ADVERTISEMENT

ಭಾರತದಲ್ಲಿ ಚೀತಾ ಸಂತತಿ ನಶಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 4:40 IST
Last Updated 18 ಸೆಪ್ಟೆಂಬರ್ 2022, 4:40 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

70 ವರ್ಷಗಳ ಬಳಿಕ ಚೀತಾಗಳು ಭಾರತಕ್ಕೆ ಹಿಂದಿರುಗಿವೆ. ಚೀತಾ ಮರು ಪರಿಚಯ ಯೋಜನೆಯಡಿ ನಮೀಬಿಯಯಾದಿಂದ ಭಾರತಕ್ಕೆ ತರಲಾದ 8 ಚೀತಾಗಳನ್ನು ಪ್ರಧಾನಿ ಮೋದಿ ಇಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಪ್ರತ್ಯೇಕ ಸ್ಥಳಕ್ಕೆ ಬಿಡುಗಡೆ ಮಾಡಿದರು.

ಚೀತಾ ಸಂತತಿ ಭಾರತಕ್ಕೆ ಮರಳಿರುವುದು ಸಂತೋಷದ ವಿಷಯವಾದರೂ ಸಹ ಈ ಹಿಂದೆ ಭಾರತದಲ್ಲಿದ್ದ ಚೀತಾ ಸಂತತಿ ಅಳಿದಿದ್ದು ಹೇಗೆ? ಎಂಬ ಪ್ರಶ್ನೆ ಏಳುತ್ತಿದೆ.

ಹವಾಮಾನ ಬದಲಾವಣೆ, ಕನಿಷ್ಠಸಂತಾನೋತ್ಪತ್ತಿ ದರ, ಬೇಟೆ

ADVERTISEMENT

ಹೌದು, ನ್ಯಾಷನಲ್ ಜಿಯೊಗ್ರಾಫಿಕ್ಸ್ ವರದಿ ಪ್ರಕಾರ, ಹವಾಮಾನ ಬದಲಾವಣೆ, ಬೇಟೆ, ವಾಸಸ್ಥಳದ ನಾಶ ಇವೇ ಮುಂತಾದ ಕಾರಣಗಳಿಂದ ವಿಶ್ವದಾದ್ಯಂತ ಚೀತಾಗಳು ಅಳಿವಿನ ಅಂಚಿನಲ್ಲಿವೆ. ಅವುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.

ಚೀತಾಗಳ ಜೀನ್‌ ಸಹ ಅವುಗಳ ಅಳಿವಿನ ಅಪಾಯಕ್ಕೆ ಕಾರಣವಾಗಿವೆ ಎಂದು ವರದಿಯು ವಿವರಿಸುತ್ತದೆ. ಚೀತಾಗಳು ಕಡಿಮೆ ಸಂತಾನೋತ್ಪತ್ತಿ ಯಶಸ್ಸಿನ ಪ್ರಮಾಣವನ್ನು ಹೊಂದಿವೆ, ಅವುಗಳು ನಿರಂತರವಾಗಿ ಸಂತಾನೋತ್ಪತ್ತಿ ಮಾಡುವುದಿಲ್ಲ. ಹೀಗಾಗಿ, ಕಡಿಮೆ ಪ್ರಮಾಣದಲ್ಲಿರುವ ಅವುಗಳ ಸಂತತಿ ವೇಗವಾಗಿ ಬೆಳೆಯಲು ಅಥವಾ ಪರಿಸರ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ.

ಬೇಟೆ, ಕ್ರೀಡೆಗಾಗಿ ಬಳಕೆ

ಭಾರತದಲ್ಲಿ ಚೀತಾಗಳ ಅಳಿವಿನ ಹಿಂದೆ ಇತರ ಕಾರಣಗಳೂ ಇವೆ. ದಿ ಹಿಂದೂ ವರದಿಯ ಪ್ರಕಾರ, ಚೀತಾಗಳ ವಿಶಿಷ್ಟ ಗುಣಲಕ್ಷಣಗಳೂ ಸಹ ಅವುಗಳ ವಿನಾಶಕ್ಕೆ ಕಾರಣವಾಗಿವೆ. ಚೀತಾಗಳನ್ನು ಪಳಗಿಸುವುದು ತುಂಬಾ ಸುಲಭವಾಗಿರುವುದು ಅವುಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಬೇಟೆಯಲ್ಲಿ ಪ್ರಾಣಿಗಳನ್ನು ಹಿಂಬಾಲಿಸಲು ಇವುಗಳಿಗೆ ತರಬೇತಿ ನೀಡಲಾಯಿತು. ಕೋರ್ಸಿಂಗ್ ಎಂದು ಕರೆಯಲ್ಪಡುವ ಒಂದು ಕ್ರೀಡೆಗಾಗಿ ಬೇಟೆಯಲ್ಲಿ ಬಳಸಲು ಹೆಚ್ಚಿನ ಸಂಖ್ಯೆಯಲ್ಲಿ ಸೆರೆಹಿಡಿಯಲಾಯಿತು.

ಚಿರತೆಗಳು ಹೇಗೆ ಅಳಿದುಹೋದವು ಎಂಬುದರ ಕುರಿತು ಐಎಫ್‌ಎಸ್ ಅಧಿಕಾರಿಯೊಬ್ಬರು 1878ರ ವಿಡಿಯೊವನ್ನು ಸಹ ಹಂಚಿಕೊಂಡಿದ್ದು, ಅದರಲ್ಲಿ ಚೀತಾವನ್ನು ಸಾಕು ನಾಯಿಗಳಂತೆ ಸರಪಳಿಯಲ್ಲಿ ಬಂಧಿಸಿರುವುದನ್ನು ಕಾಣಬಹುದಾಗಿದೆ.

ದಿ ಹಿಂದೂ ವರದಿಯ ಪ್ರಕಾರ, ಈ ಪ್ರಾಣಿಗಳ ಸಾಧು ಗುಣವೂ ಅದರ ವಿರುದ್ಧ ಕೆಲಸ ಮಾಡಿದೆ. ಚೀತಾ ಅತ್ಯಂತ ಸೌಮ್ಯವಾದುದಾಗಿದ್ದು, ಅದನ್ನು ನಾಯಿಗೂ ಹೋಲಿಸಿದ ಉದಾಹರಣೆಗಳಿವೆ. ಹುಲಿಗಳು, ಸಿಂಹಗಳು ಮತ್ತು ಚಿರತೆಗಳು ಮಾಡಿದ ರೀತಿಯಲ್ಲಿ ಇದು ಎಂದೂ ಜನರನ್ನು ಹೆದರಿಸಲಿಲ್ಲ ಎಂದು ವರದಿ ಹೇಳಿದೆ.

ಸಂತತಿ ಕೊನೆಗೊಳ್ಳುವವರೆಗೂ ಬೇಟೆ

ಬೇಟೆ, ಭಾರತೀಯ ರಾಜಮನೆತನದ ನೆಚ್ಚಿನ ವಿಷಯವಾಗಿತ್ತು. ಶತಮಾನಗಳವರೆಗೆ ಅದು ಮುಂದುವರಿದಿತ್ತು. ಪಳಗಿಸಲು ಸುಲಭವಾದ ಮತ್ತು ಹುಲಿಗಳಿಗಿಂತ ಕಡಿಮೆ ಅಪಾಯಕಾರಿಯಾದ ಚೀತಾಗಳನ್ನು ಭಾರತೀಯ ರಾಜಕುಟುಂಬಗಳು ತಮ್ಮ ಮನರಂಜನೆಯ ಬೇಟೆ ನೆಪದಲ್ಲಿ ಕೊಲ್ಲುತ್ತಿದ್ದವು. ಭಾರತದಲ್ಲಿ ಚೀತಾಗಳನ್ನು ಬೇಟೆಯಾಡಲಾಗುತ್ತಿತ್ತು ಎಂಬುದನ್ನು ಕಲ್ಯಾಣಿ ಚಾಲುಕ್ಯ ದೊರೆ 3ನೇ ಸೋಮೇಶ್ವರ (1127-1138ರವರೆಗೆ ಆಳ್ವಿಕೆ) ಬರೆದ 12 ನೇ ಶತಮಾನದ ಸಂಸ್ಕೃತ ಪಠ್ಯ ‘ಮಾನಸೋಲ್ಲಾಸ’ದಲ್ಲಿ ವಿವರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಹೇಳಿದೆ.

ವನ್ಯಜೀವಿ ತಜ್ಞರಾದ ದಿವ್ಯಭಾನುಸಿನ್ಹ ಅವರು ಹೇಳುವಂತೆ, ಚೀತಾ ಕೋರ್ಸಿಂಗ್ ಅಥವಾ ತರಬೇತಿ ಪಡೆದ ಚೀತಾಗಳನ್ನು ಬೇಟೆಯಾಡಲು ಬಳಸುವುದುಮಧ್ಯಕಾಲೀನ ಅವಧಿಯಲ್ಲಿ ಹೆಚ್ಚು ವಿಶೇಷವಾದ ಚಟುವಟಿಕೆಯಾಗಿತ್ತು. ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಟೆ ನಡೆದಿತ್ತು. 1556 ರಿಂದ 1605 ರವರೆಗೆ ಆಳಿದ ಚಕ್ರವರ್ತಿ ಅಕ್ಬರ್, ವಿಶೇಷವಾಗಿ ಬೇಟೆ ಬಗ್ಗೆ ಒಲವು ಹೊಂದಿದ್ದನು.ತನ್ನ ಜೀವಿತಾವಧಿಯಲ್ಲಿ 9,000 ಚಿರತೆಗಳನ್ನು ಸೆರೆಹಿಡಿದಿದ್ದ ಎಂದು ಹೇಳಲಾಗುತ್ತದೆ ಎಂದು ವರದಿ ತಿಳಿಸಿದೆ.

ಬ್ರಿಟೀಷರ ಆಡಳಿತಾವಧಿ

ಬ್ರಿಟೀಷರ ಅವಧಿಯಲ್ಲಿ ಚೀತಾಗಳು ಅಳಿವಿನಂಚಿನಂಚಿಗೆ ತಲುಪಿದವು ಎಂದು ಎಕ್ಸ್‌ಪ್ರೆಸ್‌ ವರದಿ ಹೇಳುತ್ತದೆ. ‘ಹುಲಿಗಳು, ಕಾಡೆಮ್ಮೆ ಮತ್ತು ಆನೆಗಳಂತಹ ದೊಡ್ಡ ಪ್ರಾಣಿಗಳನ್ನು ಅವರು ಬೇಟೆಯಾಡುತ್ತಿದ್ದರು. ವಸಾಹತುಗಳನ್ನು ಅಭಿವೃದ್ಧಿಪಡಿಸಲು ಮತ್ತು ಇಂಡಿಗೋ, ಚಹಾ ಮತ್ತು ಕಾಫಿ ತೋಟಗಳನ್ನು ಸ್ಥಾಪಿಸಲು ಬ್ರಿಟಿಷರ ಅವಧಿಯಲ್ಲಿ ಕಾಡುಗಳನ್ನು ವ್ಯಾಪಕವಾಗಿ ನಾಶಗೊಳಿಸಲಾಯಿತು. ಇದರಿಂದಚೀತಾಗಳ ಆವಾಸಸ್ಥಾನದ ನಷ್ಟವಾಗಿಅವುಗಳ ಅವನತಿಗೆ ಕಾರಣವಾಗಿದೆ’ಎಂದು ವರದಿ ಹೇಳುತ್ತದೆ.

ಹುಲಿಗಳು ಬ್ರಿಟೀಷರ ನೆಚ್ಚಿನ ಬೇಟೆಯಾಗಿತ್ತು. ಆದರೂ ಭಾರತೀಯ ಮತ್ತು ಬ್ರಿಟೀಷ್ ಕ್ರೀಡಾ ಬೇಟೆಗಾರರು ಕೂಡ ಚೀತಾಗಳ ಬೆನ್ನುಬಿದ್ದಿದ್ದರು. ಬ್ರಿಟೀಷ್ಅಧಿಕಾರಿಗಳು ಈ ಪ್ರಾಣಿಯನ್ನು 'ಕ್ರಿಮಿಕೀಟ'ಎಂದು ಪರಿಗಣಿಸಿದ್ದರು. 1871 ರಿಂದ ಚೀತಾಗಳನ್ನು ಕೊಂದರೆ ಹಣದ ಬಹುಮಾನ ನೀಡುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಸಿಂಧ್‌ನಲ್ಲಿ, ಚೀತಾ ಮರಿಯನ್ನು ಕೊಂದವರಿಗೆ 6 ರೂಪಾಯಿ ಮತ್ತು ವಯಸ್ಕ ಚೀತಾ ಕೊಂದವರಿಗೆ 12 ರೂಪಾಯಿ ಬಹುಮಾನ ನೀಡಲಾಗುತ್ತಿತ್ತು ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.