ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲಾಗದೆ ವಿ. ನಾರಾಯಣಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ಚುನಾವಣೆಗೆ ತಿಂಗಳುಗಳಿರುವಾಗಲೇ ಈ ವಿದ್ಯಮಾನ ನಡೆದಿದೆ. ಸರ್ಕಾರ ರಚಿಸಲಾಗದ ಪಕ್ಷಗಳು ಚುನಾವಣೆಯತ್ತ ದೃಷ್ಟಿನೆಟ್ಟಿವೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುವ ಸಾಧ್ಯತೆ ಇದೆ. ರಾಷ್ಟ್ರಪತಿ ಆಳ್ವಿಕೆ ಯಾಕೆ ಹೇರಲಾಗುತ್ತದೆ? ಯಾವಾಗ ಮಾಡಬಹುದು? ನಿಯಮಗಳು ಏನನ್ನುತ್ತವೆ? ಇಲ್ಲಿದೆ ಮಾಹಿತಿ:
ರಾಷ್ಟ್ರಪತಿ ಆಳ್ವಿಕೆ ಎಂದರೇನು?
ಕೇಂದ್ರಾಡಳಿತ ಪ್ರದೇಶ ಅಥವಾ ರಾಜ್ಯದಲ್ಲಿ ಸರ್ಕಾರ ಅಮಾನತುಗೊಂಡ, ಬಹುಮತ ಕಳೆದುಕೊಂಡು ಪತನವಾದಾಗ, ಸರ್ಕಾರ ರಚನೆ ಅಸಾಧ್ಯವಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಹೀಗೆ ಮಾಡಿದಾಗ ಆ ರಾಜ್ಯ/ಕೇಂದ್ರಾಡಳಿತ ಪ್ರದೇಶವು ನೇರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗುತ್ತಾರೆ. ವಿಧಾನಸಭೆಯನ್ನು ವಿಸರ್ಜಿಸಲಾಗಿರುತ್ತದೆ ಅಥವಾ ಮುಂದೂಡಿಕೆ ಮಾಡಲಾಗಿರುತ್ತದೆ. ರಾಷ್ಟ್ರಪತಿ ಆಡಳಿತ ಹೇರಿದ ಆರು ತಿಂಗಳ ಒಳಗಾಗಿ ಚುನಾವಣೆ (ಯಾವುದೇ ಪಕ್ಷಕ್ಕೆ ಸರ್ಕಾರ ರಚನೆ ಸಾಧ್ಯವಾಗದಿದ್ದಲ್ಲಿ) ನಡೆಸಬೇಕಾಗುತ್ತದೆ.
ಯಾವಾಗ ರಾಷ್ಟ್ರಪತಿ ಆಳ್ವಿಕೆ ಹೇರಬಹುದು?
ಸಂವಿಧಾನದ 365ನೇ ವಿಧಿಯ ಪ್ರಕಾರ, ಸರ್ಕಾರವೊಂದನ್ನು ಅಮಾನತಿನಲ್ಲಿಡುವ ಹಾಗೂ ರಾಷ್ಟ್ರಪತಿ ಆಳ್ವಿಕೆ ಹೇರುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಈ ಕೆಳಗೆ ಉಲ್ಲೇಖಿಸಲಾಗಿರುವ ಸಂದರ್ಭಗಳಲ್ಲಿ ಅವರು ರಾಷ್ಟ್ರಪತಿ ಆಳ್ವಿಕೆ ನಿರ್ಧಾರ ಕೈಗೊಳ್ಳಬಹುದಾಗಿದೆ;
– ರಾಜ್ಯಪಾಲರು ನಿಗದಿಪಡಿಸಿದ ಅವಧಿಯೊಳಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಶಾಸಕಾಂಗಕ್ಕೆ ಸಾಧ್ಯವಾಗದಿದ್ದಲ್ಲಿ.
– ಸರ್ಕಾರ ಪತನವಾದಲ್ಲಿ ಹಾಗೂ ಸರ್ಕಾರ ಬಹುಮತ ಕಳೆದುಕೊಂಡಲ್ಲಿ.
– ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ ಅದು ಅನುಮೋದನೆಗೊಂಡಲ್ಲಿ.
– ಪ್ರಾಕೃತಿಕ ವಿಪತ್ತುಗಳಂತಹ ಸಂದರ್ಭ ಎದುರಾದಾಗ ಅನಿವಾರ್ಯ ಕಾರಣಗಳಿಂದಾಗಿ ಚುನಾವಣೆ ಮುಂದೂಡಿಕೆಯಾದಲ್ಲಿ.
ರಾಷ್ಟ್ರಪತಿ ಆಳ್ವಿಕೆ ಹೇರಿದ ಕೆಲವು ಉದಾಹರಣೆಗಳು:
ಮಹಾರಾಷ್ಟ್ರ – 2019 ನವೆಂಬರ್ 12ರಿಂದ 23
ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಕೆಲವು ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಫಲಿತಾಂಶದ ಬಳಿಕ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇದ್ದಾಗ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಜ್ಯದ ಆಡಳಿತದ ಚುಕ್ಕಾಣಿ ವಹಿಸಿಕೊಂಡಿದ್ದರು.
ಜಮ್ಮು–ಕಾಶ್ಮೀರ – 2018 ಜೂನ್ 19ರಿಂದ ಅಕ್ಟೋಬರ್ 30
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ–ಪಿಡಿಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಬಿಜೆಪಿಯು ಬೆಂಬಲ ವಾಪಸ್ ಪಡೆದ ಕಾರಣ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದರು. ಪರಿಣಾಮವಾಗಿ ಜೂನ್ 19ರಿಂದ ಅಕ್ಟೋಬರ್ 30ರ ವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಅಕ್ಟೋಬರ್ 31ರಂದು ರಾಜ್ಯವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿತು. ಲೆಫ್ಟಿನೆಂಟ್ ಗವರ್ನರ್ ಮೂಲಕ ಅಧಿಕಾರವು ಕೇಂದ್ರದ ಹಿಡಿತಕ್ಕೊಳಪಟ್ಟಿತು.
ಉತ್ತರಾಖಂಡ – 2016 ಮಾರ್ಚ್ 27ರಿಂದ ಏಪ್ರಿಲ್ 22
ಕಾಂಗ್ರೆಸ್ ಪಕ್ಷದಲ್ಲಿ ಒಡಕಿನ ಪರಿಣಾಮವಾಗಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಆಗ ಮೂರು ತಿಂಗಳ ಅವಧಿಯಲ್ಲಿ ಉತ್ತರಾಖಂಡದಲ್ಲಿ ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಅರುಣಾಚಲ ಪ್ರದೇಶ – 2016 ಜನವರಿ 25ರಿಂದ ಫೆಬ್ರುವರಿ 19
ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ಅರುಣಾಚಲ ಪ್ರದೇಶ ಸರ್ಕಾರ ಅಸ್ಥಿರಗೊಂಡಿತ್ತು. ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕಾನೂನು ವ್ಯಾಪ್ತಿಗೆ ಮೀರಿದ್ದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಬಳಿಕ ಮರಳಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಜಮ್ಮು–ಕಾಶ್ಮೀರ – 2015 ಜನವರಿ 9ರಿಂದ ಮಾರ್ಚ್ 1
2015ರ ವಿಧಾನಸಭೆ ಚುನಾವಣೆ ಬಳಿಕ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಮಹಾರಾಷ್ಟ್ರ – 2014 ಸೆಪ್ಟೆಂಬರ್ 28
ಆಗಿನ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮಿತ್ರಪಕ್ಷಗಳು ಹಿಂತೆಗೆದುಕೊಂಡಿದ್ದರಿಂದ 33 ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.
ದೆಹಲಿ – 2014 ಫೆಬ್ರುವರಿ 14
ಜನ ಲೋಕಪಾಲ ಮಸೂದೆ ಮಂಡಿಸಲು ಸಾಧ್ಯವಾಗದ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು.
ಆಂಧ್ರ ಪ್ರದೇಶ ವಿಭಜನೆಯಾದ ಬಳಿಕ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 2014ರ ಜೂನ್‌ನಲ್ಲಿ 100 ದಿನಗಳ ವರೆಗೆ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದವು.
ಜಾರ್ಖಂಡ್ – 2009 ಜನವರಿ 19ರಿಂದ ಡಿಸೆಂಬರ್ 29
ಚುನಾಯಿತ ಸರ್ಕಾರವು ಬಹುಮತ ಕಳೆದುಕೊಂಡ ಕಾರಣ 2009ರ ಜನವರಿ 19ರಿಂದ ಡಿಸೆಂಬರ್ 29ರ ವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಇದೇ ಅವಧಿಯಲ್ಲಿ 2010 ಮತ್ತು 2013ರಲ್ಲಿಯೂ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
ಇನ್ನಷ್ಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.