ADVERTISEMENT

ವೀರಪ್ಪ ಮೊಯಿಲಿ ಬರಹ | ಮತ್ತೆ ನಿರ್ಮಾಣವಾಗಲಿದೆ ಭೂಮಾಲೀಕರ ಸಾಮ್ರಾಜ್ಯ

ಭೂಸುಧಾರಣೆ: ಮತ್ತೆ ಅವತರಿಸಲಿದ್ದಾರೆ ಜಮೀನುದಾರರು | ಕ್ರಾಂತಿಯೂ ಪ್ರತಿಕ್ರಾಂತಿಯೂ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 2:35 IST
Last Updated 25 ಜೂನ್ 2020, 2:35 IST
ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ
ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ   
""
""
""

ಭಾರತ ದೇಶ ಹಳ್ಳಿಗಳ ನಾಡು. ಭಾರತೀಯರ ಮುಖ್ಯಉದ್ಯೋಗ ಒಕ್ಕಲುತನ. ಶತಶತಮಾನಗಳಿಂದ ನಮ್ಮ ಜನ ಒಕ್ಕಲುತನವನ್ನೇ ಅವಲಂಬಿಸಿ ಬದುಕು ಸಾಗಿಸಿದವರು. ರಾಜಮಹಾರಾಜರ ಕಾಲಕ್ಕೆ ಭೂ ಒಡೆತನ ಸರ್ಕಾರಕ್ಕೆ ಸೇರಿತ್ತು.ಮೊಗಲರ ಸಾಮ್ರಾಜ್ಯದ ಅಕ್ಬರ್ ಬಾದಶಹ ದೇಶದಲ್ಲಿಭೂಧಣಿಗಳನ್ನು ಹುಟ್ಟುಹಾಕಿದ. ಅದರ ಉದ್ದೇಶ ಸುಲಭವಾಗಿ ಸಂಪನ್ಮೂಲ ಕ್ರೋಡೀಕರಣ. ಅದರ ಪರಿಣಾಮ ದೇಶಮುಖರು,ಜಾಗೀರದಾರರು, ದೇಶಪಾಂಡೆಯವರು ಮತ್ತು ದೊಡ್ಡ ದೊಡ್ಡ ಭೂಧಣಿಗಳು ಹುಟ್ಟಿಕೊಂಡರು.

ವಿಜಯನಗರ ಅರಸರ ಕಾಲದಲ್ಲಿಯೂ ಕೃಷಿಭೂಮಿಯನ್ನು ಮಾಂಡಲೀಕರ ಮುಖಾಂತರ ಗುತ್ತಿಗೆಗೆ ವಹಿಸಿಕೊಡಲಾಗುತ್ತಿತ್ತು. ಇದರಿಂದ ಬಹುಸಂಖ್ಯಾತ ಜನರು ಕೃಷಿಕಾರ್ಮಿಕರಾಗಿ, ಕೂಲಿಕಾರರಾಗಿ, ಮುಖ್ಯವಾಗಿ ತಾವು ಉಳುವ ಭೂಮಿಯ ಯಾವುದೇ ಒಡೆತನವಿಲ್ಲದೆ ಬದುಕಬೇಕಾಗಿತ್ತು.ಭೂಮಿಯನ್ನು ವೈಜ್ಞಾನಿಕವಾಗಿ ಸರ್ವೆ ಮಾಡಿಸಿ ಅದಕ್ಕೆ ಒಂದುನಿರ್ದಿಷ್ಟ ಸ್ವರೂಪ ಕೊಟ್ಟದ್ದು ಬ್ರಿಟಿಷ್ ಆಡಳಿತ ಮತ್ತು ಪಟ್ಟೇದಾರಿವ್ಯವಸ್ಥೆ ಬಂದದ್ದು ಅವರ ಆಡಳಿತದಲ್ಲಿಯೇ. ಆದರೆಅಷ್ಟೊತ್ತಿಗಾಗಲೇ ಭೂ ಹಂಚಿಕೆಯಲ್ಲಿ ತುಂಬಾ ಏರುಪೇರು ಆಗಿಹೋಗಿತ್ತು.ಭೂಧಣಿ, ಗೇಣಿದಾರ ಮತ್ತು ಕೃಷಿಕಾರ್ಮಿಕವರ್ಗಗಳು ಸೃಷ್ಟಿಯಾಗಿದ್ದವು.

ಸ್ವಾತಂತ್ರ್ಯ ಪೂರ್ವದಲ್ಲಿ 1935ರ ಕಾನೂನಿನನ್ವಯ ಬ್ರಿಟಿಷ್ಇಂಡಿಯಾ ಪ್ರಾಂತ್ಯದಲ್ಲಿ ಚುನಾವಣೆ ನಡೆದು ಮಧ್ಯಂತರಸರ್ಕಾರಗಳು ಅಧಿಕಾರಕ್ಕೆ ಬಂದಾಗ, ಕೆಲವೆಡೆ ಭೂಸುಧಾರಣಾ ಕಾಯ್ದೆಗಳು ರಚನೆಯಾದರೂ ಅವು ಉಳುವವನಿಗೆ ಯಾವುದೇ ರಕ್ಷಣೆ ಕೊಡಲು ಸಾಧ್ಯವಾಗಿರಲಿಲ್ಲ.1956ರಲ್ಲಿ ಭಾಷಾವಾರು ಪ್ರಾಂತ್ಯಗಳು ಸೃಷ್ಟಿಯಾದಾಗ,ಆಗಿನ ಮೈಸೂರು ಪ್ರಾಂತ್ಯಕ್ಕೆ, ಮುಂಬೈ ಪ್ರಾಂತ್ಯದ ಬೆಳಗಾವಿ,ಬಿಜಾಪುರ, ಧಾರವಾಡ, ಕಾರವಾರ ಜಿಲ್ಲೆಗಳು, ನಿಜಾಮ್‌ ಪ್ರಾಂತ್ಯದಬೀದರ್, ಕಲಬುರ್ಗಿ, ರಾಯಚೂರು ಜಿಲ್ಲೆಗಳು, ಮದ್ರಾಸ್ಪ್ರಾಂತ್ಯದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಳ್ಳೆಗಾಲ ತಾಲ್ಲೂಕು, ಚಿಕ್ಕ ಸಂಸ್ಥಾನವಾಗಿದ್ದ ಕೊಡಗು ಸೇರಿದವು. ಬಳ್ಳಾರಿ ಜಿಲ್ಲೆ ಆಗಲೇಮದ್ರಾಸ್ ಪ್ರಾಂತ್ಯದಿಂದ ಬೇರ್ಪಟ್ಟು ಮೈಸೂರು ಪ್ರಾಂತ್ಯಕ್ಕೆಸೇರಿತ್ತು. ಆಯಾಯ ಪ್ರಾಂತ್ಯಗಳಲ್ಲಿ ಭೂಸುಧಾರಣಾ ಕಾಯ್ದೆಗಳು ಬೇರೆಬೇರೆ ರೀತಿಯಲ್ಲಿ ಜಾರಿಯಲ್ಲಿದ್ದವು.

ADVERTISEMENT
ದೇವರಾಜ ಅರಸು

ಆದರೆ ಅವುಗಳು ರೈತರಿಗೆ ರಕ್ಷಣೆ ಕೊಡುವಲ್ಲಿ ಅಷ್ಟೊಂದು ಪ್ರಯೋಜನಕಾರಿಗಳಾಗಿರಲಿಲ್ಲ. ಆಗಿನ ಮೈಸೂರು ಸರ್ಕಾರ, ರಾಜ್ಯದಲ್ಲಿ ಸಮಗ್ರ ಭೂಸುಧಾರಣೆ ಕಾಯ್ದೆ ತರುವಉದ್ದೇಶದಿಂದ, ಬಿ.ಡಿ. ಜತ್ತಿಯವರ ನೇತೃತ್ವದಲ್ಲಿ ಒಂದುಸಮಿತಿಯನ್ನು ರಚಿಸಿತ್ತು. ಆ ಸಮಿತಿ ಅಧ್ಯಯನದನಂತರ ಸರ್ಕಾರಕ್ಕೆ ತನ್ನ ವರದಿಯನ್ನು 1957ರಲ್ಲಿ ಸಲ್ಲಿಸಿತ್ತು.ರಾಜ್ಯ ಸರ್ಕಾರ ಮೊಟ್ಟ ಮೊದಲಿಗೆ 1961ರಲ್ಲಿ ಒಂದು ಸಮಗ್ರಭೂಸುಧಾರಣಾ ಕಾಯ್ದೆಯನ್ನು ರಚಿಸಿತ್ತು. ಅದಕ್ಕೆ 1962ರ ಮಾರ್ಚ್ 5ರಂದು ರಾಷ್ಟ್ರಪತಿಗಳ ಒಪ್ಪಿಗೆ ದೊರೆತರೂ ಅದುಜಾರಿಗೆ ಬಂದದ್ದು 1965ರ ಅಕ್ಟೋಬರ್ 2ರಂದು. ಈಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಲಿಲ್ಲ. ಈಕಾನೂನು ಗೇಣಿದಾರರ ಸ್ವಾಧೀನದಲ್ಲಿದ್ದ ಜಾಗದ ಒಡೆತನದಹಕ್ಕನ್ನು ಉಳುವವರಿಗೆ ನೀಡಲು ಅಸಮರ್ಥವಾಗಿತ್ತು. ಅವರನ್ನು ಒಕ್ಕಲೆಬ್ಬಿಸುವಕಾರ್ಯ ಅವ್ಯಾಹತವಾಗಿ ನಡೆದಿತ್ತು. ಗೇಣಿದಾರರ ಸಮಸ್ಯೆಪರಿಹಾರವಾಗಲಿಲ್ಲ. ಭೂಮಾಲಿಕರ ದೌರ್ಜನ್ಯ ಹೆಚ್ಚಾಗತೊಡಗಿತು.ಯಾವ ಸಾಮಾಜಿಕ ನ್ಯಾಯವೂ ದೊರಕಲಿಲ್ಲ. ದೇಶಕ್ಕೆ ಸ್ವಾತಂತ್ರ್ಯಲಭಿಸಿದರೂ ಗೇಣಿದಾರರಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು.

ಆಗಿನ ಗೇಣಿದಾರರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ, ಅವರುಅನುಭವಿಸುತ್ತಿದ್ದ ಸಂಕಷ್ಟಗಳು ಶೋಚನೀಯವಾಗಿದ್ದವು. ಗೇಣಿದಾರರ ಜೀವನ ಅತಂತ್ರವಾಗಿತ್ತು. ಗೇಣಿದಾರರ ಗೋಳಾಟ,ಭೂಧಣಿಗಳ ಅಟ್ಟಹಾಸ ಮತ್ತು ಗೇಣಿದಾರರ ಶೋಷಣೆ ಇನ್ನೂ ನನ್ನ ಕಣ್ಣು ಮುಂದೆ ಜ್ವಲಂತವಾಗಿಯೇ ಉಳಿದಿವೆ. ಯಾಕೆಂದರೆ ನಾನು ಕೂಡ ಒಬ್ಬ ಗೇಣಿದಾರನ ಮಗ. ಬಹುಪಾಲು ಭೂಧಣಿಗಳು ಬಲಾಢ್ಯರು, ಮೇಲ್ವರ್ಗಕ್ಕೆಸೇರಿದವರು. ಗೇಣಿದಾರರು ತುಳಿತಕ್ಕೆ ಒಳಗಾದವರು ಮತ್ತು ಅವರಲ್ಲಿ ಹೆಚ್ಚಿನವರು ಹಿಂದುಳಿದವರ್ಗಕ್ಕೆ ಸೇರಿದವರು. ಅವರು ಹೊಟ್ಟೆಬಟ್ಟೆಗೂಪರದಾಡಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅಲ್ಪ ಸ್ವಲ್ಪಭೂಧಣಿಗಳಿಂದ ಸಾಲ ಪಡೆದಿದ್ದಲ್ಲಿ, ಗೇಣಿದಾರರು, ಅವರಮಕ್ಕಳು ಭೂಧಣಿಗಳಲ್ಲಿ ಜೀತದಾಳುಗಳಾಗಿದುಡಿಯಬೇಕಿತ್ತು. ಹೀಗೆ ಬಡತನ, ನಿರಕ್ಷರತೆ,ಅಸಹಾಯಕತೆಗಳು ಅವರ ನಿರಂತರ ಸಂಗಾತಿಗಳಾಗಿದ್ದವು.

ಗೇಣಿದಾರರು ಯಾವಾಗಲೂ ಭೂಧಣಿಗಳ ತೀರ್ಮಾನಕ್ಕೆಬದ್ಧರಾಗಬೇಕಿತ್ತು. ಅನ್ಯಾಯವಾದಾಗ ಪ್ರಶ್ನಿಸುವ ಹಕ್ಕುಅವರಿಗಿದ್ದಿಲ್ಲ. ಪ್ರಶ್ನಿಸಿದರೆ ಭೂಮಿಯಿಂದ ಉಚ್ಚಾಟನೆ! ಕಾನೂನಿನನ್ವಯ ಗೇಣಿ ಕರಾರುಪತ್ರ ತ್ರಿಪ್ರತಿಯಲ್ಲಿಮಾಡಿಕೊಳ್ಳಬೇಕಿತ್ತು. ಕರಾರಿನ ಒಂದು ಪ್ರತಿ ಭೂಧಣಿಯ ಹತ್ತಿರ, ಇನ್ನೊಂದು ಗೇಣಿದಾರನ ಹತ್ತಿರ ಮತ್ತೊಂದುತಾಲ್ಲೂಕು ಕಚೇರಿಯಲ್ಲಿ! ಆದರೆ ಯಾವುದೂ ಕರಾರುವಾಕ್ಕಾಗಿ ನಡೆಯುತ್ತಿರಲಿಲ್ಲ. ಕಾನೂನಿನ ರಕ್ಷಣೆ ಇದ್ದರೂಗೇಣಿದಾರರನ್ನು ಭೂಧಣಿ ಯಾವಾಗ ಬೇಕಾದರೂ ಗೇಣಿ ಭೂಮಿಯಿಂದ ಉಚ್ಚಾಟಿಸುತ್ತಿದ್ದ. ಇನ್ನು ಗೇಣಿ ಭೂಮಿಗೆ ನ್ಯಾಯಸಮ್ಮತವಾದ ಗೇಣಿ ಪಾವತಿಸಬೇಕಿತ್ತು. ಅದೂ ಕೂಡಖಾತ್ರಿ ಇರಲಿಲ್ಲ. ಗೇಣಿದಾರರ ಕುಟುಂಬದವರು ಭೂಧಣಿಗಳಮನೆಯಲ್ಲಿ, ಮನೆವಾರ್ತೆ ಕೈಂಕರ್ಯವನ್ನು ಪುಕ್ಕಟೆಯಾಗಿಮಾಡಬೇಕಿತ್ತು.

ಕೃಷಿ ಚಟುವಟಿಕೆ

1972ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದೇವರಾಜ ಅರಸುನೇತೃತ್ವದ ಸರ್ಕಾರ, 1961ರ ಭೂಸುಧಾರಣಾ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿ ತಂದು, ಅದನ್ನು 1974ರ ಮಾರ್ಚ್ 1 ರಿಂದಹೊಸ ಭೂಸುಧಾರಣಾ ಮಸೂದೆಯನ್ನು ಜಾರಿಗೆ ತಂದಿತು. ಈಕಾಯ್ದೆಯ ಉದ್ದೇಶಗಳು: 1) ಗೇಣಿದಾರನ ಭೂಮಿಸರ್ಕಾರದ ವಶ, ಉಳುವವನೇ ಭೂ ಒಡೆಯನಾಗಬೇಕು. 2)ಜಮೀನುದಾರರು ಹೊಂದಿದ ಭೂಮಿಗೆ ಮಿತಿ ಹೇರಲಾಯಿತು. 3)ಜಮೀನುದಾರರಿಂದ ಹೆಚ್ಚುವರಿಯಾಗಿ ಬಂದ ಭೂಮಿಯನ್ನುಭೂರಹಿತರು, ಕೃಷಿಕಾರ್ಮಿಕರಿಗೆ ಹಂಚಬೇಕು. 4) ಅನುಪಸ್ಥಿತಿಯಲ್ಲಿ ಭೂ ಧಣಿಗಳು ಕೃಷಿಭೂಮಿ ಹೊಂದುವಹಾಗಿಲ್ಲ. 5) ಕೃಷಿಯೇತರ ಮೂಲಗಳಿಂದ ಬಂದ ಆದಾಯದಿಂದಕೃಷಿಭೂಮಿ ಖರೀದಿಸಲು ಮಿತಿ ಹೇರಲಾಯಿತು. 6) ದಿನಾಂಕ 1-3-1974ರಿಂದ ಹೊಸ ಗೇಣಿದಾರಿಕೆಯನ್ನು ಸೃಷ್ಟಿಸುವಂತಿಲ್ಲ. 7) ಈತಿದ್ದುಪಡಿ ಕಾಯ್ದೆಯ ಅನುಷ್ಠಾನದ ಜವಾಬ್ದಾರಿಯನ್ನು ಭೂನ್ಯಾಯ ಮಂಡಳಿಗಳಿಗೆ ವಹಿಸಲಾಯಿತು. ಅದರ ಮೇಲೆ ಯಾವ ಕೋರ್ಟ್‍ಗೂ ಮೇಲ್ಮನವಿ ಸಲ್ಲಿಸುವಂತಿಲ್ಲ.

ಭೂನ್ಯಾಯಮಂಡಳಿಯಲ್ಲಿ ವಕೀಲರನ್ನು ನೇಮಿಸುವಂತಿಲ್ಲ.ಭೂನ್ಯಾಯಮಂಡಳಿಯ ತೀರ್ಪು ಅಂತಿಮ. ನ್ಯಾಯಮಂಡಳಿಯ ಸಾರ್ವಭೌಮತೆ ಯಾರೂ ಪ್ರಶ್ನಿಸುವಂತಿಲ್ಲ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಕೂಡ ಭೂಮಾಲೀಕರಾಗಿ ಕಾರ್ಕಳದಭೂನ್ಯಾಯಮಂಡಳಿಯ ಎದುರು ಹಾಜರಿದ್ದರು.ನ್ಯಾಯಮಂಡಳಿಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅವರುಉತ್ತರಿಸುತ್ತಿದ್ದರು. ಗೇಣಿದಾರರ ಪ್ರತಿನಿಧಿಗಳೇ ಅವರನ್ನುಪ್ರಶ್ನಿಸುವಂತಾಗಿತ್ತು. ಇದಕ್ಕಿಂತ ದೊಡ್ಡ ಕ್ರಾಂತಿಕಾರಿ ಹೆಜ್ಜೆಇನ್ನೊಂದಿಲ್ಲ.

ರಾಷ್ಟ್ರದಲ್ಲಿ ಕರ್ನಾಟಕದ ಟ್ರಿಬ್ಯುನಲ್ ವ್ಯವಸ್ಥೆ ಕ್ರಾಂತಿಕಾರಿ ಹೆಜ್ಜೆ ಆಗಿತ್ತು.ಗೇಣಿದಾರರಲ್ಲಿ ಅನೇಕ ವೈವಿಧ್ಯ ಇತ್ತು. ವಾಯಿದೆ ಗೇಣಿ,ಮೂಲಗೇಣಿ ಮತ್ತು ಚಾಲಗೇಣಿ, ಈ ವ್ಯವಸ್ಥೆಯಿಂದ ಗೇಣಿದಾರರುಗುಲಾಮತನದಿಂದ ನಡೆದುಕೊಂಡು ಬರಬೇಕಿತ್ತು. ಗೇಣಿದುಬಾರಿಯಾದ ಕಾರಣ ಮಳೆಗಾಲದ ಕಾಲದಲ್ಲಿ ಪೋಲಿ ವ್ಯವಹಾರದಿಂದಒಂದು ಮುಡಿ ಅಕ್ಕಿಗೆ ಒಂದು ಮುಡಿ ಹೆಚ್ಚುವರಿ ಅಕ್ಕಿಯನ್ನುನೀಡಬೇಕಾಗಿ ಬರುತ್ತಿತ್ತು. ಬಿಟ್ಟಿ ಮತ್ತು ಬುಳೆ ಕಾಣಿಕೆ ಇದರದೆಸೆಯಿಂದ ಗೇಣಿದಾರರು ಶೋಷಣೆಗೆ ಒಳಗಾಗುತ್ತಿದ್ದರು.

ಭೂಮಾಲೀಕರ ದಬ್ಬಾಳಿಕೆಗೆ ಅನೇಕ ರೀತಿಯಿಂದ ಸಂಕಷ್ಟಕ್ಕೆಒಳಗಾಗುತ್ತಿದ್ದರು. ಅನೇಕ ಕೊರಗರು, ಹರಿಜನರು ಅವರವರ ಭೂಮಿಗೆ ಅಂಟಿಕೊಂಡ ಜಮೀನಿನ ಒಡೆಯರ ಗುಲಾಮರಾಗಿ ಬಾಳುತ್ತಿದ್ದರು. ಬೇಸಿಗೆ ಕಾಲದಲ್ಲಿ ಎಷ್ಟೇ ದೊಡ್ಡ ವ್ಯವಸಾಯವಿದ್ದರೂ, ಮಳೆಗಾಲದಲ್ಲಿ ಗೇಣಿದಾರರು,ಗೇಣಿದಾರರ ಕುಟುಂಬದವರು ಅನ್ನವಿಲ್ಲದೆ ಉಪವಾಸ ಬೀಳುವ ಸಂಭವವಿತ್ತು. ಇದೊಂದು ದುರಂತ ಬದುಕು. ಭೂಮಸೂದೆಯು ಹೊಸಬೆಳಕು ಮತ್ತು ಬದುಕನ್ನು ಗೇಣಿದಾರರಿಗೆ ನೀಡಿತ್ತು. ಪ್ರತೀ ತಾಲ್ಲೂಕಿಗೆ 4-5ನ್ಯಾಯಮಂಡಳಿಗಳೂ ನೇಮಕವಾಗಿದ್ದವು. ಇದೊಂದುಪ್ರಜಾಪ್ರಭುತ್ವದ ನಿಜವಾದ ಪ್ರಕ್ರಿಯೆ. ಮೌಖಿಕ ಹೇಳಿಕೆಗಳೇ ಮುಖ್ಯ. ಗೇಣಿದಾರರ ಪ್ರಾಮಾಣಿಕ ಬದುಕನ್ನೇ ಪರೀಕ್ಷೆಗೆ ಒಡ್ಡುತ್ತಿದ್ದರು. ಕೆಲವು ಕಡೆ ಸ್ಥಳಪರಿವೀಕ್ಷಣೆಗೆ ಪ್ರಾಮುಖ್ಯ ನೀಡಲಾಗಿತ್ತು. ಪ್ರತೀ ತಾಲ್ಲೂಕಿಗೆಭೂಮಿಯ ನಕ್ಷೆ ಕೂಡಾ ನ್ಯಾಯಮಂಡಳಿಯ ಆದೇಶಗಳಿಗೆ ಲಗ್ತೀಕರಿಸಲಾಗಿತ್ತು.

ಭೂಮಸೂದೆ ಅನೇಕ ಜಮೀನ್ದಾರರಿಗೆ ಕೂಡ ಸಕ್ರಿಯಬದುಕು ನೀಡಿತು. ಬರೀ ಗೇಣಿ ಅಕ್ಕಿಯನ್ನು ನಂಬಿ ಸೋಮಾರಿಗಳಾಗಿಬದುಕುತ್ತಿದ್ದ ಭೂಮಾಲಿಕರು ಉಳಲು ಪ್ರಾರಂಭಿಸಿದರು. ಅಲ್ಲದೆ ಬೇರೆ ಉದ್ಯೋಗ ಕೂಡ ಮಾಡುವಲ್ಲಿ ಸಂಪನ್ನರಾದರು.ಬಂಜರು ಬಿದ್ದ ಭೂಮಿಗೆ ಜೀವಕಳೆ ಬಂದು ಉಳುಮೆ ಮತ್ತೆ ಸಾಧ್ಯವಾಯಿತು. ಭೂಮಿಯ ಮೇಲೆ ಗೇಣಿದಾರರ ಮತ್ತುಜಮೀನುದಾರರ ಪ್ರೀತಿ ಹೆಚ್ಚಾಯಿತು. ಆಹಾರ ಉತ್ಪಾದನೆಯಲ್ಲಿಹೆಚ್ಚಳವಾಯಿತು. ತಲಾ ಆದಾಯದಲ್ಲಿ ಸುಧಾರಣೆಯಾಯಿತು.ಗ್ರಾಮೀಣ ಜನರ ಬದುಕಿನಲ್ಲಿ ಒಂದು ರೀತಿಯ ಕ್ರಾಂತಿಯಾಯಿತು.ತನ್ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕ್ರಾಂತಿಯಪ್ರಕ್ರಿಯೆ ಅನಾವರಣವಾಯಿತು.

ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಶಾಸಕರು ಭೂಮಸೂದೆ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದರಜತೆಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಪೋಲೀಸ್ ಅಧಿಕಾರಿಗಳಲ್ಲಿ ಗೇಣಿದಾರರ ಪರವಾದ ಮನೋಭೂಮಿಕೆಒಡಮೂಡಿತು. ಆ ಕಾಲದಲ್ಲಿ ಆಯಾಯ ಜಿಲ್ಲೆಯಲ್ಲಿಕಾರ್ಯವೆಸಗುತ್ತಿದ್ದ ಜಿಲ್ಲಾಧಿಕಾರಿಗಳು ಅನೇಕರುದಂತಕತೆಯ ಮೂರ್ತಿಗಳಾದರು. ಒಟ್ಟಿನಲ್ಲಿ ಬದಲಾವಣೆಯ ಹೊಸ ಶಕೆಯಲ್ಲಿಸಮುದಾಯದ ಆರ್ಥಿಕತೆ ಎಲ್ಲರ ಪಾಲಾಯಿತು. ಅನೇಕ ಕಡೆ ರಾಜಕೀಂಯ ಸ್ಥಿತ್ಯಂತರ ಕಂಡಿದ್ದೇವೆ. ಸಮಾನತೆಂಯಜಾಗೃತಿಂಯಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಸಮುದ್ರಮಂಥನದಿಂದ ಹಾಲಾಹಲವೂ ಅಮೃತವೂ ಹೊರ ಬರುತ್ತದೆ.ಇದರಿಂದಾಗಿ ರೈತರು, ಕಾಂಗ್ರೆಸ್‍ ಪಕ್ಷದ ಮತ ತಪ್ಪಿ ಬೇರೆ ಬೇರೆ ಪಕ್ಷಗಳಿಗೆ ಮತ ನೀಡಲು ಸಾಧ್ಯವಾಯಿತು. ಸಂಪನ್ನ ಬದುಕಿನಭವಿಷ್ಯ ಎಲ್ಲರಲ್ಲೂ ಮೂಡಿತ್ತು.

1974ರ ಮಾರ್ಚ್ ಒಂದರಿಂದಲೇ ಗೇಣಿಗಾರಿಕೆಯ ಎಲ್ಲಾ ಕೃಷಿಜಮೀನು ಸರ್ಕಾರದ ಸ್ವಾಧೀನಕ್ಕೆ ಬಂತು. ಗೇಣಿದಾರರು ತಾವುಸಾಗುವಳಿ ಮಾಡುತ್ತಿದ್ದ ಜಮೀನಿನ ಹಕ್ಕು ಪಡೆಯಲು ಅರ್ಜಿಸಲ್ಲಿಸಬೇಕಾಗಿತ್ತು. ಭೂನ್ಯಾಯ ಮಂಡಳಿಗಳು ಈ ಅರ್ಜಿಯನ್ನು ವಿಚಾರಣೆ ನಡೆಸಿ ವಿಲೇವಾರಿ ಮಾಡುತ್ತಿದ್ದವು.ಅರ್ಜಿ ಶುಲ್ಕ ಮತ್ತು ಸ್ಟ್ಯಾಂಪ್ ಶುಲ್ಕವನ್ನು ರದ್ದು ಮಾಡಲಾಗಿತ್ತು.ಅಲ್ಲದೆ ತಕರಾರುಗಳನ್ನು ಇತ್ಯರ್ಥಪಡಿಸುವುದು ವಿಳಂಬವಾಗುವುದನ್ನು ತಡೆಯುವುದಕ್ಕಾಗಿಯೇ ಭೂನ್ಯಾಯ ಮಂಡಳಿಗಳು ನೀಡುವ ತೀರ್ಪು ಅಂತಿಮ ಎಂದುಸಾರಲಾಗಿತ್ತು. ರಾಷ್ಟ್ರದಲ್ಲಿಯೇ ಅತ್ಯಂತ ಕ್ರಿಯಾಶೀಲ, ಕ್ರಾಂತಿಕಾರಿಮಸೂದೆಯನ್ನು ಜಾರಿಗೊಳಿಸಿದ ಅಂದಿನ ಶಾಸಕ ಸಮುದಾಯಕ್ಕೆ ಅದರಲ್ಲೂ ಪ್ರಗತಿಪರ ಮನೋಭೂಮಿಕೆಯ ಮುಖ್ಯಮಂತ್ರಿ ದೇವರಾಜ ಅರಸುರವರಿಗೆ ಸಾಸಿರ ಸಾಸಿರ ನಮನಗಳು.

ಭೂಸುಧಾರಣೆ ಮಸೂದೆಗೆ ಕಾಯ್ದೆಯ ಸ್ವರೂಪ ನೀಡಲು ಕಾನೂನಿನ ಆತಂಕ ಬಂದಾಗ ಆಕಾನೂನಿನ ಅಂಶವನ್ನು ತಿದ್ದುಪಡಿ ಮಾಡಬೇಕೆಂದು ದೇವರಾಜಅರಸರನ್ನು ಆಗ್ರಹಪಡಿಸಿದೆವು. ಅವರು ಶಾಸನಸಭೆಯಲ್ಲಿ ತಿದ್ದುಪಡಿ ಮೂಲಕ ಅಥವಾ ಸುಗ್ರೀವಾಜ್ಞೆ ಮೂಲಕ ಬದಲಾವಣೆತರಲು ವಿಳಂಬ ಮಾಡುತ್ತಿರಲಿಲ್ಲ ಅಥವಾ ಅಂಜುತ್ತಿರಲಿಲ್ಲ. ಅವರಪ್ರಗತಿಪರ ಮನೋಭೂಮಿಕೆ ಅಥವಾ ಸ್ಥೈರ್ಯ ಅಸಾಧಾರಣವಾಗಿತ್ತು.

ಹಲವಾರು ಗೇಣಿದಾರರಲ್ಲಿ ‘ತಾನು ಗೇಣಿ ನಡೆಸುತ್ತಿದ್ದೆ’,ಎನ್ನುವುದಕ್ಕೆ ಸೂಕ್ತವಾದ ದಾಖಲೆಗಳೇ ಇರಲಿಲ್ಲ.ಅಂತಹವರಿಗೆ ಭೂಮಿ ಕೊಡಿಸುವುದು ನಿಜವಾಗಿಯೂ ಸವಾಲಾಗಿತ್ತು.ಅಲ್ಲದೆ ಗೇಣಿದಾರರಿಗೆ ಭೂಮಿ ಕೊಡಿಸುವ ವಿಷಯದಲ್ಲಿ ಜಾತಿ,ಧರ್ಮ, ರಾಜಕೀಯ ನಿಲುವು ಯಾವುದೂ ಮುಖ್ಯವಾಗಿರಲಿಲ್ಲ.ಉಳುವವನಿಗೆ ಭೂಮಿ ಸಿಗಬೇಕು ಎನ್ನುವುದಷ್ಟೇಗುರಿಯಾಗಿತ್ತು. ಭೂಮಾಲಿಕರ ಬೆದರಿಕೆಯಿಂದ ಅರ್ಜಿ ಸಲ್ಲಿಸಲು ಭಯಪಡುತ್ತಿದ್ದ ಗೇಣಿದಾರರನ್ನು ಗುರುತಿಸಿ ಅವರಿಂದಲೂಅರ್ಜಿ ಹಾಕಿಸಿ ಭೂಮಿ ಒದಗಿಸಿದ ಹಲವಾರು ಉದಾಹರಣೆಗಳು ಇವೆ. ಇದೊಂದು ರಕ್ತರಹಿತ ಕ್ರಾಂತಿಕಾರಕ ಆಂದೋಲನವೇ ಆಯಿತು!

1972ರ ಮಾರ್ಚ್‍ನಿಂದ 1980ರ ಜನವರಿಯವರೆಗೆ ಕರ್ನಾಟಕದಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಈ ಬೇಡಿಕೆಗೆಸ್ಪಂದಿಸಿ 1973ರ ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ)ಕಾನೂನನ್ನು (1974ರ ಕರ್ನಾಟಕ ಕಾನೂನು 1) ಜಾರಿಗೆ ತರುವಮೂಲಕ ಈ ದಿಸೆಯಲ್ಲಿ ಅಭೂತಪೂರ್ವ ಹೆಜ್ಜೆಯೊಂದನ್ನು ಮುಂದಿಟ್ಟರು. ಬಹಳ ಶಕ್ತಿಯುತವಾದ ಈ ಕಾನೂನು ವಿಶಾಲವಾದಸಾಧ್ಯತೆಗಳನ್ನೊಳಗೊಂಡಿದ್ದು, ಅದರ ಪರಿಣಾಮಗಳು ಆಕಾಲದಲ್ಲಿ ಬಹಳ ದೂರದವರೆಗೆ ಸಾಗಿಬಂದವು. ಉಳುವವನೇಹೊಲದೊಡೆಯ ಎಂಬ ಜನಪ್ರಿಯ ಘೋಷಣೆಂಯು ಈ ಕಾನೂನಿನಿಂದಾಗಿ ಸಾಕಾರಗೊಂಡಿತು.

ಇಡೀ ರಾಜ್ಯದಲ್ಲಿ ಒಟ್ಟು 299 ಪಂಚಾಯಿತಿಗಳಿದ್ದವು. ಹಿಂದಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದ್ದ ಎಂಟು ತಾಲ್ಲೂಕುಗಳಿಗಾಗಿ ಒಟ್ಟು 55ಅಂತಹ ಪಂಚಾಯಿತಿಗಳು ಇದ್ದವು ಮತ್ತು ಸ್ವೀಕರಿಸಿದ್ದ 8.13 ಲಕ್ಷ ಅರ್ಜಿಗಳಲ್ಲಿ ದಕ್ಷಿಣಕನ್ನಡದವರೇ 7ಲಕ್ಷ ಅರ್ಜಿಗಳನ್ನುಸಲ್ಲಿಸಿದ್ದರು ಎಂಬುದನ್ನು ಗಮನಿಸಬೇಕು. ಕರ್ನಾಟಕದಲ್ಲಿಸುಮಾರು 25 ಲಕ್ಷ ಗೇಣಿದಾರ ಕುಟುಂಬಗಳು ಭೂ ಒಡೆಯರಾದರು. ಅದ್ಭುತ ಪರಿವರ್ತನೆ!

ಈಗಿನ ಪ್ರತಿಗಾಮಿ ನಡೆಯು ಅರಸು ಅವರ ಕಾಲದಲ್ಲಿ ಕಾಯ್ದೆಗೆ ಮಾಡಿದ ಕ್ರಾಂತಿಕಾರಿ ತಿದ್ದುಪಡಿ ಹಾಗೂ ತಿದ್ದುಪಡಿಯ ಸಾಮಾಜಿಕಬದಲಾವಣೆಯ ಪ್ರಕ್ರಿಯೆಯನ್ನು ಕೂಡ ಪತನಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಅರಸು ಅವರು ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತರುವಾಗಲೂ ಅಂದಿನ ಜನಸಂಘ ಮತ್ತು ಇನ್ನಿತರಪಕ್ಷಗಳು ಭೂಮಾಲೀಕರ ಪರವಾಗಿ ನಿಂತಿದ್ದವು; ಭೂಮಾಲೀಕರಜತೆಯಲ್ಲಿ ಕೈಜೋಡಿಸಿ ಹಿಂಸಾತ್ಮಕ ಚಟುವಟಿಕೆಯಲ್ಲಿ ಕೂಡ ತೊಡಗಿದ್ದವು. ಅಂದು ಆ ಭೂಸುಧಾರಣೆ ಕಾಯ್ದೆ ಯನ್ನು ವಿರೋಧಿಸುತ್ತಿದ್ದ ಪಕ್ಷ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಕ್ಕೆ ಬಂದ ಬಳಿಕ ಪ್ರತಿಕ್ರಾಂತಿಯನ್ನು ಮಾಡಲು ಸಂಚನ್ನು ಮಾಡಿವೆ. ಕಾಯ್ದೆಯ ಪ್ರಮುಖ ಅಂಶಗಳಾದ ಸೆಕ್ಷನ್-63-ಎ, 79-ಎ, ಬಿ, ಮತ್ತು ಸಿಗೆ ತಿದ್ದುಪಡಿಮಾಡುವ ಕೆಟ್ಟ ನಿರ್ಧಾರವನ್ನು ಕೈಗೊಂಡಿವೆ.

ಬಹಳ ಆಶ್ಚರ್ಯವೆಂದರೆ, ಅವಕಾಶವಾದಿ ರಾಜಕಾರಣವನ್ನು ಮಾಡುವ ಈಗಿನ ಆಳುವ ಪಕ್ಷ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯೇತರ ಉತ್ಪನ್ನದ ಸಂಪನ್ಮೂಲದಿಂದ ಕೃಷಿ ಭೂಮಿಯನ್ನು ಖರೀದಿ ಮಾಡುವ ಮಿತಿಯನ್ನು ₹2 ಲಕ್ಷದಿಂದ ₹25 ಲಕ್ಷಕ್ಕೆ ಏರಿಸಿದಾಗ ವಿರೋಧ ಮಾಡಿತ್ತು. ಆದರೆ ಅದೇ ಪಕ್ಷ ಭೂಸುಧಾರಣೆಯ ಮೂಲಭೂತ ಅವಕಾಶಗಳನ್ನು ಧ್ವಂಸ ಮಾಡುವ ಕೆಲಸಕ್ಕೆ ಹೊರಟಿದೆ.

ಅರಸು ಅವರ ನಂತರ ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ, ಈ ಲೇಖನ ಬರೆದ ನಾನು, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದರು. ಇವರಾರೂ ಈ ರೀತಿಯ ಪ್ರಗತಿಪರ ಭೂಸುಧಾರಣೆ ಕಾಯ್ದೆಯ ಮೂಲ ಆಶಯಗಳನ್ನು ಮಣ್ಣುಪಾಲು ಮಾಡುವ ಕೃತ್ಯಕ್ಕೆ ಕೈಹಾಕಲಿಲ್ಲ. ಅವರೆಲ್ಲರ ಕಾಲದಲ್ಲಿ ಉದ್ಯಮೀಕರಣಕ್ಕೆ ಬಾರದ ಆತಂಕ ಯಡಿಯೂರಪ್ಪ ನವರಿಗೆ ಹೇಗೆ ಬಂತೋ ಎಂಬುದು ಯಕ್ಷಪ್ರಶ್ನೆ! ಎಲ್ಲಾ ಕಾಲದಲ್ಲಿ ಕರ್ನಾಟಕದಲ್ಲಿ ಅನೇಕ ಕೈಗಾರಿಕೆಗಳು ತಲೆಯೆತ್ತಿವೆ.

ಭೂಸುಧಾರಣೆ ಕಾಯ್ದೆಗೆ ಇಂತಹ ಪ್ರತಿಗಾಮಿ ತಿದ್ದುಪಡಿ ತರುವ ಸಂದರ್ಭ, ಇಡೀ ದೇಶದ ರೈತರು ದುಃಸ್ಥಿತಿಯಲ್ಲಿರುವ ಕಾಲ. ಕೋವಿಡ್-19 ಮಾರಕ ರೋಗ ಬಡವರ ಬದುಕನ್ನು ಅಲುಗಾಡಿಸುತ್ತಿದೆ. ತಮ್ಮ ಭೂಮಿಯನ್ನು ಹತಾಶರಾಗಿ ಮಾರಿಕೊಳ್ಳುತ್ತಿರುವ ಕಠಿಣ ಕಾಲದಲ್ಲಿ ಇಂತಹ ತಿದ್ದುಪಡಿ ತಂದು ರೈತನನ್ನು ಬೀದಿಪಾಲು ಮಾಡುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಅನೇಕಾನೇಕ ರೈತರು ಕರ್ನಾಟಕದಲ್ಲಿ ಕೂಡ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರೈತರನ್ನು ಮತ್ತಷ್ಟು ಪಾತಾಳಕ್ಕೆ ದೂಡಿ ಹತಾಶರಾಗಿ ತಮ್ಮ ಭೂಮಿಯನ್ನು ಪರಭಾರೆ ಮಾಡುವ ದಿಕ್ಕಿಗೆ ಒಯ್ಯಲಾಗುತ್ತಿದೆ. ಭೂಮಿಯ ಬಗ್ಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿ ಲಾಲಸೆ ಉಳ್ಳವರಾಗಿದ್ದು, ಅವರಲ್ಲೂ ಭೂಮಾಫಿಯಾಗಳು ಅಲ್ಲಲ್ಲಿ ತಲೆ ಎತ್ತುತ್ತಿರುವ ಸಂದರ್ಭದಲ್ಲಿ ಇಂತಹ ಭೂಮಿಯನ್ನು ಬಂಜರುಗೊಳಿಸಿ ಮುಂದಿನ ಲಾಭಕ್ಕಾಗಿ ಪಿತೂರಿಯನ್ನು ಮಾಡುವ ವ್ಯಕ್ತಿ-ಶಕ್ತಿಗಳಿಗೆ ಸುಗ್ಗಿಯ ವಿಕಲ್ಪ ಕಾಲವನ್ನು ಸರ್ಕಾರ ತೆರೆದಿದೆ.

ಅದರಲ್ಲಿ ಕೂಡ ಪಶ್ಚಿಮಘಟ್ಟ ತೀರದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಇತ್ಯಾದಿ ಕಡೆ ಪರಿಸರ ಸಮತೋಲನವನ್ನು ಕಾಯುತ್ತಿರುವ ಈ ನೈಜ ರೈತರನ್ನು ಬಲಹೀನಗೊಳಿಸಿ ಭೂಮಾಲೀಕರ ಸಾಮ್ರಾಜ್ಯ ಮತ್ತೆ ನಿರ್ಮಾಣ ಮಾಡುವ, ಭೂಕಬಳಿಸುವ ರಾಕ್ಷಸರ ಸಂತತಿಯನ್ನು ನಿರ್ಮಾಣ ಮಾಡುವ ಪ್ರತಿಕ್ರಾಂತಿಯನ್ನು ಕರ್ನಾಟಕದಲ್ಲಿ ಮತ್ತೆ ಪ್ರಾರಂಭಿಸಲು ಸರ್ಕಾರ ಸಿದ್ಧವಾಗುತ್ತಿದೆ.

ಬೆಂಗಳೂರಿನ ಸುತ್ತ ಇದ್ದಂತಹ ಹಸಿರು ವಲಯವನ್ನು ನಾಶ ಮಾಡಿ, ಕಾಂಕ್ರೀಟ್ ಕಾಡು ಸಿದ್ಧಪಡಿಸಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಗ್ರಾಮೀಣ ಪ್ರದೇಶವನ್ನು ಕೂಡ ಕಬಳಿಸುವುದಕ್ಕೆ ಇಂತಹ ಪಿಶಾಚ ಲಾಲಸೆಯು ನಾಲಗೆ ಚಾಚುತ್ತಿದೆ. ಕೈಗಾರಿಕೆಗಳಿಗೆ ಭೂಮಿಯನ್ನು ನೀಡುವಾಗ ರೈತರ ಜಮೀನುಗಳಿಗೆ ಮಾರು ಕಟ್ಟೆಯ ಬೆಲೆಯನ್ನು ನೀಡುವುದಕ್ಕಾಗಿ ಮತ್ತು ರೈತರ ಬದುಕನ್ನು ಅಸ್ತವ್ಯಸ್ತಗೊಳಿಸುವುದನ್ನು ತಪ್ಪಿಸಲು ಯುಪಿಎ-II ಸರ್ಕಾರ ಸೂಕ್ತ ಕಾನೂನನ್ನು ತಂದಿದೆ. ಈಗಲೂ ಆ ಕಾನೂನು ಜಾರಿಯಲ್ಲಿದೆ. ಆ ಕಾನೂನಿನ ಆಶಯಗಳನ್ನು ಕೂಡಅಪಹರಿಸುವ ಕೆಟ್ಟ ಪ್ರಯತ್ನ ಕಾಯ್ದೆಯ ತಿದ್ದುಪಡಿಯಲ್ಲಿದೆ.

ವೀರಪ್ಪ ಮೊಯಿಲಿ

ರೈತರ ಬದುಕನ್ನು ನಾಶಮಾಡುವ ಕರ್ನಾಟಕ ಸರ್ಕಾರದ ಇಂತಹ ಪ್ರಮಾದವನ್ನು ತಪ್ಪಿಸಲು ಎಲ್ಲರೂ ಜಾಗೃತರಾಗಬೇಕಿದೆ. ಅಂದು ಭೂಮಸೂದೆ ಜಾರಿಗೊಳಿಸಲು ಬಡ ರೈತರ ರಕ್ತವೇ ಭೂಮಿಗೆ ಬಿದ್ದಿದೆ. ನಾನಾ ರೀತಿಯ ಕಷ್ಟನಷ್ಟಗಳನ್ನು ರೈತರು ಅನುಭವಿಸಿದ್ದಾರೆ. ಆರೈತರು ರಕ್ತ ಮತ್ತು ಪ್ರಾಣ ತೆತ್ತು ಭೂಮಿಯನ್ನು ಗಳಿಸಿದ್ದಾರೆ. ಅದನ್ನು ಅಪಹರಿಸುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ.

(ಲೇಖಕ: ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.