ADVERTISEMENT

ಆಳ–ಅಗಲ: ವಿಶೇಷ ಮಕ್ಕಳಿಗೂ ಬೇಕು ಜ್ಞಾನದ ಬೆಳಕು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 19:57 IST
Last Updated 3 ಜನವರಿ 2021, 19:57 IST
ವಿಶೇಷ ಮಕ್ಕಳ ಶಿಕ್ಷಣ–ಪ್ರಾತಿನಿಧಿಕ ಚಿತ್ರ
ವಿಶೇಷ ಮಕ್ಕಳ ಶಿಕ್ಷಣ–ಪ್ರಾತಿನಿಧಿಕ ಚಿತ್ರ   

ಶಾಲಾ ಕಾಲೇಜುಗಳಲ್ಲಿ ಸುಮಾರು ಹತ್ತು ತಿಂಗಳ ಬಳಿಕ ವಿದ್ಯಾರ್ಥಿಗಳ ಕಲರವ ಕೇಳಿಸಿದೆ. ಮಕ್ಕಳು ಶಾಲೆಗಳತ್ತ ಮುಖಮಾಡಿದ್ದಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅಂಗವಿಕಲರ ಶಾಲೆಗಳ ಆಡಳಿತ ಮಂಡಳಿಯವರು, ಯಾವಾಗ ಶಾಲೆಗಳ ಬಾಗಿಲು ತೆರೆಯಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಶಾಲೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಾರದಿರುವುದರಿಂದ ಅಂಗವಿಕಲ ಮಕ್ಕಳು ಜ್ಞಾನದ ಬೆಳಕಿಗಾಗಿ ಇನ್ನಷ್ಟು ದಿನ ಕಾಯುವಂತಾಗಿದೆ

ಜನವರಿ ಒಂದರಿಂದ ಶಾಲೆಗಳನ್ನು ಆರಂಭಿಸುವ ಸರ್ಕಾರದ ತೀರ್ಮಾನವು ತಮ್ಮ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಭಾವಿಸಿ, ಅಂಗವಿಕಲ ಮಕ್ಕಳ ಶಾಲೆಯವರೂ ತರಗತಿಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೋವಿಡ್‌ ಕಾಲದಲ್ಲಿ ಇಂಥ ಶಾಲೆಗಳನ್ನು ಆರಂಭಿಸಲು ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಮಾರ್ಗಸೂಚಿಯೇ ಬಾರದಿರುವುದರಿಂದ, ಶಾಲೆಗಳ ಆಡಳಿತದವರು ಗೊಂದಲಕ್ಕೆ ಒಳಗಾದರು. ಆ ಗೊಂದಲ ಇನ್ನೂ ಮುಂದುವರಿದಿದೆ.

‘ಅಂಧರು ಮತ್ತು ಶ್ರವಣದೋಷವುಳ್ಳವರಿಗೆ ಆನ್‌ಲೈನ್‌ ತರಗತಿ ನಡೆಸಿಲ್ಲ. ಸಾಮಾನ್ಯ ಬೋಧನೆ ಗ್ರಹಿಸುವುದೇ ಅವರಿಗೆ ಕಷ್ಟವಾಗುತ್ತದೆ. ಅಂಥದ್ದರಲ್ಲಿ ಅವರನ್ನು ಒಂದೆಡೆ ಕೂರಿಸಿ, ಪಾಠ ಆಲಿಸುವಂತೆ ಮಾಡುವುದು ಕಷ್ಟಸಾಧ್ಯ. ಶಾಲೆಗಳು ಆರಂಭಗೊಂಡ ನಂತರವಷ್ಟೇ ಅವರಿಗೆ ಪಠ್ಯ ಬೋಧಿಸಲಾಗುವುದು’ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂಥ ಮಕ್ಕಳು ಶಿಕ್ಷಕರ ತುಟಿಯ ಚಲನೆಗಳಿಂದಲೂ ಪಾಠ ಅರ್ಥ ಮಾಡಿಕೊಳ್ಳುತ್ತಾರೆ. ಮಾಸ್ಕ್‌ ಧರಿಸಿ ಪಾಠಮಾಡಲು ಹೇಳಿದರೆ, ಮಕ್ಕಳು ಶಾಲೆಗೆ ಬಂದೂ ಪಾಠದಿಂದ ವಂಚಿತರಾಗಬಹುದು ಎಂಬುದು ಶಿಕ್ಷಕರ ಆತಂಕ.

ADVERTISEMENT

ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ, ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಕೆಲವು ಶಾಲೆಗಳವರು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆದರೆ, ಅಂಗವಿಕಲರ ಸಬಲೀಕರಣ ಇಲಾಖೆಯಿಂದ ಅಗತ್ಯ ಮಾರ್ಗಸೂಚಿ ಬಾರದೆ ಶಾಲೆಗಳನ್ನು ಆರಂಭಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.

ಆನ್‌ಲೈನ್‌ ಶಿಕ್ಷಣ ಕಷ್ಟ

‘ಮಾರ್ಗಸೂಚಿಯನ್ನು ಇಲಾಖೆ ಇನ್ನೂ ಪ್ರಕಟಿಸಿಲ್ಲ. ಇವು ವಸತಿ ಶಾಲೆಗಳಾಗಿರುವುದರಿಂದ ಮಕ್ಕಳನ್ನು ಇಲ್ಲೇ ಇಟ್ಟುಕೊಳ್ಳಬೇಕು. ಆದ್ದರಿಂದ ಇಲಾಖೆಯಿಂದ ಸೂಚನೆ ಬರುವವರೆಗೂ ಶಾಲೆಗಳನ್ನು ಆರಂಭಿಸದಿರಲು ನಿರ್ಧರಿಸಲಾಗಿದೆ’ ಎಂದು ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್‌.ಮಾಲಿನಿ ತಿಳಿಸಿದರು.

ಮೈಸೂರಿನ ಅಂಧಮಕ್ಕಳ ಸರ್ಕಾರಿ ಶಾಲೆಯಲ್ಲಿ ಒಟ್ಟು 40 ಮಕ್ಕಳು ಇದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ನಾಲ್ಕು ಮಕ್ಕಳು ಕಲಿಯುತ್ತಿದ್ದಾರೆ. ರಂಗರಾವ್‌ ಸ್ಮಾರಕ ಅಂಗವಿಕಲರ ಶಾಲೆಯಲ್ಲಿ (ಅಂಧ ಹೆಣ್ಣುಮಕ್ಕಳ ಶಾಲೆ) ಒಟ್ಟು 78 ವಿದ್ಯಾರ್ಥಿಗಳು ಇದ್ದು, 11 ಮಕ್ಕಳು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಮಕ್ಕಳಿಗೆ ತಿಳಿಸಿದ್ದೇವೆ. ಅಂಧ ಮಕ್ಕಳಿಗೆ ವಿಡಿಯೊ ಮೂಲಕ ಪಾಠ ಸಾಧ್ಯವಿಲ್ಲ. ಇಷ್ಟು ದಿನ ವಾಟ್ಸ್‌ಆ್ಯಪ್‌ನಲ್ಲಿ ಪಾಠದ ಆಡಿಯೊ ಕಳುಹಿಸುತ್ತಿದ್ದೆವು. ಸ್ಮಾರ್ಟ್‌ಫೋನ್‌ ಬಳಸದವರಿಗೆ ಕರೆ ಮಾಡಿ ಪಾಠ ಹೇಳಿಕೊಡುತ್ತಿದ್ದೆವು’ ಎಂದು ಶಾಲೆಯ ಪ್ರಾಂಶುಪಾಲರಾಗಿರುವ ಎನ್‌. ಸತ್ಯಶೀಲಾ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಮಕ್ಕಳಿಗಾಗಿ ಎಂಟು ಶಾಲೆಗಳಿವೆ. ಸದ್ಯಕ್ಕೆ ಇಲ್ಲಿ ಮಕ್ಕಳ ಕಲರವ ಇಲ್ಲ. ಹಾಸನದ ಜೀವನ ಜ್ಯೋತಿ ಶಾಲೆಯ ಎಂಟು ಮಕ್ಕಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ತರಗತಿ ಆರಂಭವಾಗಿಲ್ಲ. ಸಕಲೇಶಪುರದ ಎನ್.ಕೆ. ಗಣಪಯ್ಯಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಹದಿಮೂರು ಮಕ್ಕಳಿದ್ದು, ಇಲ್ಲಿ ಜ.1ರಿಂದ ತರಗತಿ ಆರಂಭವಾಗಿವೆ.

‘ಅಂಗವಿಕಲ ಮಕ್ಕಳಿಗೆ ಓಡಾಡಲು ಮತ್ತೊಬ್ಬರ ಸಹಕಾರ ಬೇಕು. ಆದ್ದರಿಂದ ಅಂತರ ಕಾಯ್ದುಕೊಂಡು ಕೂರಲು ಸಾಧ್ಯವಾಗಲಿಕ್ಕಿಲ್ಲ. ಮಾತನಾಡುವ ಅಥವಾ ಊಟ ಮಾಡುವಾಗ ಅಂತರ ಮರೆತು ಅವರು ಅಕ್ಕಪಕ್ಕದಲ್ಲೇ ಕೂರಬಹುದು. ಸದಾ ಕಾಲ ಮಾಸ್ಕ್ ಧರಿಸಲು ಕಷ್ಟವಾಗಬಹುದು’ ಎಂದು ಈ ಶಾಲೆಗಳ ಶಿಕ್ಷಕರು ಹೇಳುತ್ತಾರೆ.

‘ಸಾಮಾನ್ಯ ಮಕ್ಕಳಂತೆ ಅಂಧ ಮಕ್ಕಳೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕು. ಈ ಕಾರಣ ನಾವು ಆನ್‌ಲೈನ್‌ ತರಗತಿಗಳನ್ನು ನಡೆಸುವ ಬದಲು ಪಾಠದ ಧ್ವನಿ ಮುದ್ರಣವನ್ನು (ಆಡಿಯೊ) ಅವರ ಮೊಬೈಲ್‌ಗೆ ಕಳುಹಿಸಿ, ತರಗತಿಗಳನ್ನು ನಡೆಸಿದೆವು. ಆದರೆ, ಶ್ರವಣದೋಷವಿರುವ ಮಕ್ಕಳಿಗೆ ಈ ಪ್ರಯೋಗ ನಡೆಸಲು ಆಗಲಿಲ್ಲ’ ಎಂದುಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲಬುರ್ಗಿಯ ಉಪನಿರ್ದೇಶಕ ಸಾದಿಕ್ ಹುಸೇನ್ ಖಾನ್ ವಿವರಿಸಿದರು.

ಕಲಬುರ್ಗಿ ಜಿಲ್ಲೆಯಲ್ಲಿ 7 ಮತ್ತು ಬೀದರ್‌ ಜಿಲ್ಲೆಯಲ್ಲಿ ಒಂದು ಅಂಗವಿಕಲರ ಶಾಲೆ ಇದೆ. ಕಲಬುರ್ಗಿಯ ಅಂಧರ ಶಾಲೆಯಲ್ಲಿ 9 ಮಕ್ಕಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಅಂಧ ಮಕ್ಕಳಸರ್ಕಾರಿ ಶಾಲೆ ಹಾಗೂ 5 ಖಾಸಗಿ ವಿಶೇಷ ಶಾಲೆಗಳಿವೆ. ಅವುಗಳಲ್ಲಿ 400ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಆನ್‌ಲೈನ್‌ ತರಗತಿಗಳು ಮಾತ್ರ ನಡೆದಿವೆ.

ವಿಜಯಪುರ ಜಿಲ್ಲೆಯಲ್ಲಿ ಮೂರು ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಹಾವೇರಿ ಜಿಲ್ಲೆಯಲ್ಲಿರುವ ಎರಡು ಕಿವುಡ ಮತ್ತು ಮೂಗ ಮಕ್ಕಳಸರ್ಕಾರಿ ಶಾಲೆಗಳು ಆರಂಭವಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ 11 ಶಾಲೆಗಳಿದ್ದು, ಇಲ್ಲಿ ‘ವಿದ್ಯಾಗಮ’ ಚಟುವಟಿಕೆಗಳು ಕೂಡ ನಡೆಯುತ್ತಿಲ್ಲ. ದೃಷ್ಟಿದೋಷವುಳ್ಳ ಮಕ್ಕಳ ಶಾಲೆಯಲ್ಲಿ 27 ಹಾಗೂ ಶ್ರವಣದೋಷವುಳ್ಳವರ ಶಾಲೆಯಲ್ಲಿ 16 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ.

ಬಳ್ಳಾರಿಯಲ್ಲಿ ವಿಶೇಷ ಮಕ್ಕಳಿಗಾಗಿ ನಾಲ್ಕು ಶಾಲೆಗಳಿವೆ. ಇವು ಯಾವುವೂ ಆರಂಭವಾಗಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿರುವ ವಿಶೇಷ ಮಕ್ಕಳ ಮೂರು ಶಾಲೆಗಳು ಕಾರ್ಯಾರಂಭ ಮಾಡಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗವಿಕಲ ಮಕ್ಕಳನ್ನು ಕಳುಹಿಸಲುಪಾಲಕರು ಹಿಂದೇಟು ಹಾಕಿದ್ದಾರೆ. ಸುರಕ್ಷತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಜ.4ರಿಂದ ಕಳುಹಿಸಲು ಒಪ್ಪಿದ್ದಾರೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು.

ಗದಗ ಜಿಲ್ಲೆಯಲ್ಲಿ2,754 ಅಂಗವಿಕಲ ಮಕ್ಕಳಿದ್ದು, ಆರು ಖಾಸಗಿ ವಿಶೇಷ ಶಾಲೆಗಳಿವೆ. ಬೆಟಗೇರಿಯ ಬುದ್ಧಿಮಾಂದ್ಯ ಮಕ್ಕಳ ಶಾಲೆ ಹಾಗೂ ಲಕ್ಷ್ಮೇಶ್ವರದಲ್ಲಿ ಇರುವ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ.

ಮನೆಗೇ ಪಠ್ಯ ಸಾಮಗ್ರಿ

ಉಡುಪಿ ಜಿಲ್ಲೆಯಲ್ಲಿ 14, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಗವಿಕಲರಐದು ಶಾಲೆಗಳು ಇವೆ. ಮೂರೂ ಜಿಲ್ಲೆಗಳ ಈ ಶಾಲೆಗಳ (1ರಿಂದ 10ನೇ ತರಗತಿ) ಒಟ್ಟು ಮಕ್ಕಳ ಸಂಖ್ಯೆ 2,769. ಈ ಮಕ್ಕಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಪ್ರಯತ್ನಗಳು ನಡೆದಿವೆ. ಹಲವು ಸವಾಲುಗಳು, ಸಮಸ್ಯೆಗಳು ಎದುರಾಗಿವೆ.

‘ಲೇಖನ ಸಾಮಗ್ರಿ, ಬ್ರೈಲ್‌ ಪುಸ್ತಕ ಮೊದಲಾದವನ್ನು ಮಕ್ಕಳ ಮನೆಗಳಿಗೇ ತಲುಪಿಸಿದ್ದೇವೆ. ‘ಸ್ಮಾರ್ಟ್‌ ಸಿಲೆಬಸ್‌’ ಅನ್ನು ‘ಮೆಮೊರಿ ಕಾರ್ಡ್‌’, ‘ಪೆನ್ ಡ್ರೈವ್‌’ ಮೂಲಕ ಒದಗಿಸಿದ್ದೇವೆ. ಅಭ್ಯಾಸಕ್ಕೆ ಫೋನ್‌ ಮೂಲಕ ಮಾರ್ಗದರ್ಶನ ನೀಡಿದ್ದೇವೆ. ‘ಆ್ಯಂಡ್ರಾಯ್ಡ್‌ ಸೆಟ್‌’ ಇಲ್ಲದ ಮಕ್ಕಳನ್ನು ತಲುಪಲು ಸಾಧ್ಯವಾಗಿಲ್ಲ’ ಎಂದು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಮುಖ್ಯಶಿಕ್ಷಕ ಎಚ್‌.ಎಸ್‌.ಲಕ್ಷ್ಮೇಗೌಡ ತಿಳಿಸಿದರು.

ದಾವಣಗೆರೆಯಲ್ಲಿರುವ ಅಂಧ ಹೆಣ್ಣುಮಕ್ಕಳ ಪಾಠಶಾಲೆ ಹಾಗೂ ಮೌನೇಶ್ವರಿ ವಾಕ್‌ ಮತ್ತು ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಶಾಲೆ ಆರಂಭಗೊಂಡಿಲ್ಲ. ದೇವರಾಜ ಅರಸು ಬಡಾವಣೆಯಲ್ಲಿ ಅಂಧ ಹೆಣ್ಣು ಮಕ್ಕಳ ಸರ್ಕಾರಿ ವಸತಿ ಶಾಲೆ ಇದೆ. ಗಂಡು ಮಕ್ಕಳೂ ಹೊರಗಿನಿಂದ ಇಲ್ಲಿಗೆ ಬಂದು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಇಲ್ಲಿ 44 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. 13 ಮಕ್ಕಳು ಹೊರಗಿನಿಂದ ಬಂದು ಕಲಿಯುತ್ತಿದ್ದರು. ಇವರೆಲ್ಲರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ.

‘ವಸತಿ ಶಾಲೆಯಾಗಿರುವುದರಿಂದ ಅಂಗವಿಕಲ ಮಕ್ಕಳಿಗೆ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟವಾಗಲಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯಗಳಿಗೆ ಈಗಾಗಲೇ ‘ಕೋವಿಡ್‌ ಎಸ್‌ಒಪಿ’ ಬಿಡುಗಡೆ ಮಾಡಲಾಗಿದೆ. ಶಾಲೆಯನ್ನು ಪುನರಾರಂಭಿಸುವ ಬಗ್ಗೆ ಜನವರಿ 5 ಹಾಗೂ 6ರಂದು ಇಲಾಖೆಯ ರಾಜ್ಯಮಟ್ಟದ ಸಭೆ ನಡೆಯಲಿದೆ’ ಎಂದು ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಪ್ರತಿಕ್ರಿಯಿಸಿದರು.

ಪ್ರಸಕ್ತ ವರ್ಷ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ 12 ವಿದ್ಯಾರ್ಥಿಗಳು ಹಾಗೂ ಮೌನೇಶ್ವರಿ ಶಾಲೆಯಲ್ಲಿ 55 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದಾರೆ. ಮೌನೇಶ್ವರಿ ಶಾಲೆಯಲ್ಲಿನ 26 ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಅಡಿ ಶಿಕ್ಷಕರು ಮನೆಗೆ ತೆರಳಿ ಪಾಠ ಮಾಡಲು ಆರಂಭಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಎರಡು ವಾಕ್‌ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಾಲೆ, ಅಂಧ ಮಕ್ಕಳ ಶಾಲೆ ಹಾಗೂ ಇತರೆ ಅಂಗವಿಕಲ ಮಕ್ಕಳ ಶಾಲೆಗಳಿವೆ. ಎಲ್ಲೂ ಪಾಠಪ್ರವಚನ ಆರಂಭಗೊಂಡಿಲ್ಲ. ಈ ಶಾಲೆಗಳಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಎಸ್ಸೆಸ್ಸೆಲ್ಸಿಯ 50 ವಿದ್ಯಾರ್ಥಿಗಳಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದರಿಂದ ಆರನೇ ತರಗತಿವರೆಗೆ ಮಾತ್ರ ಅಂಗವಿಕಲರ ಮೂರು ಶಾಲೆಗಳಿದ್ದು, ಯಾವ ಶಾಲೆಯೂ ಆರಂಭವಾಗಿಲ್ಲ.

‘ಅಂಗವಿಕಲರ ಬಗ್ಗೆಯೂ ಯೋಚಿಸಲಿ’

‘ಸರ್ಕಾರವು ಸಾಮಾನ್ಯ ಮಕ್ಕಳ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದೆ. ಅಂಗವಿಕಲ ಮಕ್ಕಳ ಬಗ್ಗೆಯೂ ಆಲೋಚಿಸಬೇಕು. ಈ ಮಕ್ಕಳಿಗೆ ಸೌಲಭ್ಯ ಇದೆಯೇ, ಕೋವಿಡ್‌ ಸಂಕಷ್ಟದ ನಡುವೆ ಅವರಿಗೆ ಕಲಿಯಲು ಸಾಧ್ಯವೇ ಎಂಬುದನ್ನು ಆಲೋಚಿಸದೆ ಶಾಲೆ ಶುರು ಮಾಡಿ ಎಂದಿರುವುದು ಎಷ್ಟರಮಟ್ಟಿಗೆ ಸರಿ’ ಎಂಬುದು ಮೈಸೂರಿನ ಅಂಗವಿಕಲ ಶಾಲೆಯೊಂದರ ಪ್ರಾಂಶುಪಾಲರ ಪ್ರಶ್ನೆ.

‘ವಿದ್ಯಾಗಮ ಆರಂಭಿಸಿ ಎನ್ನುತ್ತಾರೆ. ಬೆಳಿಗ್ಗೆ ಬಂದು ಮಧ್ಯಾಹ್ನ ಹೋಗಿ, ವಾರಕ್ಕೆ ಮೂರು ದಿನ ಬನ್ನಿ ಎಂದರೆ ಹೇಗೆ ಸಾಧ್ಯ? ನಮ್ಮ ಮಕ್ಕಳಿಗೆ ಇದು ಸಾಧ್ಯವೇ? ವಸತಿ ಶಾಲೆಯಲ್ಲಿ ಇರಬೇಕಾದ ಮಕ್ಕಳಿಗೆ ಇದು ಕಷ್ಟ’ ಎಂಬುದು ಅವರ ಅಭಿಪ್ರಾಯ.

‘ಮಕ್ಕಳ ಹಾಜರಾತಿಯ ಮಾಹಿತಿ ಕೊಡಿ ಎಂದುಶಿಕ್ಷಣ ಇಲಾಖೆಯವರು ಕೇಳುತ್ತಿದ್ದಾರೆ. ಮಕ್ಕಳೇ ಬರದಿದ್ದರೆ ಹಾಜರಾತಿ ಕೊಡುವುದು ಹೇಗೆ’ ಎಂದು ಕೇಳುವ ಅವರು, ‘ನಮ್ಮ ಶಾಲೆಗಳು ಶಿಕ್ಷಣ ಇಲಾಖೆ ಅಡಿಯಲ್ಲೂ ಪೂರ್ತಿ ಬರುವುದಿಲ್ಲ. ಅಂಗವಿಕಲರ ಸಬಲೀಕರಣ ಇಲಾಖೆಯು ಮಕ್ಕಳ ಪುನರ್ವಸತಿ ಬಗ್ಗೆ ಮಾತ್ರ ಗಮನ ಹರಿಸುತ್ತದೆ. ಇದರಿಂದ ಶಾಲೆ ಪುನರಾರಂಭದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ’ ಎಂದರು.

ಶಶಿಕಲಾ ಜೊಲ್ಲೆ

‘ಮಾರ್ಗಸೂಚಿ ಸಿದ್ಧ’

ವಿಶೇಷ ಮಕ್ಕಳ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಷ್ಟೇ ಸಾಕಾಗುವುದಿಲ್ಲ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸರ್ಕಾರೇತರ ಸಂಸ್ಥೆಗಳ ಮೂಲಕ ವಿಶೇಷ ಮಕ್ಕಳ ಶಾಲೆಗಳನ್ನು ನಡೆಸಲಾಗುತ್ತಿದೆ. ಅಂತರ ಕಾಯ್ದುಕೊಳ್ಳು ವುದು, ಸ್ಯಾನಿಟೈಸೇಷನ್‌, ಮಾಸ್ಕ್‌ ಧರಿಸುವುದರ ಜತೆಗೆ ಸರ್ಕಾರೇತರ ಸಂಸ್ಥೆಗಳಿಗೂ ಕೆಲವು ಷರತ್ತುಗಳನ್ನು ಹಾಕಲು ತೀರ್ಮಾನಿಸಲಾಗಿದೆ. ಮಾರ್ಗಸೂಚಿ ಪ್ರಕಟವಾದ ಬಳಿಕ ಈ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗುವುದು ಎಂದು ಹೇಳಿದರು.

ತಜ್ಞರು, ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜತೆ ಚರ್ಚಿಸಿದ ಬಳಿಕ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗಿದೆ. ವಿಶೇಷ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಿಳಿವಳಿಕೆ ಕೊಡಬಹುದು

‘ಮಾಸ್ಕ್‌ ಧಾರಣೆ, ಅಂತರಪಾಲನೆ, ಸ್ಯಾನಿಟೈಸರ್‌ ಬಳಕೆ ಬಗ್ಗೆ ಈ ಮಕ್ಕಳಿಗೆ ತಿಳಿಸಿ ಅವರನ್ನು ಒಗ್ಗಿಸಬಹುದು. ಬುದ್ಧಿಮಾಂದ್ಯ ಮಕ್ಕಳಲ್ಲೂ ತೀವ್ರ, ಅತಿ ತೀವ್ರ ಸ್ವರೂಪದ ಸಮಸ್ಯೆಗಳಿರುವವರನ್ನು ಬಿಟ್ಟು ಉಳಿದವರನ್ನು (ಮೈಲ್ಡ್‌, ಮಾಡರೇಟ್‌) ಪರಿಗಣಿಸಬಹುದು. ಅಧಿಕಾರಿಗಳಿಗೆ ಈ ಅಂಶಗಳನ್ನು ತಿಳಿಸಿದ್ದೇವೆ. ಶಾಲಾರಂಭಕ್ಕೆ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ರಾಜ್ಯ ವಿಶೇಷ ಶಿಕ್ಷಕ, ಶಿಕ್ಷಕೇತರರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರಿನ ಸಾನ್ನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ವಸಂತಕುಮಾರ್‌ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.