ADVERTISEMENT

Explainer| ಎರಡನೇ ರಾಜಧಾನಿ ಹೊಂದುವುದೇ ತಮಿಳುನಾಡು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಿಶೇಷ
Published 27 ಆಗಸ್ಟ್ 2020, 6:33 IST
Last Updated 27 ಆಗಸ್ಟ್ 2020, 6:33 IST
ಚೆನ್ನೈ ನಗರದ ದೃಶ್ಯ
ಚೆನ್ನೈ ನಗರದ ದೃಶ್ಯ    

ಚೆನ್ನೈ: ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ರಾಜ್ಯ ರಾಜಧಾನಿಯನ್ನು ಚೆನ್ನೈನಿಂದ ತಿರುಚನಾಪಳ್ಳಿಗೆ ಸ್ಥಳಾಂತರಿಸಲು ವ್ಯರ್ಥ ಪ್ರಯತ್ನ ನಡೆಸಿದ ಸುಮಾರು 40 ವರ್ಷಗಳ ನಂತರ, ಅವರ ಪಕ್ಷ ಎಐಎಡಿಎಂಕೆ ಈಗ ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈ ಹಾಕಿದೆ.

'ಪಾಂಡಿಯನ್' ಸಾಮ್ರಾಜ್ಯದ ರಾಜಧಾನಿಯಾದ ಮಧುರೈ ಅಥವಾ ಮಧ್ಯ ತಮಿಳುನಾಡಿನ ತಿರುಚನಾಪಳ್ಳಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂಬ ಆಡಳಿತಾರೂಢ ಪಕ್ಷ ಎಐಡಿಎಂಕೆ ನಾಯಕರ ಬೇಡಿಕೆಯೂ 2021ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಕೇಳಿ ಬಂದಿದೆ.

ಚರ್ಚೆ ಮುಂದಿಟ್ಟವರು ಯಾರು?

ADVERTISEMENT

ಚೆನ್ನೈನಿಂದ 465 ಕಿ.ಮೀ ದೂರದಲ್ಲಿರುವ ಮಧುರೈಯನ್ನು ತಮಿಳುನಾಡಿನ ಎರಡನೇ ರಾಜಧಾನಿಯಾಗಿ ಮಾಡುವ ಪ್ರಸ್ತಾವವನ್ನು ಮೊದಲು ಮುಂದಿಟ್ಟವರು ಕಂದಾಯ ಸಚಿವ ಆರ್ ಬಿ ಉದಯಕುಮಾರ್. ಅವರ ನಂತರ ಸಹಕಾರಿ ಸಚಿವ ಸೆಲ್ಲೂರ್ ಕೆ ರಾಜು ಅವರು ಈ ಪ್ರಸ್ತಾವವನ್ನು ಬೆಂಬಲಿಸಿದರು. ಈ ಇಬ್ಬರೂ ಐತಿಹಾಸಿಕ ಮಧುರೈ ಪ್ರಾಂತ್ಯಕ್ಕೇ ಸೇರಿದವರು. ಇವರ ಬೆನ್ನಿಗೇ, ಪ್ರವಾಸೋದ್ಯಮ ಸಚಿವ ವಿ ನಟರಾಜನ್ ತಿರುಚನಾಪಳ್ಳಿಯನ್ನು ತಮಿಳುನಾಡಿನ ಎರಡನೇ ರಾಜಧಾನಿಯನ್ನಾಗಿ ಮಾಡಬೇಕಾಗಿಯೂ, ಇದು ‘ಆದರ್ಶ ಸ್ಥಳ’ ಎಂದೂ ಹೇಳಿಕೊಂಡರು. ಈ ಮೂಲಕ ಅವರು ಪಕ್ಷದ ಸಂಸ್ಥಾಪಕ ದಿವಂಗತ ಎಂಜಿಆರ್ ಅವರ ಕಲ್ಪನೆಯನ್ನು ಮುನ್ನೆಲೆಗೆ ತಂದರು.

ಎರಡನೇ ರಾಜಧಾನಿ ಪ್ರಸ್ತಾವ ಇಲ್ಲವೆಂದ ಸಿಎಂ: ಚರ್ಚೆಗೆ ಬಂದ ಬಿಜೆಪಿ

ಸರ್ಕಾರದ ಸಚಿವರೇ ಎರಡನೇ ರಾಜಧಾನಿಗೆ ಒತ್ತಾಯಿಸಿದರೂ, ಎರಡು ಪ್ರತ್ಯೇಕ ಪ್ರದೇಶಗಳನ್ನು ರಾಜಧಾನಿಗೆ ಸೂಚಿಸಿದ್ದರೂ, ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಮಾತ್ರ ಎರಡನೇ ರಾಜಧಾನಿಯ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಕಂದಾಯ ಸಚಿವ ಉದಯಕುಮಾರ್ ಮಾತ್ರ ಎರಡನೇ ರಾಜಧಾನಿಯ ಚರ್ಚೆಯನ್ನು ಮುಂದುವರಿಸುವ ಮೂಲಕ ವಿಷಯವನ್ನು ಜೀವಂತವಾಗಿಟ್ಟಿದ್ದಾರೆ. ಉದಯ್‌ ಕುಮಾರ್‌ ಅವರ ಚರ್ಚೆಗಳಲ್ಲಿ ಬಿಜೆಪಿಯೂ ಧ್ವನಿಗೂಡಿಸಿದೆ.

‘ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳ ಜನರು ಸರ್ಕಾರದಲ್ಲಿ ಆಗಬೇಕಾದ ಕೆಲಸ ಕಾರ್ಯಗಳಿಗಾಗಿ 400 ಕಿ.ಮೀ ಗಿಂತ ಹೆಚ್ಚು ದೂರವಿರುವ ಚೆನ್ನೈಗೆ ಬರಬೇಕಾದ ಅಗತ್ಯವಿದೆ. ಈ ಸಮಸ್ಯೆ ನಿವಾರಿಸಬೇಕಿದ್ದರೆ, ತಮಿಳುನಾಡಿಗೆ ಎರಡನೇ ರಾಜಧಾನಿ ಅವಶ್ಯವಾಗಿದೆ,’ ಎಂದು ಉದಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ದಕ್ಷಿಣ ತಮಿಳುನಾಡಿಗೆ ಮಧುರೈ ಹೆಬ್ಬಾಗಿಲು. ಅಲ್ಲದೆ, ಶ್ರೀಮಂತ ಇತಿಹಾಸವನ್ನು ಹೊಂದಿರುವ ನಗರ. ಮಧುರೈಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಈ ವಿಚಾರದಲ್ಲಿ ನಿರ್ಧಾರ ಮಾಡುವವರು ಮುಖ್ಯಮಂತ್ರಿ. ವಿಸ್ತಾರದಲ್ಲಿ ಸಾಕಷ್ಟು ದೊಡ್ಡದಾದ ರಾಜ್ಯಕ್ಕೆ ಎರಡನೇ ರಾಜಧಾನಿಯ ಕಾರ್ಯಸಾಧ್ಯತೆಯನ್ನು ಸರ್ಕಾರ ಅಧ್ಯಯನ ಮಾಡಬೇಕೆಂದು ನಾನು ಬಯಸುತ್ತೇನೆ’ ಎಂದು ಸಚಿವ ಉದಯ್‌ ಕುಮಾರ್‌ ಹೇಳಿದರು.

ತಜ್ಞರು ಏನು ಹೇಳುತ್ತಾರೆ?

ತಮಿಳುನಾಡಿಗೆ ಎರಡನೇ ರಾಜಧಾನಿಯ ಕುರಿತು ಮಾತನಾಡಿರುವ ಹಿರಿಯ ನಗರ ಆಡಳಿತಾಧಿಕಾರಿ ಮತ್ತು ನಿವೃತ್ತ ಅಧಿಕಾರಿ ಎಂ ಜಿ ದೇವಸಹಾಯಂ, ‘ಸದ್ಯ ಚೆನ್ನೈ ತನ್ನನ್ನು ತಾನೇ ಕಿರಿದಾಗಿಸಿಕೊಂಡು ಇಕ್ಕಟ್ಟಾಗಿದೆ. ಹೀಗಾಗಿಯೇ ಎರಡನೇ ರಾಜಧಾನಿ ಸೃಷ್ಟಿಸಬೇಕಾದ ಸಮಯ ಬಂದಿದೆ. ಚೆನ್ನೈನ ಉತ್ತರ ಭಾಗವು ಕೈಗಾರಿಕೆಗಳಿಂದ ತುಂಬಿದೆ. ಅಲ್ಲಿ ವಾತಾವರಣವೂ ಕಲುಷಿತಗೊಂಡಿದೆ. ಹೀಗಾಗಿ ಚೆನ್ನೈ ವಿಸ್ತರಣೆಗೆ ಬಹಳ ಸೀಮಿತ ಅವಕಾಶಗಳಿವೆ. ನಗರದ ಪಶ್ಚಿಮ ಮತ್ತು ದಕ್ಷಿಣ ಭಾಗಗಳೂ ಸಹ ಕಿಕ್ಕಿರಿದು ತುಂಬಿ ಹೋಗಿವೆ,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ತಮಿಳುನಾಡಿಗೆ ಎರಡನೇ ರಾಜಧಾನಿಯ ಅವಶ್ಯವಾಗಿದೆ. ಇದು ದೊಡ್ಡ ರಾಜ್ಯ. ರಾಜ್ಯದ ವಿವಿಧ ಭಾಗಗಳ ಜನರು ಪ್ರತಿ ಕೆಲಸಗಳಿಗಾಗ ಚೆನ್ನೈಗೆ ಪ್ರಯಾಣಿಸುವುದು ಕಷ್ಟಕರ. ಇಲ್ಲಿ ಆಡಳಿತಾತ್ಮಕ ತೊಂದರೆಗಳ ಹೊರತಾಗಿ, ವ್ಯವಸ್ಥಾಪನಾ ತೊಂದರೆ ಕೂಡ ಇದೆ. ಕೊಯಮತ್ತೂರು ಮತ್ತು ಮಧುರೈನಂತಹ ನಗರಗಳು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದ್ದರೂ ಸಹ ಎಲ್ಲಾ ಹೂಡಿಕೆಗಳಿಗೆ ಆಕರ್ಷಣೆಯ ಕೇಂದ್ರವೆಂದು ತೋರುವ ಚೆನ್ನೈಗೆ ಪ್ರತಿಯಾಗಿ ನಗರಗಳನ್ನು ನಿರ್ಮಿಸುವುದು ಅಗತ್ಯವಿದೆ. ಎರಡನೇ ರಾಜಧಾನಿಯ ಕಲ್ಪನೆಯ ಸಮಯ ಬಂದಿದೆ’ ಎಂದು ದೇವಸಹಾಯಂ ತಿಳಿಸಿದರು.

ವಿರೋಧ ಪಕ್ಷ ಡಿಎಂಕೆ ನಿಲುವೇನು?

ಎರಡನೇ ರಾಜಧಾನಿಯ ಈ ಚರ್ಚೆಯನ್ನು ಪ್ರಧಾನ ವಿರೋಧ ಪಕ್ಷ ಡಿಎಂಕೆ ವಿರೋಧಿಸಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಲಾಭ ಮಾಡಿಕೊಳ್ಳಲು ಈ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಡಿಎಂಕೆ ಅಭಿಪ್ರಾಯಪಟ್ಟಿದೆ. 9.5 ವರ್ಷಗಳ ಕಾಲ ಸರ್ಕಾರ ನಡೆಸಿದ ಎಐಎಡಿಎಂಕೆ ಈ ವಿಷಯದ ಬಗ್ಗೆ ಹಿಂದೆಲ್ಲ ಏಕೆ ಮಾತನಾಡಲಿಲ್ಲ ಎಂದು ಮಧುರೈ (ಕೇಂದ್ರ) ಕ್ಷೇತ್ರದ ಶಾಸಕರು, ಡಿಎಂಕೆ ವಕ್ತಾರರೂ ಆಗಿರುವ ಡಾ.ಪಿ.ತ್ಯಾಗರಾಜನ್ ಪ್ರಶ್ನೆ ಮಾಡಿದ್ದಾರೆ.

‘ಸರ್ಕಾರವು ನಗರದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು. ಒಳಚರಂಡಿ ಮತ್ತು ನೀರಿನ ವ್ಯವಸ್ಥೆಯನ್ನು ಸುಧಾರಿಸುವ ಕ್ರಮಗಳತ್ತ ಗಮನಹರಿಸಬೇಕು. ಇವುಗಳಲ್ಲಿ ಯಾವುದೂ ಕಳೆದ ಹತ್ತು ವರ್ಷಗಳಲ್ಲಿ ಆಗಿಲ್ಲ. ರಾಜಧಾನಿ ಅಥವಾ ಅತ್ಯುತ್ತಮ ನಗರ ಎಂದು ಹೆಸರಿಸುವ ಬದಲು ನಗರದ ಅಭಿವೃದ್ಧಿಗೆ ಮತ್ತು ಜನರ ಜೀವನಕ್ರಮ ಸುಧಾರಿಸಲು ಪ್ರಯತ್ನಗಳನ್ನು ಮಾಡಬೇಕು,’ ಎಂದು ಅವರು ಹೇಳಿದರು.

ಬೆಳವಣಿಗೆಯಲ್ಲಿ ನಗರಗಳು ಸಮಾನ ಹೆಜ್ಜೆ ಇಡಬೇಕು ಮತ್ತು ಮಧುರೈಯನ್ನು ಎರಡನೇ ರಾಜಧಾನಿಯಾಗಿ ಘೋಷಿಸುವುದರಿಂದ ರಾಜ್ಯದ ದಕ್ಷಿಣ ಭಾಗದಲ್ಲಿ ಮತ್ತೊಂದು ಸುತ್ತಿನ ಬೆಳವಣಿಗೆ ಆರಂಭವಾಗುತ್ತದೆ ಎಂದು ಎರಡನೇ ರಾಜಧಾನಿಯ ಚರ್ಚೆಯಲ್ಲಿ ತೊಡಗಿರುವ ಸಚಿವರು ಹೇಳಿಕೊಳ್ಳುತ್ತಿದ್ದಾರೆ.

ರಾಜಧಾನಿ ಚರ್ಚೆ ಇದೇ ಮೊದಲೇನಲ್ಲ

ರಾಜಧಾನಿ ಅಥವಾ ಎರಡನೇ ರಾಜಧಾನಿಯ ಕುರಿತು ರಾಜ್ಯವು ಚರ್ಚೆಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲೇನಲ್ಲ. ಎಂ.ಜಿ ರಾಮಚಂದ್ರನ್‌ ಅವರು ಮುಖ್ಯಮಂತ್ರಿಯಾಗಿದ್ದ 1981 ರಲ್ಲಿ ರಾಜಧಾನಿಯನ್ನು ಚೆನ್ನೈನಿಂದ 335 ಕಿ.ಮೀ ದೂರದಲ್ಲಿರುವ ತಿರುಚನಾಪಳ್ಳಿಗೆ ಸ್ಥಳಾಂತರಿಸುವುದಾಗಿ ಘೋಷಿಸಿದ್ದರು. ಹೊಸ ನಗರದ ನಿರ್ಮಾಣಕ್ಕಾಗಿ ಸರ್ಕಾರವು ಭೂಮಿಯನ್ನು ನಿಗದಿ ಮಾಡಿಕೊಂಡಿತ್ತು. ಆದರೆ ಯೋಜನೆ ಮೇಲೇಳಲೇ ಇಲ್ಲ.

ಎರಡು ದಶಕಗಳ ನಂತರ, ಅವರ ಉತ್ತರಾಧಿಕಾರಿ ಜೆ.ಜಯಲಲಿತಾ ಅವರು ಸಚಿವಾಲಯಗಳನ್ನು ನಗರದ ಹೊರವಲಯದಲ್ಲಿರುವ ಮಾಮಲ್ಲಾಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದರು. ಆದರೆ, ಇದೂ ಕೂಡ ಕಾಗದದ ಮೇಲೆಯೇ ಉಳಿದುಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.