ದೇಶದಲ್ಲಿ 2015ರಿಂದ 2019ರ ಅವಧಿಯಲ್ಲಿ ಒಟ್ಟು 1.76 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಪ್ರತಿ ವರ್ಷ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆ/ಯುವತಿ/ಬಾಲಕಿಯರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ದೆಹಲಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಸರ್ಕಾರ, ಸಂಸತ್ತಿಗೆ ಈ ಮಾಹಿತಿ ನೀಡಿದೆ.
‘ನಿರ್ಭಯಾ’ ಬಳಿಕ ಜಾಗೃತಿ ಹೆಚ್ಚಳ
ದೇಶದ ವಾರ್ಷಿಕ ಅಪರಾಧ ವರದಿಗಳನ್ನು ಗಮನಿಸಿದರೆ 2013ರ ನಂತರ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗುತ್ತದೆ. 2012ರಲ್ಲಿ ನಡೆದ ನಿರ್ಭಯಾ ಪ್ರಕರಣ ಮತ್ತು ಆನಂತರ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಮೂಡಿದ ಜಾಗೃತಿಯ ಕಾರಣ, ಪ್ರಕರಣಗಳು ದಾಖಲಾಗುವ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೇಂದ್ರ ಸರ್ಕಾರವುನಿರ್ಭಯಾ ಪ್ರಕರಣದ ನಂತರ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆ, ಸಂತ್ರಸ್ತೆಯರ ಚಿಕಿತ್ಸೆ ಮತ್ತು ಪರಿಹಾರ ವೆಚ್ಚಗಳನ್ನು ಭರಿಸಲು ನಿರ್ಭಯಾ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ವರ್ಷ ಈ ನಿಧಿಗೆ ಇಂತಿಷ್ಟು ಹಣವನ್ನು ಮೀಸಲಿಡಲಾಗುತ್ತಿದೆ. ಆದರೆ ಈ ನಿಧಿಯು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.
ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಇತ್ಯರ್ಥಕ್ಕಾಗಿ ದೇಶದಾದ್ಯಂತ ತ್ವರಿತಗತಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಈಗ ದೇಶದಾದ್ಯಂತ ಒಟ್ಟು 660 ತ್ವರಿತಗತಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅತ್ಯಾಚಾರ ಪ್ರಕರಣಗಳು ನಿರೀಕ್ಷಿತ ಮಟ್ಟದಲ್ಲಿ ಇತ್ಯರ್ಥವಾಗದ ಕಾರಣ, ಈ ಕೋರ್ಟ್‌ಗಳನ್ನು ಇನ್ನೂ ಎರಡು ವರ್ಷ ಮುಂದುವರಿಸಲು ಕೇಂದ್ರ ಸಚಿವ ಸಂಪುಟವು ಇದೇ ಬುಧವಾರ ಸಮ್ಮತಿ ಸೂಚಿಸಿದೆ. ಜತೆಗೆ ಇಂತಹ ನ್ಯಾಯಾಲಯಗಳ ಸಂಖ್ಯೆಯನ್ನು 1,023ಕ್ಕೆ ಹೆಚ್ಚಿಸಲು ಸಮ್ಮತಿ ಸೂಚಿಸಿದೆ. 2019ರಲ್ಲಿ ಆರಂಭವಾದಾಗಿನಿಂದ ಈ ವಿಶೇಷ ಕೋರ್ಟ್‌ಗಳು 51,600 ಅತ್ಯಾಚಾರ ಪ್ರಕರಣಗಳನ್ನು ಇತ್ಯರ್ಥಪಡಿಸಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ್ದಾರೆ. ಆದರೆ ಯಾವ ಅವಧಿಯವರೆಗಿನ ಮಾಹಿತಿಯನ್ನು ಅವರು ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಉನ್ನಾವ್, ಕಠುವಾ, ಹಾಥರಸ್... ಮುಗಿಯದ ವ್ಯಥೆ
ದೇಶ ನಡುಗಿಸಿದ ನಿರ್ಭಯಾ: ಇದು ಇಡೀ ದೇಶವನ್ನೇ ನಡುಗಿಸಿದ ಪ್ರಕರಣ. ಮಾಧ್ಯಮಗಳು ಸಂತ್ರಸ್ತೆಯನ್ನು ‘ನಿರ್ಭಯಾ’ ಎಂದು ಕರೆದವು. 2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಮಂದಿ ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದರು. ಕಬ್ಬಿಣದ ಸಲಾಕೆಯಿಂದ ಯುವತಿಯ ದೇಹಕ್ಕೆ ಗಾಯ ಮಾಡಲಾಗಿತ್ತು. ಸಿಂಗಪುರದ ಆಸ್ಪತ್ರೆಗೆ ದಾಖಲಿಸಿದರೂ ನಿರ್ಭಯಾ ಬದುಕುಳಿಯಲಿಲ್ಲ. ಆರೋಪಿಗಳಲ್ಲಿ ಒಬ್ಬನಾದ ರಾಮ್‌ಸಿಂಗ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ. ಮತ್ತೊಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಬಾಲಗೃಹದಲ್ಲಿರಿಸಿ ಎರಡು ವರ್ಷಗಳ ಬಳಿಕ ಬಿಡುಗಡೆ ಮಾಡಲಾಯಿತು. ಉಳಿದ ನಾಲ್ವರಿಗೆ ಮರಣದಂಡನೆ ಆಯಿತು.
ಹಾಥರಸ್ ಅನ್ಯಾಯ: ಉತ್ತರಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 19 ವರ್ಷದ ದಲಿತ ಮಹಿಳೆ ಮೇಲೆ ನಾಲ್ವರು ಮೇಲ್ಜಾತಿಯ ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಎರಡು ವಾರಗಳ ನಂತರ ಯುವತಿಯು ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟರು. ಯುವತಿಯ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ರಾಜ್ಯದ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ದೇಶದಾದ್ಯಂತ ತೀವ್ರ ಆಕ್ರೋಶ ಉಂಟಾಗಿತ್ತು
ಕಠುವಾ ಅತ್ಯಾಚಾರ: 2018ರ ಜನವರಿಯಲ್ಲಿ, ಕಾಶ್ಮೀರದ ಕಠುವಾ ಸಮೀಪ 8 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು.ಬಲಿಯಾದ ಬಾಲಕಿ ಸ್ಥಳೀಯ ಅಲೆಮಾರಿ ಬಕರ್ವಾಲ್ ಬುಡಕಟ್ಟಿಗೆ ಸೇರಿದವಳು. ಆಕೆ ನಾಪತ್ತೆಯಾದ ಒಂದು ವಾರದ ಬಳಿಕ ಮೃತದೇಹ ಪತ್ತೆಯಾಗಿತ್ತು
ಉನ್ನಾವ್ ಘಟನೆ: ಉತ್ತರ ಪ್ರದೇಶದ ಉನ್ನಾವ್ ಎಂಬಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ 2017ರಜೂನ್ 4ರಂದು ಅತ್ಯಾಚಾರ ನಡೆದಿತ್ತು. ಬಿಜೆಪಿಯ ಮಾಜಿ ಸದಸ್ಯ ಕುಲದೀಪ್ ಸಿಂಗ್ ಸೆಂಗಾರ್ ಪ್ರಕರಣದ ಆರೋಪಿ. ಆದರೆ ಪ್ರಕರಣವನ್ನು ಸಂತ್ರಸ್ತೆ ಕಡೆಗೆ ತಿರುಗಿಸಿದ್ದ ಸೆಂಗಾರ್, ಬಾಲಕಿಯ ತಂದೆಯನ್ನು ಜೈಲಿಗೆ ಹಾಕಿಸಿದ್ದ. ಬಾಲಕಿಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟರು. ವಿಚಾರಣೆ ನಡೆಸಿದ ನ್ಯಾಯಾಲಯ, ಸೆಂಗಾರ್ ಮೇಲಿನ ಆರೋಪವನ್ನು ಎತ್ತಿಹಿಡಿದು, ಜೀವಾವಧಿ ಶಿಕ್ಷೆ ವಿಧಿಸಿತು
ಹೈದರಾಬಾದ್ ಶೂಟೌಟ್: 2019ರ ನವೆಂಬರ್‌ನಲ್ಲಿ ಹೈದರಾಬಾದ್‌ನ ಶಂಶಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ‘ಅತ್ಯಾಚಾರಿಗಳಿಗೆ ವಿಳಂಬ ಮಾಡದೇ ಶಿಕ್ಷೆ ನೀಡಲಾಗಿದೆ’ ಎಂಬ ಅರ್ಥದಲ್ಲಿ ಚರ್ಚೆಗಳು ನಡೆದವು
ಜಿಶಾ ಪ್ರಕರಣ: 29 ವರ್ಷದ ದಲಿತ ಯುವತಿ ಜಿಶಾ 2016ರಏಪ್ರಿಲ್ 28ರಂದು ಕೇರಳದ ಎರ್ನಾಕುಲಂನ ತಮ್ಮ ಮನೆಯಲ್ಲಿಯೇ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದರು. ಜಿಶಾಗೆ ನ್ಯಾಯ ಕೊಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಶುರುಮಾಡಿದ್ದ ಜಸ್ಟೀಸ್‌ಫಾರ್‌ಜಿಶಾ ಹ್ಯಾಷ್‌ಟ್ಯಾಗ್‌ಗೆ ಭಾರಿ ಸ್ಪಂದನೆ ಸಿಕ್ಕಿತ್ತು
ಶಕ್ತಿ ಮಿಲ್ ಪ್ರಕರಣ: ಮುಂಬೈನ ಪತ್ರಿಕೆಯೊಂದರಲ್ಲಿ ಇಂಟರ್ನ್ ಆಗಿದ್ದ 22 ವರ್ಷದ ಫೋಟೋ ಜರ್ನಲಿಸ್ಟ್ ಮೇಲೆ ಮುಂಬೈನ ಶಕ್ತಿ ಮಿಲ್ಸ್‌ನಲ್ಲಿ ಬಾಲಕನೊಬ್ಬ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೂವರು ಅಪರಾಧಿಗಳಿಗೆ 2014ರಏಪ್ರಿಲ್ 4ರಂದು ಮರಣದಂಡನೆ ವಿಧಿಸಲಾಯಿತು. ಇತರ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು
ರಾಜಕೀಯ ಮೇಲಾಟ
ಅತ್ಯಾಚಾರ ಪ್ರಕರಣಗಳನ್ನು ರಾಜಕೀಯ ನಾಯಕರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದಿದೆ. ಘಟನೆ ನಡೆದ ಬಳಿಕ ರಾಜಕೀಯ ಮುಖಂಡರು ಸಂತ್ರಸ್ತೆಯ ಮನೆಗೆ ಭೇಟಿ ನೀಡಲು ಸರದಿ ಸಾಲಿನಲ್ಲಿ ಕಾಯುವುದು ಸಾಮಾನ್ಯವಾಗಿಬಿಟ್ಟಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ‘ಮೋದಿ ಅವರ ಮೇಕ್ ಇನ್ ಇಂಡಿಯಾ ಎಲ್ಲೂ ಕಾಣಿಸುತ್ತಿಲ್ಲ. ಕಾಣುತ್ತಿರುವುದು ರೇಪ್ ಇನ್ ಇಂಡಿಯಾ’ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ರಾಹುಲ್ ಅವರು ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸಗಡ ಮತ್ತು ಪಂಜಾಬ್‌ಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಏಕೆ ದನಿ ಎತ್ತುವುದಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶದ ಹಾಥರಸ್ ಎಂಬಲ್ಲಿ ಕಳೆದ ವರ್ಷ ಅತ್ಯಾಚಾರ ಪ್ರಕರಣ ವರದಿಯಾಗಿತ್ತು. ಈ ಘಟನೆ ನಡೆದ ಸಮಯದಲ್ಲೇ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಬಾರನ್ ಎಂಬಲ್ಲಿ ಅತ್ಯಾಚಾರ ವರದಿಯಾಗಿತ್ತು. ಪ್ರತಿಪಕ್ಷಗಳು ಹಾಥರಸ್ ಪ್ರಕರಣ ಇಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದವು. ಆದರೆ ಬಾರನ್‌ನಲ್ಲಿ ಘಟನೆ ನಡೆದಾಗ ಅಲ್ಲಿನ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿತ್ತು ಎಂದು ಬಿಜೆಪಿ ಕುಟುಕಿತ್ತು.ದೆಹಲಿ ಘಟನೆ ಬಳಿಕ ರಾಹುಲ್ ಗಾಂಧಿ, ಬೃಂದಾ ಕಾರಟ್, ಅರವಿಂದ ಕೇಜ್ರಿವಾಲ್ ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದರು. ಪ್ರವಾಸಿ ತಾಣವೇನೋ ಎನ್ನುವ ರೀತಿಯಲ್ಲಿ ಹಾಥರಸ್‌ಗೆರಾಜಕೀಯ ಮುಖಂಡರು ತಂಡತಂಡವಾಗಿ ಹೋಗಿಬಂದರು. ಮನೆಗೆ ಭೇಟಿ ನೀಡಿ ಫೋಟೊ ತೆಗೆಸಿಕೊಳ್ಳುವ ನಾಯಕರು ಬಳಿಕ ನಾಪತ್ತೆಯಾಗುತ್ತಾರೆ ಎಂಬುದು ಸಂತ್ರಸ್ತ ಕುಟುಂಬದ ಅಳಲು.
ಆಧಾರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಸಿದ್ಧಪಡಿಸಿದ ‘ಭಾರತದಲ್ಲಿ ಅಪರಾಧ ವಾರ್ಷಿಕ ವರದಿಗಳು: 2010ರಿಂದ 2019’, ಪಿಟಿಐ, ಸಂಸತ್ತಿನಲ್ಲಿ ಸರ್ಕಾರ ನೀಡಿದ ಮಾಹಿತಿ, ನ್ಯಾಯಾಂಗ ಇಲಾಖೆ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.