ADVERTISEMENT

Explainer| ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರುವ ಪ್ರಮುಖ 10 ವಿಷಯಗಳಿವು

ಪಿಟಿಐ
Published 3 ನವೆಂಬರ್ 2022, 12:36 IST
Last Updated 3 ನವೆಂಬರ್ 2022, 12:36 IST
ಗುಜರಾತ್‌ನ ಕೆವಾಡಿಯದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ಮೋದಿ (ಪ್ರಾತಿನಿಧಿಕ ಚಿತ್ರ)
ಗುಜರಾತ್‌ನ ಕೆವಾಡಿಯದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ಮೋದಿ (ಪ್ರಾತಿನಿಧಿಕ ಚಿತ್ರ)    

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಿಗಿ ಹಿಡಿತವಿರುವ ಗುಜರಾತ್‌ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ನಿರುದ್ಯೋಗದಿಂದ ಹಿಡಿದು ಬಿಲ್ಕಿಸ್‌ ಬಾನು ಪ್ರಕರಣದ ವರೆಗೆ ಹಲವು ಸಂಗತಿಗಳು ಚುನಾವಣೆಯ ಚರ್ಚಿತ ವಿಷಯಗಳು. ಇವು ಚುನಾವಣೆ ಮೇಲೆ ಪರಿಣಾಮ ಬೀರುವ ಅಂಶಗಳೂ ಹೌದು. ತೀರ ಇತ್ತೀಚಿನ ಮೊರ್ಬಿ ದುರಂತವೂ ಈಗ ಚುನಾವಣೆಯ ವಸ್ತುವಿಷಯವಾಗಿದೆ.

1. ನರೇಂದ್ರ ಮೋದಿ: 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣೆಯಲ್ಲಿ ಬಿಜೆಪಿಯ ಟ್ರಂಪ್ ಕಾರ್ಡ್. ಅವರು ಗುಜರಾತ್‌ ಗದ್ದುಗೆ ತೊರೆದು ಎಂಟು ವರ್ಷಗಳು ಕಳೆದಿವೆಯಾದರೂ, ತವರು ರಾಜ್ಯದ ಮೇಲಿನ ಅವರ ಹಿಡಿತ ಕಡಿಮೆಯಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಸ್ವತಃ ನರೇಂದ್ರ ಮೋದಿ ಅವರೂ ನಿರ್ಣಾಯಕ ಅಂಶವಾಗಲಿದ್ದಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.


2. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿನಾಯತಿ: ಗುಜರಾತ್ ಅನ್ನು ಸಂಘ ಪರಿವಾರದ ಹಿಂದುತ್ವ ಪ್ರಯೋಗಾಲಯವೆಂದು ಪರಿಗಣಿಸಲಾಗಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಶಿಕ್ಷೆಯ ವಿನಾಯತಿ ಬೆಳವಣಿಗೆಯು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಿದೆ. ಮುಸ್ಲಿಮರು ಬಿಲ್ಕಿಸ್ ಬಾನುಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಹಿಂದೂಗಳ ಒಂದು ಭಾಗ ಈ ವಿಚಾರವನ್ನು ಉಪೇಕ್ಷಿಸುತ್ತಿದೆ.

ADVERTISEMENT

3. ಆಡಳಿತ ವಿರೋಧಿ ಅಲೆ: 1998 ರಿಂದ ಈ ವರೆಗೆ 24 ವರ್ಷಗಳ ಆಡಳಿತ ನಡೆಸಿರುವ ಬಿಜೆಪಿಯ ಮೇಲೆ ಸಮಾಜದದಲ್ಲಿ ಅಸಮಾಧಾನವಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ. ಬಿಜೆಪಿಯ ದೀರ್ಘ ಆಡಳಿತದ ಹೊರತಾಗಿಯೂ ಅಲ್ಲಿನ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಮತ್ತು ಜೀವನದ ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ ಎಂಬ ಭಾವನೆ ಜನರಲ್ಲಿದೆ ಎಂದು ರಾಜಕೀಯ ವೀಕ್ಷಕ ಹರಿ ದೇಸಾಯಿ ಹೇಳಿದ್ದಾರೆ.

4. ಮೋರ್ಬಿ ಸೇತುವೆ ಕುಸಿತ: ಅಕ್ಟೋಬರ್ 30 ರಂದು ಮೊರ್ಬಿಯಲ್ಲಿ 135 ಜೀವಗಳನ್ನು ಬಲಿ ತೆಗೆದುಕೊಂಡ ಸೇತುವೆ ದುರಂತವು ಆಡಳಿತ ಪಕ್ಷ ಮತ್ತು ಶ್ರೀಮಂತ ಉದ್ಯಮಿಗಳ ನಡುವಿನ ಸಂಬಂಧವನ್ನು ಮುನ್ನೆಲೆಗೆ ತಂದಿದೆ. ಮತದಾನದ ವೇಳೆ ಜನರ ಮೇಲೆ ಈ ವಿಷಯ ಪ್ರಭಾವ ಬೀರುವ ಸಾಧ್ಯತೆಗಳಿವೆ.

5. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳ ಮುಂದೂಡಿಕೆ: ಪದೇ ಪದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು, ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ಪದೇ ಪದೆ ಮುಂದೂಡುವ ಪರಿಪಾಠಗಳು ಸರ್ಕಾರಿ ಉದ್ಯೋಗ ಪಡೆಯಲು ಶ್ರಮಿಸುತ್ತಿರುವ ಯುವಕರ ನಿರಾಶೆಗೆ ಕಾರಣವಾಗಿದೆ.

6. ಹಳ್ಳಿಗಳಲ್ಲಿ ಮೂಲ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ: ಶಿಕ್ಷಕರಿದ್ದರೆ ಕೊಠಡಿಗಳಿಲ್ಲ, ಕೊಠಡಿಗಳಿದ್ದರೆ ಶಿಕ್ಷಕರಿಲ್ಲ... ಇದು ಗುಜರಾತ್‌ನ ಗ್ರಾಮೀಣ ಭಾಗದ ಶಾಲೆಗಳ ಪರಿಸ್ಥಿತಿ. ಇದು ಶೈಕ್ಷಣಿಕ ವಲಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೈದ್ಯರ ಕೊರತೆಯಿಂದಾಗಿ ಆರೋಗ್ಯ ಸೇವೆ ಎಂಬುದು ಗ್ರಾಮೀಣರಿಗೆ ದುಬಾರಿಯಾಗಿ ಪರಿಣಮಿಸಿದೆ.

7. ರೈತರ ಸಮಸ್ಯೆಗಳು: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿಯಾಗಿದ್ದು, ಬೆಳೆ ನಷ್ಟಕ್ಕೆ ಈ ವರೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ರಾಜ್ಯದ ಹಲವೆಡೆ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ.

8. ಕೆಟ್ಟ ರಸ್ತೆಗಳು: ಗುಜರಾತ್ ಹಿಂದೆ ಉತ್ತಮ ರಸ್ತೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಕಳೆದ ಐದಾರು ವರ್ಷಗಳಲ್ಲಿ ಸರ್ಕಾರ ಮತ್ತು ಸ್ಥಳೀಯಾಡಳಿತಗಳಿಂದ ಉತ್ತಮ ರಸ್ತೆಗಳ ನಿರ್ಮಾಣವಾಗಲಿ, ಹಳೆಯ ರಸ್ತೆಗಳ ನಿರ್ವಹಣೆಯಾಗಲಿ ಆಗಿಲ್ಲ. ರಾಜ್ಯದ ಹಲವೆಡೆ ಗುಂಡಿಗಳಿಂದ ಕೂಡಿದ ರಸ್ತೆಗಳ ಬಗ್ಗೆ ದೂರು ಸಾಮಾನ್ಯವಾಗಿದೆ.

9. ಹೆಚ್ಚಿನ ವಿದ್ಯುತ್ ದರಗಳು: ಗುಜರಾತ್‌ನಲ್ಲಿ ಇಡೀ ದೇಶದಲ್ಲೇ ದುಬಾರಿ ವಿದ್ಯುತ್ ದರ ವಿಧಿಸಲಾಗುತ್ತದೆ. ತಿಂಗಳಿಗೆ 300 ಯೂನಿಟ್‌ಗಳನ್ನು ಉಚಿತವಾಗಿ ನೀಡುವ ಭರವಸೆಯನ್ನು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಚಾರದ ವೇಳೆ ನೀಡಿವೆ. ಜನರು ಈ ಸೌಲಭ್ಯಗಳನ್ನು ಎದುರು ನೋಡುತ್ತಿದ್ದಾರೆ. ‘ದಕ್ಷಿಣ ಗುಜರಾತ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’ ಇತ್ತೀಚೆಗೆ ವಾಣಿಜ್ಯ ವಿದ್ಯುತ್ ದರವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದೆ. ಗುಜರಾತ್‌ನಲ್ಲಿ ನಾವು ಪ್ರತಿ ಯೂನಿಟ್‌ಗೆ ₹7.50 ಪಾವತಿಸುತ್ತಿದ್ದೇವೆ. ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಉದ್ಯಮಕ್ಕೆ ಪ್ರತಿ ಯೂನಿಟ್‌ಗೆ ₹4ರಂತೆ ದರ ವಿಧಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿತ್ತು.

10. ಭೂಸ್ವಾಧೀನ: ಸರ್ಕಾರದ ವಿವಿಧ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ರೈತರು ಮತ್ತು ಭೂಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಉದಾಹರಣೆಗೆ, ಅಹಮದಾಬಾದ್ ಮತ್ತು ಮುಂಬೈ ನಡುವೆ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗಾಗಿ ನಡೆದ ಭೂ ಸ್ವಾಧೀನವನ್ನು ರೈತರು ವಿರೋಧಿಸಿದ್ದರು. ವಡೋದರಾ ಮತ್ತು ಮುಂಬೈ ನಡುವಿನ ಎಕ್ಸ್‌ಪ್ರೆಸ್‌ವೇ ಯೋಜನೆಗಾಗಿ ನಡೆದ ಭೂಸ್ವಾಧೀನವನ್ನೂ ಜನ ವಿರೋಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.