ವಿಶ್ವದ ಹಲವು ದೇಶಗಳಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. 2019ರ ಅಂತ್ಯದ ವೇಳೆಗೆ 65 ವರ್ಷ ಮೇಲ್ಪಟ್ಟ ಜನರ ಸಂಖ್ಯೆಯು ವಿಶ್ವದಾದ್ಯಂತ 70 ಕೋಟಿಯನ್ನು ದಾಟಿತ್ತು. ಮುಂದಿನ 30 ವರ್ಷಗಳಲ್ಲಿ ಅಂದರೆ, 2050ರ ಅಂತ್ಯದ ವೇಳೆಗೆ ಈ ಸಂಖ್ಯೆ 150 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲೂ ವೃದ್ಧರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಪೂರ್ವ ಏಷ್ಯಾದ ದೇಶಗಳು, ಆಗ್ನೇಯ ಏಷ್ಯಾದ ದೇಶಗಳು ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ವೃದ್ಧರ ಸಂಖ್ಯೆ ಭಾರಿ ವೇಗದಲ್ಲಿ ಏರಿಕೆಯಾಗುತ್ತಿದೆ
ಕಾರಣಗಳು
ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಲ್ಲೇ ವೃದ್ಧರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಲೂ ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಲ್ಲೇ ವೃದ್ಧರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇದೆ. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ
*ಜನಸಂಖ್ಯೆ ಏರಿಕೆಯ ಕಾರಣ ವಿಶ್ವದ ಹಲವು ದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ದಶಕಗಳ ಹಿಂದೆ ಹಮ್ಮಿಕೊಳ್ಳಲಾಗಿತ್ತು. ಕೆಲವು ದೇಶಗಳು ಒಂದೇ ಮಗು ನೀತಿಯನ್ನು ಜಾರಿಗೆ ತಂದಿದ್ದವು. ಚೀನಾ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿತು. ಇದರಿಂದ ಒಂದೆರಡು ದಶಕದ ಅವಧಿಯಲ್ಲಿ ಜನನ ಪ್ರಮಾಣ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಮರಣ ಪ್ರಮಾಣವೂ ಇಳಿಕೆಯಾದ ಕಾರಣ ವೃದ್ಧರ ಸಂಖ್ಯೆ ಏರಿಕೆಯಾಗಿದೆ
*ಈಗಿನ ಆಧುನಿಕ ಕುಟುಂಬಗಳು ಸಣ್ಣ ಕುಟುಂಬಗಳಾಗಿ ಬದಲಾಗಿವೆ. ಒಂದೇ ಮಗು ಸಾಕು ಎಂಬ ಮನಸ್ಥಿತಿಗೆ ಕುಟುಂಬಗಳು ಬಂದಿವೆ. ವೃದ್ಧರ ಸಂಖ್ಯೆ ಏರಿಕೆಯಾಗುತ್ತಿರುವ ದೇಶಗಳು, ಎರಡು ಮಕ್ಕಳನ್ನು ಹೊಂದಲು ಉತ್ತೇಜನ ಕಾರ್ಯಕ್ರಮಗಳನ್ನು ರೂಪಿಸಿವೆ. ಆದರೆ, ಒಂದೇ ಮಗು ಸಾಕು ಎಂಬ ನೀತಿಗೆ ಜನರು ಕಟ್ಟುಬಿದ್ದಿದ್ದಾರೆ. ಜನನ ಪ್ರಮಾಣ ಕಡಿಮೆಯಾಗಿರುವುದರಿಂದಲೇ ಒಟ್ಟು ಜನಸಂಖ್ಯೆಯಲ್ಲಿ ವೃದ್ಧರ ಪ್ರಮಾಣ ಏರಿಕೆಯಾಗಲು ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ
*ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಲ್ಲಿ ಈಗ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಇದರಿಂದ ಎಲ್ಲರಿಗೂ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತಿದ್ದು, ಮರಣ ಪ್ರಮಾಣ ಇಳಿಕೆಯಾಗಿದೆ. ಇದರಿಂದ ಜೀವಿತಾವಧಿ ಏರಿಕೆಯಾಗಿದೆ. ಈ ದೇಶಗಳೂ ಸೇರಿದಂತೆ ವಿಶ್ವದ ಎಲ್ಲೆಡೆ 2015-2019ರ ಅವಧಿಯಲ್ಲಿ 65 ವರ್ಷ ತುಂಬಿದವರು ಇನ್ನೂ 17 ವರ್ಷ ಜೀವಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. 2045-2050ರ ಅವಧಿಯಲ್ಲಿ 65 ವರ್ಷ ತುಂಬಿದವರು ಇನ್ನೂ 19 ವರ್ಷ ಜೀವಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ವಯಸ್ಸಾದವರು ಮತ್ತು ಪರಿಣಾಮಗಳು
ವಯಸ್ಸಾದವರ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಉಂಟಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿವೆ. ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿನ ಕುಸಿತ, ಹೆಚ್ಚಿದ ಆರೋಗ್ಯ ವೆಚ್ಚಗಳು, ಪಿಂಚಣಿ, ಆರ್ಥಿಕತೆ ಸಮಸ್ಯೆಗಳು ಇದರಲ್ಲಿ ಮುಖ್ಯವೆನಿಸಿವೆ.
ದುಡಿಯುವ ವಯಸ್ಸಿನ ಜನರಿಗೆ ಬರ:ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದರೆ, ದುಡಿಯುವ ವಯಸ್ಸಿನ ಜನರ ಸಂಖ್ಯೆ ಕಡಿಮೆ ಇದೆ ಎಂದರ್ಥ. ಈ ಬೆಳವಣಿಗೆಯು ಅರ್ಹ ಕೆಲಸಗಾರರ ಪೂರೈಕೆಯ ಕೊರತೆಗೆ ಕಾರಣವಾಗುತ್ತದೆ. ಯುವ ಕಾರ್ಮಿಕರಿಗೆ ಇರುವ ಬೇಡಿಕೆ ಹಾಗೆಯೇ ಉಳಿಯಲಿದ್ದು, ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಇದು ಉತ್ಪಾದಕತೆ, ಕಾರ್ಮಿಕ ವೆಚ್ಚಗಳು, ವ್ಯಾಪಾರ ವಿಸ್ತರಣೆ ಹಾಗೂ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಕೆಲಸಗಾರರ ಕೊರತೆಯಿಂದಾಗಿ, ಉಳಿದ ಅಲ್ಪ ಪ್ರಮಾಣದ ದುಡಿಯುವ ವರ್ಗದ ಮೇಲಿನ ಒತ್ತಡ ಇನ್ನಿಲ್ಲದಂತೆ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಕಾರ್ಮಿಕರ ಪೂರೈಕೆಯಲ್ಲಿನ ಕೊರತೆಯು ವೇತನವನ್ನು ಹೆಚ್ಚಿಸಬಹುದು. ಆದರೆ ಇದರಿಂದಾಗಿ ವೇತನ ಹಣದುಬ್ಬರ ಉಂಟಾಗುವ ಸಾಧ್ಯತೆಯಿರುತ್ತದೆ.
ಆರೋಗ್ಯ ವೆಚ್ಚ:ವಯಸ್ಸಾದಂತೆ ಆರೋಗ್ಯ ರಕ್ಷಣೆಯ ಬೇಡಿಕೆ ಹೆಚ್ಚಾಗುತ್ತದೆ. ಹೆಚ್ಚು ವಯಸ್ಸಾದವರ ಸಂಖ್ಯೆ ಅಧಿಕವಿರುವ ದೇಶಗಳು ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಹಣ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಬೇಕಾಗುತ್ತದೆ. ಮುಂದುವರಿದ ದೇಶಗಳಲ್ಲಿ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಆರೋಗ್ಯ ರಕ್ಷಣೆಯ ಪಾಲು ಹೆಚ್ಚಿನ ಪ್ರಮಾಣದಲ್ಲಿದೆ. ಆರೋಗ್ಯ ಸೇವೆಗಳ ಮೇಲೆ ಇನ್ನಷ್ಟು ಹಣ ವಿನಿಯೋಗಿಸುವುದರಿಂದ ಸಾಮಾಜಿಕ ಆದ್ಯತೆಗಳಿಗೆ ಹಿನ್ನಡೆಯಾಗುತ್ತದೆ.
ಮುಂದುವರಿದ ಅನೇಕ ದೇಶಗಳಲ್ಲಿ ಆರೋಗ್ಯ ಕ್ಷೇತ್ರವು ಕಾರ್ಯಕರ್ತರು ಮತ್ತು ಕೌಶಲದ ಕೊರತೆ ಎದುರಿಸುತ್ತಿವೆ.ಮನೆ ಆರೈಕೆ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ. ಜೊತೆಗೆ ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಅಗತ್ಯವೂ ವೆಚ್ಚವನ್ನು ಅಧಿಕಗೊಳಿಸುತ್ತದೆ.
ಅವಲಂಬನೆ:ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚಿರುವ ದೇಶಗಳು ಆರೋಗ್ಯ ವೆಚ್ಚ, ಪಿಂಚಣಿ ಸೌಲಭ್ಯ ಮತ್ತು ಇತರೆ ಧನಸಹಾಯ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲು ತೆರಿಗೆಯ ಮೇಲೆ ಅಲಂಬಿತವಾಗಿರುತ್ತವೆ. ಕಡಿಮೆ ಸಂಖ್ಯೆಯಲ್ಲಿರುವ ದುಡಿಯುವ ವರ್ಗದ ಮೇಲೆ ತೆರಿಗೆ ವಿಧಿಸಿಯೇ ಈ ವೆಚ್ಚಗಳನ್ನು ಸರಿದೂಗಿಸಬೇಕಾದ ಒತ್ತಡದಲ್ಲಿವೆ. ತೆರಿಗೆ ಪಾವತಿಸುವ ದುಡಿಯುವ ವರ್ಗಕ್ಕೆ ಹೋಲಿಸಿದರೆ, ವಯಸ್ಸಾದವರು ಪಾವತಿಸುವ ತೆರಿಗೆ ಪ್ರಮಾಣ ಕಡಿಮೆ. ನಿವೃತ್ತಿ ವಯಸ್ಸು ಸ್ಥಿರವಾಗಿ, ಜೀವಿತಾವಧಿ ಹೆಚ್ಚಾದರೆ, ಪಿಂಚಣಿ ಪಡೆಯುವವರ ಸಂಖ್ಯೆ ಹೆಚ್ಚುತ್ತದೆ. ಇದೇ ವೇಳೆ ತೆರಿಗೆ ಪಾವತಿಸುವ ದುಡಿಯುವ ಜನರ ಪ್ರಮಾಣ ಕಡಿಮೆಯಾಗುತ್ತದೆ.
ಆರ್ಥಿಕತೆ:ಬರುವ ವರಮಾನವನ್ನು ಪಿಂಚಣಿ ನಿಧಿಗೆ ವಿನಿಯೋಗಿಸುತ್ತಿದ್ದರೆ, ಅದು ಉತ್ಪಾದಕತೆ, ಹೂಡಿಕೆಯನ್ನು ಕಂಠಿತಗೊಳಿಸಿ, ಆರ್ಥಿಕತೆಗೆ ಹೊಡೆತ ನೀಡುತ್ತದೆ. ಹಿರಿಯರೇ ಹೆಚ್ಚಾಗಿ ಕಾರ್ಮಿಕ ಬಲದ ಕುಸಿತವು ಆರ್ಥಿಕತೆ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಜಿಡಿಪಿಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ದುಡಿಯುವ ವಯಸ್ಸಿನ ಜನರು ವೃದ್ಧರ ಸೇವೆಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಇವೆಲ್ಲ ಅಂಶಗಳು ಒಟ್ಟಾರೆ ದೇಶದ ಆರ್ಥಿಕ ಬೆಳವಣಿಗೆಯನ್ನು ತಗ್ಗಿಸುತ್ತವೆ.
ಭಾರತದ ಸ್ಥಿತಿಗತಿ
ಇತರ ದೇಶಗಳಂತೆ ಭಾರತದಲ್ಲೂ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. 60 ವರ್ಷ ದಾಟಿದವರ ಪ್ರಮಾಣ 2050ರ ವೇಳೆಗೆ ಶೇ 20ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿರಿಯರ ಪ್ರಮಾಣ ಅಧಿಕವಾಗುತ್ತಿದೆ.
2011ರ ಜನಗಣತಿ ಪ್ರಕಾರ, ಭಾರತದಲ್ಲಿ 60 ವರ್ಷ ದಾಟಿದ 10.4 ಕೋಟಿ ಜನರಿದ್ದರು. 1961ರಲ್ಲಿ ಶೇ 5.6ರಷ್ಟಿದ್ದ ಹಿರಿಯ ನಾಗರಿಕರ ಪ್ರಮಾಣ 2011ರ ವೇಳೆಗೆ ಶೇ 8.6ಕ್ಕೆ ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿಶೇ 71ರಷ್ಟು ಗ್ರಾಮೀಣ ಭಾಗದಲ್ಲಿ, ಶೇ 29ರಷ್ಟು ನಗರಗಳಲ್ಲಿ ನೆಲೆಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಶೇ 66ರಷ್ಟು ಹಿರಿಯ ಪುರುಷರು ಮತ್ತು ಶೇ 28ರಷ್ಟು ಹಿರಿಯ ಮಹಿಳೆಯರು ಈ ವಯಸ್ಸಿನಲ್ಲೂ ಕೆಲಸ ಮಾಡುತ್ತಾರೆ. ನಗರಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 46 ಮತ್ತು ಶೇ 11ರಷ್ಟು ಇದೆ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ, ನಗರ ಪ್ರದೇಶದ ಹಿರಿಯ ನಾಗರಿಕರಲ್ಲಿ ಹೃಯದ ಕಾಯಿಲೆ ಅಧಿಕ. ಅಂಗವೈಕಲ್ಯ ಮತ್ತು ದೃಷ್ಟಿಹೀನತೆಗಳು ವಯಸ್ಸಾದವರನ್ನು ಹೆಚ್ಚಾಗಿ ಬಾಧಿಸುತ್ತಿವೆ.
ಆರೋಗ್ಯ, ಹಣಕಾಸು ಮೊದಲಾದ ಕಾರಣಗಳಿಂದ ಹಿರಿಯರು ಮನೆಯವರ ಮೇಲೆ ಅವಲಂಬಿತವಾಗಿದ್ದಾರೆ. ದುಡಿಮೆಗಾಗಿ ಕಾರ್ಮಿಕರು ನಗರಗಳತ್ತ ವಲಸೆ ಹೋಗುವ ಪ್ರವೃತ್ತಿಯಿಂದಾಗಿ, ಹಳ್ಳಿಗಳು ವೃದ್ಧಾಶ್ರಮಗಳಂತೆ ಬಿಂಬಿತವಾಗುತ್ತಿವೆ.
ಆಧಾರ: ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯಾ ವೃದ್ಧಾಪ್ಯ 2019 ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.