ದಕ್ಷಿಣ ಭಾರತ ಪ್ರವೇಶಕ್ಕೆ ಬಿಜೆಪಿಗೆ ಕರ್ನಾಟಕವು ಹೆಬ್ಬಾಗಿಲು ಎಂದು ಆ ಪಕ್ಷವು ಹೇಳಿಕೊಂಡು ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿ ಸರ್ಕಾರ ರಚನೆ ಮಾಡಿದಾಗಲೂ, ನಂತರ ಸರ್ಕಾರ ರಚನೆ ಮಾಡಿದಾಗಲೂ ಬಿಜೆಪಿ ಈ ಮಾತನ್ನೇ ಪ್ರತಿಪಾದಿಸಿತ್ತು. ಆದರೆ, ಕರ್ನಾಟಕದ ಮೂಲಕ ದಕ್ಷಿಣ ಭಾರತದ ಬೇರೆ ರಾಜ್ಯಗಳಿಗೆ ತನ್ನ ನೆಲೆಯನ್ನು ವಿಸ್ತರಿಸಲು ಬಿಜೆಪಿಗೆ ಸಾಧ್ಯವಾಗಲೇ ಇಲ್ಲ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ನೆಲೆಯೂರುವ ಬಿಜೆಪಿಯ ಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ತಮಿಳುನಾಡಿನಲ್ಲೂ ಈ ಯತ್ನ ಫಲ ನೀಡಲಿಲ್ಲ.
ಹೀಗಾಗಿ ಬಿಜೆಪಿ ಬೇರೆಯದ್ದೇ ದಾರಿ ಹಿಡಿದಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಜತೆಗೆ ಬಿಜೆಪಿ ಕೈಜೋಡಿಸಿತು. ಜೆ.ಜಯಲಲಿತಾ ಅವರು ಎಐಎಡಿಎಂಕೆ ಮುಖ್ಯಸ್ಥೆಯಾಗಿರುವವರೆಗೂ ಇಲ್ಲದಿದ್ದ ಸಖ್ಯ ಈಗ ಬಿಜೆಪಿ ಮತ್ತು ಎಐಎಡಿಎಂಕೆ ಮಧ್ಯೆ ಬೆಳೆದಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ರಾಜಕೀಯವಾಗಿ ಕಡೆಗಣಿಸಲಾಗಿದ್ದ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ತನ್ನ ರಾಜಕೀಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.
ತಮಿಳುನಾಡಿನ ನೆರಳಿನಂತೆ ಇರುವ ಪುದುಚೇರಿಯನ್ನು, ತಮಿಳುನಾಡು ರಾಜಕೀಯ ಪ್ರವೇಶದ ಹೆಬ್ಬಾಗಿಲಾಗಿ ಬಿಜೆಪಿ ಪರಿಗಣಿಸಿದೆ. ನಾಲ್ಕೂವರೆ ವರ್ಷಗಳ ಹಿಂದೆ ಕಿರಣ್ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದಾಗ, ಅದರಲ್ಲಿ ಬಿಜೆಪಿಯ ಯಾವ ರಾಜಕೀಯ ತಂತ್ರಗಳೂ ಗೋಚರವಾಗಿರಲಿಲ್ಲ. ಬಿಜೆಪಿ ಅಂತಹ ತಂತ್ರ ಹೂಡಿತ್ತೇ ಎಂಬುದನ್ನು ಸಾಬೀತುಮಾಡಲು ಸಾಕ್ಷ್ಯಗಳೂ ಇಲ್ಲ. ಆದರೆ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದು ಮಾತ್ರ ಬಿಜೆಪಿಗೆ ಈಗ ಫಲ ನೀಡುತ್ತಿದೆ.
ಶಿಸ್ತಿನ ಐಪಿಎಸ್ ಅಧಿಕಾರಿ ಎಂದು ಹೆಸರಾಗಿದ್ದ ಕಿರಣ್ ಬೇಡಿ ಅವರು, ಲೆಫ್ಟಿನೆಂಟ್ ಗವರ್ನರ್ ಆಗಿ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ ಎಂದು ಅಲ್ಲಿನ ಬಿಜೆಪಿ ನಾಯಕರು ಹೇಳುತ್ತಾರೆ. ‘ಅವರ ಅಧಿಕಾರದ ವ್ಯಾಪ್ತಿಯನ್ನು ಮೀರಿ, ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಹಲವು ಬಾರಿ ಆರೋಪಿಸಿದೆ. ಆಡಳಿತ ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಕ್ರಮಬದ್ಧಗೊಳಿಸಲು ಕಿರಣ್ ಬೇಡಿ ಅವರು ಒತ್ತು ನೀಡಿದ್ದರು ಎಂದು ಪುದುಚೇರಿಯ ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರೇ ಹೇಳಿದ್ದಾರೆ.
ಆರಂಭದ ದಿನದಿಂದಲೂ ಬೇಡಿ ಅವರು ಇದೇ ಹಾದಿ ಹಿಡಿದ ಕಾರಣ, ಆಡಳಿತಾರೂಢ ಶಾಸಕರ ಕಾರ್ಯಚಟುವಟಿಕೆಗಳಿಗೆ ಅಡಚಣೆಯಾಗಿತ್ತು. ಸರ್ಕಾರ ನಡೆಸಲೂ ಇದು ತೊಡಕಾಗಿತ್ತು ಎಂಬ ಮಾತು ಪುದುಚೇರಿಯ ರಾಜಕಾರಣದಲ್ಲಿ ಚಾಲ್ತಿಗೆ ಬಂದು ವರ್ಷಗಳೇ ಕಳೆದಿವೆ. ಈ ಬಗ್ಗೆ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಹಲವು ಬಾರಿ ಆರೋಪ ಮಾಡಿದ್ದರೂ, ಮನವಿ ಸಲ್ಲಿಸಿದ್ದರೂ ಯಾವುದೇ ಬದಲಾವಣೆ ಆಗಿರಲಿಲ್ಲ.
ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರವು ಇಲ್ಲಿನ ಸರ್ಕಾರಕ್ಕೆ ಕಿರುಕುಳ ನೀಡುತ್ತಿದೆ ಎಂಬ ಭಾವನೆ ಆಡಳಿತಾರೂಢ ಶಾಸಕರಲ್ಲಿ ದಟ್ಟವಾಗಿ ರೂಪುಗೊಂಡಿದೆ. ಪ್ರತಿದಿನವೂ ಕಿರುಕುಳ, ಜಟಾಪಟಿಗಳ ನಡುವೆ ಆಡಳಿತ ನಡೆಸುವುದು ಕಷ್ಟಸಾಧ್ಯ ಎಂಬ ತೀರ್ಮಾನಕ್ಕೆ ಹಲವು ನಾಯಕರು ಬಂದಿದ್ದಾರೆ ಎನ್ನಲಾಗಿದೆ. ಕೇಂದ್ರದಲ್ಲಿ ಇನ್ನೂ ಸುಮಾರು ಮೂರು ವರ್ಷ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ. ಅಲ್ಲಿಯವರೆಗೆ ಲೆಫ್ಟಿನೆಂಟ್ ಗವರ್ನರ್ ಜತೆಗೆ ಹೆಣಗುವುದು ಕಷ್ಟಸಾಧ್ಯ. ಬಿಜೆಪಿ ಸೇರಿದರೆ ಈ ಸಮಸ್ಯೆ ಇರುವುದಿಲ್ಲ ಎಂದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಿದ್ದಾರೆ. ಬೇಡಿ ಅವರ ಕಾರ್ಯವೈಖರಿಯು ಈ ರೂಪದಲ್ಲಿ ಬಿಜೆಪಿಗೆ ನೆರವಾಗುತ್ತಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರಿದ ಕಾರಣ, ಸರ್ಕಾರವು ಬಹುಮತ ಕಳೆದುಕೊಂಡಿದೆ. ಸರ್ಕಾರ ಪತನವಾಗುವ ಸಾಧ್ಯತೆ ದಟ್ಟವಾಗಿದೆ. ಉಳಿದ ಅವಧಿಗೆ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲೇ ಕಿರಣ್ ಬೇಡಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ತೆರವು ಮಾಡಲಾಗಿದೆ. ಈ ಹಿಂದೆ ತಮಿಳುನಾಡು ಬಿಜೆಪಿಯ ಮುಖ್ಯಸ್ಥರಾಗಿದ್ದ ಮತ್ತು ಈಗ ತೆಲಂಗಾಣ ರಾಜ್ಯಪಾಲರಾಗಿರುವ ತಮಿಳುಸಾಯಿ ಸೌಂದರ್‌ರಾಜನ್ ಅವರಿಗೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇದು ಬಿಜೆಪಿಯ ರಾಜಕೀಯ ತಂತ್ರ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಕಿರಣ್ ಬೇಡಿ ಅವರು ಸರ್ಕಾರವು ಸುಗಮವಾಗಿ ನಡೆಯಲು ತೊಂದರೆ ನೀಡುತ್ತಿದ್ದರು. ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದ್ದವು ಎಂದು ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ಪುದುಚೇರಿಯ ಜನರಲ್ಲೂ ಈ ಭಾವನೆ ಇದೆ ಎನ್ನಲಾಗುತ್ತಿದೆ. ಈಗ ಚುನಾವಣಾ ಕಣಕ್ಕೆ ಇಳಿದರೆ, ಜನರ ಈ ಭಾವನೆಯು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಹೆಚ್ಚು.
ಹೀಗಾಗಿಯೇ ಕಿರಣ್ ಬೇಡಿ ಅವರನ್ನು ಆ ಹುದ್ದೆಯಿಂದ ತೆರವು ಮಾಡಿ, ತಮಿಳುಸಾಯಿ ಸೌಂದರ್‌ರಾಜನ್ ಅವರನ್ನು ಆ ಹುದ್ದೆಗೆ ಕರೆತರಲಾಗಿದೆ. ಒಂದೊಮ್ಮೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದರೆ, ತಮಿಳುಸಾಯಿ ಅವರು ಪುದುಚೇರಿ ಆಡಳಿತವನ್ನು ತಾವೊಬ್ಬರೇ ನೇರವಾಗಿ ಮುನ್ನಡೆಸಲಿದ್ದಾರೆ. ಆಡಳಿತ ಸುಗಮವಾಗಿ ನಡೆಯಲಿದೆ. ಪುದುಚೇರಿ ಅಭಿವೃದ್ಧಿಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂಬ ಭಾವನೆಯನ್ನು ಹೋಗಲಾಡಿಸಲು ಇದು ನೆರವಾಗಲಿದೆ. ಪುದುಚೇರಿಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆಯದ್ದೇ ಪ್ರಾಬಲ್ಯವಾದರೂ, ಬಿಜೆಪಿ ಹಿರಿಯಣ್ಣನಂತೆ ವರ್ತಿಸುತ್ತಿದೆ. ಪುದುಚೇರಿಯ ತಂತ್ರವನ್ನೇ ತಮಿಳುನಾಡಿನಲ್ಲಿ ಅನುಸರಿಸಿದರೆ, ಬಿಜೆಪಿಯ ಕೈ ಮೇಲಾಗಲಿದೆ ಎಂಬ ಸಂದೇಶವನ್ನು ಕೂಡ ಬಿಜೆಪಿ ನೀಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
‘ಕೈ’ ತಪ್ಪಲಿದೆಯೇ ಪುದುಚೇರಿ
ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ನಿಕಟವರ್ತಿ ಎನಿಸಿಕೊಂಡಿದ್ದ ಎ. ಜಾನ್ ಕುಮಾರ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಕಾಂಗ್ರೆಸ್ ನೇತೃತ್ವದ ಇನ್ನೊಂದು ಸರ್ಕಾರದ ಪತನ ಬಹುತೇಕ ನಿಶ್ಚಿತವಾದಂತಾಗಿದೆ.
ಜಾನ್ ಅವರ ರಾಜೀನಾಮೆಯಿಂದ ಪುದುಚೇರಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದೆ. ಚುನಾವಣೆಗೆ ಇನ್ನು ಮೂರು ತಿಂಗಳು ಉಳಿದಿರುವಂತೆ ನಡೆದಿರುವ ಈ ಬೆಳವಣಿಗೆಯು ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿದೆ.
ಕಾಂಗ್ರೆಸ್‌ನ ಶಾಸಕರಾದ ಎ. ನಮಶ್ಶಿವಾಯ ಹಾಗೂ ಇ. ತಿಪ್ಪೈಂಜನ್ ಅವರುಜನವರಿ ತಿಂಗಳಲ್ಲಿ ಪಕ್ಷ ತ್ಯಜಿಸಿ, ಕೆಲವೇ ದಿನಗಳಲ್ಲಿ ಬಿಜೆಪಿ ಸೇರಿದ್ದರು. ಸಚಿವ ಮಲ್ಲಾಡಿ ಕೃಷ್ಣರಾವ್ ಅವರು ಸೋಮವಾರ (ಫೆ.15) ರಾಜೀನಾಮೆ ನೀಡಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಾಸಕ ಎನ್. ಧನವೇಲು ಅವರನ್ನು ಈ ಹಿಂದೆಯೇ ಅನರ್ಹಗೊಳಿಸಲಾಗಿತ್ತು. ಇವರು ಕೂಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಪುದುಚೇರಿಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಹಿಡಿತ ಗಟ್ಟಿಯಾಗಿತ್ತು. ಡಿಎಂಕೆ ಜತೆಗೆ ಮೈತ್ರಿ ಹೊಂದಿದ್ದರೂ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಾಸಕರು ಈಗ ಪಕ್ಷ ತ್ಯಜಿಸಿ ಬಿಜೆಪಿ ಸೇರುತ್ತಿರುವುದು ಕಾಂಗ್ರೆಸ್‌ನ ಒಂದು ಚಿಂತೆಯಾದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಸ್ಥಳೀಯ ಡಿಎಂಕೆ ನಾಯಕರು ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ಆರಂಭಿಸಿದ್ದು ಇನ್ನೊಂದು ಚಿಂತೆಯಾಗಿದೆ.
ಮೈತ್ರಿಯಲ್ಲೂ ಬಿರುಕು:ಪುದುಚೇರಿಯಲ್ಲಿ ಡಿಎಂಕೆ ನಾಯಕರ ಸಭೆಯು ಸೋಮವಾರ ನಡೆದಿದೆ. ಇದಾದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಡಿಎಂಕೆ ನಾಯಕ ಎಸ್. ಜಗತರಕ್ಷಕನ್, ‘ಕಾಂಗ್ರೆಸ್– ಡಿಎಂಕೆ ಮೈತ್ರಿಯು ಕುಸಿಯುವ ಸ್ಥಿತಿಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ 30 ಕ್ಷೇತ್ರಗಳಲ್ಲೂ ಡಿಎಂಕೆ ಸ್ಪರ್ಧಿಸಲಿದೆ’ ಎಂದು ಘೋಷಿಸಿದ್ದಾರೆ.
ಮೈತ್ರಿ ಮುರಿಯುವ ಮಾತು ಕಳೆದ ಎರಡು ಮೂರು ತಿಂಗಳಿಂದ ಕೇಳಿಸುತ್ತಲೇ ಇದೆ. ಆದರೆ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಮೈತ್ರಿ ಮುರಿದು, ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಸೂಕ್ತ’ ಎಂದು ಡಿಎಂಕೆಯ ಇತರ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗೇನಾದರೂ ಆದರೆ, ಪುದುಚೇರಿಯಲ್ಲಿ ಕಾಂಗ್ರೆಸ್‌ನ ಚಿಂತೆಗಳು ಹೆಚ್ಚಲಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.
ತಮಿಳುನಾಡಿನ ಪಡಿಯಚ್ಚು
ಪುದುಚೇರಿ (ಹಿಂದಿನ ಹೆಸರು ಪಾಂಡಿಚೆರಿ) ದಕ್ಷಿಣ ಭಾರತದ ಪುಟ್ಟ ಕೇಂದ್ರಾಡಳಿತ ಪ್ರದೇಶ. ಫ್ರೆಂಚ್ ಕಾಲೊನಿಗಳಾಗಿದ್ದ ಪಾಂಡಿಚೆರಿ, ತಮಿಳುನಾಡಿನ ಕಾರೈಕಲ್, ಕೇರಳದ ಮಾಹೆ ಮತ್ತು ಆಂಧ್ರಪ್ರದೇಶದ ಯಾನಮ್‌ಗಳನ್ನು ಸೇರಿಸಿ ಪುದುಚೇರಿ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲಾಯಿತು. ಈ ಪುಟ್ಟ ಪ್ರದೇಶ ಪ್ರವಾಸೋದ್ಯಮಕ್ಕೆ, ಪ್ರಶಾಂತ ವಾತಾವರಣಕ್ಕೆ ಹೆಸರಾಗಿರುವ ತಾಣ. ಆದರೆ ಇಲ್ಲಿನ ರಾಜಕೀಯ ಮಾತ್ರ ಯಾವ ರಾಜ್ಯದ ರಾಜಕಾರಣಕ್ಕಿಂತಲೂ ಕಡಿಮೆಯಿಲ್ಲ.
ಇದು ತಮಿಳುನಾಡಿನ ಪಕ್ಕದಲ್ಲೇ ಇದೆ. ಹೀಗಾಗಿ ಇಲ್ಲಿನ ಸಂಸ್ಕೃತಿ, ರಾಜಕೀಯದಲ್ಲಿ ದ್ರಾವಿಡ ಸಂಸ್ಕೃತಿ ಹಾಸುಹೊಕ್ಕಾಗಿದೆ. ತಮಿಳುನಾಡಿನ ಬಹುತೇಕ ರಾಜಕೀಯ ಪಕ್ಷಗಳು ಇಲ್ಲಿವೆ. ಕಾಂಗ್ರೆಸ್, ಡಿಎಂಕೆ, ಎಐಎಡಿಎಂಕೆ, ಎಂಡಿಎಂಕೆ ಪಕ್ಷಗಳು ಪುದುಚೇರಿ ರಾಜಕೀಯದಲ್ಲೂ ಸಕ್ರಿಯವಾಗಿವೆ. 2ಜಿ ಹಗರಣ ಬಯಲಿಗೆ ಬಂದಾಗ ತಮಿಳುನಾಡಿನ ರೀತಿಯಲ್ಲೇ ಅದು ಪುದುಚೇರಿಯಲ್ಲೂಪ್ರಭಾವ ಬೀರಿತ್ತು. ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟ ಈಗ ಆಡಳಿತದಲ್ಲಿದ್ದು, ಹಲವು ವರ್ಷಗಳಿಂದ ಅಧಿಕಾರಕ್ಕಾಗಿ ಈ ಪಕ್ಷಗಳು ಬಹಿರಂಗವಾಗಿಯೇ ತಿಕ್ಕಾಟ ನಡೆಸಿದ್ದವು. ಇಲ್ಲಿ ಬಿಜೆಪಿಗೆ ನೆಲೆಯಿಲ್ಲ. ಇರುವ ಮೂವರು ಶಾಸಕರು ನಾಮನಿರ್ದೇಶಿತ ಸದಸ್ಯರು. ಪುದುಚೇರಿಯಲ್ಲಿ ಹಿಡಿತ ಸಾಧಿಸುವ ಉಮೇದಿನಲ್ಲಿರುವ ಬಿಜೆಪಿಯು ಈ ಮೂಲಕ ಪಕ್ಕದ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ.
ಶೇಕಡ ನೂರರಷ್ಟು ಸಾಕ್ಷರತೆ, ಅತ್ಯುತ್ತಮ ಭೌತಿಕ ಮೂಲಸೌಕರ್ಯ, ಅತ್ಯುನ್ನತ ಜೀವನ ಮಟ್ಟ ಇಲ್ಲಿದೆ. ಪ್ರತ್ಯೇಕ ಶಾಸನಸಭೆ, ಮುಖ್ಯಮಂತ್ರಿ ಇದ್ದರೂ ಪರಿಪೂರ್ಣ ರಾಜ್ಯದ ಬೇಡಿಕೆ ಮಾತ್ರ ಈಡೇರಿಲ್ಲ. ಈ ಬಗ್ಗೆ ಶಿಫಾರಸು ಮಾಡಲಾಗಿದೆಯಾದರೂ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.
ಆಧಾರ: ಪಿಟಿಐ, ಪುದುಚೇರಿ ಕಾಂಗ್ರೆಸ್ ಟ್ವೀಟ್‌ಗಳು, ಪುದುಚೇರಿ ಡಿಎಂಕೆ ಟ್ವೀಟ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.