ADVERTISEMENT

100 ವರ್ಷಗಳ ಹಿಂದೆ ಸ್ಪ್ಯಾನಿಷ್‌ ಫ್ಲೂ ಬಂದಾಗ ಬೆಂಗಳೂರಲ್ಲಿ ಏನಾಗಿತ್ತು? 

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 4:00 IST
Last Updated 9 ಏಪ್ರಿಲ್ 2020, 4:00 IST
   

ಚೀನಾದ ಊಹಾನ್‌ ಎಂಬ ಪ್ರಾಂತ್ಯದಲ್ಲಿ ಕಾಣಸಿಕೊಂಡ ಕೊರೊನಾ ವೈರಸ್‌ ಎಂಬ ವೈರಾಣು ಈಗ ಇಡೀ ಜಗತ್ತನ್ನೇ ಆವರಿಸಿದೆ. ಉಗಮ ಸ್ಥಾನದಲ್ಲಿ ನಿಯಂತ್ರಣಕ್ಕೆ ಬಂದಿರುವ ವೈರಾಣು ಈಗ ಅಮೆರಿಕ, ಇಟಲಿ, ಸ್ಪೇನ್‌ ರಾಷ್ಟ್ರಗಳನ್ನು ಅಲುಗಾಡಿಸುತ್ತಿದೆ. ಇದರಿಂದ ಭಾರತವೂ ಹೊರತಾಗಿಲ್ಲ ಎಂಬುದು ಗೊತ್ತಿರುವ ಸಂಗತಿ. ಇತರೆಲ್ಲ ದೇಶಗಳಿಗೆ ಹೋಲಿಸಿಕೊಂಡರೆ, ಚೀನಾಕ್ಕೆ ಅಂಟಿಕೊಂಡೇ ಇರುವ ಭಾರತದ ಮೇಲೆ ಅದರ ಪರಿಣಾಮ ಕಡಿಮೆಯೇ. ಆದರೂ, ಆತಂಕದ ಕರಿಛಾಯೇ ಮಾತ್ರ ಇನ್ನೂ ನಿವಾರಣೆಯಾಗಿಲ್ಲ.

ಕೊರೊನಾ ರೀತಿಯ ಮಾರಕ ಕಾಯಿಲೆ, ಸ್ಪ್ಯಾನಿಷ್‌ ಫ್ಲೂ ನೂರು ವರ್ಷಗಳ ಹಿಂದೆ, ಅಂದರೆ, 1918ರ ಜನವರಿ ತಿಂಗಳಿನಿಂದ 1920ರ ಡಿಸೆಂಬರ್‌ವರೆಗೆ ಇಡೀ ಜಗತ್ತಿನಲ್ಲಿ ಮನುಕುಲವನ್ನು ಕಾಡಿತ್ತು. ಅಂದು ಪ್ರಪಂಚದಲ್ಲಿ ಈ ಸೋಂಕಿಗೆ ಸಿಲುಕಿದವರ ಸಂಖ್ಯೆ ಅಂದಾಜು 500 ಮಿಲಿಯನ್ ಎನ್ನಲಾಗಿದೆ. ಇದು ವಿಶ್ವದ ಅಂದಿನ ಒಟ್ಟು ಜನಸಂಖ್ಯೆಯ ಶೇಕಡ 25ರಷ್ಟಕ್ಕೆ ಸಮ. ಈ ರೋಗಕ್ಕೆ ಬಲಿಯಾದವರ ನಿಖರ ಸಂಖ್ಯೆ ತಿಳಿದಿಲ್ಲ. ಆದರೆ, 17 ಮಿಲಿಯನ್‌ನಿಂದ 50 ಮಿಲಿಯನ್‌ನಷ್ಟು ಜನ ಇದಕ್ಕೆ ಬಲಿ ಆಗಿದ್ದಿರಬಹುದು ಎನ್ನುವ ಅಂದಾಜು ಇದೆ.

ಸ್ಪ್ಯಾನಿಷ್‌ ಫ್ಲೂ ಮುಂಬೈ ಮೂಲಕ ಭಾರತವನ್ನು ವ್ಯಾಪಿಸಿತ್ತು. ಅಂದಿನ ಮಾಹಾಮಾರಿ ಭಾರತೀಯ ಸಮಾಜದ ಅಡಿಪಾಯವಾಗಿರುವ ಕುಟುಂಬಗಳನ್ನೇ ನುಂಗಿ ನೀರು ಕುಡಿದಿತ್ತು. ಭಾರತದಲ್ಲಿ ಅಂದಾಜು ಅಂದಾಜು 12 ಮಿಲಿಯನ್‌ ಜನರನ್ನು ಬಲಿ ಪಡೆದಿತ್ತು ಎನ್ನುತ್ತವೆ ದಾಖಲೆಗಳು. ಇದು ಮನುಕುಲ ಕಂಡ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ಎಂದು ಹೇಳಲಾಗಿದೆ.

ಸ್ಪ್ಯಾನಿಷ್‌ ಫ್ಲೂ ಎಂಬ ಹೆಸರು ಬಂದಿದ್ದು ಹೇಗೆ?

ಜನರು ಧೈರ್ಯಗುಂದದಿರಲಿ ಎನ್ನುವ ಉದ್ದೇಶದಿಂದ, ಈ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನು ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಆರಂಭ ಹಂತಗಳಲ್ಲಿ ಕಡಿಮೆ ಮಾಡಿ ಹೇಳಲಾಯಿತು ಎಂಬ ವರದಿಗಳಿವೆ. ಆದರೆ, ಈ ರೋಗಕ್ಕೆ ಬಲಿಯಾದವರ ನಿಖರ ಸಂಖ್ಯೆಯನ್ನು ಓದುಗರಿಗೆ ತಿಳಿಸುವ ಸ್ವಾತಂತ್ರ್ಯವನ್ನು ಸ್ಪೇನ್‌ ದೇಶ ತನ್ನಲ್ಲಿನ ಪತ್ರಿಕೆಗಳಿಗೆ ನೀಡಿತ್ತು. ಇದರ ಪರಿಣಾಮವಾಗಿ ಈ ರೋಗವು ಅತಿಹೆಚ್ಚಿನ ಹಾನಿಯನ್ನು ಉಂಟುಮಾಡಿರುವುದು ಸ್ಪೇನ್‌ ದೇಶದಲ್ಲಿ ಮಾತ್ರ ಎನ್ನುವ ಭಾವನೆ ಕೂಡ ಹಲವರಲ್ಲಿ ಮೂಡಿತು. ಹೀಗಾಗಿ, ಈ ರೋಗಕ್ಕೆ ಸ್ಪ್ಯಾನಿಶ್ ಫ್ಲೂ ಎನ್ನುವ ಹೆಸರು ಬಂತು.

ಪ್ರಾಣ ಕಳೆದುಕೊಂಡವರಲ್ಲಿ ಯುವಕರೇ ಹೆಚ್ಚು

ಈಗಿನ ಕೊರೊನಾ ವೈರಾಣು ಮನುಷ್ಯನಿಗೆ ಹರಡಿದ್ದು ಚೀನಾದಲ್ಲಿ ಎನ್ನುವ ವಿಚಾರದಲ್ಲಿ ವಿಜ್ಞಾನಿಗಳ ನಡುವೆ ಒಮ್ಮತ ಇದೆ. ಆದರೆ, ಸ್ಪ್ಯಾನಿಶ್ ಫ್ಲೂನ ಮೂಲ ಯಾವುದು ಎಂಬ ವಿಚಾರದಲ್ಲಿ ವಿಜ್ಞಾನಿಗಳ ನಡುವೆ ಒಮ್ಮತ ಇಲ್ಲ. ಶೀತಜ್ವರ ಸ್ಪ್ಯಾನಿಷ್‌ ಫ್ಲೂವಿನ ಲಕ್ಷಣವಾಗಿತ್ತು. ಇಂತಹ ಶೀತಜ್ವರಗಳು ಸಾಮಾನ್ಯವಾಗಿ ವಯಸ್ಸಾದವರು ಹಾಗೂ ಚಿಕ್ಕ ವಯಸ್ಸಿನವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುತ್ತವೆ. ಯುವಕರು ಇಂತಹ ಶೀತಜ್ವರಗಳಿಗೆ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬಲಿ ಆಗುವುದಿಲ್ಲ. ಆದರೆ, ಸ್ಪ್ಯಾನಿಶ್ ಫ್ಲೂ ಮಾತ್ರ, ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಬಲಿ ತೆಗೆದುಕೊಂಡಿತು. ಇದು ಏಕೆ ಹೀಗೆ ಎಂಬ ವಿಚಾರದಲ್ಲಿಯೂ ವಿಜ್ಞಾನಿಗಳು ಹಲವು ಬಗೆಯ ವಿವರಣೆಗಳನ್ನು ನೀಡಿದ್ದಾರೆ.

ಚೀನಾವನ್ನು ಭಾದಿಸದ ಫ್ಲೂ

ಕೊರೊನಾ ಆರಂಭವಾಗಿದ್ದು, ಬಹಳವಾಗಿ ಕಾಡಿದ್ದು ಚೀನಿಯರನ್ನು (ಈಗ ಇಟಲಿಯವರನ್ನೂ ಇದು ಕಾಡುತ್ತಿದೆ). ಆದರೆ, ಸ್ಪ್ಯಾನಿಶ್ ಫ್ಲೂ ಮಾತ್ರ ಚೀನಾ ದೇಶವನ್ನು ಅಷ್ಟಾಗಿ ಬಾಧಿಸಲಿಲ್ಲ ಎಂದು ಕೆಲವು ದಾಖಲೆಗಳು ಹೇಳುತ್ತವೆ.

ಜಾಗತಿಕ ಮಹಾ ಯುದ್ಧದೊಂದಿಗೆ ಬೆಸುಗೆ

ತೀವ್ರ ಜ್ವರ, ಅತಿಯಾದ ಕೆಮ್ಮು, ಕೆಲವೊಮ್ಮೆ ಕರುಳಿನಲ್ಲಿ ಸಮಸ್ಯೆಯ ಲಕ್ಷಣಗಳನ್ನು ಹೊಂದಿರುತ್ತಿದ್ದ ಸ್ಪ್ಯಾನಿಷ್‌ ಫ್ಲೂ ರೋಗಿಗಳ ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಳ್ಳುತ್ತಿತ್ತು. ಈ ರೋಗದ ಮೂಲದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಒಂದನೇ ಜಾಗತಿಕ ಮಹಾ ಯುದ್ಧದೊಂದಿಗೆ ಇದು ಬೆಸೆದುಕೊಂಡಿದೆ. ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರು ಅವರ ರಾಷ್ಟ್ರಗಳಿಗೆ ಹಿಂದಿರುಗಿದಾಗ ಈ ಕಾಯಿಲೆಯನ್ನು ಹೊತ್ತು ಹೋಗಿದ್ದರು ಎಂಬುದೇ ಇದಕ್ಕೆ ಕಾರಣ. ಸ್ಪ್ಯಾನಿಷ್‌ ಫ್ಲೂ ಭಾರತಕ್ಕೆ ಬಂದಿದ್ದೂ ಇದೇ ರೀತಿಯಲ್ಲೇ. ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರು ದೇಶಕ್ಕೆ ಮರಳಿದಾಗ ರೋಗವೂ ಬಂದಿತ್ತು.

ಮೈಸೂರು ರಾಜ್ಯಕ್ಕೆ ಕಾಲಿಟ್ಟಾಗ ಏನಾಯಿತು?

ಸ್ಪ್ಯಾನಿಷ್‌ ಫ್ಲೂ ಮೈಸೂರು ರಾಜ್ಯಕ್ಕೆ ಕಾಲಿಟ್ಟಾಗ ಅದಾಗಲೇ ರಾಜ್ಯದಲ್ಲಿ ‌ಸಂಕಷ್ಟದ ಪರಿಸ್ಥಿತಿ ಇತ್ತು. ವಿಶ್ವ ಯುದ್ಧದ ಕಾರಣದಿಂದ ಆಹಾರದ ಕೊರತೆ ಎದುರಾಗಿತ್ತು. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿತ್ತು. ಅದೇ ವರ್ಷ ಮುಂಗಾರು ಮಾರುತವೂ ಕೈಕೊಟ್ಟು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ದೂಡಿತ್ತು.

1918ರ ಜೂನ್‌ನಲ್ಲಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ಕಾಯಿಲೆ ಮೊದಲು ಕಾಣಿಸಿಕೊಂಡಿತ್ತಾದರೂ, ಆಗ ಅದರ ತೀವ್ರತೆ ಕಡಿಮೆ ಇತ್ತು. ಸೆಪ್ಟಂಬರ್‌ನಲ್ಲಿ ಮತ್ತೊಮ್ಮೆ ಅಪ್ಪಳಿಸಿದ ಸ್ಪ್ಯಾನಿಷ್‌ ಫ್ಲೂವಿನ ಹೊಡೆತ ರಾಜ್ಯವನ್ನು ನಡುಗಿಸಿತು. ಕುಟುಂಬಕ್ಕೆ ಕುಟುಂಬಗಳೇ ಇದಕ್ಕೆ ಬಲಿಯಾದವು.

ಆಸ್ಪತ್ರೆಗಳು ರೋಗಪೀಡಿತರಿಂದ ತುಂಬಿ ತುಳುಕುತ್ತಿದ್ದವು. ವೈದ್ಯರು, ದಾದಿಯರು ರೋಗಿಗಳ ಚಿಕಿತ್ಸೆಯಲ್ಲೇ ಮುಳುಗುವಂತಾಯಿತು. ಹೆಣಗಳ ರಾಶಿ ಬಿದ್ದಿತು. ಈ ಮಾರಕ ಕಾಯಿಲೆಗೆ ವಯಸ್ಸಾದವರಿಗಿಂತಲೂ ಯುವಕರು, ಗಟ್ಟಿಗಿದ್ದವರೇ ಬಲಿಯಾಗಿದ್ದು ಅಚ್ಚರಿಯ ಸಂಗತಿ. ಕಚೇರಿಗಳೆಲ್ಲವೂ ಖಾಲಿಯಾದವು. ಉದ್ಯೋಗಸ್ತ ವರ್ಗವವೇ ಕಾಯಿಲೆ ಬಿದ್ದಿದ್ದರಿಂದ ಕೆಲಸ ಮಾಡುವವರೇ ಇಲ್ಲವಾದರು.

ಸ್ಪ್ಯಾನಿಷ್‌ ಫ್ಲೂ ವಿರುದ್ಧ ಬೆಂಗಳೂರು ಹೋರಾಡಿದ್ದು ಹೇಗೆ?

ಬೆಂಗಳೂರಿನ ಅಂದಿನ ಮುನ್ಸಿಪಲ್‌ ಕಾರ್ಪೊರೇಷನ್‌ನ ಅಧ್ಯಕ್ಷರಾಗಿದ್ದವರು ಪುಟ್ಟಣ್ಣ ಚೆಟ್ಟಿ. ಫ್ಲೂ ವಿರುದ್ಧ ಅವರು ಅತ್ಯಂತ ರಚನಾತ್ಮಕ ಕಾರ್ಯತಂತ್ರಗಳನ್ನು ರೂಪಿಸಿದರು. ಕ್ಷಿಪ್ರಗತಿಯ ನಿರ್ಧಾರಗಳನ್ನು ಕೈಗೊಂಡರು. ಬೆಂಗಳೂರಿನಾದ್ಯಂತ ತಾತ್ಕಾಲಿಕ ಔಷಧಾಲಯಗಳನ್ನು ತೆರೆಯಲು ಕ್ರಮ ಕೈಗೊಂಡರು. ಮುಚ್ಚಲಾಗಿದ್ದ ಶಾಲೆಗಳಲ್ಲೂ ಔಷಧಾಲಯಗಳನ್ನು ಆರಂಭಿಸಿದರು. ಸಂಚಾರಿ ಔಷಧಾಲಯಗಳನ್ನು ರಸ್ತೆಗೆ ಬಿಟ್ಟರು. ಈ ಔಷಧಾಲಯಗಳು ಹೆಚ್ಚು ಹೊತ್ತು ತೆರೆದಿರಬೇಕು ಎಂದೂ ಅವರು ಆಜ್ಙೆ ಹೊರಡಿಸಿದ್ದರು. ಅಂದಿನ ಕಾಲಕ್ಕೆ ರೋಗ ನಿಯಂತ್ರಣಕ್ಕಾಗಿ ನೀಡಲಾಗುತ್ತಿದ್ದ ‘ತೈಮಾಲ್‌’ ಔಷಧದ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ಅವರು ನೋಡಿಕೊಂಡರು.

ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದರಿಂದ ವೈದ್ಯರ ಕೊರತೆಯುಂಟಾಯಿತು. ಆಗ ನಿವೃತ್ತ ವೈದ್ಯರನ್ನು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ನೆರವನ್ನೂ ಪಡೆದುಕೊಳ್ಳಲಾಯಿತು. ಆಸ್ಪತ್ರೆಗಳಲ್ಲಿ ಜಾಗವಿಲ್ಲದಾದಾಗ ತಾತ್ಕಾಲಿಕ ಟೆಂಟ್‌, ಶೆಡ್‌ಗಳನ್ನು ಹಾಕಿ ಅದರಲ್ಲಿಯೇ ಚಿಕಿತ್ಸೆ ನೀಡಲಾಯಿತು. ಮನೆ ಮನೆಗೆ ತೆರಳಿ ರೋಗ ಪೀಡಿತರನ್ನು ಗುರುತಿಸಿ, ಆಸ್ಪತ್ರೆಗೆ ಕರೆತರುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ಈ ಮೂಲಕ ರೋಗ ಹರಡುವುದನ್ನು ತಡೆಯುವ ಪ್ರಯತ್ನ ಮಾಡಲಾಯಿತು.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕರ ಪತ್ರಗಳನ್ನು ಮುದ್ರಿಸಿ ರೋಗದ ಕುರಿತು ಮಾಹಿತಿ ನೀಡಲಾಯಿತು. ಕಾಯಿಲೆಯ ಲಕ್ಷಣಗಳನ್ನು, ಹರಡುವ ವಿಧಾನ, ರೋಗಿಗಳನ್ನು ಆರೋಗ್ಯವಂತರಿಂದ ಬೇರ್ಪಡಿಸಬೇಕಾಗದ ಅಗತ್ಯತೆ ಕುರಿತು ಈ ಕರ ಪತ್ರಗಳಲ್ಲಿ ವಿವರಿಸಲಾಗಿತ್ತು.

ನೀಲಗಿರಿ ಎಣ್ಣೆ ಬಳಕೆ

ರೋಗಿಗಳಿರುವ ಕೊಠಡಿಯನ್ನು ಪ್ರವೇಶಿಸುವುದಕ್ಕೂ ಮೊದಲು ನೀಲಗಿರಿ ಎಣ್ಣೆ ಚುಮುಕಿಸಿದ ಕರವಸ್ತ್ರವೊಂದನ್ನು ಮೂಗು ಮತ್ತು ಬಾಯನ್ನು ಸೇರಿಸಿ ಕಟ್ಟಿಕೊಳ್ಳುವಂತೆ ನಾಗರಿಕರಿಗೆ ಸೂಚಿಸಲಾಗಿತ್ತು. ಇದನ್ನು ರೋಗ ನಿಯಂತ್ರಣಾ ಕ್ರಮವಾಗಿಯೂ ಪಾಲಿಸಲಾಗಿತ್ತು.

ಸೇವೆ ಅಂದೂ ನಡೆದಿತ್ತು

ಸ್ಪ್ಯಾನಿಷ್‌ ಫ್ಲೂ ಪಿಡುಗು ಇಂದಿನಂತೆಯೇ ಅಂದೂ ಕೂಡ ಜನ ಜೀವನವನ್ನು ಅಸ್ತವ್ಯವಸ್ತಗೊಳಿಸಿತ್ತು. ಲಾಕ್‌ಡೌನ್‌ ಕೂಡ ಆಗಿತ್ತು. ಇಂದಿನಂತೆಯೇ ಅಂದೂ ಕೂಡ ಸ್ವಯಂ ಸೇವಕರು ದುರ್ಬಲರ ನೆರವಿಗೆ ಧಾವಿಸಿದ್ದರು. ಅಂದಿನ ಲಾಕ್‌ಡೌನ್‌ ಸಂದರ್ಭದಲ್ಲೂ ಜನ ಬಡವರನ್ನು ಕೈ ಬಿಟ್ಟಿರಲಿಲ್ಲ. ಆಹಾರ ಪೂರೈಕೆಯಂಥ ಕಾರ್ಯಗಳು ಅಂದೂ ನಡೆದಿದ್ದವು. ಪರಿಹಾರ ಸಾಮಾಗ್ರಿಗಳನ್ನು ವಿತರಿಸುವ ದೃಶ್ಯಗಳು ಅಂದೂ ಕಾಣಿಸಿದ್ದವು.

ಸರ್ಕಾರದ ವತಿಯಿಂದಲೇ ಔಷಧ, ಹಾಲು, ಆಹಾರ ವಿತರಣೆ ಮಾಡಲಾಗುತ್ತಿತ್ತು. ಸಾರ್ವನಿಕರಿಗೆ ಆಹಾರವಾಗಿ ಗಂಜಿಯನ್ನು ಸರ್ಕಾರದ ವತಿಯಿಂದಲೇ ನೀಡಲಾಗುತ್ತಿತ್ತು. ತಯಾರಿಸಲಾದ ಆಹಾರ ಮತ್ತು ಅಗತ್ಯ ಸವಲತ್ತುಗಳನ್ನು ಸರ್ಕಾರಿ ಕಾರು, ಎತ್ತಿನ ಗಾಡಿ, ಲಾರಿಗಳ ಮೂಲಕ ನಗರದ ಹಲವು ಬಡಾವಣೆಗಳಿಗೆ, ಜನ ವಸತಿ ಪ್ರದೇಶಗಳಿಗೆ ಪೂರೈಸಲಾಗುತ್ತಿತ್ತು. ಇದರ ಉಸ್ತುವಾರಿಯನ್ನು ಮುನ್ಸಿಪಲ್‌ ಕಾರ್ಪೊರೇಷನ್‌ನ ಮುಖ್ಯ ಅಧಿಕಾರಿ ಆರ್‌. ಸುಬ್ಬಾ ರಾವ್‌ ವಹಿಸಿಕೊಂಡಿದ್ದರು. ಅಗತ್ಯ ವಸ್ತುಗಳ ಪೂರೈಕೆಗಾಗಿ ಅವರು ನಗರವನ್ನು ಹಲವು ಬ್ಲಾಕ್‌ಗಳಿಗಾಗಿ ವಿಂಗಿಡಿಸದ್ದರು. ಬ್ಲಾಕ್‌ಗಳ ಅಗತ್ಯಕ್ಕೆ ಅನುಗುಣವಾಗಿ ಪರಿಹಾರ ಸಾಮಾಗ್ರಿಗಳು ಪೂರೈಕೆಯಾಗುತ್ತಿದ್ದವು.

ಮುನ್ಸಿಪಲ್‌ ಕೌನ್ಸಿಲರ್‌ಗಳು, ಸ್ವಯಂ ಸೇವಕರು, ಪಾದ್ರಿ ಬ್ರಿಯಾಂಡ್‌, ರಾಮಚಂದ್ರ ರಾವ್‌ ಸಿಂಧಿಯಾ, ಬಿ ಉಸ್ಮಾನ್‌ ಖಾನ್‌, ಬಿ. ಚಿನ್ನಸ್ವಾಮಿ ಶೆಟ್ಟಿ, ಗುಲಾಂ ದಸ್ತಂಗಿರ್, ಬಿ.ಕೆ ಗುರಢಾಚಾರ್‌, ಆರ್‌ ಗೋಪಾಲಸ್ವಾಮಿ ಅಯ್ಯರ್‌ ಅವರಂಥ ಹಲವು ಮಹನೀಯರೂ ಅಂದು ಈ ರೋಗದ ತಡೆಗಟ್ಟಲು ಶ್ರಮಿಸಿದ್ದರು.

ಇವರಿಗೆ ಸಾಮಾಜಿಕ ಸಂಘಟನೆಗಳು, ಕ್ರೈಸ್ತ ಒಕ್ಕೂಟಗಳು, ಲಂಡನ್‌ ಮಿಷನ್, ನ್ಯಾಷನಲ್‌ ಹೈಸ್ಕೂಲ್‌, ವೆಸ್ಲಿಯನ್‌ ಶಾಲೆಯ ವಿದ್ಯಾರ್ಥಿಗಳು ನೆರವಾಗಿದ್ದರು. ಮುನ್ಸಿಪಲ್‌ ಕಾರ್ಪೊರೇಷನ್‌ನ ಅಧ್ಯಕ್ಷ ಪುಟ್ಟಣ್ಣ ಚೆಟ್ಟಿ ಅವರು ಇಡೀ ನಗರದ ಪ್ರದಕ್ಷಿಣೆ ನಡೆಸುತ್ತಿದ್ದರು. ಅಗತ್ಯ ವಸ್ತುಗಳ ಪೂರೈಕೆಯನ್ನು ಗಮನಿಸುತ್ತಿದ್ದರು. ಮತ್ತು ಅಗತ್ಯವಿರುವವರಿಗೆ ಸವಲತ್ತು ವಿತರಿಸಲು ಕ್ರಮ ಕೈಗೊಳ್ಳುತ್ತಿದ್ದರು. ಇಡೀ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.

ರಾಜ್ಯದಲ್ಲಿ195000 ಮಂದಿ, ಬೆಂಗಳೂರಲ್ಲಿ 40000 ಮಂದಿ ಸಾವು

ಇಷ್ಟೆಲ್ಲ ಕ್ರಮಗಳ ಪರಿಣಾಮವಾಗಿ ನವಂಬರ್‌ ಹೊತ್ತಿಗೆ ಕಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಅಷ್ಟೊತ್ತಿಗಾಗಲೇ ಮೈಸೂರು ಪ್ರಾಂತ್ಯದಲ್ಲಿ 195000 ಮಂದಿ ಸಾವಿಗೀಡಾಗಿದ್ದರು. ಬೆಂಗಳೂರು ನಗರವೊಂದರಲ್ಲೇ 40 ಸಾವಿರ ಜನ ಮೃತಪಟ್ಟಿದ್ದರು. ಆಗ ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಮಂದಿ ಪ್ರಾಣ ತೆತ್ತೆಂಬುದು ಗಮನಿಸಬೇಕಾದ ಸಂಗತಿ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.