ADVERTISEMENT

DANA ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ: ಯಾರು ಇಟ್ಟರೀ ಹೆಸರು? ಏನಿದರ ಅರ್ಥ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2024, 10:43 IST
Last Updated 23 ಅಕ್ಟೋಬರ್ 2024, 10:43 IST
<div class="paragraphs"><p>ಭಾರತದ ಪೂರ್ವ ಕರಾವಳಿಯತ್ತ ಡಾನಾ ಚಂಡಮಾರುತದ ಪಯಣ</p></div>

ಭಾರತದ ಪೂರ್ವ ಕರಾವಳಿಯತ್ತ ಡಾನಾ ಚಂಡಮಾರುತದ ಪಯಣ

   

ಪಿಟಿಐ ಚಿತ್ರ

ಬೆಂಗಳೂರು: ಭಾರತದ ಪೂರ್ವ ಕರಾವಳಿಯ ಒಡಿಶಾ ತೀರಕ್ಕೆ ಅಪ್ಪಳಿಸಲಿರುವ ‘ಡಾನಾ’ ಚಂಡಮಾರುತ ತೀವ್ರ ಆತಂಕ ಸೃಷ್ಟಿಸಿದೆ. ಹೀಗೆ ಕಳೆದ ಕೆಲ ವರ್ಷಗಳಿಂದ ಭಾರತದ ತೀರ ಪ್ರದೇಶಗಳಿಗೆ ಮೂರು ದಿಕ್ಕುಗಳಿಂದಲೂ ಅಪ್ಪಳಿಸುವ ಹಲವು ಚಂಡಮಾರುತಗಳನ್ನು ಬಗೆಬಗೆಯ ಹೆಸರುಗಳಿಂದ ಕರೆಯಲಾಗುತ್ತದೆ. 

ADVERTISEMENT

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಗುರುವಾರ (ಅ. 24) ಹೊತ್ತಿಗೆ ಡಾನಾ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಎಚ್ಚರಿಸಲಾಗಿದೆ. 80ರಿಂದ 120 ಕಿ.ಮೀ. ವೇಗದಲ್ಲಿ ಸಾಗುವ ಚಂಡಮಾರುತ ಇದಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತೀವ್ರ ಮಳೆ ಸೃಷ್ಟಿಸಲಿದೆ ಎಂದೆನ್ನಲಾಗಿದೆ. ಇಷ್ಟು ಮಾತ್ರವಲ್ಲ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹವಾಮಾನ ಸ್ಥಿತಿಯ ಮೇಲೂ ಇದು ಪರಿಣಾಮ ಬೀರಲಿದೆ.

ಕಳೆದ ಎರಡು ತಿಂಗಳಲ್ಲಿ ಭಾರತದ ತೀರ ಪ್ರದೇಶಗಳ ಮೇಲೆ ಅಪ್ಪಳಿಸುತ್ತಿರುವ 2ನೇ ಚಂಡಮಾರುತವೇ ಈ ಡಾನಾ. ಆಗಸ್ಟ್‌ನಲ್ಲಿ ‘ಆಸ್ನಾ’ ಚಂಡಮಾರುತ ಕಾಡಿತ್ತು. ಹೀಗೆ ಬರುವ ಬಹಳಷ್ಟು ಚಂಡಮಾರುತಗಳಿಗೆ ಆಸಕ್ತಿಕರ ಹೆಸರನ್ನಿಡಲಾಗುತ್ತದೆ. ಟಿಟ್ಲಿ, ಬಿಪೋರ್‌ಜಾಯ್, ನಿಸರ್ಗ ಅಥವಾ ಫಾನಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಇಂಥ ಹಲವು ಹೆಸರುಗಳುಳ್ಳ ಚಂಡಮಾರುತಗಳು ಅಬ್ಬರಿಸಿದ್ದವು. 

ಅಷ್ಟಕ್ಕೂ ಈ ವಿಭಿನ್ನ ರೀತಿಯ ಹೆಸರುಗಳನ್ನು ಚಂಡಮಾರುತ ಸೃಷ್ಟಿಯಾಗುವ ಸಂದರ್ಭದಲ್ಲಿ ನೀಡುವಂತದ್ದಲ್ಲ. ವಿಶ್ವ ಹವಾಮಾನ ಸಂಸ್ಥೆ (WMO) ಚಂಡಮಾರುತಗಳನ್ನು ಗುರುತಿಸಲು ಅವುಗಳಿಗೆ ಹೆಸರಿಡುತ್ತದೆ. ಇದಕ್ಕಾಗಿ ತನ್ನದೇ ಆದ ಒಂದು ವ್ಯವಸ್ಥೆಯನ್ನು ಮಾಡಿಕೊಂಡಿದೆ. 

ಡಾನಾ ಎಂಬ ಹೆಸರು ಬಂದಿದ್ದು ಹೇಗೆ?

ಉಷ್ಣವಲಯದ ಚಂಡಮಾರುತಗಳನ್ನು ಗುರುತಿಸುವ ವ್ಯವಸ್ಥೆಯ ಭಾಗವಾಗಿ ಡಾನಾ ಎಂಬ ಹೆಸರನ್ನು ಕತಾರ್‌ ಸೂಚಿಸಿದೆ. ‘ಉದಾರತೆ’ ಎಂಬ ಅರ್ಥವಿರುವ ಅರೆಬಿಕ್‌ ಪದ ಇದಾಗಿದೆ. ಹೀಗೆ ಹೆಸರಿಡುವುದು ಆಯಾ ವಲಯದ ಪ್ರಾಂತ್ಯಗಳನ್ನು ಆಧರಿಸಿರಲಿದೆ.

ವಿಶ್ವ ಹವಾಮಾನ ಸಂಸ್ಥೆಯು ನಿರ್ದಿಷ್ಟ ರಾಷ್ಟ್ರಗಳನ್ನೊಳಗೊಂಡ ಒಂದು ಗುಂಪನ್ನು ಆರಂಭದಲ್ಲಿ ರಚಿಸಿತ್ತು. ಇದರಲ್ಲಿ ಭಾರತ, ಬಾಂಗ್ಲಾದೇಶ, ಮಾಲ್ದೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್‌ ರಾಷ್ಟ್ರಗಳು ಸೇರಿದ್ದವು.

ಈ ಗುಂಪಿನ ರಾಷ್ಟ್ರಗಳಲ್ಲಿ ಸೃಷ್ಟಿಯಾಗುವ ಚಂಡಮಾರುತಗಳಿಗೆ ಈ ಭಾಗದ ಹೆಸರುಗಳನ್ನಿಡುವ ವ್ಯವಸ್ಥೆ 2000 ಇಸವಿಯಿಂದ ಜಾರಿಗೆ ಬಂದಿತು. ಈ ವ್ಯವಸ್ಥೆಯಡಿ ಈ ಗುಂಪಿನ ರಾಷ್ಟ್ರಗಳು ಮುಂಬರುವ ಚಂಡಮಾರುತಗಳಿಗೆ ತಮ್ಮ ಹೆಸರನ್ನು ಸೂಚಿಸಬೇಕು. ವಿಶ್ವ ಹವಾಮಾನ ಸಂಸ್ಥೆ/ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಮತ್ತು ಪೆಸಿಫಿಕ್ ಸಂಸ್ಥೆಗಳು ಈ ಹೆಸರುಗಳನ್ನು ಅಂತಿಮಗೊಳಿಸುತ್ತವೆ. ಈ ಕೆಲಸಕ್ಕಾಗಿ ಪ್ಯಾನೆಲ್ ಆನ್ ಟ್ರಾಪಿಕಲ್ ಸೈಕ್ಲೋನ್ಸ್ ಇದೆ.

ಈ ಗುಂಪನ್ನು 2018ರಲ್ಲಿ ಸಂಸ್ಥೆಯು ಇನ್ನಷ್ಟು ವಿಸ್ತರಿಸಿತು. ಇರಾನ್, ಕತಾರ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ರಾಷ್ಟ್ರಗಳು ಹಾಗೂ ಯೆಮನ್‌ ಈ ಗುಂಪಿಗೆ ಸೇರಿವೆ. ಏಪ್ರಿಲ್ 2020 ರಲ್ಲಿ IMD ಬಿಡುಗಡೆ ಮಾಡಿದ 169 ಚಂಡಮಾರುತದ ಹೆಸರುಗಳ ಪಟ್ಟಿಯನ್ನು ಈ ದೇಶಗಳು ಒದಗಿಸಿವೆ.  ಪ್ರತಿ 13 ದೇಶಗಳಿಂದ 13 ಸಲಹೆಗಳನ್ನು ಸ್ವೀಕರಿಸಲಾಗಿದೆ.

ಚಂಡಮಾರುತಗಳನ್ನು ಹೆಸರಿಸುವುದು ಏಕೆ ಮುಖ್ಯವಾಗಿದೆ?

ಸಂಖ್ಯೆಗಳು ಮತ್ತು ತಾಂತ್ರಿಕ ಪದಗಳಿಗೆ ಹೋಲಿಸಿದರೆ ಜನರಿಗೆ ಚಂಡಮಾರುತಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಜನಸಾಮಾನ್ಯರು, ವೈಜ್ಞಾನಿಕ ಸಮುದಾಯ, ಮಾಧ್ಯಮ, ವಿಪತ್ತು ನಿರ್ವಾಹಕರು ಮುಂತಾದವರಿಗೆ ಈ ಹೆಸರುಗಳು ನೆರವಾಗಲಿವೆ.

ಹೆಸರಿನೊಂದಿಗೆ, ಪ್ರತ್ಯೇಕ ಚಂಡಮಾರುತಗಳನ್ನು ಗುರುತಿಸುವುದು, ಅದರ ಚಲನೆ ಮತ್ತು ಅಪಾಯದ ಬಗ್ಗೆ ಜಾಗೃತಿ ಮೂಡಿಸುವುದು, ಸಮುದಾಯದ ಸನ್ನದ್ಧತೆಯನ್ನು ಹೆಚ್ಚಿಸಲು ಮತ್ತು ಗೊಂದಲವನ್ನು ದೂರಮಾಡಿ ತ್ವರಿತವಾಗಿ ಎಚ್ಚರಿಕೆಗಳನ್ನು ಮಾರ್ಗಸೂಚಿಗಳನ್ನು ಹರಡಲು ಸಹಾಯ ಮಾಡುತ್ತದೆ.

ಚಂಡಮಾರುತಗಳ ಹೆಸರನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳು

ಚಂಡಮಾರುತಗಳಿಗೆ ಹೆಸರುಗಳನ್ನು ಆರಿಸುವಾಗ, ದೇಶಗಳು ಕೆಲವು ನಿಯಮಗಳನ್ನು ಅನುಸರಿಸಬೇಕು.  ಆ ಮಾರ್ಗಸೂಚಿಗಳನ್ನು ಅನುಸರಿಸಿ, ಆಯ್ಕೆಯನ್ನು ಅಂತಿಮಗೊಳಿಸಿ ಪ್ಯಾನೆಲ್ ಆನ್ ಟ್ರಾಪಿಕಲ್ ಸೈಕ್ಲೋನ್ಸ್ (PTC) ಗೆ ನೀಡಬೇಕಾಗಿರುತ್ತದೆ.  

ಅದರ ಮಾರ್ಗಸೂಚಿಗಳು ಹೀಗಿವೆ...

  • ಪ್ರಸ್ತಾವಿತ ಹೆಸರು ರಾಜಕೀಯ ಮತ್ತು ರಾಜಕೀಯ ವ್ಯಕ್ತಿಗಳು, ಧಾರ್ಮಿಕ ನಂಬಿಕೆಗಳು,  ಸಂಸ್ಕೃತಿಗಳು ಮತ್ತು  ಲಿಂಗಕ್ಕೆ ತಟಸ್ಥವಾಗಿರಬೇಕು. ಜಗತ್ತಿನಾದ್ಯಂತ ಇರುವ ಯಾವುದೇ ಗುಂಪಿನ ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಹೆಸರನ್ನು ಆಯ್ಕೆ ಮಾಡಬೇಕು.

  • ಹೆಸರು ಅಸಭ್ಯ ಅಥವಾ ಕ್ರೂರ ಸ್ವಭಾವದ್ದಾಗಿರಬಾರದು.

  • ಹೆಸರು ಚಿಕ್ಕದಾಗಿರಬೇಕು, ಉಚ್ಚರಿಸಲು ಸುಲಭ ಮತ್ತು ಇತರ ಯಾವುದೇ ಸದಸ್ಯರಿಗೆ ಆಕ್ಷೇಪಾರ್ಹವಾಗಿರಬಾರದು.

  • ಹೆಸರಿನ ಗರಿಷ್ಠ ಉದ್ದ ಎಂಟು ಅಕ್ಷರಗಳಾಗಿರಬೇಕು.

  • ಪ್ರಸ್ತಾವಿತ ಹೆಸರನ್ನು ಅದರ ಉಚ್ಚಾರಣೆ ಮತ್ತು ಧ್ವನಿಯೊಂದಿಗೆ ಒದಗಿಸಬೇಕು.

  • ಉತ್ತರ ಹಿಂದೂ ಮಹಾಸಾಗರದ ಮೇಲಿನ ಉಷ್ಣವಲಯದ ಚಂಡಮಾರುತಗಳ ಹೆಸರನ್ನು ಪುನರಾವರ್ತಿಸಲಾಗುವುದಿಲ್ಲ.  ಒಮ್ಮೆ ಬಳಸಿದ ನಂತರ, ಅದನ್ನು ಮತ್ತೆ ಬಳಸಲಾಗುವುದಿಲ್ಲ. ಹೀಗಾಗಿ, ಪ್ರತಿ ಹೆಸರು ಹೊಸದಾಗಿರಬೇಕು.

  • ಭಾರತವು ಆಯ್ಕೆ ಮಾಡಿದ ಕೆಲವು ಹೆಸರುಗಳನ್ನು ಸಾಮಾನ್ಯ ಜನರು ಸಹ ಸೂಚಿಸಿದ್ದಾರೆ. ಪ್ಯಾನೆಲ್ ಆನ್ ಟ್ರಾಪಿಕಲ್ ಸೈಕ್ಲೋನ್ಸ್ ಗೆ ಕಳುಹಿಸುವ ಮೊದಲು ಹೆಸರುಗಳನ್ನು ಅಂತಿಮಗೊಳಿಸಲು ಭಾರತೀಯ ಹವಾಮಾನ ಇಲಾಖೆ ಸಮಿತಿಯನ್ನು ರಚಿಸಿದೆ.

ಭಾರತದ ತೀರ ಪ್ರದೇಶಗಳನ್ನು ಕಾಡಿದ ಕಳೆದ 5 ಚಂಡಮಾರುತಗಳು

ಆಸನಾ ಚಂಡಮಾರುತ: ಗುಜರಾತ್, ರಾಜಸ್ಥಾನ ಹಾಗೂ ಮಧ್ಯಪ್ರದೇಶವನ್ನು ತೀವ್ರವಾಗಿ ಭಾದಿಸಿದ ಆಸ್ನಾ ಚಂಡಮಾರುತವು ಆ. 25ರಿಂದ ಸೆ. 2ರವರೆಗೂ ಕಾಡಿತು. ಪಾಕಿಸ್ತಾನದಲ್ಲೂ ಈ ಚಂಡಮಾರುತ ಅವಾಂತರ ಸೃಷ್ಟಿಸಿತು. ಭೂಮಿಯ ಮೇಲೆ ತೀವ್ರವಾದ ವಾಯುಭಾರ ಕುಸಿತದ ನಂತರ ಚಂಡಮಾರುತವಾಗಿ ರೂಪಗೊಂಡು ಅರಬ್ಬಿಯನ್ ಸಮುದ್ರದತ್ತ ಇದು ಸಾಗಿತು.

ರೆಮಲ್ ಚಂಡಮಾರುತ: ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಮೇಲೆ ಪರಿಣಾಮ ಬೀರಿದ ರೆಮಲ್ ಚಂಡಮಾರುತವು, ಹೆಚ್ಚು ಹಾನಿ ಮಾಡಲಿಲ್ಲ. ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ 2024ರಲ್ಲಿ ಉಂಟಾದ ಮೊದಲ ಚಂಡಮಾರುತವಿದು. ಮೇ 25ರಂದು ಬಾಂಗ್ಲಾದೇಶದ ತೀರಕ್ಕೆ ಇದು ಅಪ್ಪಳಿಸಿತು.

ಬಿಪೋರ್‌ಜಾಯ್ ಚಂಡಮಾರುತ: ಅರೆಬಿಯನ್ ಸಮುದ್ರದ ಪೂರ್ವ–ಕೇಂದ್ರ ಭಾಗದಲ್ಲಿ ಸೃಷ್ಟಿಯಾದ ಬಿಪೋರ್‌ಜಾಯ್ ಚಂಡಮಾರುತವು ಅತ್ಯಂತ ಗಂಭೀರ ಸ್ವರೂಪದಲ್ಲಿ ಕಾಡಿತು. ಅರೆಬಿಯನ್ ಸಮುದ್ರದಲ್ಲಿ ಸೃಷ್ಟಿಯಾದ ಈ ಚಂಡಮಾರುತವು, ಗುಜರಾತ್‌ನ ಮಾಂಡ್ವಿ ಹಾಗೂ ಪಾಕಿಸ್ತಾನದ ಕರಾಚಿಯನ್ನು 2023ರ ಜೂನ್‌ನಲ್ಲಿ ಅಪ್ಪಳಿಸಿತು. 

ಸಿತ್ರಾಂಗ್ ಚಂಡಮಾರುತ: ದುರ್ಬಲ ಚಂಡಮಾರುತವಾದ ಸಿತ್ರಾಂಗ್‌, ಭಾರತ ಹಾಗೂ ಬಾಂಗ್ಲಾದೇಶದಲ್ಲಿ 2022ರ ಅಕ್ಟೋಬರ್‌ನಲ್ಲಿ ಕಂಡುಬಂತು. 2017ರಲ್ಲಿ ಅಪ್ಪಳಿಸಿದ ಮೊರಾ ಚಂಡಮಾರುತದ ನಂತರ ಬಾಂಗ್ಲಾದೇಶದ ತೀರ ಪ್ರದೇಶದಲ್ಲಿ ಕಂಡುಬಂದಿದ್ದೇ ಸಿತ್ರಾಂಗ್.

ಮ್ಯಾಂಡೋಸ್‌ ಚಂಡಮಾರುತ: ಹಿಂದೂಮಹಾಸಾಗರದ ಉತ್ತರದಲ್ಲಿ ಸೃಷ್ಟಿಯಾದ ಮೂರನೇ ಅತ್ಯಂತ ಗಂಭೀರ ಸ್ವರೂಪದ ಚಂಡಮಾರುತಗಳಲ್ಲಿ ಮ್ಯಾಂಡೊಸ್ ಕೂಡಾ ಒಂದು. 2022ರಲ್ಲಿ ಇದು ಅರೆಬಿಯನ್ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಸೃಷ್ಟಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.