾಡುವುದನ್ನು ಬಹಳ ಕಠಿಣಗೊಳಿಸಲಾಯಿತು. ಕುಟುಂಬಗಳು ಹೊಂದಬಹುದಾದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದ ಕೃಷಿ ಜಮೀನು ಸರ್ಕಾರದ ತೆಕ್ಕೆಗೆ ಹೋಯಿತು. ಅದನ್ನು ಸರ್ಕಾರವು ಭೂರಹಿತರಿಗೆ ಹಂಚಿಕೆ ಮಾಡಲು ಬಳಸಿಕೊಂಡಿತು. ದಲಿತರಿಗೆ ಮೀಸಲಿಟ್ಟ ಜಮೀನನ್ನು ಬೇರೆ ಯಾರೂ ಖರೀದಿ ಮಾಡಬಾರದು ಎಂಬ ಕಾನೂನನ್ನು ಕೂಡ ಜಾರಿಗೆ ತರಲಾಯಿತು. ದೇಶದಲ್ಲಿ ಜಾರಿಗೆ ಬಂದ ಅತ್ಯುತ್ತಮ ಕಾನೂನುಗಳಲ್ಲಿ ಕರ್ನಾಟಕ ತಂದ ಈ ಕಾನೂನುಗಳು ಕೂಡ ಸೇರಿವೆ. ಇದು ನಮ್ಮ ಹಿನ್ನೆಲೆ.
ಗ್ಯಾಟ್ ಒಪ್ಪಂದ ಆದಾಗಿನಿಂದ, ಭಾರತದಲ್ಲಿನ ಜಮೀನಿಗೆ ಸಂಬಂಧಿಸಿದ ಕಾನೂನುಗಳು ಬಹಳ ಕಠಿಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತ ಬಂದಿದೆ. ಅಭಿವೃದ್ಧಿ ಆಗಬೇಕು ಎಂದಾದರೆ ಜಮೀನಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಸುಧಾರಣೆ ಆಗಬೇಕು ಎಂದು ವಿಶ್ವ ಬ್ಯಾಂಕ್ ಹೇಳುತ್ತ ಬಂದಿದೆ. ಜಮೀನಿನ ಮಾಲೀಕತ್ವದ ವಿಚಾರದಲ್ಲಿ ಒಂದಿಷ್ಟು ಉದಾರಿಗಳಾಗಬೇಕಿರುವುದು ವಿಶ್ವ ಬ್ಯಾಂಕ್ ಬಯಸುತ್ತಿರುವ ಭೂಸುಧಾರಣೆ!
1980ರ ದಶಕದವರೆಗೆ ಕಂಪನಿಗಳಿಗೆ ಜಮೀನು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ ಅರ್ಥವ್ಯವಸ್ಥೆ ಬೆಳೆದಂತೆ, ಕೈಗಾರಿಕಾ ವಿಸ್ತರಣೆ ಸಮಸ್ಯೆ ಎದುರಿಸಲಾರಂಭಿಸಿತು. ಜಮೀನು ಎಂಬುದು ಯಾರಿಗೆ ಬೇಕಿದ್ದರೂ ಖರೀದಿಗೆ ಸಿಗಬೇಕು ಎಂಬುದು ಕೂಡ ವಿಶ್ವ ಬ್ಯಾಂಕ್ ಬಯಸುವ ಭೂಸುಧಾರಣೆ.
ಕೃಷಿ ಜಮೀನನ್ನು ದುರ್ಬಳಕೆಯಿಂದ ರಕ್ಷಿಸುವ ಕಾನೂನುಗಳನ್ನು ದುರ್ಬಲಗೊಳಿಸುವುದರಿಂದ, 70 ವರ್ಷಗಳ ಹೋರಾಟದ ಮೂಲಕ, ಕಾನೂನು ರೂಪಿಸುವಿಕೆಯ ಮೂಲಕ ಆದ ಎಲ್ಲ ಒಳಿತುಗಳನ್ನೂ ನಾಶ ಮಾಡಿದಂತೆ ಆಗುತ್ತದೆ. ಭೂಸುಧಾರಣಾ ಕಾಯ್ದೆಯ 79(ಎ) ಮತ್ತು 79(ಬಿ) ಸೆಕ್ಷನ್ನುಗಳು ಇಲ್ಲವಾದರೆ, ಯಾವ ರಕ್ಷಣೆಯೂ ಉಳಿದುಕೊಳ್ಳುವುದಿಲ್ಲ. ಕೃಷಿಯು ಕೃಷಿಯಾಗಿ ಉಳಿಯುವುದಿಲ್ಲ; ಅದು ಉದ್ಯಮವಾಗುತ್ತದೆ. ಕೈಯಲ್ಲಿ ಇದ್ದಿದ್ದನ್ನು ಕಳೆದುಕೊಳ್ಳುವ ಸ್ಥಾನದಲ್ಲಿ ಕೃಷಿಕ ನಿಂತಿರುತ್ತಾನೆ. ಈಗ ಸರ್ಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಜನ ಸಂಕಷ್ಟದಲ್ಲಿ ಇರುವಾಗ ಸರ್ಕಾರ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಹುದೇ?
ಕ್ರಾಂತಿ ತಂದಂತಹ ಕಾನೂನನ್ನು ಚರ್ಚೆ ಇಲ್ಲದೆ, ಜನ ಕೋವಿಡ್–19ನಿಂದ ತತ್ತರಿಸಿರುವ ಹೊತ್ತಿನಲ್ಲಿ ಬದಲಿಸಲು ಹೊರಟಿರುವುದು ರಾಜ್ಯದ ರೈತರ ಬದುಕಿನ ಹತ್ಯೆಯ ಯತ್ನ. ರಾಜ್ಯದ ಭೂಸುಧಾರಣಾ ಕಾನೂನುಗಳನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರದ್ದು. ರೈತನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಆತನ ಬೆನ್ನಿಗೆ ಚೂರಿಹಾಕುವುದನ್ನು ಸಹಿಸಲಾಗದು.
ಲೇಖಕ: ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ, ಮಾಜಿ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್
***
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ: ರೈತರು ಏನಂತಾರೆ?
ರೈತರಿಗೆ ತೊಂದರೆ ಆಗದು
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೂ ಅನುಕೂಲ ಆಗುತ್ತದೆ. ಕೃಷಿ ಉತ್ಪನ್ನಗಳಿಗೆ ಈಗ ಸರಿಯಾದ ಬೆಲೆ ಸಿಗುತ್ತಿಲ್ಲ. ಸಾಮಾನ್ಯ ಸ್ಥಿತಿ ಇದ್ದರೂ ರೈತರಿಗೆ ನಷ್ಟ ತಪ್ಪಿದ್ದಲ್ಲ. ಜಮೀನು ಖರೀದಿಸಬೇಕು ಎನ್ನುವವರು ಈಗಲೂ ಹೇಗಾದರೂ ಮಾಡಿ ಖರೀದಿಸುತ್ತಾರೆ. ಮುಕ್ತವಾಗಿ ಖರೀದಿ ಮಾಡಿಕೊಂಡು, ಕೃಷಿ ಮಾಡಿದರೆ ಹೊಸ ಹೊಸ ತಂತ್ರಜ್ಞಾನ ಬರಲು ಅನುಕೂಲವಾಗುತ್ತದೆ.
ಬೆಳೆದಿರುವ ಎಲ್ಲ ಬೆಳೆಗಳಿಗೂ ದರ ಸಿಗಬಹುದು. ಕೈಗಾರಿಕೆಗಳು ಹೆಚ್ಚಾದರೆ ಉದ್ಯೋಗವಾದರೂ ಸಿಗುತ್ತದೆ. ಕೃಷಿ ಮಾಡಲೇಬೇಕು ಎಂದು ಅಪೇಕ್ಷೆ ಪಟ್ಟವರಿಗೆ ಒಂದಿಲ್ಲ, ಒಂದು ಮಾರ್ಗ ಸಿಕ್ಕೇ ಸಿಗುತ್ತದೆ. ಸದ್ಯ ಕೃಷಿಯಲ್ಲಿ ಎಲ್ಲವೂ ಅನಿಶ್ಚಿತವಾಗಿದೆ. ಹೀಗಾಗಿ ಕೃಷಿ ಮಾಡಲು ಯಾರೂ ಮುಂದೆ ಬರುವುದಿಲ್ಲ. ಹೊಸ ಕಾಯ್ದೆಯಿಂದಾದರೂ ಕೃಷಿಗೆ ಮಹತ್ವ ಬರಬಹುದು.
ರೈತರ ಒಪ್ಪಿಗೆಯಿದ್ದರೆ ಮಾತ್ರ ಭೂಮಿ ಖರೀದಿಗೆ ಅನುಮತಿ ನೀಡಬೇಕು. ಕೃಷಿ ಮಾಡಲೇಬೇಕು ಎನ್ನುವ ರೈತರು ಜಮೀನು ಮಾರಾಟ ಮಾಡುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವುದರಿಂದ ಉತ್ಪನ್ನ ಪ್ರಮಾಣ ಹೆಚ್ಚಳಕ್ಕೆ ಅವಕಾಶ ಸಿಗುತ್ತದೆ.
- ಬಸವರಾಜ.ಎಸ್,ಪ್ರಗತಿಪರ ರೈತ, ಪಲಕಮದೊಡ್ಡಿ ಗ್ರಾಮ, ರಾಯಚೂರು
***
ಸಂಸ್ಕೃತಿಯ ಬೇರಿಗೆ ಪೆಟ್ಟು
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಕಪ್ಪುಹಣ ಉಳ್ಳವರು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಸುಲಭವಾಗಿ ಜಮೀನು ಖರೀದಿಸಲು ಅವಕಾಶನೀಡಿದಂತಾಗುತ್ತದೆ. ಹೆಚ್ಚು ಹಣ ಸಿಗುತ್ತದೆ ಎಂಬ ಕಾರಣಕ್ಕೆ ರೈತರು ಜಮೀನು ಮಾರಾಟ ಮಾಡಲು ಒಲವು ತೋರುವುದು ಸಹಜ. ಕೊಂಡವರು ಫಾರ್ಮ್ ಹೌಸ್ ಮಾಡಿಕೊಳ್ಳುತ್ತಾರೆ. ಅವರು ಕೇವಲ ಖುಷಿಗಷ್ಟೇ ಕೃಷಿ ಮಾಡುತ್ತಾರೆ. ಇದು ಆಹಾರ ಉತ್ಪಾದನೆಯ ಮೇಲೂ ವ್ಯತಿರಿಕ್ತಪರಿಣಾಮ ಬಿರುತ್ತದೆ.
ಜಮೀನು ಮಾರಿಕೊಂಡ ರೈತ, ಹಣ ಖಾಲಿಯಾದ ಬಳಿಕ ತನ್ನದೇ ಭೂಮಿಯಲ್ಲಿ ಕೂಲಿಯಾಗಿ ದುಡಿಮೆಗೆ ಸೇರಿಕೊಳ್ಳುತ್ತಾನೆ. ಅವನ ಮುಂದಿನ ತಲೆಮಾರಿನವರೂ ಕೂಲಿಯಾಳುಗಳಾಗುತ್ತಾರೆ. ಉಳ್ಳವರು ಕೃಷಿ ಭೂಮಿ ಖರೀದಿಸಲು ಸುಲಭ ಮಾಡಿಕೊಟ್ಟರೆ ಸಹಸ್ರಾರು ವರ್ಷಗಳಿಂದ ಬಂದ ಕೃಷಿ ಸಂಸ್ಕೃತಿಯ ಬೇರಿಗೆ ಪೆಟ್ಟು ಬೀಳುತ್ತದೆ.
- ಎಂ.ಸಿ. ಚಂದ್ರೇಗೌಡ,ಪ್ರಗತಿಪರ ರೈತ, ಎಂ.ಶೆಟ್ಟಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು
***
ಸಾಂಪ್ರದಾಯಿಕ ಕೃಷಿ ಮರೆ
ದೊಡ್ಡ ಕಂಪನಿಗಳು ಮತ್ತು ಬಂಡವಾಳಗಾರರು ರೈತರಿಂದ ಜಮೀನು ಕಬಳಿಸಲು, ಹೂಡಿಕೆ ಮಾಡಲುಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಅನುಕೂಲವಾಗುತ್ತದೆ. ಒಪ್ಪಂದ ಕೃಷಿಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಸುತ್ತದೆ.
ಕಂಪನಿ, ಬಂಡವಾಳಶಾಹಿಗಳ ಆಧುನಿಕ ಕೃಷಿ ವಿಧಾನ, ಯಂತ್ರೋಪಕರಣ ಬಳಕೆ ಸಣ್ಣರೈತರನ್ನು ತಣ್ಣಗಾಗಿಸುತ್ತದೆ. ಸಣ್ಣ ಹಿಡುವಳಿದಾರರ ಜಮೀನಿಗೆ ಕುತ್ತು ಎದುರಾಗುತ್ತದೆ. ಸಣ್ಣ ರೈತರಿಗೆ ಉಳಿಗಾಲ ಇಲ್ಲದಂತೆ ಆಗುತ್ತದೆ.
ಕೃಷಿ ಜಮೀನು ಕ್ರಮೇಣವಾಗಿ ಬಂಡವಾಳಶಾಹಿ ಹಿಡಿತಕ್ಕೆ ಸಿಕ್ಕಿಬಿಡುತ್ತದೆ. ಈಗಲೂ ಕೆಲವಾರು ಹಳ್ಳಿಗಳಲ್ಲಿ ರೈತರು ಒಗ್ಗೂಡಿ ಬೇಸಾಯ ಮಾಡುವುದು, ಕಣ ಮಾಡುವುದು, ಜಮೀನು– ತೋಟ ಹಸನುಗೊಳಿಸುವುದು ಇವೆಲ್ಲ ಇವೆ. ಇದಕ್ಕೆಲ್ಲ ತಿಲಾಂಜಲಿ ಬೀಳುತ್ತದೆ. ಒಟ್ಟಾರೆಯಾಗಿ ದೇಸಿ ಸೊಗಡಿನ ಸಾಂಪ್ರದಾಯಿಕ ಕೃಷಿ ಮರೆಯಾಗುತ್ತದೆ.
- ಟಿ.ಆರ್.ಶ್ರೀಧರ್,ಕೃಷಿಕ, ಗಾಳಿಹಳ್ಳಿ, ತರೀಕೆರೆ ತಾಲ್ಲೂಕು
***
ರೈತರ ಸ್ವಾತಂತ್ರ್ಯಹರಣ ಮಾಡಬೇಡಿ
ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದುಸರ್ಕಾರವು ನಮ್ಮಂತಹ ರೈತರ ಸ್ವಾತಂತ್ರ್ಯಹರಣ ಮಾಡಲು ಹೊರಟಿದೆ. ಕಾರ್ಖಾನೆಗಳು, ಸರ್ಕಾರದ ವಿವಿಧ ಯೋಜನೆಗಳು ಮೊದಲಾದ ಕಾರಣಗಳಿಂದ ಈಗಾಗಲೇ ಬಹಳಷ್ಟು ಮಂದಿ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಹಳ್ಳಿಗಳಲ್ಲಿ ಕೆಲಸವಿಲ್ಲದೇ, ದುಡಿಯುವುದಕ್ಕಾಗಿ ನಗರಗಳಿಗೆ ವಲಸೆ ಹೋಗಿದ್ದಾರೆ. ಹೀಗಿರುವಾಗ, ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಬಹುದು ಎಂಬುದು ಕೃಷಿಗೆ ಮಾರಕವಾಗಿದೆ. ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದರಲ್ಲಿ ಅಡಗಿದೆ.
ಸಣ್ಣ ಹಿಡುವಳಿದಾರರು ಹಣದಾಸೆಗೆ ಜಮೀನು ಮಾರಿಕೊಂಡರೆ ಬೀದಿಗೆ ಬೀಳುತ್ತಾರೆ. ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಆಗುತ್ತದೆ. ಕೃಷಿಕರು ಕೂಲಿ ಆಳುಗಳಾಗುವ ಪರಿಸ್ಥಿತಿ ಬರುತ್ತದೆ. ಹಿಂದಿನ ಕಾಯ್ದೆಯನ್ನೇ ಮುಂದುವರಿಸಬೇಕು. ರೈತರ ಬದುಕು ಕಿತ್ತುಕೊಳ್ಳುವ ಕಾರ್ಯವನ್ನು ಸರ್ಕಾರ ಕೈಬಿಡಬೇಕು.
- ಕಲ್ಲಪ್ಪ ಕುಗಟಿ,ಬಚ್ಚನಕೇರಿಚನ್ನಮ್ಮನ ಕಿತ್ತೂರು ತಾಲ್ಲೂಕು, ಬೆಳಗಾವಿ
***
ಹಳ್ಳಿಗಳ ರಚನೆಯೇ ಹಾಳು
ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿ ಹಳ್ಳಿಗಳ ರಚನೆಯನ್ನೇ ಹಾಳು ಮಾಡುತ್ತದೆ. ಏನೇ ಒಡಕು, ಸಂಕಷ್ಟ ಇದ್ದರೂ ಹಳ್ಳಿಗಳಲ್ಲಿ ಕೊಡು, ಕೊಳ್ಳುವ ಮೂಲಕ ರೈತರು ಕೃಷಿ ಮಾಡುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಳ್ಳಿಗಳಲ್ಲಿ ಜನರನ್ನು ವ್ಯವಸಾಯ ಬೆಸೆದಿದೆ. ಈ ಕಾಯ್ದೆಯ ಪರಿಣಾಮ ಭವಿಷ್ಯವನ್ನು ಕರಾಳವಾಗಿಸಲಿದೆ. ಹಳ್ಳಿಗಳನ್ನು, ಕೃಷಿಕರನ್ನುಸಂಪೂರ್ಣವಾಗಿ ಒಕ್ಕಲೆಬ್ಬಿಸುವ ಹುನ್ನಾರ ಇದೆ.
ಹಳ್ಳಿಗಳಲ್ಲಿ ಯುವಕರು ವ್ಯವಸಾಯ ನಷ್ಟ ಎಂದು ತಿಳಿದು ಕೆಲಸಗಳಿಗಾಗಿ ಪಟ್ಟಣಗಳತ್ತ ಈಗಾಗಲೇ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿಉತ್ಪನ್ನಗಳಿಗೆ ಸ್ಥಿರ ಬೆಲೆ ಒದಗಿಸುವುದು ಸೇರಿದಂತೆ ರೈತರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರಗಳು ಕೆಲಸ ಮಾಡಬೇಕು. ಅದು ಬಿಟ್ಟು ಎಲ್ಲವನ್ನೂ ಬಂಡವಾಳಶಾಹಿಗಳಿಗೆ ಮುಕ್ತಗೊಳಿಸಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಕಷ್ಟವಾಗುತ್ತದೆ. ರೈತರ ಬದುಕು ಬೀದಿ ಪಾಲು ಆಗುತ್ತದೆ.
- ಎಲ್.ರವೀಶ್ಸಹಜ ಕೃಷಿಕ, ಹೊಸೂರು, ತುಮಕೂರು ತಾ.
***
ರೈತರನ್ನು ಸೋಮಾರಿ ಮಾಡುವ ತಿದ್ದುಪಡಿ
ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು ಎಂಬ ಕಾಯ್ದೆಯು ರೈತರನ್ನು ಸೋಮಾರಿಗಳನ್ನಾಗಿಸಲಿದೆ. ದುಡಿದು ತಿನ್ನುವುದನ್ನು ಬಿಟ್ಟು ಜಮೀನು ಮಾರಿ ಅದರಲ್ಲಿ ಬಂದ ಹಣದಲ್ಲಿ ಬದುಕುವ ಸುಲಭ ದಾರಿಯನ್ನು ಸರ್ಕಾರವೇ ತೋರಿಸಿದಂತಾಗುತ್ತದೆ. ಇದರ ಪರಿಣಾಮವನ್ನು ರೈತರು ಮುಂದೆ ಅನುಭವಿಸಬೇಕಾಗುತ್ತದೆ. ಯಾರಿಗೆ ಜಮೀನು ಮಾರಿರುತ್ತಾರೋ ಅಲ್ಲೇ ಹೋಗಿ ಕೂಲಿ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಈ ಕಾಯ್ದೆ ಜಾರಿಗೆ ಬಂದರೆ ಸೋಮಾರಿ ರೈತರು ಕೂಡಲೇ ಮಾರಾಟ ಮಾಡುತ್ತಾರೆ. ಇದರಿಂದ ದುಡಿಯುವ ರೈತರನ್ನೂ ಪ್ರೇರೇಪಿಸಿದಂತಾಗುತ್ತದೆ. ರೈತ ಎಷ್ಟೇ ಹಣ ಕೂಡಿಟ್ಟರೂ ಹತ್ತಾರು ಎಕರೆ ಜಮೀನು ಖರೀದಿ ಮಾಡುವಷ್ಟು ಇರುವುದಿಲ್ಲ. ಆದರೆಕೈಗಾರಿಕೋದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು ಹಳ್ಳಿಗಳನ್ನೇ ಖರೀದಿ ಮಾಡಬಲ್ಲವು. ಸಣ್ಣ, ಅತಿ ಸಣ್ಣ ರೈತರಿಗೆ ಇದು ಹೆಚ್ಚು ಅಪಾಯಕಾರಿ ಕಾಯ್ದೆ.
- ಮಲ್ಲಿಕಾರ್ಜುನಪ್ಪ,ಸಿದ್ಧನೂರು, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.