ಬೆಂಗಳೂರು: ಶ್ರೀನಿವಾಸಪುರದ 65 ವರ್ಷದ ವ್ಯಕ್ತಿಯೊಬ್ಬರು ಮಿದುಳಿನ ಲ್ಲಿದ್ದ ಗಡ್ಡೆಯ ಶಸ್ತ್ರಚಿಕಿತ್ಸೆಗಾಗಿ ಶಿಫಾರಸು ಆಧಾರದಲ್ಲಿ ಒಂದು ತಿಂಗಳು ನಿಮ್ಹಾನ್ಸ್ ಸೇರಿದ್ದರು. ಬಳಿಕ ಮೂರು ಆಸ್ಪತ್ರೆಗಳಿಗೆ ಅಲೆದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 2022ರ ಆಗಸ್ಟ್ ತಿಂಗಳಲ್ಲಿ ಮೃತಪಟ್ಟರು. ಬಿಪಿಎಲ್ ಕುಟುಂಬದ ಅವರು, ಸರ್ಕಾರಿ ಆರೋಗ್ಯ ಯೋಜನೆಯ ಫಲಾನುಭವಿ ಆಗಿದ್ದರೂ ಚಿಕಿತ್ಸಾ ವೆಚ್ಚವಾಗಿ ಆಸ್ಪತ್ರೆಗೆ ₹ 20 ಸಾವಿರ ಪಾವತಿಸಿದ್ದರು.
ರಾಜ್ಯದಲ್ಲಿ ಜಾರಿಯಲ್ಲಿರುವ ಆರೋಗ್ಯ ಯೋಜನೆಗಳಡಿ ಚಿಕಿತ್ಸೆ ಪಡೆದುಕೊಳ್ಳುವ ಬಹುತೇಕರ ಅನುಭವ ಇದೇ ರೀತಿಯದ್ದಾಗಿದೆ.
ರಾಜ್ಯದ ಆರೂವರೆ ಕೋಟಿ ಜನರಿಗೂ ಆರೋಗ್ಯ ಭದ್ರತೆ ಒದಗಿಸುವ ಭರವಸೆಯೊಂದಿಗೆ 2018ರಲ್ಲಿ ಪ್ರಾರಂಭವಾದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ (ಎಬಿ–ಎಆರ್‌ಕೆ), ನಾಲ್ಕು ವರ್ಷಗಳಾದರೂ ಜನರಿಗೆ ಸಂಪೂರ್ಣ ‘ಆರೋಗ್ಯ ಭದ್ರತೆ‘ಯ ಭರವಸೆಯನ್ನು ಮೂಡಿಸಿಲ್ಲ. ತುರ್ತು ಸಂದರ್ಭದಲ್ಲಿ ದಾಖಲಾತಿ, ಕೆಳ ಹಂತದ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಸೇರಿ ಚಿಕಿತ್ಸೆಯ ಬಗೆಗಿನ ವಿವಿಧ ಗೊಂದಲಗಳು ಇನ್ನೂ ನಿವಾರಣೆ
ಯಾಗಿಲ್ಲ. ಇದೀಗ ಮರು ಜಾರಿಯಾಗುತ್ತಿರುವ ‘ಯಶಸ್ವಿನಿ’ ಯೋಜನೆಗೆ ಪ್ರಾರಂಭದಲ್ಲಿಯೇ ವಿಘ್ನ ಎದುರಾಗಿದ್ದು, ಚಿಕಿತ್ಸಾ ಪ್ಯಾಕೇಜ್‌ಗಳಿಗೆ ಆಸ್ಪತ್ರೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದಾಗಿ ಚಿಕಿತ್ಸೆಯ ಲಭ್ಯತೆ ಪ್ರಶ್ನೆಯಾಗಿ ಉಳಿದಿದೆ.
‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದ್ದರೂ ಇಷ್ಟು ಮೊತ್ತದ ವೈದ್ಯಕೀಯ ಸೌಲಭ್ಯ ಪಡೆಯುವುದು ಅರ್ಹ ಫಲಾನುಭವಿಗಳಿಗೆ ಸವಾಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಯ ಜತೆಗೆ ಖಾಸಗಿ ಆಸ್ಪತ್ರೆಗಳ ದುಬಾರಿ ಸೇವೆಗೆ ಕಡಿವಾಣ ಹಾಕುವ ಯೋಜನೆಯ ಮೂಲ ಉದ್ದೇಶವೇ ಫಲಾನುಭವಿಗಳಿಗೆ ಜೀವಸಂಕಟವನ್ನು ತಂದೊಡ್ಡಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಹಾಸಿಗೆ ಸಮಸ್ಯೆಯಿಂದ ಚಿಕಿತ್ಸೆ ವಿಳಂಬವಾದರೆ, ಚಿಕಿತ್ಸಾ ಪ್ಯಾಕೇಜ್ ದರ ಕಡಿಮೆ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಶಿಫಾರಸು ಪ್ರಕರಣಗಳಿಗೆ ನಿರಾಸಕ್ತಿ ತೋರುತ್ತಿವೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಹಾಗೂ ‘ಯಶಸ್ವಿನಿ’ ಯೋಜನೆಗೆ 1,650 ಚಿಕಿತ್ಸಾ ವಿಧಾನಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರತಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೂ ಗರಿಷ್ಠ ದರ ನಿಗದಿ ಮಾಡಲಾಗಿದೆ. ಉದಾಹರಣೆಗೆ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಮಂಡಿ ಚಿಪ್ಪು ಬದಲಾವಣೆಗೆ ₹ 1.50 ಲಕ್ಷ ನಿಗದಿ ಮಾಡಲಾಗಿದೆ. ‘ಯಶಸ್ವಿನಿ’ ಯೋಜನೆಯಡಿ ಸುಟ್ಟ ಗಾಯದ ಚಿಕಿತ್ಸೆಗೆ ಗರಿಷ್ಠ ₹ 1 ಲಕ್ಷ, ಹೃದಯದ ಕವಾಟ ಬದಲಿ ಶಸ್ತ್ರಚಿಕಿತ್ಸೆಗೆ ₹ 1.55 ಲಕ್ಷ ನಿಗದಿ ಮಾಡಲಾಗಿದೆ. ಇಷ್ಟೇ ಮೊತ್ತದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ನಿಯಮ ರೂಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಖಾಸಗಿ ಆಸ್ಪತ್ರೆಗಳು, ದಾಖಲಾತಿಗೆ ನಿರಾಕರಿಸುತ್ತಿವೆ.
‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ.
ಹಳೆಯ ದರ ನಿಗದಿ: ಸಹಕಾರಿ ಇಲಾಖೆಯ ಮೂಲಕ 2003ರಲ್ಲಿ ಆರಂಭಗೊಂಡಿದ್ದ ‘ಯಶಸ್ವಿನಿ’ ಯೋಜನೆ
ಯನ್ನು 2018ರ ಮೇ 31ರಂದು ಸ್ಥಗಿತಗೊಳಿಸಿ, ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಳಿಸ
ಲಾಗಿತ್ತು. ಇದೀಗ ಯೋಜನೆಯ ಮಹತ್ವ ಮನಗಂಡ ಸರ್ಕಾರ, ‘ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್’ ಮೂಲಕ ಯೋಜನೆಯನ್ನು ಮತ್ತೆ ಅನುಷ್ಠಾನಗೊಳಿಸಿದೆ. ಫಲಾನುಭವಿಗಳು ಯೋಜನೆಯಡಿ ನೋಂದಾಯಿತ ಆಸ್ಪತ್ರೆಗೆ, ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ ಯಶಸ್ವಿನಿ ಜಾಲದ ಆಸ್ಪತ್ರೆಗಳಲ್ಲಿ ಒಂದು ಕುಟುಂಬ ಗರಿಷ್ಠ ₹ 5 ಲಕ್ಷವರೆಗಿನ ವೆಚ್ಚದಲ್ಲಿ ನಗದುರಹಿತ ಚಿಕಿತ್ಸೆ ಪಡೆಯ ಬಹುದು. ಯೋಜನೆಯ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ₹ 330 ಕೋಟಿ ಮೀಸಲಿಡಲಾಗಿದೆ.
ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಗ್ರಾಮೀಣ ಸಹಕಾರ ಸಂಘಗಳ, ಸ್ವ ಸಹಾಯ ಗುಂಪುಗಳ ಗರಿಷ್ಠ ನಾಲ್ವರು ಸದಸ್ಯರ ಕುಟುಂಬ ವಾರ್ಷಿಕ ₹ 500 ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ ಹೆಚ್ಚುವರಿ ಸದಸ್ಯರಿಗೆ ತಲಾ ₹ 100 ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹ 1,000, ಹೆಚ್ಚುವರಿ ಸದಸ್ಯರಿಗೆ ತಲಾ ₹ 200 ಪಾವತಿಸಬೇಕು. ಈ ಹಿಂದೆ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಒಬ್ಬ ಸದಸ್ಯನಿಗೆ ₹ 250, ನಗರ ಭಾಗದಲ್ಲಿ ಒಬ್ಬ ಸದಸ್ಯನಿಗೆ ₹ 750 ವಂತಿಗೆ ನಿಗದಿ ಮಾಡಲಾಗಿತ್ತು. ವಂತಿಗೆ ದರವನ್ನು ಪರಿಷ್ಕರಿಸಿರುವ ಸರ್ಕಾರ, 2010ರಲ್ಲಿ ಯಶಸ್ವಿನಿ ಟ್ರಸ್ಟ್ ನಿಗದಿಪಡಿಸಿದ್ದ ಪ್ಯಾಕೇಜ್ ದರದಲ್ಲಿಯೇ ಯೋಜನೆಯನ್ನು ಮರು ಪ್ರಾರಂಭ ಮಾಡಿದೆ.
ಅಂಡವಾಯು (ಹರ್ನಿಯಾ) ಶಸ್ತ್ರಚಿಕಿತ್ಸೆ ಸೇರಿ ಕೆಲ ಶಸ್ತ್ರಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ₹ 10 ಸಾವಿರ ನಿಗದಿ ಮಾಡಲಾಗಿದೆ. ಇಷ್ಟು ಮೊತ್ತದಲ್ಲಿ ಶಸ್ತ್ರಚಿಕಿತ್ಸೆ ಅಸಾಧ್ಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ‘ಸರ್ಕಾರವೇ ಅರಿವಳಿಕೆ ತಜ್ಞರಿಗೆ ₹ 2,500 ನಿಗದಿ ಮಾಡಿದೆ. ಉಳಿದ ₹ 7,500ರಲ್ಲಿ ಓ.ಟಿ ಶುಲ್ಕ,
ಸಿಬ್ಬಂದಿ ವೇತನ, ಹಾಸಿಗೆ ಶುಲ್ಕ, ಔಷಧ, ಪ್ರಯೋಗಾಲಯ ವೆಚ್ಚ, ಶಸ್ತ್ರಚಿಕಿತ್ಸಕರ ಸೇವಾ ಶುಲ್ಕವನ್ನು ಹೇಗೆ ಸರಿದೂಗಿಸುವುದು’ ಎಂದು ಪ್ರಶ್ನಿಸುತ್ತಾರೆ.
ಆರೋಗ್ಯ ಯೋಜನೆಗಳಡಿ ದರ ನಿಗದಿ ಮಾಡುವಾಗ ಸರ್ಕಾರ ಕರ್ನಾಟಕ ಖಾಸಗಿ ವೈದ್ಯರ ಸಂಘ, ಭಾರತೀಯ ವೈದ್ಯಕೀಯ ಸಂಘ ಸೇರಿ ವಿವಿಧ ವೈದ್ಯಕೀಯ ಸಂಘ–ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪವೂ ವೈದ್ಯಕೀಯ ವಲಯದಲ್ಲಿದೆ.
ಖಾಸಗಿ ಆಸ್ಪತ್ರೆಗಳ ನಿರಾಸಕ್ತಿ: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ 3,482 ಆಸ್ಪತ್ರೆಗಳು ವೈದ್ಯಕೀಯ ಸೇವೆ ನೀಡುತ್ತಿವೆ. ಇವುಗಳಲ್ಲಿ 2 ಸಾವಿರಕ್ಕೂ ಅಧಿಕ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಆಗಿವೆ. ಯೋಜನೆಯಡಿ 575 ಖಾಸಗಿ ಆಸ್ಪತ್ರೆಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಈ ಆಸ್ಪತ್ರೆಗಳು ಕೂಡ ಹೃದಯ, ಮೂತ್ರಪಿಂಡ, ಯಕೃತ್ತು ಸೇರಿ ವಿವಿಧ ಅಂಗಾಂಗಗಳ ಸಮಸ್ಯೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಚಿಕಿತ್ಸೆಗಳಿಗೆ ನೋಂದಾಯಿಸಲ್ಪಟ್ಟಿವೆ. ಇದರಿಂದಾಗಿ ಯೋಜನೆಯಡಿ ನೋಂದಾಯಿಸಲ್ಪಟ್ಟಿದ್ದರೂ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆಗಳು ಯೋಜನೆಯಡಿ ದೊರೆಯುತ್ತಿಲ್ಲ. ಶಿಫಾರಸು ಆಧಾರದಲ್ಲಿ ದಾಖಲಾದರೂ ಆಸ್ಪತ್ರೆಯು ನಿಗದಿತ ಕಾಯಿಲೆಯ ಚಿಕಿತ್ಸೆಗೆ ನೋಂದಾಯಿಸದಿದ್ದರೆ ರೋಗಿಯೇ ಹಣ ಪಾವತಿಸಬೇಕಾಗುತ್ತದೆ. ಇದು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದೆ.
‘ಸರ್ಕಾರ ನಿಗದಿಪಡಿಸಿದ ದರ ಹಾಗೂ ನಾವು ಸದ್ಯ ಚಿಕಿತ್ಸೆ ಒದಗಿಸುತ್ತಿರುವ ದರದಲ್ಲಿ ಭಾರೀ ವ್ಯತ್ಯಾಸವಿದೆ. ಶೇ 60 ರಿಂದ ಶೇ 70 ರಷ್ಟು ಮೊತ್ತವನ್ನು ನಿಗದಿಪಡಿಸಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳು ನೋಂದಾಯಿಸಲ್ಪಡುತ್ತಿದ್ದವು. ಪ್ಯಾಕೇಜ್ ದರವನ್ನು ಪರಿಷ್ಕರಿಸಬೇಕು. ಹಾಲಿ ಪ್ಯಾಕೇಜ್ ಮೊತ್ತದ ಪಾವತಿಯೂ ವಿಳಂಬ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎಂ. ಪ್ರಸನ್ನ.
ಇಡೀ ಕುಟುಂಬಕ್ಕೆ ₹ 5 ಲಕ್ಷ: ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಬಿಪಿಎಲ್ ಕುಟುಂಬದ ಸದಸ್ಯರಿಗೆ ಯೋಜನೆಯಡಿ ಸಂಕೀರ್ಣ ಚಿಕಿತ್ಸೆಗಳನ್ನೂ ಉಚಿತವಾಗಿ ಒದಗಿಸಲು ಅವಕಾಶವಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30 ರಷ್ಟು ಹಣವನ್ನು ಪಾವತಿಸಲಾಗುತ್ತದೆ. ಈ ವಿಮಾ ಮೊತ್ತ ಇಡೀ ಕುಟುಂಬಕ್ಕೆ ಒಳಪಡಲಿದೆ. ಕುಟುಂಬದ ವ್ಯಕ್ತಿಯೊಬ್ಬರ ಚಿಕಿತ್ಸಾ ವೆಚ್ಚ ನಿಗದಿತ ಮೊತ್ತ ತಲುಪಿದಲ್ಲಿ, ಯೋಜನೆಯಡಿ ಕುಟುಂಬದ ಇನ್ನೊಬ್ಬ ಸದಸ್ಯ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ. ಆದ್ದರಿಂದ ಈ ನಿಯಮ ಸಡಿಲಿಸಬೇಕೆಂಬ ಆಗ್ರಹವೂ ಫಲಾನುಭವಿಗಳಲ್ಲಿದೆ.
ಕಿಮೋಥೆರಪಿ ಸೇರಿ ವಿವಿಧ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವ್ಯಕ್ತಿ, ಚಿಕಿತ್ಸಾ ಮೊತ್ತ ₹ 5 ಲಕ್ಷ ದಾಟಿದರೆ ಇನ್ನುಳಿದ ವೆಚ್ಚವನ್ನು ಆತನೇ ಭರಿಸಬೇಕಾಗುತ್ತದೆ.
ತೃತೀಯ ಹಂತದ ಚಿಕಿತ್ಸೆ ಸವಾಲು: ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇರದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕೆಂಬ ನಿಯಮವಿದೆ.
ಈ ಹಂತದ ಚಿಕಿತ್ಸೆಗಳಿಗೆ ಯೋಜನೆ ಪ್ರಾರಂಭವಾದಾಗಿನಿಂದ ಕಳೆದ ವರ್ಷದ ಅಂತ್ಯಕ್ಕೆ ಕ್ರಮವಾಗಿ 3.10 ಲಕ್ಷ ಹಾಗೂ 6.24 ಲಕ್ಷ ಮಂದಿ ಮಾತ್ರ ಆರೋಗ್ಯ ಸೇವೆಗಳನ್ನು ಪಡೆದುಕೊಂಡಿದ್ದಾರೆ. ತಜ್ಞ ವೈದ್ಯರು, ಹಾಸಿಗೆ ಹಾಗೂ ಮೂಲಸೌಕರ್ಯದ ಕೊರತೆಯಿಂದ ಸರ್ಕಾರಿ ಸಂಸ್ಥೆಗಳಿಲ್ಲ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ರೋಗಿಗಳು ಕಾಯಬೇಕಾದ ಪರಿಸ್ಥಿತಿಯಿದೆ.
‘ತಜ್ಞ ವೈದ್ಯರು ಹಾಗೂ ಮೂಲಸೌಕರ್ಯದ ಕೊರತೆಯಿಂದ ಆರೋಗ್ಯ ಯೋಜನೆಗಳಡಿ ಸಂಕೀರ್ಣ ಹಾಗೂ ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ರೋಗಿಗಳಿಗೆ ಒದಗಿಸುವುದು ಸವಾಲಾಗಿದೆ. ಸದ್ಯ ಜಾರಿಯಲ್ಲಿರುವ ವೈದ್ಯಕೀಯ ಕಾಯ್ದೆಗಳೂ ಚಿಕಿತ್ಸೆಗೆ ತೊಡಕಾಗಿವೆ. ತೃತೀಯ ಹಂತದ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆ ಒದಗಿಸಲು ಕೆಲವು ಅಡೆತಡೆಗಳಿವೆ’ ಎಂದು ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಸಂಸ್ಥೆಯೊಂದರ ಮುಖ್ಯಸ್ಥರು ಹೇಳುತ್ತಾರೆ.
ದಾಖಲೆಗಳ ಅಗತ್ಯವಿಲ್ಲ
ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಆರೋಗ್ಯ ಕಾರ್ಡ್ ಹೊಂದಿದ್ದಲ್ಲಿ ಚಿಕಿತ್ಸೆಗೆ ಬೇರೆ ಯಾವುದೇ ದಾಖಲೆಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ. ಈ ಕಾರ್ಡ್ ಹೊಂದಿರುವವರಿಗೆ ಪೂರಕ ದಾಖಲಾತಿ ಒದಗಿಸುವಂತೆ ಸೂಚಿಸಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೂ, ಕೆಲವೆಡೆ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಗೆ ನಿರಾಕರಿಸಲಾಗುತ್ತಿದೆ. ಕಳೆದ ವರ್ಷ ಚನ್ನಪಟ್ಟಣದಲ್ಲಿ ಏಳು ತಿಂಗಳ ಹೆಣ್ಣು ಮಗುವಿಗೆ ಚಿಕಿತ್ಸೆ ಕೊಡಿಸಲು ಪಾಲಕರು ಹಲವು ಆಸ್ಪತ್ರೆಗಳಿಗೆ ಅಲೆದಿದ್ದರು. ಎಲ್ಲಿಯೂ ಚಿಕಿತ್ಸೆ ದೊರೆಯದೆ ಮಗು ಮೃತಪಟ್ಟಿತ್ತು. ಅದೇ ರೀತಿ, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ತಾಯಿ ಮತ್ತು ಅವಳಿ ಮಕ್ಕಳು ಮೃತಪಟ್ಟಿದ್ದರು.
‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿ ನೋಂದಾಯಿತ ಆಸ್ಪತ್ರೆಗೆ ನೇರವಾಗಿ ತೆರಳಿ, ದಾಖಲಾಗಬಹುದು. ಎಬಿ–ಎಆರ್‌ಕೆ ಯೋಜನೆಯಡಿ ತುರ್ತು ಚಿಕಿತ್ಸೆ ವೇಳೆ ಈ ಅವಕಾಶ ನೀಡಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ನೇರವಾಗಿ ಬಂದವರನ್ನು ದಾಖಲಿಸಿ, ಯೋಜನೆಯಡಿ ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ರೋಗಿಯನ್ನು ಬೇರೊಂದು ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದಾಗಿ ಆರೋಗ್ಯ ಕಾರ್ಡ್ ಹೊಂದಿದ್ದರೂ ಸ್ವಂತ ವೆಚ್ಚದಲ್ಲಿಯೇ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇದೆ.
ಕೋವಿಡ್ ಚಿಕಿತ್ಸೆಗೆ ಅಲೆದಾಡಿದ್ದ ಸೋಂಕಿತರು
ರಾಜ್ಯದಲ್ಲಿ 2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಈ ಕಾಯಿಲೆ ಚಿಕಿತ್ಸೆಗೆ ದರ ನಿಗದಿಪಡಿಸಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಗೆ ಅಳವಡಿಸಲಾಯಿತು. ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ 2020–21ನೇ ಸಾಲಿನಲ್ಲಿ 66,185 ಮಂದಿ ಹಾಗೂ 2021–22ನೇ ಸಾಲಿನಲ್ಲಿ 82,916 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶಿಫಾರಸು ಆಧಾರದಲ್ಲಿ ಕ್ರಮವಾಗಿ 75,064 ಹಾಗೂ 63,389 ಮಂದಿಗೆ ಚಿಕಿತ್ಸೆ ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಂಪರ್ಕ ಹೊಂದಿದ ಹಾಗೂ ಐಸಿಯು ಹಾಸಿಗೆಗಳ ಕೊರತೆ, ವೈದ್ಯಕೀಯ ಆಮ್ಲಜನಕ ಸಮಸ್ಯೆಯಿಂದ ಕೋವಿಡ್ ಮೊದಲೆರಡು ಅಲೆಯಲ್ಲಿ ಸೋಂಕಿತರು ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದರು. ಕೋವಿಡ್ ಮೊದಲ ಅಲೆಯಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಆಸ್ಪತ್ರೆಗಳಿಗೆ ನೋಟಿಸ್
ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಸೇರಿ ವಿವಿಧ ಸರ್ಕಾರಿ ಯೋಜನೆಗಳಡಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದಲ್ಲಿ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಡಿ (ಕೆಪಿಎಂಇ) ಕಾನೂನು ಕ್ರಮಕ್ಕೆ ಅವಕಾಶವಿದೆ. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಹಲವು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ. ಕೋವಿಡ್ ಚಿಕಿತ್ಸೆಗೆ ರೋಗಿಗಳಿಂದಲೂ ಹಣ ವಸೂಲಿ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖೆಯು 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿತ್ತು. ದೂರು ನೀಡಿದ ಬಹುತೇಕರಿಗೆ ಆಸ್ಪತ್ರೆಯಿಂದಲೇ ಹಣವನ್ನು ಮರಳಿಸಲಾಗಿದೆ. ಕೋವಿಡೇತರ ಚಿಕಿತ್ಸೆಗೆ ಸಂಬಂಧಿಸಿದಂತೆ ಯೋಜನೆಯಡಿ ನೀಡಲಾದ ನೋಟಿಸ್ ಬಗ್ಗೆ ಇಲಾಖೆಯ ಬಳಿಯೂ ನಿಖರ ಮಾಹಿತಿಯಿಲ್ಲ.
‘ದರ ಪರಿಷ್ಕರಣೆ ಅನಿವಾರ್ಯ’
ಆರೋಗ್ಯ ಯೋಜನೆಗಳಿಗೆ ನಿಗದಿಪಡಿಸಿರುವುದು ಹಳೆಯ ದರವಾಗಿದೆ. ದರವನ್ನು ಪರಿಷ್ಕರಣೆ ಮಾಡಬೇಕು. ಶಸ್ತ್ರಚಿಕಿತ್ಸೆಗಳ ಸಲಕರಣೆ, ಔಷಧ ಸೇರಿ ವಿವಿಧ ವಸ್ತುಗಳ ದರ ಹೆಚ್ಚಳವಾಗಿದೆ. ಆಸ್ಪತ್ರೆಗಳ ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಆದ್ದರಿಂದ ವೈಜ್ಞಾನಿಕವಾಗಿ ದರ ನಿಗದಿ ಮಾಡಬೇಕಾದ ಅಗತ್ಯವಿದೆ.
ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ
‘ಸಂಕೀರ್ಣ ಶಸ್ತ್ರಚಿಕಿತ್ಸೆ ಕಷ್ಟ’
ಆರೋಗ್ಯ ಯೋಜನೆಗಳ ಚಿಕಿತ್ಸಾ ಪ್ಯಾಕೇಜ್ ದರ ಹೆಚ್ಚಿಸಬೇಕು. ಗರಿಷ್ಠ ಮಿತಿ 5 ಲಕ್ಷ ನಿಗದಿ ಮಾಡಿರುವುದರಿಂದ ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟ. ಇತ್ತೀಚೆಗೆ ನಡೆದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯ ಸಾಧನೆ ಪರಿಶೀಲನೆ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಸ್ಪಂದನೆಯೂ ವ್ಯಕ್ತವಾಗಿತ್ತು. ಆರೋಗ್ಯ ಯೋಜನೆಗಳಡಿ ಸುಲಭವಾಗಿ ಚಿಕಿತ್ಸೆ ಒದಗಿಸಲು ವಿಮೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಉತ್ತಮ.
ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿಕಟಪೂರ್ವ ನಿರ್ದೇಶಕ
‘ಇನ್ನಷ್ಟು ಚಿಕಿತ್ಸೆ ಸೇರ್ಪಡೆಗೊಳಿಸಲಿ’
ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಮಕ್ಕಳಿಗೆ ಸಂಬಂಧಿಸಿದಂತೆ ಇನ್ನಷ್ಟು ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲ ಚಿಕಿತ್ಸೆಗಳ ದರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆಯಡಿ ಯಾವೆಲ್ಲ ಖಾಸಗಿ ಆಸ್ಪತ್ರೆಗಳು ನೋಂದಾಯಿಸಲ್ಪಟ್ಟಿವೆ ಎಂಬ ಮಾಹಿತಿ ಜನರಿಗೆ ಇರುವುದಿಲ್ಲ. ಈ ಬಗ್ಗೆ ಮಾಹಿತಿ ಒದಗಿಸಿದರೆ ಉತ್ತಮ. ಸರ್ಕಾರಿ ವ್ಯವಸ್ಥೆಯಲ್ಲಿ ನಿಗದಿಪಡಿಸಲಾದ ಪ್ಯಾಕೇಜ್ ದರದಲ್ಲಿ ಚಿಕಿತ್ಸೆ ಸಾಧ್ಯವಾಗುತ್ತಿದೆ.
– ಡಾ. ಸಂಜಯ್ ಕೆ.ಎಸ್., ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
‘ಸರ್ಕಾರಿ ಸಂಸ್ಥೆಗಳಿಗೆ ಸಮಸ್ಯೆಯಾಗದು’
ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅಗತ್ಯ ಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಒದಗಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ಸೌಕರ್ಯದ ಅನುಸಾರ ದರವನ್ನು ಕೇಳುತ್ತಿವೆ. ಯೋಜನೆಯಿಂದಲೇ ಆಸ್ಪತ್ರೆ ನಡೆಸುತ್ತೇವೆ ಎನ್ನುವುದು ಸರಿಯಲ್ಲ. ಬಡವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಯೋಜನೆ ಪ್ರಾರಂಭಿಸಲಾಗಿದೆ.
– ಡಾ.ಆರ್.ಕೇಶವಮೂರ್ತಿ, ನೆಫ್ರೋ–ಯುರಾಲಜಿ ಸಂಸ್ಥೆ ನಿರ್ದೇಶಕ
ಎಬಿ–ಎಆರ್‌ಕೆ: ಶಿಫಾರಸು ಪ್ರಕ್ರಿಯೆ ಹೇಗೆ?
l ದಾಖಲಾದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಯನ್ನು ತಪಾಸಣೆಗೆ ಒಳಪಡಿಸಿ, ರೋಗ ನಿರ್ಣಯ ಮಾಡುತ್ತಾರೆ. ಹೆಚ್ಚಿನ ವೈದ್ಯಕೀಯ ಸೌಲಭ್ಯ ಅಗತ್ಯವಿದ್ದು, ದಾಖಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರದಿದ್ದಲ್ಲಿ ಶಿಫಾರಸು ಮಾಡುತ್ತಾರೆ.
l ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಗುರುತಿನ ಸಂಖ್ಯೆ ಹಾಗೂ ಶಿಫಾರಸು ಮಾಹಿತಿಯನ್ನು ಯೋಜನೆಯ ಪೋರ್ಟಲ್‌ನಲ್ಲಿ ನಮೂದಿಸಲಾಗುತ್ತದೆ.
l ಶಿಫಾರಸು ಪ್ರಕ್ರಿಯೆಗೆ ಅನುಮೋದಿಸುವ ಅಥವಾ ತಿರಸ್ಕರಿಸುವ ಅಧಿಕಾರ ನೋಡಲ್ ಅಧಿಕಾರಿಗೆ ಇರಲಿದೆ.
l ನೋಡಲ್ ಅಧಿಕಾರಿಯಿಂದ ಅನುಮೋದನೆ ದೊರೆತಲ್ಲಿ ಶಿಫಾರಸು ಕಾರ್ಡ್ ದೊರೆಯಲಿದೆ.
l ಶಿಫಾರಸು ಕಾರ್ಡ್‌ನ್ನು ರೋಗಿಗೆ ಹಸ್ತಾಂತರಿಸಲಾಗುತ್ತದೆ.
l ಶಿಫಾರಸು ಕಾರ್ಡ್ ಹೊಂದಿದ ರೋಗಿ ಚಿಕಿತ್ಸೆಯ ಲಭ್ಯತೆಯನ್ನು ಖಚಿತಪಡಿಸಿಕೊಂಡು, ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದಾಗಿದೆ.
ಪೂರಕ ಮಾಹಿತಿ: ಮನೋಜಕುಮಾರ್ ಗುದ್ದಿ
–––
ಆಯುಷ್ಮಾನ್ ಭಾರತ್ ಯೋಜನೆಯ ಮಾಹಿತಿಗೆ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ವಿಭಾಗವಿದೆ. ತುರ್ತು ಚಿಕಿತ್ಸೆಗೆ ಶಿಫಾರಸಿನ ಅಗತ್ಯವಿಲ್ಲ. ನೇರ ತೆರಳಬಹುದು
- ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತ
ಆರೋಗ್ಯ ಯೋಜನೆಗಳಡಿ ಚಿಕಿತ್ಸಾ ಪ್ಯಾಕೇಜ್‌ಗಳಿಗೆ ನಿಗದಿಪಡಿಸಿದ ದರ ಅವೈಜ್ಞಾನಿಕವಾಗಿದೆ. ಆ ದರದಲ್ಲಿ ಚಿಕಿತ್ಸೆ ನೀಡುವುದು ಕಷ್ಟ. ದರ ಪರಿಷ್ಕರಣೆಗೆ ಕೋರಿದ್ದೇವೆ
– ಡಾ. ಗೋವಿಂದಯ್ಯ ಯತೀಶ್, ಫನಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.