ADVERTISEMENT

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಉದಾರೀಕರಣ ಸೃಷ್ಟಿಸಿದ ಉದ್ಯೋಗದ ಮರೀಚಿಕೆ

ನರೇಂದ್ರ ಪಾಣಿ
Published 8 ಸೆಪ್ಟೆಂಬರ್ 2021, 5:20 IST
Last Updated 8 ಸೆಪ್ಟೆಂಬರ್ 2021, 5:20 IST
ಕೋವಿಡ್‌ ಮೊದಲ ಅಲೆ ಎದುರಾದಾಗ ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಮರಳಲು ಬಾಂದ್ರಾ ರೈಲು ನಿಲ್ದಾಣದಲ್ಲಿ ಸೇರಿದ್ದ ಜನರು ಪಿಟಿಐ ಚಿತ್ರ
ಕೋವಿಡ್‌ ಮೊದಲ ಅಲೆ ಎದುರಾದಾಗ ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಮರಳಲು ಬಾಂದ್ರಾ ರೈಲು ನಿಲ್ದಾಣದಲ್ಲಿ ಸೇರಿದ್ದ ಜನರು ಪಿಟಿಐ ಚಿತ್ರ   

ಭಾರತದ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು 1991ರ ಜುಲೈನಲ್ಲಿ ಅತಿ ಹೆಚ್ಚಿನ ದರದ ಪ್ರಗತಿಯ ಕನಸುಗಳನ್ನು ಬಿತ್ತಿ ಆರ್ಥಿಕ ಸುಧಾರಣೆಗಳ ‍ಪ‍್ರಸ್ತಾವವನ್ನು ಮಂಡಿಸಿದ್ದರು. ಉದ್ಯೋಗ ಸೃಷ್ಟಿಯೂ ಅದೇ ಪ್ರಮಾಣದಲ್ಲಿ ಇರಲಿದೆ ಎಂಬ ಅರ್ಥವೂ ಅದರಲ್ಲಿ ಅಂತರ್ಗತವಾಗಿ ಇತ್ತು. ಮುಂದಿನ ಮೂರು ದಶಕಗಳಲ್ಲಿ ಈ ಸಂಕಥನವು ಪ್ರಗತಿಯ ಬಗ್ಗೆ ಗಮನವನ್ನು ಕೇಂದ್ರೀಕರಿಸಿದೆ. ಆದರೆ, ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಆಗಿರುವ ಹಿನ್ನಡೆಗಳಿಗೆ ಈ ಚರ್ಚೆಯಲ್ಲಿ ಅರ್ಥಪೂರ್ಣ ಸ್ಥಾನ ದೊರೆತಿಲ್ಲ.

ಡಾ. ಸಿಂಗ್‌ ಅವರ ಕಾರ್ಯತಂತ್ರದ ಮೊದಲ ಹಿನ್ನಡೆಯು ಬಹಿರಂಗವಾಗಿ ಗೋಚರಿಸಲು ದೀರ್ಘ ಕಾಲವೇನೂ ಬೇಕಾಗಲಿಲ್ಲ. ಹೆಚ್ಚು ಹೆಚ್ಚು ಆಮದುಗಳಿಗೆ ಅರ್ಥ ವ್ಯವಸ್ಥೆಯನ್ನು ತೆರೆದಿಟ್ಟರೆ ಭಾರತದ ತಯಾರಕರು ವಿದೇಶಿ ತಯಾರಕರ ಜತೆಗಿನ ಸ್ಪರ್ಧೆಗೆ ಸಜ್ಜಾಗುತ್ತಾರೆ; ಇದರಿಂದಾಗಿ ಭಾರತದ ತಯಾರಕರು ಜಾಗತಿಕವಾಗಿ ಸ್ಮರ್ಧಾತ್ಮಕವಾಗುತ್ತಾರೆ. ಪರಿಣಾಮವಾಗಿ ಅವರು ಜಾಗತಿಕ ಮಾರುಕಟ್ಟೆಗೆ ರಫ್ತು ಹೆಚ್ಚಿಸಲು ಸಮರ್ಥರಾಗುತ್ತಾರೆ ಎಂಬ ನಿರೀಕ್ಷೆಯು ಡಾ. ಸಿಂಗ್‌ ಅವರ ಚಿಂತನೆಯ ನೆಲೆಗಟ್ಟಾಗಿತ್ತು. ವಾಸ್ತವದಲ್ಲಿ, ವಿದೇಶಿ ಕಂಪನಿಗಳಿಗೆ ತಮ್ಮ ಬ್ರಾಂಡ್‌ಗಳನ್ನು ಮಾರುವುದೇ ಹೆಚ್ಚು ಅನುಕೂಲಕರ ಎಂಬ ನಿರ್ಧಾರಕ್ಕೆ ಭಾರತದ ಕಂಪನಿಗಳು ಬಂದವು. ಥಮ್ಸ್‌ ಅಪ್‌ ಬ್ರಾಂಡ್‌ ಅನ್ನು ಕೋಕಾ ಕೋಲ ಕಂಪನಿಗೆ ಮಾರಾಟ ಮಾಡಿದ್ದೇ ತಡ, ಭಾರತದ ಲಘುಪಾನೀಯ ಮಾರುಕಟ್ಟೆಯು ಕೋಕಾ ಕೋಲ ಮತ್ತು ಪೆಪ್ಸಿ ತೆಕ್ಕೆ ಸೇರಿತು.

ಥಮ್ಸ್‌ ಅಪ್‌ನ ಅನುಭವವು ಅದಕ್ಕೇ ಸೀಮಿತವಾದುದಲ್ಲ. ಸ್ಪರ್ಧಾತ್ಮಕವಾಗಲು ಮತ್ತು ರಫ್ತು ಹೆಚ್ಚಿಸಲು ತೀವ್ರವಾದ ಸ್ಪರ್ಧೆಯು ಕೆಲವು ತಯಾರಕರಿಗೆ ನೆರವಾಗಿದ್ದು ಹೌದಾದರೂ ಒಟ್ಟು ಪ್ರವೃತ್ತಿಯು ಅದರ ವಿರುದ್ಧ ದಿಕ್ಕಿನಲ್ಲಿಯೇ ಇತ್ತು. ರಫ್ತುಗಿಂತ ಆಮದು ತೀವ್ರವಾಗಿ ಹೆಚ್ಚುತ್ತಲೇ ಹೋಯಿತು. ಆಮದು ಮತ್ತು ರಫ್ತುವಿನ ಅನುಪಾತವು 1991–92ರಿಂದ 2019–20ರ ಅವಧಿಯಲ್ಲಿ 41.4ರಷ್ಟು ಹೆಚ್ಚಿತು. ಭಾರತದ ಮಾರುಕಟ್ಟೆಯ ಬಹುಭಾಗವು ಆಮದುಗಳಿಂದಲೇ ತುಂಬಿ ಹೋಯಿತು. ಭಾರತದ ತಯಾರಿಕಾ ಕ್ಷೇತ್ರದ ಪ್ರಗತಿಯ ಗತಿಯು ಬಹಳ ನಿಧಾನವಾಗಿಯೇ ಇತ್ತು. ಪರಿಣಾಮವಾಗಿ ಉದ್ಯೋಗ ಸೃಷ್ಟಿಯು ಮಂದವಾಯಿತು.

ADVERTISEMENT

ಸೃಷ್ಟಿಯಾದ ಉದ್ಯೋಗಕ್ಕೆ ಬೇಕಿದ್ದ ಕೌಶಲಗಳು ಮತ್ತು ಉದ್ಯೋಗ ಆಕಾಂಕ್ಷಿಗಳಲ್ಲಿ ಇದ್ದ ಕೌಶಲಗಳ ನಡುವೆ ಭಾರಿ ಕಂದಕ ಸೃಷ್ಟಿಯಾಗಲು ಉದಾರೀಕರಣದ ಬಗ್ಗೆ ಇದ್ದ ಹೆಚ್ಚು ಪ್ರಕಟಗೊಳ್ಳದ ಪೂರ್ವಗ್ರಹಗಳು ಕಾರಣವಾಗಿದ್ದವು. ಕೃಷಿ ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟನ್ನು ಉದಾರೀಕರಣವು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಉತ್ತರಾಧಿಕಾರ ರೀತಿಯಿಂದಾಗಿ ಹೊಲಗಳು ಚಿಕ್ಕದಾಗುತ್ತಾ ಹೋದವು ಮತ್ತು ಹಲವು ರೈತರ ಹೊಲಗಳು ಲಾಭದಾಯಕವಾಗಿ ಬೇಸಾಯ ಮಾಡಲು ಸಾಧ್ಯವಿರುವುದಕ್ಕಿಂತ ಸಣ್ಣದಾದವು. ದರದಲ್ಲಿನ ಭಾರಿ ಏರಿಳಿತವು ಒಂದು ವರ್ಷ ಲಾಭದಾಯಕ ಎನಿಸಿಕೊಂಡ ಹೊಲವು ಮರುವರ್ಷ ಲಾಭದಾಯಕ ಅಲ್ಲ ಎನಿಸಿಕೊಳ್ಳಲು ಕಾರಣವಾಯಿತು.

ಕೃಷಿ ಕ್ಷೇತ್ರದಿಂದ ಹೊರಬಿದ್ದ ಜನರಿಗೆ ಉದ್ಯೋಗದ ಅಗತ್ಯ ತೀವ್ರವಾಗಿತ್ತು. ಉದಾರೀಕರಣವು ಸೃಷ್ಟಿಸಿದ ಸೀಮಿತ ಉದ್ಯೋಗಗಳಿಗೆ ಬೇಕಾದ ಕೌಶಲಗಳು ಕೃಷಿ ಕ್ಷೇತ್ರದಿಂದ ಹೊರಬಿದ್ದವರಲ್ಲಿ ಇರಲಿಲ್ಲ. ಅರ್ಥ ವ್ಯವಸ್ಥೆಯಲ್ಲಿ ವೇಗವಾಗಿ ಬೆಳೆಯತೊಡಗಿದ ಸಾಫ್ಟ್‌ವೇರ್‌ ಉದ್ಯಮದಂತಹ ಕ್ಷೇತ್ರದಲ್ಲಿ ಕೆಲಸ ಪಡೆದುಕೊಳ್ಳಲು ಬೇಕಾದ ತಾಂತ್ರಿಕ ಕೌಶಲ ಅಥವಾ ಇಂಗ್ಲಿಷ್‌ ಭಾಷಾ ಕೌಶಲವು ಬಹುಪಾಲು ಜನರಲ್ಲಿ ಇರಲಿಲ್ಲ. ಉದಾರೀಕರಣದ ನೆಚ್ಚಿನ ಉದ್ಯಮಗಳಿಗಾಗಿ ಸೃಷ್ಟಿಯಾಗಬೇಕಿದ್ದ ಮೂಲಸೌಕರ್ಯ ನಿರ್ಮಾಣದಲ್ಲಿ ಕೆಲಸ ಕಂಡುಕೊಳ್ಳುವುದೇ ಈ ವರ್ಗಕ್ಕೆ ಇದ್ದ ಏಕೈಕ ಭರವಸೆ ಅಗಿತ್ತು.

ಇಂತಹ ತಳ ಹಂತದ ಉದ್ಯೋಗಗಳಿಗೂ ಉದಾರೀಕರಣವು ಅಡ್ಡಿಯಾದದ್ದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ರಫ್ತಿಗಿಂತ ಆಮದು ಬಹಳ ಹೆಚ್ಚು ಇದ್ದ ಕಾರಣದಿಂದಾಗಿ ವಿದೇಶಿ ವಿನಿಮಯದ ಮೇಲೆ ಒತ್ತಡದ ಪರಿಸ್ಥಿತಿ ಮತ್ತೆ ಕಾಣಿಸಿಕೊಳ್ಳುವ ಅಪಾಯ ಇತ್ತು. ಈ ಬಿಕ್ಕಟ್ಟನ್ನು ತಪ್ಪಿಸಿಕೊಂಡಿದ್ದರೆ, ವಿದೇಶಿ ಬಂಡವಾಳ ಆಕರ್ಷಿಸಲು ನಡೆಸಿದ ಇನ್ನಿಲ್ಲದ ಪ್ರಯತ್ನವೇ ಅದಕ್ಕೆ ಕಾರಣ. ಭಾರತದ ಪ್ರಮುಖ ನಗರಗಳು ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿವೆ ಎಂದು ಬಿಂಬಿಸುವುದೂ ಈ ಪ್ರಯತ್ನದ ಭಾಗವಾಗಿತ್ತು. ಇದು ಕೆಲವೇ ನಗರಗಳ ಮೇಲೆ ಹೂಡಿಕೆ ಕೇಂದ್ರೀಕರಣಕ್ಕೆ ಕಾರಣವಾಯಿತು ಮತ್ತು ಕೈಗಾರಿಕೀಕರಣವು ಎಲ್ಲೆಡೆ ಹಂಚಿಹೋಗುವ ಸಾಧ್ಯತೆಯನ್ನು ಕಮರಿಸಿತು. ಪರಿಣಾಮವಾಗಿ, ಕೃಷಿಯನ್ನು ಬಿಟ್ಟು ಬಂದವರಿಗೆ ಅವರ ಮನೆಗಳ ಸಮೀಪದಲ್ಲಿಯೇ ಉದ್ಯೋಗ ಒದಗಿಸುವುದು ಸಾಧ್ಯವಾಗಲಿಲ್ಲ.

ಜಾಗತಿಕ ಮಟ್ಟದ ಮೂಲಸೌಕರ್ಯದ ಮೇಲಿನ ಹೂಡಿಕೆಯು ಮುಖ್ಯವಾಗಿ ಎರಡು ರೀತಿಯಲ್ಲಿ ವಿದೇಶಿ ಹೂಡಿಕೆಯನ್ನು ಗುರಿ ಆಗಿಸಿ ಕೊಂಡಿತ್ತು. ಮೊದಲನೆಯದಾಗಿ, ವಿದೇಶಿ ಹೂಡಿಕೆದಾರರು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು ಎಂಬ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗಿತ್ತು. ವಿದೇಶದ ಪ್ರಮುಖ ಹೂಡಿಕೆದಾರರು ಸಣ್ಣ ಸಣ್ಣದಾದ ಹಲವು ಯೋಜನೆಗಳಲ್ಲಿ ಆಸಕ್ತಿ ತಳೆಯುವುದು ಸಾಧ್ಯವಿರಲಿಲ್ಲ. ಹಾಗಾಗಿ, ಮೂಲಸೌಕರ್ಯ ಯೋಜನೆಗಳನ್ನು ಬೃಹತ್‌ ಗಾತ್ರಗಳದ್ದಾಗಿ ಹಿಗ್ಗಿಸಲು ಮತ್ತು ಆಕರ್ಷಕಗೊಳಿಸಲು ಒತ್ತು ಕೊಡಲಾಯಿತು. ಜಾಗತಿಕ ಮಟ್ಟದ ವರ್ಚಸ್ಸನ್ನು ಆಗಲೇ ಹೊಂದಿದ್ದ ಮಹಾನಗರಗಳಲ್ಲಿ ಈ ಯೋಜನೆಗಳು ಕೇಂದ್ರೀಕೃತಗೊಂಡವು.

ಈ ಒತ್ತು ನೀಡಿಕೆಯಿಂದಾಗಿ, ವಿದೇಶಿ ಹೂಡಿಕೆಯ ಎರಡನೇ ಅತಿ ಹೆಚ್ಚು ಮಹತ್ವದ ಭಾಗವಾಗಿ ದೊಡ್ಡ ಮತ್ತು ಆಕರ್ಷಕ ಮೂಲಸೌಕರ್ಯ ಯೋಜನೆಗಳು ಗುರುತಿಸಿಕೊಂಡವು. ದೇಶಕ್ಕೆ ಬರಬಹುದಾದ ವಿದೇಶಿ ಹೂಡಿಕೆದಾರರನ್ನೇ ಇವುಗಳಲ್ಲಿ ಹೆಚ್ಚಿನ ಯೋಜನೆಗಳು ಗುರಿಯಾಗಿಸಿಕೊಂಡಿದ್ದವು. ದುಬಾರಿ ವಿಮಾನ ನಿಲ್ದಾಣಗಳು, ಎಕ್ಸ್‌ಪ್ರೆಸ್‌ ವೇಗಳೇ ಈ ಯೋಜನೆಗಳಲ್ಲಿ ಮುಖ್ಯವಾಗಿದ್ದವು. ಭಾರಿ ವೆಚ್ಚದಾಯಕವಾದ ಈ ಯೋಜನೆಗಳನ್ನು ಖಾಸಗಿ ಕ್ಷೇತ್ರವು ನಿರ್ಮಿಸಿದಾಗ ಅದಕ್ಕೆ ಶುಲ್ಕ ವಿಧಿಸಲು ಆರಂಭಿಸಲಾಯಿತು. ಸರ್ಕಾರವೇ ಇಂತಹ ಮೂಲಸೌಕರ್ಯಗಳನ್ನು ಸೃಷ್ಟಿಸಿದಾಗ ಅದಕ್ಕೆ ತಗುಲಿದ ವೆಚ್ಚ ಭರಿಸಲು ತೆರಿಗೆಯ ಮೂಲಕ ಸಂಪನ್ಮೂಲ ಸಂಗ್ರಹಿಸಿತು. ಬಡ ವರ್ಗದ ಜನರು ಬಳಸುವ ವಸ್ತುಗಳ ಮೇಲೆಯೂ ಪರೋಕ್ಷ ತೆರಿಗೆ ಹೇರಲಾಯಿತು. ಇದರಿಂದಾಗಿ, ನಗರ ಪ್ರದೇಶಗಳಲ್ಲಿ ಕೆಲಸದ ಹುಡುಕಾಟದಲ್ಲಿದ್ದ ಜನರ ಜೀವನ ವೆಚ್ಚವು ಏರಿಕೆಯಾಯಿತು.

ಮಹಾನಗರಗಳ ಮೇಲೆಯೇ ಗಮನ ಕೇಂದ್ರೀಕೃತವಾದ ಕಾರಣ ದೊಡ್ಡ ಮಟ್ಟದ ಹೂಡಿಕೆಯ ಪ್ರಯೋಜನವು ದೇಶದ ಹೆಚ್ಚಿನ ಭಾಗಗಳಿಗೆ ಸಿಗಲಿಲ್ಲ. ದೇಶದ ಉತ್ತರ ಮತ್ತು ಪೂರ್ವ ಭಾಗದ ಜಿಲ್ಲೆಗಳ ದುರ್ಬಲ ವರ್ಗಗಳ ಕಾರ್ಮಿಕರಿಗೆ ವರ್ಷಕ್ಕೆ ಆರು ತಿಂಗಳೂ ಕೆಲಸ ಸಿಗುತ್ತಿಲ್ಲ ಎಂಬ ಮಾಹಿತಿಯನ್ನು 2011ರ ಜನಗಣತಿಯು ದಾಖಲಿಸಿತ್ತು. ಕೆಲಸ ಸಿಗದ ಕಾರಣದಿಂದಾಗಿ ಈ ಕಾರ್ಮಿಕರು ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ವಲಸೆ ಹೋಗಬೇಕಾಯಿತು. ಆದರೆ, ಈ ನಗರಗಳಲ್ಲಿ ಜೀವನ ವೆಚ್ಚವು ಹೆಚ್ಚುತ್ತಲೇ ಇದ್ದ ಕಾರಣ ಇವರು ನಗರಗಳಲ್ಲಿಯೇ ಕಾಯಂ ನೆಲೆಸುವುದು ಸಾಧ್ಯವಾಗಲಿಲ್ಲ. ಹಾಗಾಗಿ, ಅವರು ತಮ್ಮ ಕುಟುಂಬಗಳನ್ನು ಹಳ್ಳಿಗಳಲ್ಲಿಯೇ ಬಿಟ್ಟು ಬರಬೇಕಾಯಿತು. ದೂರದ ನಗರಗಳಲ್ಲಿ ಅಲ್ಪಾವಧಿ ಕೆಲಸಗಳನ್ನು ಪಡೆದುಕೊಂಡು ಅದರ ಮೂಲಕ ಅವರು ಜೀವನ ಕಟ್ಟಿಕೊಳ್ಳಲು ಯತ್ನಿಸಬೇಕಾಯಿತು. ಈ ವ್ಯವಸ್ಥೆಯು ಒಳಗಿನಿಂದ ಎಷ್ಟು ಶಿಥಿಲವಾಗಿತ್ತು ಎಂಬುದು ಕೋವಿಡ್‌ ಸಾಂಕ್ರಾಮಿಕ ಹರಡುವಿಕೆ ತಡೆಗಾಗಿ ಹೇರಿದ ಲಾಕ್‌ಡೌನ್‌ ಸಂದರ್ಭವು ತೋರಿಸಿಕೊಟ್ಟಿತು. ಈ ವಲಸೆ ಕಾರ್ಮಿಕರು ಬೀದಿಗಳಲ್ಲಿ ಸಿಲುಕಬೇಕಾಯಿತು.

ಅಗತ್ಯ ಇರುವಷ್ಟು ಉದ್ಯೋಗಗಳನ್ನು ಒದಗಿಸಿಲ್ಲ ಎಂಬುದು ಮಾತ್ರ ಉದಾರೀಕರಣದ ಸಮಸ್ಯೆ ಅಲ್ಲ. ಸೃಷ್ಟಿಯಾದ ಉದ್ಯೋಗಗಳು ಬೇಡಿಕೆಗಳಿಗೆ ತಕ್ಕಂತೆ ಇರಲಿಲ್ಲ. ಕಾರ್ಮಿಕರಲ್ಲಿ ಇರುವ ಕೌಶಲ ಮತ್ತು ಉದ್ಯೋಗಕ್ಕೆ ಬೇಕಿದ್ದ ಕೌಶಲದ ನಡುವೆ ಹೊಂದಾಣಿಕೆಯೇ ಇರಲಿಲ್ಲ. ಬೇಸಾಯದಿಂದ ಜನರು ಹೊರ ಬಿದ್ದ ಸ್ಥಳ ಮತ್ತು ತಮಗೆ ಕೆಲಸ ಸಿಗಬಹುದು ಎಂದು ಅವರು ನಿರೀಕ್ಷಿಸಿದ್ದ ಸ್ಥಳಗಳ ನಡುವಣ ಅಂತರ ಬಹಳ ದೊಡ್ಡದೇ ಆಗಿತ್ತು. ಇದರ ಪರಿಣಾಮವಾಗಿ ಕುಟುಂಬಗಳು ಶಾಶ್ವತವಾಗಿಯೇ ವಿಭಜನೆಗೊಂಡವು. ಲಭ್ಯ ಇದ್ದ ಕೆಲಸದ ಸುತ್ತಲು ಅನಿಶ್ಚಿತ ಸ್ಥಿತಿ ಸದಾ ಹೊಯ್ದಾಡುತ್ತಲೇ ಇತ್ತು. ಕೆಲಸದ ಪರಿಸ್ಥಿತಿಯು ಅಮಾನವೀಯ ಎಂದು ಕರೆಯಬಹುದಾದುದರ ಅಂಚಿನಲ್ಲಿಯೂ ಇತ್ತು.

ಲೇಖಕ: ಪ್ರಾಧ್ಯಾಪಕ ಮತ್ತು ಡೀನ್‌, ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ನ ಸಮಾಜ ವಿಜ್ಞಾನಗಳ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.