ಗಣ್ಯರು, ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಪೈಲಟ್ ಅಜಾಗರೂಕತೆ, ಪ್ರತಿಕೂಲ ಹವಾಮಾನ ಮೊದಲಾದ ಕಾರಣದಿಂದ ಕಾಪ್ಟರ್‌ಗಳು ಅಪಘಾತಕ್ಕೀಡಾಗುತ್ತವೆ. ವೈ.ಎಸ್. ರಾಜಶೇಖರ ರೆಡ್ಡಿ, ದೋರ್ಜಿ ಖಂಡು, ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ಜಿಎಂಸಿ ಬಾಲಯೋಗಿ, ಒ.ಪಿ. ಜಿಂದಾಲ್, ಎಸ್. ಮೋಹನ್ ಕುಮಾರಮಂಗಳಂ, ಸುರೇಂದ್ರ ಸಿಂಗ್, ದೇರಾ ನಟುಂಗ್, ಸಿ. ಸಂಗ್ಮಾ ಮೊದಲಾದ ಗಣ್ಯರು ಹೆಲಿಕಾಪ್ಟರ್ ಅಪಘಾತಕ್ಕೆ ಬಲಿಯಾಗಿದ್ದಾರೆ. ಹಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ದೋರ್ಜಿ ಖಂಡು
2011ರಲ್ಲಿ, ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ತವಾಂಗ್‌ನಿಂದ ಹೊರಟಿದ್ದ ಅವರಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ನಂತರ, ಗುಡ್ಡಗಾಡು ಪ್ರದೇಶದಲ್ಲಿ, ಹವಾಮಾನ ವೈಪರೀತ್ಯದಿಂದ ಅದು ಪತನಗೊಂಡಿರುವುದು ದೃಢಪಟ್ಟಿತ್ತು. ಅವರ ಜತೆಗಿದ್ದ ಇತರ ನಾಲ್ವರೂ ಮೃತಪಟ್ಟಿದ್ದರು. ಪವನ್ ಹನ್ಸ್ ಸಂಸ್ಥೆಯ ಏಕ ಎಂಜಿನ್‌ನ ಯುರೋಕಾಪ್ಟರ್ ಬಿ8 ಹೆಲಿಕಾಪ್ಟರ್‌ನ ಅವಶೇಷಗಳು ಲೊಬೊತಾಂಗ್ ಪ್ರದೇಶದ ಕೇಲಾ ಎಂಬಲ್ಲಿ ಪತ್ತೆಯಾಗಿದ್ದವು.
ವೈಎಸ್‌ಆರ್ ರೆಡ್ಡಿ
2009ರ ಸೆಪ್ಟೆಂಬರ್‌ನಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಲ್ಲಮಲ್ಲ ಅರಣ್ಯದಲ್ಲಿ ಪತನವಾಗಿತ್ತು. ಚಿತ್ತೂರಿಗೆ ತೆರಳುತ್ತಿದ್ದ ಅವರ ಕಾಪ್ಟರ್ ನಾಪತ್ತೆಯಾಗಿತ್ತು. ದುರ್ಗಮ ಅರಣ್ಯದಲ್ಲಿ 27 ಗಂಟೆಗಳ ಶೋಧದ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು. ವೈಎಸ್‌ಆರ್ ಎಂದೇ ಹೆಸರಾಗಿದ್ದಹಿರಿಯ ಕಾಂಗ್ರೆಸ್ ನಾಯಕ ರೆಡ್ಡಿ ಅವರ ನಿಧನಾನಂತರ ರಾಜ್ಯದಲ್ಲಿ ಪಕ್ಷ ಹಿನ್ನಡೆ ಅನುಭವಿಸಿತು. ಅವರ ಪುತ್ರ ವೈಎಸ್ ಜಗನ್‌ಮೋಹನ್ ರೆಡ್ಡಿ ಅವರು ಹೊಸ ಪಕ್ಷ ಪಟ್ಟಿದರು. ಜಗನ್ ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.
ಸಂಜಯ್ ಗಾಂಧಿ
1980ರಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಗ್ಲೈಡರ್ ಅಘಾತಕ್ಕೀಡಾಗಿತ್ತು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಿಂದ ಹೊರಟ ಅದು, ನಿಯಂತ್ರಣ ತಪ್ಪಿ ಪತನವಾಯಿತು. ಸಂಜಯ್ ಗಾಂಧಿ ಅವರ ತಲೆಗೆ ಬಲವಾದ ಏಟು ಬಿದ್ದಿತ್ತು. ವಿಮಾನ ಚಾಲನೆಯಲ್ಲಿ ಸಂಜಯ್ ಅವರಿಗೆ ಸಾಕಷ್ಟು ಅನುಭವ ಇರಲಿಲ್ಲ ಎಂದು ವರದಿಯಾಗಿತ್ತು.
ಮಾಧವರಾವ್ ಸಿಂಧಿಯಾ
2001ರಲ್ಲಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಾಧವರಾವ್ ಸಿಂಧಿಯಾ ಅವರು ಪ್ರಯಾಣಿಸುತ್ತಿದ್ದ 10 ಸೀಟರ್‌ನ ಸೆಸ್ನಾ ಸಿ–90 ವಿಮಾನವು ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳುವ ಮಾರ್ಗಮಧ್ಯೆ ದುರಂತಕ್ಕೀಡಾಯಿತು. ಸಿಂಧಿಯಾ ಅವರ ಜೊತೆಗಿದ್ದ ಇತರ ಆರು ಜನರೂ ಬಲಿಯಾದರು. ಅವರು ಚುನಾವಣಾ ಪ್ರಚಾರ ಸಭೆಗೆ ತೆರಳುತ್ತಿದ್ದರು. ದುರಂತಕ್ಕೆ ಮೇಘಸ್ಫೋಟ ಹಾಗೂ ಹವಾಮಾನ ವೈಪರೀತ್ಯ ಕಾರಣ ಇರಬಹುದು ಎನ್ನಲಾಗಿತ್ತು.
ಬಾಲಯೋಗಿ
ಲೋಕಸಭೆಯ ಸ್ಪೀಕರ್ ಆಗಿದ್ದ ತೆಲುಗುದೇಶಂ ಪಕ್ಷದ ಜಿ.ಎಂ.ಸಿ. ಬಾಲಯೋಗಿ ಅವರು 2002ರ ಮಾರ್ಚ್‌ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೆ ಬಲಿಯಾದರು. ಬೆಲ್ 206 ಬಿ3 ಹೆಲಿಕಾಪ್ಟರ್ ಆಂಧ್ರದಲ್ಲಿ ಪತನವಾಯಿತು. ಪಶ್ಚಿಮ ಗೋದಾವರಿಯಿಂದ ಹೊರಟಿದ್ದ ಕಾಪ್ಟರ್ ಅನ್ನು ಡೆಕ್ಕನ್ ಏವಿಯೆಷನ್‌ನ ಕೆ.ವಿ. ಮೆನನ್ ಅವರು ಚಲಾಯಿಸುತ್ತಿದ್ದರು. ಪೈಲಟ್ ಅಜಾಗರೂಕತೆಯಿಂದ ದುರಂತ ಸಂಭವಿಸಿದೆ ಎಂದು ವರದಿಯಾಗಿತ್ತು. ಪ್ರತಿಕೂಲ ಹವಾಮಾನದ ಕಾರಣ, ತಕ್ಷಣವೇ ಕಾಪ್ಟರ್ ಲ್ಯಾಂಡ್ ಮಾಡಲು ಪೈಲಟ್ ನಿರ್ಧರಿಸಿದ್ದರು. ಆದರೆ ಗಟ್ಟಿ ನೆಲದ ಮೇಲ್ಮೈ ಎಂದು ಭಾವಿಸಿ, ಕೊಳದ ಮೇಲೆ ಲ್ಯಾಂಡ್ ಮಾಡಲು ಮುಂದಾಗಿದ್ದರು. ಕೊನೆಯ ಕ್ಷಣದಲ್ಲಿ ಅವರಿಗೆ ಲ್ಯಾಂಡ್ ಮಾಡುವುದನ್ನು ತಪ್ಪಿಸಲು ಆಗಲಿಲ್ಲ ಎಂದು ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆಯಾದ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಒ.ಪಿ. ಜಿಂದಾಲ್, ಸುರೇಂದ್ರ ಸಿಂಗ್
ಹರಿಯಾಣದ ಅಂದಿನ ಇಂಧನ ಸಚಿವ ಹಾಗೂ ಪ್ರಸಿದ್ಧ ಉದ್ಯಮಿ ಒ.ಪಿ. ಜಿಂದಾಲ್ ಹಾಗೂ ಕೃಷಿ ಸಚಿವ ಸುರೇಂದ್ರ ಸಿಂಗ್ ಅವರು 2005ರ ಮಾರ್ಚ್ 31ರಂದು ಹೆಲಿಕಾಪ್ಟರ್ ಅಪಘಾತಕ್ಕೆ ಬಲಿಯಾದರು. ಉತ್ತರ ಪ್ರದೇಶದ ಸಹರನ್‌ಪುರ ಸಮೀಪ ತಾಂತ್ರಿಕ ತೊಂದರೆಯಿಂದ ಕಾಪ್ಟರ್ ಪತನವಾಯಿತು.
ಪವಾಡದಂತೆ ಪಾರಾದರು
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, 1977ರಲ್ಲಿ ಅಸ್ಸಾಂನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಪವಾಡವೆಂಬಂತೆ ಬದುಕುಳಿದಿದ್ದರು. ಅವರ ಜೊತೆ ಪ್ರಯಾಣಿಸುತ್ತಿದ್ದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪಿ.ಕೆ. ತುಂಗನ್ ಅವರಿಗೂ ಜೀವದಾನ ಸಿಕ್ಕಿತ್ತು.
ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, ಪೃಥ್ವಿರಾಜ್ ಚೌಹಾಣ್, ಕುಮಾರಿ ಶೆಲ್ಜಾ ಅವರೂ ಸಹ 2004ರಲ್ಲಿ ಗುಜರಾತ್‌ನಲ್ಲಿ ನಡೆದ ಅಪಘಾತದಲ್ಲಿ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದರು. ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸಚಿವರಾದ ಪ್ರತಾಪ್ ಸಿಂಗ್ ಬಾಜ್ವಾ ಅವರು 2006ರಲ್ಲಿ ಗುರುದಾಸ್‌ಪುರದಿಂದ ಹೊರಟ ಕೆಲ ಸಮಯದಲ್ಲಿ, ಅವರಿದ್ದ ಹೆಲಿಕಾಪ್ಟರ್ ವಿದ್ಯುತ್ ಕಂಬಕ್ಕೆ ತಾಗಿತ್ತು. ಸುಖ್‌ಬೀರ್ ಸಿಂಗ್ ಬಾದಲ್, ರಾಜನಾಥ್ ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ, ಅಶೋಕ್ ಗೆಹಲೋತ್ ಅವರೂ ದುರಂತದಿಂದ ಪಾರಾಗಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳು
- 1963ರಲ್ಲಿ ಲೆಫ್ಟಿನೆಂಟ್ ಜನರಲ್ ಬಿಕ್ರಂ ಸಿಂಗ್ ಮತ್ತು ಏರ್ ವೈಸ್ ಮಾರ್ಷಲ್ ಎರ್ಲಿಕ್ ಪಿಂಟೊ ಅವರನ್ನು ಹೆಲಿಕಾಪ್ಟರ್ ದುರಂತ ಬಲಿ ಪಡೆದಿತ್ತು
- ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಲೆ.ಜ. ಜಮೀಲ್ ಮೊಹಮ್ಮದ್ ಅವರು1993ರಲ್ಲಿ ಭೂತಾನ್‌ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದರು. ಜತೆಗಿದ್ದ ಅವರ ಪತ್ನಿಯೂ ಮೃತಪಟ್ಟಿದ್ದರು.
- ಕಾಂಗ್ರೆಸ್ ಮುಖಂಡ ಮೋಹನ್ ಕುಮಾರಮಂಗಳಂ ಅವರು 1973ರಲ್ಲಿ ದೆಹಲಿ ಸಮೀಪ ವಿಮಾನ ಅಪಘಾತಕ್ಕೆ ಬಲಿಯಾಗಿದ್ದರು
- ಅರುಣಾಚಲ ಪ್ರದೇಶದ ಶಿಕ್ಷಣ ಸಚಿವ ನಟುಂಗ್ ಅವರಿದ್ದ ಹೆಲಿಕಾಪ್ಟರ್ 2001ರಲ್ಲಿ ಪತನವಾಯಿತು
- ಮೇಘಾಲಯ ಸರ್ಕಾರದ ಸಚಿವ ಸಂಗ್ಮಾ, ಮೂವರು ಶಾಸಕರು ಮತ್ತು ಇತರ ಆರು ಜನರು 2004ರ ಸೆಪ್ಟೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೆ ಬಲಿಯಾದರು.
- ಪಂಜಾಬ್ ರಾಜ್ಯಪಾಲ ಸುರೇಂದ್ರನಾಥ್ ಮತ್ತು ಇತರ 9 ಜನರು ಪ್ರಯಾಣಿಸುತ್ತಿದ್ದ ಸೂಪರ್‌ಕಿಂಗ್ ಏರ್‌ಕ್ರಾಪ್ಟ್ 1994ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪತನವಾಯಿತು. ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.