ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶ ದಿಂದ ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್‌ನಲ್ಲಿ ‘ಪೋಷಣ ಅಭಿಯಾನ’ವನ್ನು ಆರಂಭಿಸಿತ್ತು. ಅಭಿಯಾನ ಆರಂಭವಾದ ದಿನದಿಂದ 2021ರ ಮಾರ್ಚ್ ಅಂತ್ಯದವರೆಗೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಒಟ್ಟು ₹5,312 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆದರೆ. ಇದರಲ್ಲಿ ₹2,985 ಕೋಟಿಯನ್ನಷ್ಟೇ ರಾಜ್ಯ ಸರ್ಕಾರಗಳು ವೆಚ್ಚ ಮಾಡಿವೆ. ಒಟ್ಟು ಅನುದಾನದಲ್ಲಿ ವೆಚ್ಚದ ಪ್ರಮಾಣ ಶೇ 56ರಷ್ಟು ಮಾತ್ರ.
ಯೋಜನೆ ಅನುಷ್ಠಾನದ ಪ್ರಗತಿಯನ್ನು ದಾಖಲಿಸಲು ‘ಪೋಷಣ ಟ್ರ್ಯಾಕರ್’ ಅನ್ನು ಅಭಿವೃದ್ಧಿಪಡಿಸಲಾಗಿದೆ. ದತ್ತಾಂಶಗಳನ್ನು ಈ ಟ್ರ್ಯಾಕರ್‌ನಲ್ಲಿ ನಮೂದಿಸಲು ಅಂಗನವಾಡಿ ಕಾರ್ಯಕರ್ತೆಯರು, ಸಂಬಂಧಿತ ಅಧಿಕಾರಿಗಳಿ ಗಾಗಿ ಸ್ಮಾರ್ಟ್‌ಫೋನ್ ಖರೀದಿಸಲಾಗಿದೆ. ಶೇ 12ರಷ್ಟು ಜಿಎಸ್‌ಟಿ ಸೇರಿ ಒಂದು ಫೋನ್‌ಗೆ ₹8,960 ವೆಚ್ಚದಲ್ಲಿ, ಒಟ್ಟು 8.65 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ ₹775.5 ಕೋಟಿ ವೆಚ್ಚ ಮಾಡಲಾಗಿದೆ. ಇದು ಒಟ್ಟು ವೆಚ್ಚದ ಶೇ 26ರಷ್ಟು. ಇದನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಒಟ್ಟು ₹2,209 ಕೋಟಿ ವೆಚ್ಚ ಮಾಡಿವೆ. ಇದರಲ್ಲಿ ಪವರ್ ಬ್ಯಾಂಕ್, ಸ್ಮಾರ್ಟ್‌ಫೋನ್‌ಗಳಿಗೆ ಸಿಮ್‌ಕಾರ್ಡ್ ಮತ್ತು ಡೇಟಾ ಪ್ಯಾಕ್ ಖರೀದಿ, ದಾಖಲಾತಿ ಮತ್ತು ಲೆಡ್ಜರ್ ಪುಸ್ತಕ ಖರೀದಿ ಮತ್ತು ಅಭಿಯಾನದ ಅಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಖರೀದಿಗೆ ಮಾಡಿದ ವೆಚ್ಚಗಳು ಸೇರಿವೆ. ಇವೆಲ್ಲವನ್ನೂ ಹೊರತುಪಡಿಸಿ ರಾಜ್ಯಗಳ ಬಳಿ ಇನ್ನೂ ₹2,327 ಕೋಟಿಯಷ್ಟು ಅನುದಾನ ಉಳಿದಿದೆ.
ಅನುದಾನವನ್ನು ವೆಚ್ಚ ಮಾಡದೇ ಇರುವುದರ ಪರಿಣಾಮಗಳು, ದೇಶದ ಜನರಲ್ಲಿನ ಅಪೌಷ್ಟಿಕತೆಯಲ್ಲಿನ ಏರಿಳಿತದಲ್ಲಿ ಪ್ರತಿಬಿಂಬಿತವಾಗಿದೆ. ಯೋಜನೆ ಆರಂಭ ವಾದಾಗ, ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಪ್ರಮಾಣ ಶೇ 38.5ರಷ್ಟು ಇತ್ತು. 2022ರ ಅಂತ್ಯದ ವೇಳೆಗೆ ಈ ಪ್ರಮಾಣವನ್ನು ಶೇ 35ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 2021ರ ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣವನ್ನು ಶೇ 35.5ರಷ್ಟಕ್ಕೆ ಇಳಿಸಲು ಸಾಧ್ಯವಾಗಿದೆ. ಅಭಿಯಾನ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಕಾರಣ, ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಗುರಿಯ ಪ್ರಗತಿಯೂ ಕುಂಠಿತವಾಗಿದೆ.
ರಕ್ತಹೀನತೆಯಿಂದ ಬಳಲುವ ಮಕ್ಕಳು, ಮಹಿಳೆಯರ ಪ್ರಮಾಣ ಹೆಚ್ಚಳ
ಪೋಷಣ್ ಅಭಿಯಾನದಲ್ಲಿ ಕೇಂದ್ರ ಸರ್ಕಾರ ಮಂಜೂರು ಮಾಡಿದ ಹಣವನ್ನು ಕೆಲವು ರಾಜ್ಯಗಳು ಸದ್ಬಳಕೆ ಮಾಡಿಕೊಳ್ಳದ ಕಾರಣ, ಅಪೌಷ್ಠಿಕತೆ ಪ್ರಮಾಣ ಹೆಚ್ಚಾಗಿದೆ ಎಂದುರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶಗಳು ಹೇಳುತ್ತವೆ.
ಅನುದಾನ ಖರ್ಚು ಮಾಡದ ರಾಜ್ಯಗಳಲ್ಲಿ, ಕುಂಠಿತ ಬೆಳವಣಿಗೆ ಹೊಂದಿರುವ ಹಾಗೂ ರಕ್ತಹೀನತೆಯಿಂದ ಬಳಲುವ 5 ವರ್ಷದೊಳಗಿನ ಮಕ್ಕಳು ಪ್ರಮಾಣ ಅಧಿಕವಾಗುತ್ತಿದೆ. ಹಾಗೆಯೇ ರಕ್ತಹೀನತೆಯಿಂದ ಬಳಲುವ 15ರಿಂದ 49 ವರ್ಷದೊಳಗಿನ ಮಹಿಳೆಯರ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. ಹೀಗಾಗಿ, ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ರೂಪಿಸಿರುವ ಈ ಯತ್ನಕ್ಕೆ ಹಿನ್ನಡೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2015–16 ಹಾಗೂ 2018–21ರ ವರದಿಗಳನ್ನು ಹೋಲಿಸಿದಾಗಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ.
**
ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಕುಂಠಿತ ಬೆಳವಣಿಗೆ ಕಂಡುಬಂದಿರುವಐದು ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲಿ ಕಳೆದ ಬಾರಿಗೆ (2015–16) ಹೋಲಿಸಿದರೆ, ಈ ಬಾರಿ ತೀರಾ ಅತ್ಯಲ್ಪದ ಪ್ರಗತಿ ಕಂಡುಬಂದಿದೆ. ರಕ್ತಹೀನತೆ ಹೊಂದಿರುವ ಐದ ವರ್ಷದೊಳಗಿನ ಮಕ್ಕಳ ಪ್ರಮಾಣವು 5 ಶೇಕಡಾವಾರು ಅಂಶಗಳಷ್ಟು ಏರಿಕೆ ಕಂಡಿದೆ. ಆದರೆ, ರಕ್ತಹೀನತೆಯಿಂದ ಬಳಲುವ ಮಹಿಳೆಯರ (15–49 ವರ್ಷ) ಪ್ರಮಾಣ ಕೊಂಚ ಸುಧಾರಿಸಿದೆ.
ಅಸ್ಸಾಂ
ಅಸ್ಸಾಂನಲ್ಲಿ ರಕ್ತಹೀನತೆಯಿಂದ ಬಳಲುವ 5 ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. 2015–16ರಲ್ಲಿ ಶೇ 35.7ರಷ್ಟು ಮಕ್ಕಳಲ್ಲಿ ರಕ್ತಹೀನತೆ ಇತ್ತು. ಈ ಪ್ರಮಾಣವು 2019–21ರಲ್ಲಿ ಶೇ 68.4ಕ್ಕೆ ಹೆಚ್ಚಳವಾಗಿದ್ದು, ಆತಂಕ ಮೂಡಿಸಿದೆ. ರಕ್ತಹೀನತೆಯಿಂದ ಬಳಲುವ ಮಹಿಳೆಯರ ಪ್ರಮಾಣದಲ್ಲಿಯೂ 9.4 ಶೇಕಡವಾರು ಅಂಶಗಳಷ್ಟು ಹೆಚ್ಚಳವಾಗಿದೆ.
ಬಿಹಾರ
ಬಿಹಾರದಲ್ಲಿ ರಕ್ತಹೀನತೆಯಿಂದ ಬಳಲುವ ಮಕ್ಕಳು ಹಾಗೂ ಮಹಿಳೆಯರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಬಾರಿ ಶೇ 63ರಷ್ಟು ಮಕ್ಕಳಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಕಡಿಮೆಯಿತ್ತು. ಈ ಪ್ರಮಾಣವು ಈ ಬಾರಿ ಶೇ 69ಕ್ಕೆ ಏರಿಕೆಯಾಗಿದೆ. ಇದೇ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಪ್ರಮಾಣವು ಕಳೆದ ಬಾರಿಗಿಂತ 3 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದೆ.
ಕರ್ನಾಟಕ
ಕುಂಠಿತ ಬೆಳವಣಿಗೆ ಕಂಡುಬಂದಿರುವ ಐದು ವರ್ಷದೊಳಗಿನ ಮಕ್ಕಳ ಪ್ರಮಾಣವುಕರ್ನಾಟಕದಲ್ಲಿ ಅಲ್ಪ ಕುಸಿದಿದ್ದು, ಸುಧಾರಣೆ ಕಂಡುಬಂದಿದೆ. ಆದರೆ ರಕ್ತಹೀನತೆಯು ಮಕ್ಕಳು ಹಾಗೂ ಮಹಿಳೆಯರನ್ನು ಕಾಡುತ್ತಿದೆ. ಈ ಸಮಸ್ಯೆಯಿರುವ 5 ವರ್ಷದೊಳಗಿನ ಮಕ್ಕಳ ಪ್ರಮಾಣವು ಶೇ 60.9ರಿಂದ ಶೇ 65.5ಕ್ಕೆ ಏರಿಕೆಯಾಗಿದ್ದರೆ, ಮಹಿಳೆಯರಲ್ಲೂ ಇದು ಶೇ 44.8ರಿಂದ ಶೇ 47.8ಕ್ಕೆ ಹೆಚ್ಚಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ.
ಮಧ್ಯಪ್ರದೇಶ
ಮಧ್ಯಪ್ರದೇಶದಲ್ಲಿ, ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳ ಪ್ರಮಾಣವು 7 ಶೇಕಡಾವಾರು ಅಂಶಗಳಷ್ಟು ಕುಸಿದಿದ್ದು, ಗಮನಾರ್ಹ ಸಾಧನೆ ಕಂಡುಬಂದಿದೆ. ಆದರೆ ರಕ್ತಹೀನತೆ ಹೊಂದಿರುವ ಐದು ವರ್ಷದೊಳಗಿನ ಮಕ್ಕಳ ಪ್ರಮಾಣವು ಶೇ 68.9ರಿಂದ ಶೇ 72.7ಕ್ಕೆ ಹೆಚ್ಚಳವಾಗಿದೆ. ಹಾಗೆಯೇ ರಕ್ತಹೀನತೆಯಿರುವ ಮಹಿಳೆಯರಪ್ರಮಾಣವು 2 ಶೇಕಡಾವಾರು ಅಂಶಗಳಷ್ಟು ಹೆಚ್ಚಳವಾಗಿದೆ.
ಉತ್ತರ ಪ್ರದೇಶ
ಕುಂಠಿತ ಬೆಳವಣಿಗೆ ಹೊಂದಿರುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ, ರಕ್ತಹೀನತೆ ಇರುವ ಮಹಿಳೆಯರ ಸಂಖ್ಯೆಯು ಉತ್ತರ ಪ್ರದೇಶದಲ್ಲಿ ಇಳಿಕೆಯಾಗಿದೆ. ಆದರೆ ರಕ್ತಹೀನತೆಯಿಂದ ಬಳಲುವ ಐದು ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಸರ್ಕಾರವು ಪೋಷಣ್ ಅಭಿಯಾನದಡಿ ಬಿಡುಗಡೆಯಾದ ಅನುದಾನದಲ್ಲಿ ಒಂದು ರೂಪಾಯಿಯನ್ನೂ ಬಳಸಿಲ್ಲ ಎಂದು ದತ್ತಾಂಶಗಳು ಮಾಹಿತಿ ನೀಡಿವೆ. ಹೀಗಾಗಿ ಈ ರಾಜ್ಯದಲ್ಲಿ ರಕ್ತಹೀನತೆಯಿಂದ ಬಳಲುವ ಮಕ್ಕಳ ಪ್ರಮಾಣ ಶೇ 14ರಷ್ಟು ಹೆಚ್ಚಳವಾಗಿದೆ. ರಕ್ತಹೀನತೆ ಇರುವ ಶೇ 71ರಷ್ಟು ಮಹಿಳೆಯರು ರಾಜ್ಯದಲ್ಲಿದ್ದಾರೆ ಎನ್ನುತ್ತವೆ ಅಂಕಿ–ಅಂಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.