ADVERTISEMENT

ಆಳ-ಅಗಲ: ಕೋವಿಡ್‌ ಲಸಿಕೆಗೆ ರಾಜ್ಯಗಳ ಪರದಾಟ

ಜಾಗತಿಕ ಟೆಂಡರ್‌ಗಿಲ್ಲ ಸ್ಪಂದನ: ವಿದೇಶಿ ಲಸಿಕೆಗಳ ಅಮದು ಸಾಧ್ಯತೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 24 ಮೇ 2021, 21:20 IST
Last Updated 24 ಮೇ 2021, 21:20 IST
ಜಲಂಧರ್‌ನ ಲಸಿಕೆ ಕೇಂದ್ರವೊಂದರ ಮುಂದೆ ಲಸಿಕೆ ಹಾಕಿಸಿಕೊಳ್ಳಲು ಶನಿವಾರ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು -- – ಪಿಟಿಐ ಚಿತ್ರ
ಜಲಂಧರ್‌ನ ಲಸಿಕೆ ಕೇಂದ್ರವೊಂದರ ಮುಂದೆ ಲಸಿಕೆ ಹಾಕಿಸಿಕೊಳ್ಳಲು ಶನಿವಾರ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು -- – ಪಿಟಿಐ ಚಿತ್ರ   

ಕೋವಿಡ್‌ ಲಸಿಕೆಯನ್ನು 18ರಿಂದ 44ರ ವಯೋಮಾನದವರಿಗೆ ಹಾಕಿಸುವುದು ರಾಜ್ಯ ಸರ್ಕಾರಗಳ ಹೊಣೆ. ಇದಕ್ಕಾಗಿ ರಾಜ್ಯ ಸರ್ಕಾರಗಳೇ ಲಸಿಕೆಯನ್ನು ಖರೀದಿಸಬೇಕು. ಮೇ 1ರಿಂದ ಈ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರವು ಏಪ್ರಿಲ್‌ 19ರಂದು ಹೇಳಿತ್ತು.

ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾದ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೊಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಗಳು ಭಾರತದಲ್ಲಿ ತಯಾರಾಗುತ್ತಿವೆ. ಈ ಕಂಪನಿಗಳು ತಯಾರಿಸುವ ಲಸಿಕೆಯನ್ನು ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. 45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಹಾಕಿಸುತ್ತದೆ. ಈ ಉದ್ದೇಶಕ್ಕಾಗಿ ಈ ಎರಡು ಕಂಪನಿಗಳು ತಯಾರಿಸುವ ಶೇ 50ರಷ್ಟು ಲಸಿಕೆಯನ್ನು ಬಳಸಿಕೊಳ್ಳಲಾಗುತ್ತದೆ. ಉಳಿದ ಶೇ 50ರಷ್ಟರಲ್ಲಿ ಶೇ 25ರಷ್ಟನ್ನು ರಾಜ್ಯಗಳಿಗೆ ಮತ್ತು ಶೇ 25ರಷ್ಟನ್ನು ಖಾಸಗಿ ಆಸ್ಪತ್ರೆಗಳಿಗೆ ಹಂಚಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದ ಯಾವುದೇ ಲಸಿಕೆಯನ್ನು 18–44ರ ವಯೋಮಾನದವರಿಗೆ ಹಾಕಿಸುವುದಕ್ಕಾಗಿ ರಾಜ್ಯ ಸರ್ಕಾರಗಳು ಖರೀದಿಸಬಹುದು ಎಂದೂ ಕೇಂದ್ರ ಹೇಳಿದೆ.

18–44ರ ವಯೋಮಾನದವರು ಲಸಿಕೆಗೆ ಅರ್ಹರು ಎಂದು ನಿರ್ಧರಿಸುವಾಗ ಲಸಿಕೆಯ ಲಭ್ಯತೆಯನ್ನು ಲೆಕ್ಕ ಹಾಕಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಯಾವುದೇ ರಾಜ್ಯಕ್ಕೆ ನೇರವಾಗಿ ಲಸಿಕೆಯನ್ನು ಖರೀದಿಸಲು ಈವರೆಗೆ ಸಾಧ್ಯವಾಗಿಲ್ಲ. ಹಲವು ರಾಜ್ಯಗಳು ಲಸಿಕೆ ಅಭಿಯಾನ ಆರಂಭಿಸಿ, ಲಸಿಕೆ ಇಲ್ಲ ಎಂಬ ಕಾರಣಕ್ಕೆ ನಿಲ್ಲಿಸಿದವು.

ADVERTISEMENT

‘11 ರಾಜ್ಯಗಳು ಮಾತ್ರ ಈವರೆಗೆ ಈ ವರ್ಗದ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಿವೆ. ಮೇ 13ರ ಮಾಹಿತಿ ಪ್ರಕಾರ, 39.14 ಲಕ್ಷ ಡೋಸ್ ಲಸಿಕೆ ಮಾತ್ರ ಹಾಕಲಾಗಿದೆ’ ಎಂದು ‘ಬ್ಲೂಮ್‌ಬರ್ಗ್‌ಕ್ವಿಂಟ್‌’ ವರದಿ ಮಾಡಿದೆ.

ದೇಶೀಯವಾಗಿ ಲಭ್ಯವಾಗುವ ಲಸಿಕೆಗೆ ಮಿತಿ ಇದೆ. ಕೋವಿಶೀಲ್ಡ್‌ (6.5 ಕೋಟಿ) ಮತ್ತು ಕೋವ್ಯಾಕ್ಸಿನ್‌ (2 ಕೋಟಿ) ಲಸಿಕೆಗಳ 8.5 ಕೋಟಿ ಡೋಸ್‌ಗಳು ಮೇ ತಿಂಗಳಲ್ಲಿ ಲಭ್ಯವಾಗಲಿವೆ ಎಂಬುದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿ. ಇದರಲ್ಲಿ 4.25 ಕೋಟಿ ಡೋಸ್‌ ಕೇಂದ್ರದ ಪಾಲು, 2.12 ಕೋಟಿ ಡೋಸ್‌ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತವೆ. ಉಳಿದ 2.12 ಕೋಟಿ ಡೋಸ್‌ ಅನ್ನು ಎಲ್ಲ ರಾಜ್ಯಗಳಿಗೆ ಹಂಚಲಾಗುತ್ತದೆ.

ಹೀಗಾಗಿ, ರಾಜ್ಯಗಳು ಲಸಿಕೆಯ ತೀವ್ರ ಕೊರತೆ ಎದುರಿಸುತ್ತಿವೆ. ಈ ಕೊರತೆ ನೀಗಿಸುವುದಕ್ಕಾಗಿಯೇ ರಾಜ್ಯಗಳು ಜಾಗತಿಕ ಟೆಂಡರ್‌ನ ಮೊರೆ ಹೋಗಿವೆ. ಆದರೆ, ಇದು ಕಾರ್ಯರೂಪಕ್ಕೆ ಬರುವುದು ಸುಲಭವಲ್ಲ ಎಂಬುದು ಈವರೆಗಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ಅಮೆರಿಕದ ಮೊಡೆರ್ನಾ, ಫೈಝರ್‌ ಮತ್ತು ಜಾನ್ಸನ್‌ ಎಂಡ್‌ ಜಾನ್ಸನ್‌, ರಷ್ಯಾದ ಸ್ಪುಟ್ನಿಕ್‌–ವಿ ಹಾಗೂ ಚೀನಾ ಅಭಿವೃದ್ಧಿಪಡಿಸಿದ ಮೂರು ಲಸಿಕೆಗಳು ಈಗ ಬಳಕೆಯಲ್ಲಿವೆ. ಫೈಝರ್‌ 60ಕ್ಕೂ ಹೆಚ್ಚು ದೇಶಗಳಲ್ಲಿ, ಮೊಡೆರ್ನಾ 27ಕ್ಕೂ ಹೆಚ್ಚು ದೇಶಗಳಲ್ಲಿ, ಸ್ಪುಟ್ನಿಕ್‌ 10ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿವೆ.

ಭಾರತದ ವಿವಿಧ ರಾಜ್ಯಗಳು ಕರೆದಿರುವ ಜಾಗತಿಕ ಟೆಂಡರ್‌ಗೆ ಯಾವುದೇ ಸ್ಪಂದನ ದೊರೆತಿಲ್ಲ. ‘ಹಲವು ದೇಶಗಳ ಕೇಂದ್ರ ಸರ್ಕಾರಗಳೇ ಲಸಿಕೆ ಖರೀದಿಗೆ ಪೂರ್ಣ ಖಾತರಿಯ ಜತೆಗೆ ಮುಂಚೂಣಿಯಲ್ಲಿ ನಿಂತಿರುವಾಗ ರಾಜ್ಯಗಳ ಜತೆಗೆ ವ್ಯವಹರಿಸುವುದಿಲ್ಲ ಎಂದು ವಿದೇಶದ ಲಸಿಕೆ ತಯಾರಿಕಾ ಕಂಪನಿಗಳು ಹೇಳಿವೆ. ಹೀಗಾಗಿ ಬಿಹಾರ ಜಾಗತಿಕ ಟೆಂಡರ್‌ ಕರೆಯುವುದಿಲ್ಲ’ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.

ದೆಹಲಿ ಮತ್ತು ಪಂಜಾಬ್‌ ಸರ್ಕಾರದ ಅನುಭವಗಳು ಇದನ್ನೇ ಪುಷ್ಟೀಕರಿಸುತ್ತವೆ. ‘ಫೈಝರ್‌ ಮತ್ತು ಮೊಡೆರ್ನಾ ಕಂಪನಿಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ದೆಹಲಿ ಸರ್ಕಾರಕ್ಕೆ ನೇರವಾಗಿ ಲಸಿಕೆ ನೀಡುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಜತೆಗೆ ಮಾತ್ರ ವ್ಯವಹರಿಸುತ್ತೇವೆ ಎಂದು ಈ ಕಂಪನಿಗಳು ಹೇಳಿವೆ. ಹಾಗಾಗಿ, ಕೇಂದ್ರವೇ ಲಸಿಕೆ ಆಮದು ಮಾಡಿಕೊಂಡು ರಾಜ್ಯಗಳಿಗೆ ಹಂಚಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ. ಪಂಜಾಬ್‌ ಸರ್ಕಾರಕ್ಕೆ ಕೂಡ ಮೊಡೆರ್ನಾ ಇದೇ ಉತ್ತರ ನೀಡಿದೆ.

ರಾಜ್ಯಗಳ ಲಸಿಕೆ ಖರೀದಿಯಲ್ಲಿ ಕೇಂದ್ರದ ಪಾತ್ರವೇನೂ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಇದೇ 11ರಂದು ಹೇಳಿದ್ದು ವರದಿಯಾಗಿದೆ.

ಹೀಗಾಗಿ, 18–44 ವಯೋಮಾನದವರ ಲಸಿಕೆ ಅಭಿಯಾನದ ಬಗ್ಗೆ ದಿನ ಕಳೆದಂತೆ ಗೊಂದಲಗಳು ಹೆಚ್ಚುತ್ತಲೇ ಇದೆ; ಲಸಿಕೆ ಹಾಕಿಸುವಿಕೆಯು ಇನ್ನಷ್ಟು ದಿನ ಕುಂಟುತ್ತಲೇ ಸಾಗಲಿದೆ.

ಸರಳವಲ್ಲ ಲಸಿಕೆಯ ಆಮದು
ವಿದೇಶದಿಂದ ಲಸಿಕೆ ಆಮದು ಪ್ರಕ್ರಿಯೆ ಸುಲಭವಲ್ಲ. ಕೇಂದ್ರ ಸರ್ಕಾರದ ನಿಯಂತ್ರಣ ಕ್ರಮಗಳಿಂದಾಗಿ ಆಮದು ಬಹುತೇಕ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.‘ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿರುವ ಲಸಿಕೆಯನ್ನು ಆಮದು ಮಾಡಿಕೊಳ್ಳಬಹುದು’ ಎಂದು ಕೇಂದ್ರ ಸರ್ಕಾರ ಹೇಳಿರುವುದರಿಂದ ಫೈಝರ್‌, ಮಾಡೆರ್ನಾ, ಜಾನ್ಸನ್‌ ಎಂಡ್‌ ಜಾನ್ಸನ್‌ ಸಂಸ್ಥೆಗಳ ಲಸಿಕೆಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳಬಹುದು ಎಂಬ ಭಾವನೆ ಮೂಡುತ್ತದೆ. ಆದರೆ, ವಾಸ್ತವ ಹಾಗಿಲ್ಲ.

ಲಸಿಕೆ ಆಮದು ಯಾಕೆ ಕಷ್ಟ ಎಂಬುದು 2021ರ ಏಪ್ರಿಲ್ 15ರಂದು ಕೇಂದ್ರ ಸರ್ಕಾರವು ಜಾರಿ ಮಾಡಿರುವ ಅಧಿಸೂಚನೆಯಲ್ಲಿ ಹೇಳಿರುವ ನಿಬಂಧನೆಗಳನ್ನು ನೋಡಿದರೆ ಅರ್ಥವಾಗುತ್ತದೆ.

* ಅಮೆರಿಕ, ಬ್ರಿಟನ್‌ ಹಾಗೂ ಜಪಾನ್‌ನಲ್ಲಿ ಅಂಗೀಕಾರ ಪಡೆದಿರುವ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು, ಆಯಾ ಸಂಸ್ಥೆಗಳ ಭಾರತೀಯ ಅಂಗಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅಂಥ ಕಂಪನಿಗೆ ಭಾರತೀಯ ಅಂಗಸಂಸ್ಥೆ ಇಲ್ಲದಿದ್ದರೆ, ಅಧಿಕೃತ ಏಜೆಂಟರ ಮೂಲಕ ಅರ್ಜಿ ಸಲ್ಲಿಸಬಹುದು. ಯಾವ ಕಾರಣಕ್ಕೂ ರಾಜ್ಯಗಳು ನೇರವಾಗಿ ವಿದೇಶಿ ತಯಾರಿಕಾ ಸಂಸ್ಥೆಯಿಂದ ಖರೀದಿಸುವಂತಿಲ್ಲ
*ಅಂಗಸಂಸ್ಥೆ ಅಥವಾ ಅಧಿಕೃತ ಏಜೆಂಟರಿಂದ ಬಂದ ಅರ್ಜಿಗಳನ್ನು ಕೇಂದ್ರ ಔಷಧ ಪ್ರಮಾಣೀಕರಣ ಮತ್ತು ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಪರಿಶೀಲಿಸಿ, ನಿಯಂತ್ರಿತ ಬಳಕೆಗೆ ಅನುಮತಿ ನೀಡುತ್ತದೆ. ಮೂರು ದಿನಗಳೊಳಗೆ ಈ ಪ್ರಕ್ರಿಯೆ ನಡೆಯುವುದು
* ನಿಯಂತ್ರಿತ ಬಳಕೆಗೆ ಅನುಮತಿ ಕೋರುವ ಅರ್ಜಿಯ ಜತೆಗೆ ಪರೀಕ್ಷಾ ಪ್ರೊಟೊಕಾಲ್‌, ಆಮದು ನೋಂದಣಿ ಪ್ರಮಾಣಪತ್ರ ಹಾಗೂ ಆಮದು ಪರವಾನಗಿಗಾಗಿಯೂ ಅರ್ಜಿಗಳನ್ನು ಸಲ್ಲಿಸಬೇಕು (ಈ ಪ್ರಕ್ರಿಯೆಯು ಸುದೀರ್ಘವಾದುದು ಮತ್ತು ಇದಕ್ಕೆ ನೂರಾರು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ)

* ವಿವಿಧ ರಾಜ್ಯ ಸರ್ಕಾರಗಳ ಜೊತೆಗೆ ನಗರಪಾಲಿಕೆಗಳೂ ಲಸಿಕೆ ಖರೀದಿಗೆ ಮುಂದಾಗಿವೆ. ಮೂಲಗಳ ಪ್ರಕಾರ, ಬೃಹನ್ಮುಂಬೈ ಮಹಾ ನಗರಪಾಲಿಕೆಯ ಟೆಂಡರ್‌ಗೆ ರಷ್ಯಾದ ಸ್ಪುಟ್ನಿಕ್‌–ವಿ ಲಸಿಕೆ ತಯಾರಕರು ಸ್ಪಂದಿಸಿದ್ದಾರೆ ಎನ್ನಲಾಗಿದೆ
* ಫೈಝರ್ ಮತ್ತು ಮೊಡೆರ್ನಾ ಲಸಿಕೆಗಳನ್ನು ಖರೀದಿಸಲು ಯತ್ನಿಸಲಾಯಿತಾದರೂ, ಈ ಕಂಪನಿಗಳ ತಯಾರಿಕಾ ಸಾಮರ್ಥ್ಯದ ಅಷ್ಟೂ ಲಸಿಕೆಗಳನ್ನು ವಿವಿಧ ದೇಶಗಳು ಕಾಯ್ದಿರಿಸಿವೆ ಎಂಬ ಉತ್ತರ ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ
* ‘ಫೈಝರ್ ಮತ್ತು ಮೊಡೆರ್ನಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಸಂಪರ್ಕಿಸಿದೆ. ಆ ಕಂಪನಿಗಳಲ್ಲಿ ಹೆಚ್ಚುವರಿಯಾಗಿ ಉಳಿಯುವ ಲಸಿಕೆಗಳ ಮಾಹಿತಿ ಸರ್ಕಾರಕ್ಕೆ ಸಿಗಲಿದೆ. ಆ ಬಳಿಕವಷ್ಟೇ ಯಾವ ರಾಜ್ಯಗಳಿಗೆ ಎಷ್ಟು ಪ್ರಮಾಣದ ಲಸಿಕೆ ಹಂಚಿಕೆ ಮಾಡಬೇಕು ಎಂದು ನಿರ್ಧರಿಸಲಿದ್ದೇವೆ’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾಲ್ ಅಗರ್‌ವಾಲ್‌ ತಿಳಿಸಿದ್ದಾರೆ

* ಎಲ್ಲಾ ಅರ್ಜಿಗಳು ಸಮರ್ಪಕವಾಗಿವೆ ಎಂಬುದು ಖಚಿತಗೊಂಡ ನಂತರ ಕಸೌಲಿಯಲ್ಲಿರುವ ಕೇಂದ್ರೀಯ ಔಷಧಗಳ ಪ್ರಯೋಗಾಲಯದಲ್ಲಿ (ಸಿಡಿಎಲ್‌) ಲಸಿಕೆಯ ಪರೀಕ್ಷೆ ನಡೆಸಲಾಗುವುದು
*ಈ ಪರೀಕ್ಷೆ ಯಶಸ್ವಿಯಾದರೆ, ಲಸಿಕೆಯ ನಿಯಂತ್ರಿತ ಬಳಕೆಗೆ ಅನುಮತಿ ನೀಡಲಾಗುವುದು. ಆರಂಭದಲ್ಲಿ ನೂರು ಮಂದಿ ಫಲಾನುಭವಿಗಳ ಮೇಲೆ ಪ್ರಯೋಗಿಸಬೇಕು. ಜತೆಗೆ ಸುರಕ್ಷತೆಯನ್ನು ಕುರಿತ ದತ್ತಾಂಶಗಳನ್ನು ಸಿಡಿಎಸ್‌ಸಿಒಗೆ ಸಲ್ಲಿಸಬೇಕು
* 100 ಮಂದಿಯ ಮೇಲೆ ಲಸಿಕೆಯ ಪ್ರಯೋಗ ನಡೆದ ನಂತರ, ಸಂಸ್ಥೆಯು ಸಲ್ಲಿಸಿದ ದತ್ತಾಂಶವನ್ನು ಸಿಡಿಎಸ್‌ಸಿಒ ಪರಿಶೀಲನೆಗೆ ಒಳಪಡಿಸುವುದು. ಹೀಗೆ ಮಾನ್ಯತೆ ಲಭಿಸಿದ ನಂತರವೇ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಅರ್ಜಿದಾರರಿಗೆ ಪರವಾನಗಿ ನೀಡಲಾಗುವುದು
* ಆದರೆ ಈ ಅನುಮತಿಯು ಪರೀಕ್ಷಾ ಪ್ರೊಟೊಕಾಲ್‌ನ ದತ್ತಾಂಶಗಳ ಪರಿಶೀಲನೆಯ ನಂತರವೇ ಜಾರಿಗೆ ಬರುತ್ತದೆ. ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಪರೀಕ್ಷಾ ಪ್ರೊಟೊಕಾಲ್‌ ದತ್ತಾಂಶಗಳನ್ನು ಪರಿಶೀಲನೆ ನಡೆಸಿ, ತುರ್ತು ಬಳಕೆಗೆ ಅನುಮತಿ ನೀಡುತ್ತಾರೆ

ಇಷ್ಟೆಲ್ಲಾ ನಿಯಮಗಳನ್ನು ಪಾಲಿಸಿದ ಸಂಸ್ಥೆಗಳು ಮಾತ್ರ ಜಾಗತಿಕ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುತ್ತವೆ. ಆದ್ದರಿಂದ ವಿವಿಧ ರಾಜ್ಯಗಳಿಗೆ ನೇರವಾಗಿ ಲಸಿಕೆ ಪೂರೈಸುವ ಇಚ್ಛೆ ಕೆಲವು ಸಂಸ್ಥೆಗಳಿಗೆ ಇದ್ದರೂ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಇಲ್ಲದಾಗಿದೆ. ಅಲ್ಲದೆ, ಇಷ್ಟೆಲ್ಲಾ ಪ್ರಕ್ರಿಯೆಗಳ ಮೂಲಕ ಹೋಗಲು ಯಾವ ಸಂಸ್ಥೆ ಮುಂದಾಗುತ್ತದೆ ಎಂಬುದೂ ಪ್ರಶ್ನೆಯಾಗಿದೆ.

ಸದ್ಯಕ್ಕೆ ಸ್ಪುಟ್ನಿಕ್‌–ವಿ ಲಸಿಕೆ ಮಾತ್ರ ಈ ಅರ್ಹತೆ ಪಡೆದಿದೆ. ಸ್ಪುಟ್ನಿಕ್‌ ಪರವಾಗಿ ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ ಸಂಸ್ಥೆ ಸ್ಥಳೀಯ ಅಧಿಕೃತ ಏಜೆಂಟ್‌ ರೂಪದಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ಆಮದು ಮಾಡಿಕೊಂಡಿದೆ.

ದೆಹಲಿಯ ಲಸಿಕೆ ಕೇಂದ್ರವೊಂದು ಲಸಿಕೆ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಹಾಗಾಗಿ, ಅಲ್ಲಿ ನಿಯೋಜಿಸಲಾಗಿದ್ದ ಸಿವಿಲ್‌ ಡಿಫೆನ್ಸ್‌ ಸ್ವಯಂಸೇವಕರು ಸೋಮವಾರ ವಿಶ್ರಾಂತಿ ಪಡೆದರು
-– ಪಿಟಿಐ ಚಿತ್ರ

ಜಾಗತಿಕ ಟೆಂಡರ್‌ನತ್ತ ರಾಜ್ಯಗಳ ಚಿತ್ತ
ಲಸಿಕೆ ಅಭಾವವನ್ನು ನೀಗಿಸಲುಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಒಡಿಶಾ, ಉತ್ತರಾಖಂಡ, ರಾಜಸ್ಥಾನ ಸೇರಿ 10ಕ್ಕೂ ಹೆಚ್ಚು ರಾಜ್ಯಗಳು ಜಾಗತಿಕ ಟೆಂಡರ್ ಕರೆದು ಖರೀದಿಗೆ ಮುಂದಾಗಿವೆ.

ಉತ್ತರ ಪ್ರದೇಶ ಸರ್ಕಾರವು ಮೊದಲಿಗೆ ಟೆಂಡರ್ ಕರೆಯಿತು. 4 ಕೋಟಿ ಡೋಸ್ ಪೂರೈಕೆಗೆ ಬೇಡಿಕೆ ಸಲ್ಲಿಸಿತು. ಮುಂಬೈ ಮಹಾನಗರ ಪಾಲಿಕೆಯು 1 ಕೋಟಿ ಡೋಸ್‌ಗೆ ಕಳೆದ ವಾರವಷ್ಟೇ ಬಿಡ್ ಕರೆದಿದೆ. ಮೂರು ತಿಂಗಳೊಳಗೆ 5 ಕೋಟಿ ಡೋಸ್ ಲಸಿಕೆ ಪೂರೈಸುವುದಕ್ಕಾಗಿ ತಮಿಳುನಾಡು ಸರ್ಕಾರವು ಟೆಂಡರ್ ಕರೆದಿದೆ. ಉತ್ತರಾಖಂಡ ಸರ್ಕಾರವು ರಾಜ್ಯದ 30 ಲಕ್ಷ ಜನರಿಗೆ ಲಸಿಕೆ ಬೇಕು ಎಂದು ಟೆಂಡರ್ ಕರೆದಿದೆ. ಒಡಿಶಾ ಸರ್ಕಾರವು ನಾಲ್ಕು ತಿಂಗಳ ಒಳಗೆ 3.8 ಕೋಟಿ ಡೋಸ್‌ ಅಗತ್ಯವಿದೆ ಎಂದು ಬೇಡಿಕೆ ಇಟ್ಟಿದ್ದು, ಇದೇ 28ರ ಗಡುವು ನೀಡಿದೆ. ಮುಂಚಿತವಾಗಿ ಶೇ 30ರಷ್ಟು ಹಣ ಪಾವತಿ ಮಾಡಿ, ದಾಸ್ತಾನು ಪೂರೈಕೆಯಾದ ಎರಡು ದಿನಗಳಲ್ಲಿ ಬಾಕಿ ಹಣ ಪಾವತಿ ಮಾಡುವುದಾಗಿ ಟೆಂಡರ್‌ನಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ಸರ್ಕಾರವು ₹ 843 ಕೋಟಿ ವೆಚ್ಚದಲ್ಲಿ 2 ಕೋಟಿ ವಯಲ್ಸ್ಖರೀದಿಗೆ ಜಾಗತಿಕ ಟೆಂಡರ್ಆಹ್ವಾನಿಸಿದ್ದು, ಅದರ ಅವಧಿ ಮೇ 24ಕ್ಕೆ ಮುಕ್ತಾಯವಾಗಿದೆ.

ಒಂದು ವೇಳೆ ವಿದೇಶದ ಲಸಿಕೆಗಳು ಲಭ್ಯವಾದರೆ, ಅವುಗಳನ್ನು ಶೇಖರಿಸಿ ಇಡಲು 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದ ವ್ಯವಸ್ಥೆ ಅಗತ್ಯವಿದ್ದು, ಇದಕ್ಕೆ ತಮಿಳುನಾಡು, ಒಡಿಶಾ ರಾಜ್ಯಗಳು ಸಿದ್ಧತೆ ಮಾಡಿಕೊಂಡಿವೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳು ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆಧಾರ: ಪಿಟಿಐ, ಬ್ಲೂಮ್‌ಬರ್ಗ್‌ ಕ್ವಿಂಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.