ದೇಶದ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳು/ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವಿರುವ ನಲ್ಲಿ ಅಳವಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಜಲಜೀವನ್ ಮಿಷನ್ ಅಭಿಯಾನವನ್ನು ಆರಂಭಿಸಿತ್ತು. 2024ರ ಆಗಸ್ಟ್ ವೇಳೆಗೆ ಈ ಗುರಿಯನ್ನು ಮುಟ್ಟುವ ಗಡುವು ಹಾಕಿಕೊಳ್ಳಲಾಗಿತ್ತು. ಯೋಜನೆ ಆರಂಭವಾದಾಗ 16 ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಕೊಡಬೇಕಿತ್ತು. 35 ತಿಂಗಳಲ್ಲಿ ಹೊಸದಾಗಿ 6.54 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಉಳಿದ 25 ತಿಂಗಳಲ್ಲಿ ಇನ್ನೂ 9.44 ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ನೀಡಬೇಕಿದೆ.
2019ರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ಕೊಳವೆ ಸಂಪರ್ಕ ಹೊಂದಿದ್ದವು. ಆ ಗ್ರಾಮಗಳ ಎಲ್ಲಾ ಕುಟುಂಬಗಳಿಗೆ 2021ರ ಡಿಸೆಂಬರ್ ಅಂತ್ಯಕ್ಕೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆ ಗಡುವನ್ನು 2022ರ ಮಾರ್ಚ್ ಅಂತ್ಯಕ್ಕೆ ವಿಸ್ತರಿಸಲಾಗಿತ್ತು. ವಿಸ್ತರಿಸಲಾದ ಗಡುವಿನೊಳಗೂ ಈ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ 2024ರ ಗಡುವಿನ ಒಳಗೆ ದೇಶದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ತಲುಪುವುದು ದೊಡ್ಡ ಸವಾಲಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
* ದೇಶದ ಮೂರು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಶೇ 100ರಷ್ಟು ಗುರಿಯನ್ನು ಸಾಧಿಸಿವೆ. ಗೋವಾ, ಹರಿಯಾಣ ಮತ್ತು ತೆಲಂಗಾಣದಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ
* 13 ರಾಜ್ಯಗಳಲ್ಲಿ ಯೋಜನೆಯ ಪ್ರಗತಿ ಶೇ 50ರ ಗಡಿಯನ್ನೂ ಮುಟ್ಟಿಲ್ಲ. ಇವುಗಳಲ್ಲಿ ಮೂರು ರಾಜ್ಯಗಳಲ್ಲಿ ಯೋಜನೆಯನ್ನು ಶೇ 25ರಷ್ಟೂ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಉತ್ತರ ಪ್ರದೇಶ (ಶೇ 14.43), ಜಾರ್ಖಂಡ್ (ಶೇ 21.21) ಮತ್ತು ಛತ್ತೀಸಗಡ (ಶೇ 24.05)ರಷ್ಟು ಮಾತ್ರ ಪ್ರಗತಿ ಸಾಧಿಸಿವೆ. ಯೋಜನೆ ಅನುಷ್ಠಾನದಲ್ಲಿ ಈ ರಾಜ್ಯಗಳು ತೀರಾ ಹಿಂದೆ ಉಳಿದಿವೆ
* ನಾಲ್ಕು ರಾಜ್ಯಗಳು ಶೇ 90ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಪಂಜಾಬ್ (ಶೇ 99.75), ಗುಜರಾತ್ (ಶೇ 96.50), ಹಿಮಾಚಲ ಪ್ರದೇಶ (ಶೇ 96.50) ಮತ್ತು ಬಿಹಾರ (ಶೇ 92.78) ಯೋಜನೆಯ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ
ಸಾಧಿಸಬೇಕಾದದ್ದು ಬಹಳಷ್ಟಿದೆ
ದೇಶದ ಒಟ್ಟು ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಹೊಂದಿರುವ ಜಿಲ್ಲೆಗಳ ಪ್ರಮಾಣ ಶೇ 14.30ರಷ್ಟು ಮಾತ್ರ. 755ರಲ್ಲಿ 108 ಜಿಲ್ಲೆಗಳು, ಶೇ 100ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಿರುವುದಾಗಿ ಘೋಷಿಸಿಕೊಂಡಿವೆ. ಇವುಗಳಲ್ಲಿ ಸರ್ಕಾರದಿಂದ ಪ್ರಮಾಣ ಪತ್ರ ಪಡೆದಿರುವ ಜಿಲ್ಲೆಯ ಸಂಖ್ಯೆ ಒಂದು ಮಾತ್ರ. ಇನ್ನೂ 647 ಜಿಲ್ಲೆಗಳು ಈ ಗುರಿಯನ್ನು ಸಾಧಿಸಬೇಕಿದೆ ಮತ್ತು ಇನ್ನೂ 754 ಜಿಲ್ಲೆಗಳಿಗೆ ಇಂತಹ ಪ್ರಮಾಣ ಪತ್ರ ದೊರೆಯಬೇಕಿದೆ.
ದೇಶದ ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಮತ್ತು ದಟ್ಟಾರಣ್ಯಗಳಲ್ಲಿ ಇರುವ 6.62 ಲಕ್ಷ ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. 2022ರ ಜುಲೈ 5ರ ಅಂತ್ಯದ ವೇಳೆಗೆ 1.50 ಲಕ್ಷ ಗ್ರಾಮಗಳಲ್ಲಿ ಮಾತ್ರ ಶೇ 100ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಇನ್ನೂ 5.12 ಲಕ್ಷ ಗ್ರಾಮಗಳ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ ಕೆಲಸ ಆಗಬೇಕಿದೆ.
ಕರ್ನಾಟಕ: ಅರ್ಧದಷ್ಟು ಮನೆಗಳಲ್ಲಿ ನಲ್ಲಿ ಸಂಪರ್ಕ ಇಲ್ಲ!
ಕರ್ನಾಟಕದಲ್ಲಿ ಯೋಜನೆ ಆರಂಭವಾಗುವುದಕ್ಕೂ ಮುನ್ನ, ಗ್ರಾಮೀಣ ಪ್ರದೇಶದ 1.01 ಕೋಟಿ ಮನೆಗಳ ಪೈಕಿ 24.51 ಲಕ್ಷ ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕ ಇತ್ತು. 2022ರ ಜುಲೈ ಹೊತ್ತಿಗೆ 51.93 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ49.24 ಲಕ್ಷ ಮನೆಗಳು ನಲ್ಲಿ ನೀರಿನ ಸಂಪರ್ಕಕ್ಕೆ ಒಳಪಡಬೇಕಿವೆ.
ರಾಜ್ಯದ ಒಟ್ಟು ಮನೆಗಳ ಪೈಕಿ ಶೇ 51.3ರಷ್ಟು ಮನೆಗಳು ಮಾತ್ರ ಈವರೆಗೆ ಶುದ್ಧ ಕುಡಿಯುವ ನೀರಿನ ನಲ್ಲಿ ಸಂಪರ್ಕವನ್ನು ಪಡೆಯಲು ಸಾಧ್ಯವಾಗಿದೆ ಎಂದು ಜಲಜೀವನ್ ಮಿಷನ್ ಯೋಜನೆಯ ದತ್ತಾಂಶಗಳು ಹೇಳುತ್ತವೆ. ಅಂದರೆ, ಇನ್ನೂ ಶೇ 48.7ರಷ್ಟು ಮನೆಗಳು ಇನ್ನಷ್ಟೇ ನಲ್ಲಿ ಸಂಪರ್ಕಕ್ಕೆ ಒಳಪಡಬೇಕಿವೆ. ಯೋಜನೆ ಪೂರ್ಣಗೊಳ್ಳಲು ಬಾಕಿಯಿರುವ ಎರಡು ವರ್ಷಗಳಲ್ಲಿ ಸರಿಸುಮಾರು ಅರ್ಧದಷ್ಟು ಮನೆಗಳಿಗೆ ನಲ್ಲಿ ನೀರು ಪೂರೈಸುವ ಸವಾಲು ಸರ್ಕಾರದ ಮೇಲಿದೆ.
ನಲ್ಲಿ ಸಂಪರ್ಕ: ರಾಜ್ಯದಸ್ಥಿತಿಗತಿ
1.01 ಕೋಟಿ;ಒಟ್ಟು ಕುಟುಂಬಗಳು
24.51 ಲಕ್ಷ; 2019ರಲ್ಲಿ ನಲ್ಲಿ ಸಂಪರ್ಕ ಹೊಂದಿದ್ದ ಕುಟುಂಬಗಳ ಸಂಖ್ಯೆ
51.93 ಲಕ್ಷ; 2022ರ ಜುಲೈನಲ್ಲಿ ನಲ್ಲಿ ಸಂಪರ್ಕ ಪಡೆದಿರುವ ಮನೆಗಳ ಸಂಖ್ಯೆ
49.24 ಲಕ್ಷ; ನಲ್ಲಿ ಸಂಪರ್ಕಕ್ಕೆ ಒಳಪಡಬೇಕಿರುವ ಕುಟುಂಬಗಳ ಸಂಖ್ಯೆ
* ಕರ್ನಾಟಕದಲ್ಲಿ ಈವರೆಗೆ ಶೇ 51.33ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದ್ದು, ಉತ್ತರ ಕರ್ನಾಟಕದ ಎರಡು ಜಿಲ್ಲೆಗಳು ಅಗ್ರ ಸ್ಥಾನದಲ್ಲಿವೆ
* ಎಲ್ಲ ಜಿಲ್ಲೆಗಳ ಪೈಕಿ ಗದಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಇಲ್ಲಿ ಶೇ 96.92ರಷ್ಟು ಮನೆಗಳು ನಲ್ಲಿ ನೀರಿನ ಸಂಪರ್ಕಕ್ಕೆ ಒಳಪಟ್ಟಿವೆ
* ಎರಡನೇ ಸ್ಥಾನದಲ್ಲಿರುವ ಧಾರವಾಡ ಜಿಲ್ಲೆಯಲ್ಲಿ ಶೇ 92.83 ಮನೆಗಳು ಈ ಸೌಲಭ್ಯ ಪಡೆದಿವೆ. ಮಂಡ್ಯ, ಕೊಪ್ಪಳ, ದಕ್ಷಿಣ ಕನ್ನಡ ಮತ್ತು ಹಾವೇರಿ ಜಿಲ್ಲೆಗಳು ಶೇ 70ಕ್ಕೂ ಹೆಚ್ಚಿನ ಪ್ರಗತಿ ಸಾಧಿಸಿವೆ
* ಬೆಂಗಳೂರು ನಗರ ಹಾಗೂ ಗ್ರಾಮೀಣ ಜಿಲ್ಲೆಗಳು ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿವೆ. ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದ್ದು, ಇವು ನಲ್ಲಿ ನೀರಿನ ಸಂಪರ್ಕ ಪಡೆಯುವಲ್ಲಿ ಹಿಂದೆ ಬಿದ್ದಿವೆ
(ಆಧಾರ: ಜಲ ಜೀವನ್ ಮಿಷನ್ ಡ್ಯಾಶ್‌ಬೋರ್ಡ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.