ADVERTISEMENT

ಆಳ-ಅಗಲ: ಬಿಟ್‌ಕಾಯಿನ್ ಮಾಯಾಬಜಾರ್, ಏನಿದು ಡಿಜಿಟಲ್‌ ಕರೆನ್ಸಿ? ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 21:30 IST
Last Updated 11 ನವೆಂಬರ್ 2021, 21:30 IST
ಬಿಟ್‌ಕಾಯಿನ್
ಬಿಟ್‌ಕಾಯಿನ್   

ಬಿಟ್‌ಕಾಯಿನ್ ಎಂದರೇನು?

ಬಿಟ್‌ಕಾಯಿನ್ ಎಂಬುದು ವರ್ಚ್ಯುವಲ್ ಸ್ವರೂಪದ, ಅಂದರೆ ಡಿಜಿಟಲ್ ರೂಪದಲ್ಲಿರುವ ನಗದು. ಇದು ವಿಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಯಾವುದೇ ಮಧ್ಯವರ್ತಿ ಬ್ಯಾಂಕ್‌ನ ನೆರವಿಲ್ಲದೇ ಬಿಟ್‌ಕಾಯಿನ್‌ಗಳ ಖರೀದಿ, ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಇದು ಕ್ರಿಪ್ಟೋಗ್ರಫಿ ಎಂಬ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುವ ಸುರಕ್ಷಿತ ವ್ಯವಸ್ಥೆ ಎಂದು ಹೇಳಲಾಗುತ್ತಿದೆ.

ಸಾವಿರಾರು ಕ್ರಿ‌ಪ್ಟೋಕರೆನ್ಸಿಗಳು ಮಾರುಕಟ್ಟೆಯಲ್ಲಿದ್ದರೂ,ಹಲವು ಕರೆನ್ಸಿಗಳು ಬಿಟ್‌ಕಾಯಿನ್‌ನ ಪಡಿಯಚ್ಚಿನಂತಿದ್ದರೂ, ಬಿಟ್‌ಕಾಯಿನ್ ಗಳಿಸಿರುವ ಜನಪ್ರಿಯತೆಯ ಮಟ್ಟವನ್ನು ತಲುಪಲು ಯಾವುದರಿಂದಲೂ ಸಾಧ್ಯವಾಗಿಲ್ಲ. ಇದಕ್ಕೆ ಬಿಟ್‌ಕಾಯಿನ್‌ನ ಅನನ್ಯ ತಂತ್ರಜ್ಞಾನ ಹಾಗೂ ಸುರಕ್ಷತಾ ವಿಧಾನಗಳು ಕಾರಣ.

ADVERTISEMENT

ಪ್ರತೀ ಬಿಟ್‌ಕಾಯಿನ್‌ ವಹಿವಾಟು ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಿರುವಂತೆ ಈ ತಂತ್ರಜ್ಞಾನ ರೂಪಿಸಲಾಗಿದೆ. ಏನು ವಾಹಿವಾಟು ನಡೆಯುತ್ತಿದೆ ಎಂಬ ಪ್ರತಿ ಅಂಶವೂ ದಾಖಲಾಗುತ್ತಾ ಹೋಗುತ್ತದೆ. ಪ್ರತಿಯೊಬ್ಬರಿಗೂ ಈ ಮಾಹಿತಿ ಸಿಗುವ ವ್ಯವಸ್ಥೆ ರೂಪಿಸಲಾಗಿದ್ದು, ಬಿಟ್‌ಕಾಯಿನ್‌ಗಳನ್ನು ನಕಲು ಮಾಡಲು ಸಾಧ್ಯವಿಲ್ಲ.

ಇದು ಚಿನ್ನದಷ್ಟೇ ಮೌಲ್ಯಯುತವಾದದ್ದು ಎಂಬುದು ತಜ್ಞರ ಅಭಿಮತ. 2009ರಲ್ಲಿ ಬಿಟ್‌ಕಾಯಿನ್ ಆರಂಭವಾದ ಬಳಿಕ ಇದರ ಮೌಲ್ಯ ಹೆಚ್ಚುತ್ತಾ ಹೋಯಿತು.₹6,900ಕ್ಕೆ ಲಭ್ಯವಿದ್ದ ಒಂದು ಬಿಟ್‌ಕಾಯಿನ್ ಬೆಲೆ 2021ರ ಅಕ್ಟೋಬರ್ 26ರಂದು ಸುಮಾರು ₹46 ಲಕ್ಷಕ್ಕೆ ತಲುಪಿರುವುದು, ಬಿಟ್‌ಕಾಯಿನ್‌ನ ಜನಪ್ರಿಯತೆ ಹಾಗೂ ಮಾರುಕಟ್ಟೆಯ ಗಾತ್ರವನ್ನು ಸೂಚಿಸುತ್ತದೆ.

ಏನಿದು ಡಿಜಿಟಲ್ ವ್ಯಾಲೆಟ್‌?

ಪ್ರತಿಯೊಂದು ಬಿಟ್‌ಕಾಯಿನ್ ಒಂದು ಕಂಪ್ಯೂಟರ್ ಕಡತ (ಫೈಲ್) ಇದ್ದಂತೆ. ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಆ್ಯಪ್‌ನಲ್ಲಿರುವ ‘ಡಿಜಿಟಲ್ ವ್ಯಾಲೆಟ್‌’ನಲ್ಲಿ ಸಂಗ್ರಹಿಸಲಾಗಿರುತ್ತದೆ. ಜನರು ತಮ್ಮಲ್ಲಿರುವ ಬಿಟ್‌ಕಾಯಿನ್ ಅನ್ನು ಮತ್ತೊಬ್ಬರ ಡಿಜಿಟಲ್ ವ್ಯಾಲೆಟ್‌ಗೆ ರವಾನಿಸಬಹುದು. ಅವರು ಮತ್ತೊಬ್ಬರಿಗೆ ಅದನ್ನು ವರ್ಗಾಯಿಸಬಹುದು. ಈ ಎಲ್ಲ ಪ್ರಕ್ರಿಯೆಗಳೂ ‘ಬ್ಲಾಕ್‌ಚೈನ್’ ಎಂಬ ಡಿಜಿಟಲ್‌ ರೂಪದ ದಾಖಲಾತಿಯಲ್ಲಿ ಸಂಗ್ರಹವಾಗುತ್ತವೆ. ಬಿಟ್‌ ಕಾಯಿನ್‌ ಅನ್ನು ಯಾರು ಯಾರಿಗೆ ಮಾರಾಟ ಮಾಡಿದರು ಅಥವಾ ವರ್ಗಾಯಿಸಿದರು ಎಂಬ ಮಾಹಿತಿ ಬ್ಲಾಕ್‌ಚೈನ್‌ನಲ್ಲಿ ಸಿಗುತ್ತದೆ. ಯಾರು ಬೇಕಾದರೂ ಇದನ್ನು ಪರಿಶೀಲಿಸಬಹುದು.

ಬ್ಲಾಕ್‌ಚೈನ್ ಎಂದರೇನು?

ಬ್ಲಾಕ್‌ಚೈನ್‌ ಎಂಬುದು ಬಿಟ್‌ಕಾಯಿನ್‌ ದತ್ತಾಂಶಗಳನ್ನು ಒಳಗೊಂಡ ಮೂಟೆ. ಪ್ರತಿಯೊಂದು ಬಿಟ್‌ ಕಾಯಿನ್‌ ಮಾರಾಟ/ಖರೀದಿ/ವರ್ಗಾವಣೆಯ ದಿನಾಂಕ, ಸಮಯ, ಮೌಲ್ಯ, ಖರೀದಿದಾರ ಮತ್ತು ಮಾರಾಟಗಾರ ಮತ್ತು ಪ್ರತೀ ವಹಿವಾಟಿಗೆ ನೀಡಲಾಗುವ ಕೋಡ್ ಮೊದಲಾದ ಅಂಶಗಳು ಘಟಕಗಳ ರೂಪದಲ್ಲಿ (ಬ್ಲಾಕ್‌) ದಾಖಲಾಗಿರುತ್ತವೆ. ಇಲ್ಲಿ ದಾಖಲಾಗುವ ಪ್ರತಿಯೊಂದು ಘಟಕಗಳನ್ನು ಕಾಲಾನುಕ್ರಮದಲ್ಲಿ ಒಟ್ಟಿಗೆ ಜೋಡಿಸಿದಾಗ, ಅದು ಡಿಜಿಟಲ್ ಸರಪಳಿ ಅಥವಾ ಬ್ಲಾಕ್‌ಚೈನ್ ಆಗುತ್ತದೆ.ಬ್ಲಾಕ್‌ಚೈನ್‌ ಎಂಬುದು ಕ್ರಿಪ್ಟೋಕರೆನ್ಸಿ ವಹಿವಾಟಿನ ಸಾರ್ವಜನಿಕ ಲೆಡ್ಜರ್ ಆಗಿ ಕಾರ್ಯನಿರ್ವಹಿಸುತ್ತದೆ.

ಹೂಡಿಕೆಯ ಮಾರ್ಗ

ಬಿಟ್‌ಕಾಯಿನ್ ಖರೀದಿ ಮಾಡಬೇಕಾದರೆ, ಆನ್‌ಲೈನ್‌ನಲ್ಲಿ ಖಾತೆ ತೆರೆದು, ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್‌ ಮೂಲಕ ಖರೀದಿ ಮಾಡಬಹುದು. ಗುರುತಿನ ದಾಖಲೆಗಳನ್ನು ಒದಗಿಸಬೇಕು. ಬಿಟ್‌ಕಾಯಿನ್ ಖರೀದಿಗೆ ಲಕ್ಷಾಂತರ ರೂಪಾಯಿ ಬೇಕಿಲ್ಲ. ನೂರು ರೂಪಾಯಿ ಹೂಡಿಕೆ ಮಾಡಿ ಬಿಟ್‌ಕಾಯಿನ್‌ನ ಒಂದು ಭಾಗವನ್ನು ಖರೀದಿ ಮಾಡಬಹುದು.

ಷೇರು ಮತ್ತು ಬಾಂಡ್‌ಗಳಂತೆಯೇ, ಬಿಟ್‌ಕಾಯಿನ್ ಪರ್ಯಾಯ ಹೂಡಿಕೆ ಮಾರ್ಗವಾಗಿ ಬಳಕೆಯಾಗುತ್ತಿದೆ. ಸರಕು ಖರೀದಿ ಮತ್ತು ಸೇವೆಗಳನ್ನು ಪಡೆದಾಗ, ಬಿಟ್‌ಕಾಯಿನ್‌ ರೂಪದಲ್ಲಿ ಹಣ ಪಾವತಿಸಬಹುದು. ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುವ ಮಾರಾಟಗಾರರ ಸಂಖ್ಯೆ ಸೀಮಿತವಾಗಿದ್ದರೂ, ಅವರ ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಿದೆ.ಮೈಕ್ರೋಸಾಫ್ಟ್, ಪೇಪಾಲ್ ಮೊದಲಾದ ಕಂಪನಿಗಳು ಬಿಟ್‌ಕಾಯಿನ್ ರೂಪದಲ್ಲಿ ಪಾವತಿ ಸ್ವೀಕರಿಸುತ್ತಿವೆ. ಕೆಲವು ಸಣ್ಣ ಸ್ಥಳೀಯ ಚಿಲ್ಲರೆ ವ್ಯಾಪಾರಿಗಳು ಅಥವಾ ಕೆಲವು ವೆಬ್‌ಸೈಟ್‌ಗಳು ಸಹ ಬಿಟ್‌ಕಾಯಿನ್ ತೆಗೆದುಕೊಳ್ಳಲು ಶುರು ಮಾಡಿದ್ದು, ಇದರ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ.

ಭಾರತದಲ್ಲಿ ಕ್ರಿಪ್ಟೋ ಹಣಕ್ಕೆ ತೆರಿಗೆ?

ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಅವಕಾಶ ನೀಡಬಾರದು ಎಂಬುದಾಗಿ 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ಹೇರಿತ್ತು. ಆದರೆ 2020ರಲ್ಲಿ ಇದಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಆನ್‌ಲೈನ್ ವಹಿವಾಟಿಗೆ ಅವಕಾಶ ನೀಡಿತ್ತು.

ಕ್ರಿಪ್ಟೋಕರೆನ್ಸಿಗೆ ದೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲದಿದ್ದರೂ, ಕಂಪನಿಗಳು ಕ್ರಿಪ್ಟೋಕರೆನ್ಸಿ ಮೂಲಕ ಗಳಿಸಿದ ಹಣ ಅಥವಾ ನಷ್ಟದ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ. ಕಂಪನಿಗಳು ತಮ್ಮಲ್ಲಿರುವ ಕ್ರಿಪ್ಟೋಕರೆನ್ಸಿಯ ಮೌಲ್ಯವನ್ನು ಬ್ಯಾಲೆನ್ಸ್‌ಶೀಟ್‌ನಲ್ಲಿ ನಮೂದಿಸಬೇಕಿದೆ.

ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ–2021 ಅನ್ನು ಸಂಸತ್ತಿನಲ್ಲಿ ಸರ್ಕಾರ ಮಂಡಿಸಿದ್ದು, ಚಳಿಗಾಲದ ಅಧಿವೇಶನದಲ್ಲಿ ಅದು ಚರ್ಚೆಗೆ ಬರಲಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಜನರು ತಾವು ಹೊಂದಿರುವ ಕ್ರಿಪ್ಟೋಕರೆನ್ಸಿ ಮಾಹಿತಿಯನ್ನು ನೀಡಬೇಕು ಎಂಬ ಅಂಶವೂ ಮಸೂದೆಯಲ್ಲಿ ಇದೆ ಎನ್ನಲಾಗಿದೆ. ಈಗ, ಆದಾಯ ತೆರಿಗೆ ಕಾಯ್ದೆಯಲ್ಲಿ ಕ್ರಿಪ್ಟೋಕರೆನ್ಸಿಗೆ ತೆರಿಗೆ ಇಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ತೆರಿಗೆ ಹಾಕುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಬಿಟ್‌ಕಾಯಿನ್ ಮೈನಿಂಗ್

ಯಾವುದೇ ಕ್ರಿಪ್ಟೋಕರೆನ್ಸಿಯ ವಹಿವಾಟು ಪೂರ್ಣವಾಗಬೇಕಾದರೆ, ಅದನ್ನು ತಜ್ಞರು ಅನುಮೋದಿಸಬೇಕು. ಬಿಟ್‌ಕಾಯಿನ್ ಸಹ ಈ ಪ್ರಕ್ರಿಯೆಯಿಂದ ಹೊರತಲ್ಲ. ಹೀಗೆ ಬಿಟ್‌ಕಾಯಿನ್ ವಹಿವಾಟನ್ನು ಅನುಮೋದಿಸುವ ಕ್ರಿಯೆಯನ್ನು ಬಿಟ್‌ಕಾಯಿನ್ ಮೈನಿಂಗ್ ಎಂದು, ಈ ಕೆಲಸ ಮಾಡುವವರನ್ನು ಬಿಟ್‌ಕಾಯಿನ್ ಮೈನರ್ ಎಂದು ಕರೆಯಲಾಗುತ್ತದೆ. ಅನುಮೋದಿಸುವ ಈ ಕೆಲಸಕ್ಕೆ ಪ್ರತಿಯಾಗಿ, ಮೈನರ್‌ಗಳ ವಾಲೆಟ್‌ನಲ್ಲಿ ಹೊಸ ಬಿಟ್‌ಕಾಯಿನ್‌ಗಳು ಸೃಷ್ಟಿಯಾಗುತ್ತವೆ. ಆ ಬಿಟ್‌ಕಾಯಿನ್‌ಗಳು ಚಲಾವಣೆಗೆ ಬರುತ್ತವೆ.

ಬಿಟ್‌ಕಾಯಿನ್‌ನಲ್ಲಿ ವಹಿವಾಟು ನಡೆಸುವವರು ತಾವು ಪಡೆದ ಸೇವೆ ಅಥವಾ ಸರಕಿಗೆ ಪ್ರತಿಯಾಗಿ ಬಿಟ್‌ಕಾಯಿನ್‌ ರೂಪದಲ್ಲಿ ಹಣ ಪಾವತಿ ಮಾಡುತ್ತಾರೆ. ಆ ಹಣವನ್ನು ಯಾರಿಗೆ ಕೊಡಬೇಕೊ ಅವರ ಬಿಟ್‌ಕಾಯಿನ್ ವಾಲೆಟ್‌ನ ವಿಳಾಸವನ್ನು ನಮೂದಿಸಿ ಬಿಟ್‌ಕಾಯಿನ್ ವರ್ಗಾಯಿಸುತ್ತಾರೆ.

ಪ್ರತ್ಯೇಕ ವಿಳಾಸ ಮತ್ತು ಡಬಲ್ ಸ್ಪೆಂಡಿಂಗ್

ಪ್ರತೀ ಬಿಟ್‌ಕಾಯಿನ್‌ಗೆ ಮತ್ತು ಪ್ರತೀ ಬಿಟ್‌ಕಾಯಿನ್ ವಹಿವಾಟಿಗೆ ಒಂದು ವಿಳಾಸ ಇರುತ್ತದೆ. ಆ ವಿಳಾಸದಲ್ಲಿ ಇರುವ ಬಿಟ್‌ಕಾಯಿನ್‌ನ ಮೌಲ್ಯದಷ್ಟು ಹಣವನ್ನಷ್ಟೇ ವರ್ಗಾವಣೆ ಮಾಡಲು ಸಾಧ್ಯ. ಆ ಬಿಟ್‌ಕಾಯಿನ್‌ ಅನ್ನು ಈ ಹಿಂದೆ ಯಾರಿಗೆಲ್ಲಾ ವರ್ಗಾವಣೆ ಮಾಡಲಾಗಿದೆ ಮತ್ತು ಎಷ್ಟು ಬಾರಿ ವರ್ಗಾವಣೆ ಮಾಡಲಾಗಿದೆ ಎಂಬುದರ ವಿವರ ಆ ವಿಳಾಸದಲ್ಲಿ ಇರುತ್ತದೆ. ಮತ್ತು ಈ ಎಲ್ಲಾ ವಿವರ ಬ್ಲಾಕ್‌ಚೈನ್‌ನಲ್ಲಿ ದಾಖಲಾಗಿರುತ್ತದೆ. ಆ ವಿಳಾಸದಲ್ಲಿ ಇರುವ ಬಿಟ್‌ಕಾಯಿನ್‌ನ ಮೌಲ್ಯವೂ ಅದರಲ್ಲಿ ದಾಖಲಾಗಿರುತ್ತದೆ. ಬ್ಯಾಕ್‌ಚೈನ್‌ನಲ್ಲಿ ಇರುವ ವಿಳಾಸವು 64 ಅಕ್ಷರ ಮತ್ತು ಅಂಕೆಗಳ ಸಂಯೋಜನೆ. ಉದಾಹರಣೆಗೆ:00000000 00000000057fcc708cf0130d95e27c5819203e9f967ac56e4df598ee

ಬಿಟ್‌ಕಾಯಿನ್ ಈ ರೀತಿಯ ಕೋಡ್‌ ರೂಪದ ಹಣ. ಒಬ್ಬ ವ್ಯಕ್ತಿಯು, ಒಂದೇ ಕೋಡ್‌ ವಿಳಾಸವನ್ನು ಇಬ್ಬರು ವ್ಯಕ್ತಿಗಳಿಗೆ ನೀಡಲುಸಾಧ್ಯವಿದೆ. ಆದರೆ ಅದರಲ್ಲಿ ಒಬ್ಬರಿಗೆ ಮಾತ್ರವೇ ಆ ಹಣ ವರ್ಗಾವಣೆಯಾಗುತ್ತದೆ. ಹೀಗೆ ಒಂದೇ ಕೋಡ್‌ ವಿಳಾಸವನ್ನು ಇಬ್ಬರಿಗೆ ನೀಡುವುದು ವಂಚನೆ. ಉದಾಹರಣೆಗೆ,‘ಎ’ ವ್ಯಕ್ತಿಯು ಬಿಟ್‌ಕಾಯಿನ್ ರೂಪದಲ್ಲಿ ಹಣವನ್ನು ‘ಬಿ’ ಎಂಬ ವ್ಯಕ್ತಿಗೆ ವರ್ಗಾಯಿಸುತ್ತಾನೆ. ಇದು ಕೋಡ್‌ ರೂಪದಲ್ಲಿ ಇರುವ ಹಣವಾದ ಕಾರಣ ಅದೇ ಕೋಡ್‌ ಅನ್ನು ‘ಎ’ ವ್ಯಕ್ತಿಯು, ‘ಸಿ’ ಎಂಬ ಬೇರೊಬ್ಬ ವ್ಯಕ್ತಿಗೂ ವರ್ಗಾಯಿಸಬಹುದು. ಈ ರೀತಿ ಒಂದೇ ಬಿಟ್‌ಕಾಯಿನ್‌ ಅನ್ನು ಇಬ್ಬರಿಗೆ ಅಥವಾ ಅದಕ್ಕಿಂತಲೂ ಹೆಚ್ಚು ಜನರಿಗೆ ವರ್ಗಾವಣೆ ಮಾಡುವುದನ್ನು ‘ಡಬಲ್ ಸ್ಪೆಂಡಿಂಗ್’ ಎನ್ನುತ್ತಾರೆ. ‘ಡಬಲ್ ಸ್ಪೆಂಡಿಂಗ್’ ಮೂಲಕ ವಂಚನೆ ಎಸಗುವುದನ್ನು ತಡೆಯಲು ಇರುವ ವ್ಯವಸ್ಥೆಯೇ ಮೈನಿಂಗ್.

ವಹಿವಾಟು ಆರಂಭ, ಪರಿಶೀಲನೆ ಮತ್ತು ಪೂರ್ಣ

ಒಬ್ಬ ವ್ಯಕ್ತಿಯು ತನ್ನಲ್ಲಿದ್ದ ಬಿಟ್‌ಕಾಯಿನ್‌ ಕೋಡ್‌ ಅನ್ನು ಇನ್ನೊಬ್ಬರಿಗೆ ನೀಡಿ, ನಿಗದಿತ ಮೊತ್ತವನ್ನು ವರ್ಗಾಯಿಸಬಹುದು. ಈ ಕೋಡ್‌ನಲ್ಲಿ ನಿಗದಿತ ಮೊತ್ತ ಇದೆಯೇ ಎಂಬುದನ್ನು ಮೈನರ್‌ಗಳು ಪರಿಶೀಲಿಸುತ್ತಾರೆ. ಆ ಮೊತ್ತ ಇದ್ದರಷ್ಟೇ ಅನುಮೋದಿಸುತ್ತಾರೆ.ಆಗ ಆ ಬಿಟ್‌ಕಾಯಿನ್, ಇನ್ನೊಬ್ಬ ವ್ಯಕ್ತಿಯ ವಾಲೆಟ್‌ಗೆ ಸೇರುತ್ತದೆ. ಅಲ್ಲಿಗೆ ವಹಿವಾಟು ಪೂರ್ಣವಾಗುತ್ತದೆ.

ಹೀಗೆ ಪ್ರತೀ ವಹಿವಾಟನ್ನು ಅನುಮೋದಿಸಲು 15–20 ನಿಮಿಷ ಬೇಕಾಗುತ್ತದೆ. ಬಿಟ್‌ಕಾಯಿನ್ ಚಲಾವಣೆಗೆ ಬಂದಾಗಿನಿಂದ ಆಗಿರುವ ಎಲ್ಲಾ ವಹಿವಾಟುಗಳನ್ನು ಪರಿಶೀಲಿ‌ಸಿ, ಪ್ರತೀ ಹೊಸ ವಹಿವಾಟನ್ನು ಅನುಮೋದಿಸಬೇಕಾಗುತ್ತದೆ. ಇದಕ್ಕಾಗಿ ಪ್ರಬಲ ಮತ್ತು ದುಬಾರಿ ಕಂಪ್ಯೂಟರ್‌ಗಳು ಬೇಕಾಗುತ್ತವೆ. ಈ ಕಾರ್ಯಕ್ಕೆ ಹೆಚ್ಚು ವಿದ್ಯುತ್ ಬೇಕಾಗುತ್ತದೆ. ಈಗ ಇರುವ ಕೋಟ್ಯಂತರ ಮೈನರ್‌ಗಳ ಜತೆ ಪೈಪೋಟಿ ನಡೆಸಿ, ವಹಿವಾಟನ್ನು ಅನುಮೋದಿಸುವ ಕೆಲಸ ಮಾಡಬೇಕಾಗುತ್ತದೆ. ಅಷ್ಟು ಚಾಕಚಕ್ಯತೆ ಇದ್ದರಷ್ಟೇ ಮೈನರ್ ಆಗಿ ಕೆಲಸ ಮಾಡಲು ಸಾಧ್ಯ.

ಆಧಾರ: ಬಿಬಿಸಿ, ಫೋರ್ಬ್ಸ್‌,ಬಿಟ್‌ಕಾಯಿನ್.ಒಆರ್‌ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.