ADVERTISEMENT

ಅನುಭವ ಮಂಟಪ | ಒಳ ಏಟಿನ ಭೀತಿ-ಹೆಜ್ಜೆ ಮುಂದಿಕ್ಕಲು ಹಿಂದೇಟು

ಮಂಜುನಾಥ್ ಹೆಬ್ಬಾರ್‌
Published 2 ಸೆಪ್ಟೆಂಬರ್ 2020, 3:01 IST
Last Updated 2 ಸೆಪ್ಟೆಂಬರ್ 2020, 3:01 IST
ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಕಲಬುರ್ಗಿನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ).
ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಕಲಬುರ್ಗಿನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ).   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು ಎಂಬ ಹಕ್ಕೊತ್ತಾಯ ರಾಜ್ಯದಲ್ಲಿ ದಶಕಗಳಿಂದ ಇದೆ. ಈ ಸಮುದಾಯಕ್ಕೆ ನ್ಯಾಯ ಒದಗಿಸುವ ‘ಸದಾಶಯ’ ಹೊಂದಿರುವ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ ಬರೋಬ್ಬರಿ ಎಂಟು ವರ್ಷಗಳು ಕಳೆದಿವೆ.

ಆದರೆ, ರಾಜಕಾರಣಿಗಳಲ್ಲಿ ಹುದುಗಿರುವಒಳ ಏಟಿನ ಭೀತಿಯಿಂದಾಗಿ ಒಳಮೀಸಲಾತಿಯ ಪ್ರಶ್ನೆ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿನ ಒಳಜಾತಿಗಳಿಗೆ ಒಳಮೀಸಲಾತಿ ನೀಡುವ ವಿಷಯದಲ್ಲಿ ಆಯಾ ರಾಜ್ಯ ಸರ್ಕಾರಗಳು ಪರಿಶೀಲಿಸಿ, ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಕಳೆದ ಗುರುವಾರ ಹೇಳಿದೆ. ಇದರ ಬೆನ್ನಲ್ಲೇ, ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ADVERTISEMENT

ಪರಿಶಿಷ್ಟ ಜಾತಿಯಲ್ಲಿರುವ ಒಳಪಂಗಡಗಳ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನಿಗದಿಯಾಗಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ. ನೆರೆಯ ಆಂಧ್ರ ಪ್ರದೇಶದಲ್ಲಿ ಮಾದಿಗ ಮೀಸಲಾತಿ ಹೋರಾಟ ಪ್ರಬಲವಾಗಿದ್ದಾಗ ನಮ್ಮ ನೆಲದಲ್ಲೂ ಈ ಹೋರಾಟ ಪ್ರತಿಧ್ವನಿಸಿತ್ತು. ಆಂಧ್ರಪ್ರದೇಶದಲ್ಲಿ ಎಡಗೈ ಮತ್ತು ಬಲಗೈ ದಲಿತರಲ್ಲಿ ಈ ವಿಚಾರದಲ್ಲಿ ಬಿರುಕು ಮೂಡಿದ ಬಳಿಕ ಕರ್ನಾಟಕದಲ್ಲಿಯೂ ಈ ಕಂದಕ ಹೆಚ್ಚಾಗಿತ್ತು.

ರಾಜ್ಯದಲ್ಲಿ ಒಳಮೀಸಲಾತಿ ಬೇಡಿಕೆ ತಾರಕಕ್ಕೆ ಏರಿದ ಸಂದರ್ಭದಲ್ಲಿ ‘ಎಡಗೈ’ಗೆ ಸೇರಿದ ಜಾತಿಗಳ ಒತ್ತಡಕ್ಕೆ ಮಣಿದು ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಒಳಮೀಸಲಾತಿ ಕಲ್ಪಿಸುವ ಕಾರ್ಯಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಎನ್‌. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರವು 2005ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿತ್ತು. ಆಯೋಗವು 2012ರ ಜೂನ್‌ 15ರಂದು ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿತ್ತು. ಒಳಮೀಸಲು ಜಾರಿ ಮಾಡಿದರೆ ಬಲಗೈ ಒಳಪಂಗಡ ಮತ್ತು ಇತರೆ ಸ್ಪೃಶ್ಯ ಪರಿಶಿಷ್ಟ ಜಾತಿಗಳ ಸಿಟ್ಟು ಎದುರಿಸಬೇಕಾದೀತು ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್‌ ಅವರು ಈ ವರದಿ ಬಗ್ಗೆ ತೀರ್ಮಾನ ತೆಗೆದುಕೊಂಡಿರಲಿಲ್ಲ.

ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮಾದಿಗ ಹೋರಾಟವನ್ನು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿಯಾದ ಬಳಿಕ ಅವರು ಈ ವಿಷಯದಲ್ಲಿ ಹಿಂದೆ ಸರಿದರು. ದಲಿತ ಮುಖಂಡರ ಜತೆಗೆ 13 ಸಲ ಮಾತುಕತೆ ನಡೆಸಿದರು. ‘ಕೈ’ ಪಾಳಯದ ಎಡಗೈ–ಬಲಗೈ ಮುಖಂಡರ ಕಚ್ಚಾಟದಿಂದ ಅವರಿಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅವರು ವರದಿಯನ್ನು ಪುರಸ್ಕರಿಸಲಿಲ್ಲ, ತಿರಸ್ಕರಿಸಲೂ ಇಲ್ಲ. ಪರಿಣಾಮವಾಗಿ, ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಒಳಪಂಗಡವು ‘ಕೈ’ಯಿಂದ ದೂರ ಸರಿಯಿತು.

ಸದಾಶಿವ ಆಯೋಗದ ವರದಿಯ ಜಾರಿಗೆ ಬದ್ಧವೆಂದು ಜೆಡಿಎಸ್‌ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಆ ಪಕ್ಷ ಈ ವಿಷಯದಲ್ಲಿ ಮೌನ ವಹಿಸಿತ್ತು. ‘ರಾಜ್ಯದಲ್ಲಿ 1.25 ಕೋಟಿ ಪರಿಶಿಷ್ಟ ಜಾತಿಯವರು ‌ಇದ್ದಾರೆ. ಮಾದಿಗರ ಸಂಖ್ಯೆ 65 ಲಕ್ಷದಷ್ಟಿದೆ. ಈ ಸಮುದಾಯಕ್ಕೆ 70 ವರ್ಷಗಳಿಂದ ಒಳಮೀಸಲಾತಿ ಸಿಕ್ಕಿಲ್ಲ. ಇದಕ್ಕೆ ಮನುವಾದಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಕುತಂತ್ರವೇ ಕಾರಣ’ ಎಂದುಮಾದಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಮೂರು ರಾಜಕೀಯ ಪಕ್ಷಗಳ ವಿರುದ್ಧ ‘ಮಾದಿಗರ ಮಹಾಯುದ್ಧ’ ಹೆಸರಿನಲ್ಲಿ ಮಾದಿಗ ಸಂಘಟನೆಗಳು 2018ರ ಅಕ್ಟೋಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ವರದಿ ಜಾರಿಗೆ ತಿಂಗಳ ಗಡುವು ನೀಡಿದ್ದವು. ಆಗೊಮ್ಮೆ ಈಗೊಮ್ಮೆ ಸೊಲ್ಲೆತ್ತುತ್ತಿದ್ದ ಸಂಘಟನೆಗಳು ಬಿಜೆಪಿ ಸರ್ಕಾರ ಬಂದ ಮೇಲೆ ಮೌನಕ್ಕೆ ಶರಣಾಗಿವೆ. ಕಮಲ ಪಾಳಯದ ತೆಕ್ಕೆಯಲ್ಲಿರುವ ಎಡಗೈ ಸಮುದಾಯದ ನಾಯಕರಿಗೆ ಈಗ ಒಳಮೀಸಲಾತಿ ಪ್ರಮುಖ ವಿಷಯವಾಗಿ ಉಳಿದಿಲ್ಲ.

ವರದಿಯ ಅಂಶಗಳನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಟ್ಟಿ ನಿಲುವು ತಳೆಯಲಿಲ್ಲ ಎಂಬ ಸಿಟ್ಟು ಎಡಗೈ ಪಂಗಡದವರಿಗಿದೆ. ತಮಗೆ ಶೇ 6ರಷ್ಟು ಒಳ ಮೀಸಲಾತಿ ಕಲ್ಪಿಸಿರುವ ಆಯೋಗದ ವರದಿ ಕಾರ್ಯರೂಪಕ್ಕೆ ತರಲೇಬೇಕು ಎಂದು ಮಾದಿಗ ಸಮುದಾಯ ಪಟ್ಟು ಹಿಡಿದಿದೆ.

ಸದಾಶಿವ ಆಯೋಗದ ವರದಿ ಸಾರ

* ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಶೇ 15ರಷ್ಟು ಇದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳಿವೆ. ಇವುಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು

* ಎಡಗೈ ಜಾತಿಗಳಿಗೆ ಶೇ 6, ಬಲಗೈ ಜಾತಿಗಳಿಗೆ ಶೇ 5, ಸ್ಪೃಶ್ಯ ಜಾತಿಗಳಿಗೆ ಶೇ 3 ಹಾಗೂ ಇತರೆ ಪರಿಶಿಷ್ಟ ಜಾತಿಗಳಿಗೆ ಶೇ 1 ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಬಗ್ಗೆ ತಿದ್ದುಪಡಿ ತರಬೇಕು

* ಕೆಲವೇ ಕೆಲವು ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಕ್ಕಿರುವುದರಿಂದ ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಸರಿಪಡಿಸಬೇಕು. ಹಂಚಿಕೊಂಡು ತಿನ್ನುವ ಔದಾರ್ಯವನ್ನು ಎಲ್ಲರೂ ತೋರಬೇಕು. ಹೆಚ್ಚು ಜನಸಂಖ್ಯೆ ಇರುವ ಹಾಗೂ ಸೌಲಭ್ಯ ವಂಚಿತರಿಗೆ ಅವಕಾಶ ನೀಡಬೇಕು

* ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾಗಿರುವ ಜನರ ಬಗ್ಗೆ ಇಡೀ ಸಮಾಜ ಕಾಳಜಿ ತೋರುವ ಅಗತ್ಯ ಇದೆ.

ಹೆಚ್ಚೇನೂ ಮಾತನಾಡುವುದಿಲ್ಲ

ವ್ಯಾಪಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಅಲ್ಲಿಗೆ ನಮ್ಮ ಕರ್ತವ್ಯ ಮುಗಿದಿದೆ. ವರದಿಯನ್ನು ಕನ್ನಡಕ್ಕೆ ಅನುವಾದ ಮಾಡುವಂತೆಯೂ ತಿಳಿಸಿದ್ದೆವು. ವಿಧಾನ ಮಂಡಲದ ಉಭಯ ಸದನಗಳಲ್ಲಿ ಚರ್ಚೆ ನಡೆಸಿ ವರದಿಗೆ ಅಂಗೀಕಾರ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಆ ಕೆಲಸ ಆಗಿಲ್ಲ. ಈ ಬಗ್ಗೆ ಹೆಚ್ಚೇನೂ ಮಾತನಾಡಲು ಇಷ್ಟಪಡುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.