ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಹೆಚ್ಚಾಗುತ್ತಿದೆ, ಕೃಷಿಗಾಗಿ ಭೂ ಒತ್ತುವರಿ ನಡೆಯುತ್ತಿದೆ, ಹೋಂ ಸ್ಟೇಗಳು ವಿಪರೀತವಾಗಿವೆ, ಮಾನವ-ಪ್ರಾಣಿಗಳ ಸಂಘರ್ಷ ಹೆಚ್ಚುತ್ತಿದೆ ಎಂದು ಪುಕಾರು ಹಬ್ಬಿಸಲಾಗುತ್ತಿದೆ.ಕಸ್ತೂರಿರಂಗನ್ ವರದಿ ಜಾರಿಯಾದರೆ ಮಾತ್ರ ಈ ಸಮಸ್ಯೆಗಳಿಗೆಲ್ಲ ಪರಿಹಾರ ಸಿಕ್ಕಿ, ಜೀವ ವೈವಿಧ್ಯ ಹಾಗೂ ನದಿ ಮೂಲಗಳ ರಕ್ಷಣೆಯಾಗಲಿದೆ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ನಿಜ, ಪರಿಸರ ರಕ್ಷಣೆ ಆಗಲೇಬೇಕಾಗಿದೆ. ಆದರೀಗ ತಲೆಮಾರುಗಳಿಂದ ಪರಿಸರವನ್ನು ರಕ್ಷಣೆ ಮಾಡಿಕೊಂಡು ಬಂದಂತಹ ಘಟ್ಟದ ನೆಲವಾಸಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆ. ಕಸ್ತೂರಿರಂಗನ್‍ರವರು ವಿಜ್ಞಾನಿ ಹೌದು. ಕ್ಷೇತ್ರ ಕಾರ್ಯ ನಡೆಸದೇ ವಾಸ್ತವ ಅರಿಯದೇ ನೀಡಿದ ವರದಿಯನ್ನು ವೈಜ್ಞಾನಿಕ ಎಂದು ಒಪ್ಪುವುದು ಹೇಗೆ?
ಈ ವರದಿಯ ಜಾರಿಯಿಂದ ನೆಲವಾಸಿಗಳ ಎತ್ತಂಗಡಿ ಆಗುವುದಿಲ್ಲ ಎಂಬ ವಾದವೂ ಇದೆ. ಎತ್ತಂಗಡಿಗೆ ಪರೋಕ್ಷವಾಗಿ ಕಾರಣವಾಗುವ ಒಂದೆರಡು ನೈಜ ಘಟನೆಗಳನ್ನು ಇಲ್ಲಿ ಹೇಳಲೇಬೇಕು. ಯಾವುದೇ ಅರಣ್ಯ ಅಧಿಕಾರಿ, ಪರಿಸರವಾದಿ ಭೇಟಿಯೇ ಕೊಡದ ಮಲೆನಾಡಿನ ಹೆಮ್ಮಿಗೆಯಲ್ಲಿ, ಮುರಿದುಹೋದ ಕಿರು ಸೇತುವೆಯೊಂದರ ಮರುನಿರ್ಮಾಣಕ್ಕೆ ಸರ್ಕಾರ ಅನುದಾನ ಒದಗಿಸಿದೆ. ಆದರೆ, ಆ ಸೇತುವೆಯ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅವಕಾಶ ಕೊಡಲಿಲ್ಲ. ಸಂಪರ್ಕ ಕಳೆದುಕೊಂಡ ಒಂದು ಹಳ್ಳಿಯ ಜನ ಅನಿವಾರ್ಯವಾಗಿ ಊರು ಬಿಡುತ್ತಾರೆ ಎನ್ನುವುದು ಇದರ ಹಿಂದಿನ ಲೆಕ್ಕಾಚಾರ.
ಇತ್ತೀಚೆಗೆ ಮಲೆನಾಡಿನ ಒಂದೆರಡು ತಾಲ್ಲೂಕುಗಳಲ್ಲಿ ಕಾಡಾನೆಯ ಓಡಾಟ ಹೆಚ್ಚಾಯಿತು. ಕಾಡಾನೆ ಕಂಡಿರದ ಜನ ಆನೆಯನ್ನು ಓಡಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ದೌಡಾಯಿಸಿದರು. ತಮ್ಮ ಮೊಬೈಲ್ ತೆಗೆದು ಆನೆ ಇರುವ ಸ್ಥಳ ಮತ್ತು ಓಡಾಟವನ್ನು ತೋರಿಸಿದ ಅಧಿಕಾರಿ, ಜನ ಸತ್ತರೆ ಮಾತ್ರ ಆನೆಯನ್ನು ಓಡಿಸುವ ಯೋಜನೆ ಜಾರಿ ಮಾಡಬಹುದು ಎಂಬ ವಾದ ಮುಂದಿಟ್ಟರು. ಜನರ ಆತಂಕ ಮುಂದುವರಿದಿದೆ. ಪರಿಸರವಾದದ ಆನೆ ಈಗಲೂ ಘೀಳಿಡುತ್ತಿದೆ.
ಮಲೆನಾಡಿನ ಕೃಷಿ ಬದುಕಿಗೆ ಕಾಡು ಅನಿವಾರ್ಯ. ಆ ಕಾಡನ್ನು, ನದಿ ಮೂಲಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಅಲ್ಲಿನ ನೆಲವಾಸಿಗಳೇ ಈವರೆಗೆ ತಮ್ಮ ಮನೆಯ ಕೆಲಸದಂತೆ ನಿಭಾಯಿಸುತ್ತಲೇ ಬಂದಿದ್ದಾರೆ. ಹಾಗೆ ಅವರು ರಕ್ಷಿಸದೇ ಹೋಗಿದ್ದಲ್ಲಿ ಯಾವ ನದಿಮೂಲವೂ ಉಳಿಯುತ್ತಿರಲಿಲ್ಲ. ಕಸ್ತೂರಿರಂಗನ್ ವರದಿ ಜಾರಿಯಿಂದ ನೆಲವಾಸಿಗಳಿಗೆ ತೊಂದರೆ ಏನೂ ಇಲ್ಲ ಎಂದು ವಾದ ಮುಂದಿಡುತ್ತಿರುವವರು ಈ ಹಿಂದೆಯೂ ಪುನರ್ವಸತಿ ಯೋಜನೆಗಳಲ್ಲಿ ವಿದೇಶಿ ಅನುದಾನ ಪಡೆಯುವ ಎನ್.ಜಿ.ಒ.ಗಳ ದಲ್ಲಾಳಿಗಳಾಗಿ ಕೆಲಸ ಮಾಡಿದವರು ಎನ್ನುವುದು ರಹಸ್ಯವೇನಲ್ಲ.
ಕೆಲವು ವರ್ಷಗಳ ಹಿಂದೆ ಮಲೆನಾಡು ಭಾಗದಲ್ಲಿ ಬಿದಿರಿಗೆ ಕಟ್ಟೆ ರೋಗ ಬಂದಿತ್ತು. ಮಲೆನಾಡಿನ ಜನರು ಆತಂಕಕ್ಕೆ ಒಳಗಾಗಲಿಲ್ಲ. ಏಕೆಂದರೆ ಪ್ರತೀ 12 ವರ್ಷಗಳಿಗೊಮ್ಮೆ ಬರುವ ಬಿದಿರುಕಟ್ಟೆ ಬೀಜೋತ್ಪನ್ನವನ್ನು ಮಾಡಿ ನಂತರ ಬಿದಿರು ಹುಲುಸಾಗಿ ಬೆಳೆಯುತ್ತದೆ ಎಂಬ ಸೂಕ್ಷ್ಮ ಜೈವಿಕ ಕ್ರಿಯೆಯನ್ನು ಪರಿಸರ ಧ್ಯಾನಿಗಳು ಬಲ್ಲವರಾಗಿದ್ದರು. ಆದರೆ ಪರಿಸರವಾದಿಗಳ ನೆಪದಲ್ಲಿ ಬಂದವರು ಮಲೆನಾಡಿನಲ್ಲಿ ಬಿದಿರು ನಾಟಿ ಆಗಬೇಕೆಂದು ಹುಯಿಲೆಬ್ಬಿಸಿ ಗುಡ್ಡಗಳಲ್ಲಿ ಗುಂಡಿ ತೋಡಿ ಬಿದಿರು ನೆಡಿಸಿದ್ದರು. ಸರ್ಕಾರ ಮತ್ತು ಎನ್.ಜಿ.ಒ.ಗಳು ನೆಟ್ಟ ಬಿದಿರು ಮೇಲೇಳಲಿಲ್ಲ. ಬಿದಿರುಕಟ್ಟೆ ಬಂದ ಜಾಗದಲ್ಲಿ ಸಹಜ ಬೀಜೋತ್ಪನ್ನದಿಂದ ಬಿದಿರು ಮತ್ತೆ ಸೊಂಪಾಗಿ ಚಿಗುರಿದೆ. ಕಾಂಕ್ರೀಟ್ ಕಟ್ಟಡದೊಳಗಿನ ವಾದಗಳು ಸೋತಿವೆ. ಆದರೂ ಒಪ್ಪಿಕೊಳ್ಳುತ್ತಿಲ್ಲ. ಇಂಥವರೇ ಮಲೆನಾಡಿನ ನೈಸರ್ಗಿಕ ಕಾಡಿನೊಳಗೆ ನೀಲಗಿರಿ, ಅಕೇಶಿಯಾ ಗಿಡ ನೆಟ್ಟು ವನಮಹೋತ್ಸವ ಆಚರಿಸಿದವರು!
ಮಲೆನಾಡಿನಲ್ಲಿ ಹಸು ಸಾಕಾಣಿಕೆ ಒಂದು ಉಪ ಕಸುಬು. ಗೋಮಾಳಗಳಲ್ಲಿ ಮೇಯಲು ಹೋಗುತ್ತಿದ್ದ ಈ ಹಸುಗಳನ್ನು ನಿಯಂತ್ರಿಸಲು ಹಲವು ವರ್ಷಗಳ ಹಿಂದೆ ಸಿ.ಪಿ.ಟಿ. (ಕೌ ಪ್ರೂಫ್ ಟ್ರೆಂಚ್-ದನಗಳು– ದಾಟುವುದನ್ನು ತಡೆಯುವ ಕಂದಕ) ನಿರ್ಮಾಣ ಮಾಡಿ ಗೋಮಾಳಗಳನ್ನು ಅರಣ್ಯ ಪ್ರದೇಶ ಎನ್ನಲಾಯಿತು. ಈಗ ಅದೇ ಟ್ರೆಂಚ್‍ಗಳನ್ನು ಇನ್ನಷ್ಟು ಆಳ ಮಾಡಿ ಅದು ಇ.ಪಿ.ಟಿ. (ಎಲಿಫೆಂಟ್ ಪ್ರೂಫ್ ಟ್ರೆಂಚ್– ಆನೆ ದಾಟುವುದನ್ನು ತಡೆಯುವ ಕಂದಕ) ಎಂದು ಹೇಳಲಾಗುತ್ತಿದೆ. ಅರಣ್ಯದೊಳಗಿನಿಂದ ಆನೆಗಳು ಊರಿಗೆ ಬರಬಾರದು, ಇದು ನಿಮ್ಮ ರಕ್ಷಣೆಗೆ ಎಂದು ಜನರಿಗೆ ಸುಳ್ಳು ಹೇಳಲಾಗಿದೆ. ಇದರ ಹಿಂದಿನ ಹಣದ ಲೂಟಿಯ ಕಥೆ ದೊಡ್ಡದಿದೆ. ನೈಸರ್ಗಿಕವಾಗಿ ತಲೆತಲಾಂತರಗಳಿಂದ ಆನೆಗಳೇ ಇರದ ಭೂಮಿಯಲ್ಲಿ ಆನೆ ಹುಟ್ಟಿ ಬರಲು ಅದ್ಯಾವ ಜಾದೂವಿನಿಂದ ಸಾಧ್ಯ? ಕಾಡು, ನದಿ, ತೊರೆಗಳನ್ನು ತಮ್ಮ ಬದುಕಿನ ತೊಟ್ಟಿಲಾಗಿ ಕೊನೆಗೆ ಚಟ್ಟವಾಗಿಸಿಕೊಂಡು ಈ ಘಟ್ಟದಲ್ಲಿ ಬದುಕಿದ ಬೆಟ್ಟದ ಜೀವಗಳನ್ನು ಕಾಡಿನ ಸಂಪರ್ಕದಿಂದ ಹೊರದೂಡುವುದು ಜೀವ ವಿರೋಧಿ ಪ್ರಕ್ರಿಯೆ.
ಮಲೆನಾಡಿನಲ್ಲಿ ಸರ್ಕಾರಿ/ಖಾಸಗಿ ಪ್ರಾಯೋಜಿತ ರೆಸಾರ್ಟ್‌ಗೆ ಪ್ರವಾಸಕ್ಕೆ ಬಂದು ಪರಿಸರದ ಪಾಠಗಳನ್ನು ಬೋಧಿಸುವ ಜನರಿಗೆ ಇಲ್ಲಿನ ಪರಿಸರ ಧ್ಯಾನದ ‘ಮಲೆಗಳಲ್ಲಿ ಮದುಮಗಳು’ ಪರಿಚಯವಾಗಿಲ್ಲ. ಇಂಥವರು ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಪರ್ಯಾಯ ಕಸುಬಾಗಿ ಹುಟ್ಟಿರುವ ಹೋಂ ಸ್ಟೇಗಳ ವಿರುದ್ಧ ಮಾತನಾಡುತ್ತಾ ಭೂ ಕುಸಿತಕ್ಕೆ ಈ ಹೋಂ ಸ್ಟೇಗಳು ಕಾರಣ ಎಂದಿದ್ದಾರೆ. ಇಲ್ಲಿನ ಕೃಷಿ ಆದಾಯ ಕೈಕೊಟ್ಟಾಗ ಜನರು ಕಂಡುಕೊಂಡ ಈ ಪರ್ಯಾಯ ದುಡಿಮೆ ಪರಿಸರವಾದಿಗಳು ಹೇಳುವಂಥ ಯಾವ ಹಾನಿಯನ್ನೂ ಮಾಡುತ್ತಿಲ್ಲ. ಆದರೂ ಜನರ ಬದುಕು ಕಸಿಯುವ ಮಾತುಗಳನ್ನು ಏಕೆ ಆಡಬೇಕು?
ನಿಜ, ಭೂ ಕುಸಿತಗಳು ವರದಿಯಾಗುತ್ತಿವೆ. ಅದು ಹಿಂದೆಯೂ ಆಗಿದೆ. ಈಗಲೂ ಆಗುತ್ತಿದೆ. ಅವೈಜ್ಞಾನಿಕವಾದ ರಸ್ತೆ ಅಗಲೀಕರಣ ಕಾಮಗಾರಿಗಳು, ಅರಣ್ಯ ಇಲಾಖೆಯೇ ಅನವಶ್ಯಕವಾಗಿ ಗುಡ್ಡದ ಮೇಲೆ ತೋಡುತ್ತಿರುವ ಇಂಗು ಗುಂಡಿಗಳು, ಅರಣ್ಯದ ನಡುವೆ ಯಾವುದೇ ಸ್ಪಷ್ಟ ರೂಪುರೇಷೆಯಿಲ್ಲದೇ ತೋಡುತ್ತಿರುವ ಕಂದಕಗಳು, ನೈಸರ್ಗಿಕ ಮಳೆ ನೀರಿನ ಹರಿವಿನ ದಿಕ್ಕನ್ನು ಬದಲಾಯಿಸಿರುವುದು ಭೂ ಕುಸಿತಗಳಿಗೆ ಕಾರಣ ಎಂಬುದನ್ನು ಅರಿಯಬೇಕಾಗಿದೆ.
ಮಳೆಕಾಡು ಅಧ್ಯಯನದ ಹೆಸರಿನಲ್ಲಿ ಬಂದ ಸಂಸ್ಥೆಗಳು ಪಡೆಯುತ್ತಿರುವ ಅನುದಾನದ ಮೂಲವನ್ನು ಶೋಧಿಸಬೇಕಾಗಿದೆ. ಕಾಳಿಂಗ ಹಾವಿನ ಸಹಜ ಸಂತಾನೋತ್ಪತ್ತಿ ಕ್ರಿಯೆಯನ್ನು ಯಾಂತ್ರಿಕಗೊಳಿಸಿ ಮಲೆನಾಡಿನ ಪೇಟೆಗಳಲ್ಲೂ ಕಾಳಿಂಗ ಮನೆಗಳಿಗೆ ನುಗ್ಗುವಂತೆ ಮಾಡಿರುವುದು ಪರಿಸರವಾದ. ಕಾಳಿಂಗ ಹಾವುಗಳ ಹತ್ಯೆ ಪಾಪಕಾರಕ ಎಂದು ನಂಬಿ ಗುಡ್ದಗಳಿಗೊಂದು ದೈವದ ಕಲ್ಲು, ಬನದಲ್ಲೊಂದು ನಾಗನ ಸ್ಥಾನ, ನದಿ ಮೂಲದಲ್ಲೊಂದು ಜಲದುರ್ಗಿ ಇಟ್ಟು ಪೂಜಿಸಿ ಘಟ್ಟ ರಕ್ಷಿಸಿದವರ ಪರಿಸರ ಧ್ಯಾನವನ್ನು ಅನುಮಾನಿಸುವುದೇ ಒಂದು ನೈತಿಕ ಅಪರಾಧ.
ಜೀವ, ಜೀವನ - ಜೀವ ವೈವಿಧ್ಯ, ಕೃಷಿ ವೈವಿಧ್ಯ ಎಲ್ಲವೂ ಉಳಿಯಬೇಕು. ಇವೆಲ್ಲವುಗಳ ಕೇಂದ್ರ ಮನುಷ್ಯ ಎನ್ನುವುದನ್ನು ಅರಿಯಬೇಕು. ರೆಸಾರ್ಟ್‌ನಲ್ಲಿ ಉಳಿದು ಮುಂಜಾನೆಗೊಂದು ಫೋಟೊ, ಸಂಜೆಗೊಂದು ಸೆಲ್ಫಿ ತೆಗೆದುಕೊಂಡ ಸುಖದಂತೆ ಪಶ್ಚಿಮ ಘಟ್ಟದ ನೆಲವಾಸಿಗಳು ಬಾಳುತ್ತಿಲ್ಲ. ಬೆಟ್ಟದ ಜೀವಗಳ ಸಮುದಾಯ - ಸಹಭಾಗಿತ್ವದಲ್ಲಿ ಪಶ್ಚಿಮ ಘಟ್ಟವನ್ನು ನಮ್ಮ ನೆಮ್ಮದಿಯ ನಾಳೆಗಳಿಗಾಗಿ ಉಳಿಸಿಕೊಳ್ಳಬೇಕು. ಉಪಗ್ರಹ ಆಧಾರಿತ ಫೋಟೊಗಳಲ್ಲಿ ಕಾಣದ ಪರಿಸರ ಧ್ಯಾನವನ್ನು ಮರುಶೋಧಿಸಬೇಕು. ವಿದೇಶಿ ನಿಧಿ ಆಶ್ರಯದ ಪರಿಸರವಾದವನ್ನು ಅನುಮಾನಿಸಲೇಬೇಕು.
ಲೇಖಕ: ವಕೀಲ
ಪ್ರತಿಕ್ರಿಯೆಗಳು...
‘ಪಶ್ಚಿಮ ಘಟ್ಟ ಮಾತ್ರ ಉಳಿದರೆ ಸಾಕೇ?’
ಜಾಗತಿಕ ತಾಪಮಾನ ಹೆಚ್ಚಳದಿಂದ ಪ್ರಪಂಚದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಕಾರಣ ಸ್ಥಳೀಯವಲ್ಲ. ಕಾರಣಗಳೂ ಜಾಗತಿಕ ಮಟ್ಟದ್ದೇ ಆಗಿವೆ. ಪಡುವಣ ಘಟ್ಟದಂತಹ ಕೆಲವು ಪ್ರದೇಶಗಳಲ್ಲಿ ಮಾತ್ರಪರಿಸರ ಇರುವುದಲ್ಲ; ಅಥವಾ ಅದನ್ನು ಬೇಲಿ ಹಾಕಿ ಉಳಿಸಿಬಿಟ್ಟರೆ ಪ್ರಪಂಚ ಉಳಿಯುವುದಿಲ್ಲ. ಪ್ರಪಂಚ ಉಳಿಯಬೇಕು ಅಂದರೆ ಪಡುವಣ ಘಟ್ಟವೂ ಉಳಿಯಬೇಕು, ಬೆಂಗಳೂರು ತರಹದ ನಗರಗಳು ಕೂಡ ಪರಿಸರ ಪೂರಕ ಅಭಿವೃದ್ಧಿಗೆ ಹೊರಳಿಕೊಳ್ಳಬೇಕು.
ನಮ್ಮಲ್ಲಿ ಒಂದು ಆಸ್ಪತ್ರೆ, ಒಂದು ಮೆಸ್ಕಾಂ ಘಟಕ, ಬಸ್ ಡಿಪೋ ಕಟ್ಟಲು ಕಂದಾಯ ಜಾಗವಿಲ್ಲ. ಹಾಡ್ಯದಲ್ಲಿ ಮಾಡಿಕೊಂಡಿರುವ ಜಮೀನಿಗೆ ದಾಖಲೆ ಪತ್ರಗಳಿಲ್ಲ, ನಾವು ಕೇಳದೆಯೇ ಮಾಡಿದ ರಾಷ್ಟ್ರೀಯ ಹೆದ್ದಾರಿ ನಮ್ಮೂರನ್ನು ದಾಟಿ ಹೋಗುತ್ತದೆ. ಅದನ್ನು ಬೇಕಾದಷ್ಟು ಅಗಲ ಕೂಡ ಮಾಡುತ್ತಿಲ್ಲ, ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿ ಇರುವ ಸೇತುವೆಗಳು ಕೂಡ ದುರಸ್ತಿ ಆಗುತ್ತಿಲ್ಲ. ಹೀಗಿರುವಾಗ ಇನ್ನಷ್ಟು ವರದಿ ಸಿದ್ಧಪಡಿಸಿ ನಮ್ಮನ್ನು ಏನೋ ಮಾಡಲು ಹೊರಟಿದ್ದಾರೆ ಅನ್ನುವ ಆತಂಕ ಬರುವುದು ಸಹಜ ಅಲ್ಲವೇ?
ಕ್ರುಶಿಕ ಎ. ವಿ.,ಮಠದಗದ್ದೆ, ಶೃಂಗೇರಿ
‘ಜನರಲ್ಲಿ ಭರವಸೆ ಮೂಡಿಸಿ’
ವಿನಾಶಕಾರಿ ಅಭಿವೃದ್ಧಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಪರಿಸರವನ್ನು ಉಳಿಸಲು ಸೂಕ್ಷ್ಮ ಪ್ರದೇಶ ಘೋಷಣೆ ಆಗಲೇಬೇಕಿದೆ. ಆದರೆ ಈಗ ಹೊರಡಿಸಲಾಗಿರುವ ಕರಡು ಅಧಿಸೂಚನೆಯು ಅಲ್ಲಿನ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸುವ ಕ್ರಮಗಳನ್ನು ಮಾತ್ರ ಸೂಚಿಸಿದೆ.ಪಶ್ಚಿಮ ಘಟ್ಟ ಪ್ರದೇಶದ ಪರಿಸರ ರಕ್ಷಣೆ ಆಗಬೇಕೆಂದರೆ ಗಾಡ್ಗೀಳ್ ವರದಿಯಲ್ಲಿ ಉಲ್ಲೇಖಿಸಿರುವಂತೆ ಸ್ಥಳೀಯ ಜನಸಮುದಾಯವನ್ನು ಒಳಗೊಳ್ಳುವ ಪರಿಸರ ಸಂರಕ್ಷಣಾ ಮಾದರಿಗಳನ್ನು ಅನುಸರಿಸಬೇಕಿದೆ. ಅಲ್ಲಿ ಬದುಕು ಕಟ್ಟಿಕೊಂಡಿರುವ ಜನರಿಗೆ ಪರಿಸರ ಸಂರಕ್ಷಣೆಯ ಲಾಭಗಳು ದೊರಕುವಂತಾಗಬೇಕು. ಅಲ್ಲದೇ ಪರಿಸರ ಸಂರಕ್ಷಣಾ ಕ್ರಮಗಳು ತಮ್ಮ ಬದುಕನ್ನು ಕಿತ್ತುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ಅಲ್ಲಿನ ನಿವಾಸಿಗಳಲ್ಲಿ ಮೂಡಿಸುವ ಅಗತ್ಯವಿದೆ.ಸ್ಥಳೀಯ ಜನಸಮುದಾಯಗಳನ್ನು ಒಳಗೊಳ್ಳುವ ಸಮಗ್ರ ಪರಿಸರ ಸಂರಕ್ಷಣಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದರೆ ಮಾತ್ರ ಪಶ್ಚಿಮ ಘಟ್ಟದ ಪರಿಸರವನ್ನು ಉಳಿಸಿಕೊಳ್ಳಬಹುದಾಗಿದೆ.
ಗುರುಮೂರ್ತಿ,ಜೋಗಿಬೈಲು
‘ಜನರಿಗೆ ಮಾಹಿತಿ ಕೊಡಿ’
ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ,ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಎಷ್ಟೋ ಜನರ ಜೀವನ ವ್ಯವಸಾಯದ ಮೇಲೆ ಅವಲಂಬಿತ. ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದ ಕೆಲವೇ ವರ್ಷಗಳಲ್ಲಿ ಅವರನ್ನು ಒಕ್ಕಲೆಬ್ಬಿಸುವ ಕಾರ್ಯ ಶುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪಶ್ಚಿಮ ಘಟ್ಟ ಪ್ರದೇಶಗಳಿಗೆ ಭೇಟಿ ಕೊಟ್ಟು, ಅಲ್ಲಿನ ಜನರ ಜೀವನವನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಬೇಕು. ಸೂಕ್ಷ್ಮ ಪ್ರದೇಶ ಎಂದರೆ ಏನೆಂದು ಜನರಿಗೆ ತಿಳಿದಿಲ್ಲ. ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಅಗತ್ಯವೂ ಇದೆ.
ಸುಧೀರ್ ಜೈನ್,ಕಾರ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.