ADVERTISEMENT

ಆಳ-ಅಗಲ: ಹಸಿರು ಪಟಾಕಿಗಷ್ಟೇ ಅಸ್ತು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 22:30 IST
Last Updated 3 ನವೆಂಬರ್ 2021, 22:30 IST
ಪಟಾಕಿ
ಪಟಾಕಿ   

ದೇಶದಲ್ಲಿ ಸಾಮಾನ್ಯ ಪಟಾಕಿಗಳನ್ನು ನಿಷೇಧಿಸಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ 2018ರಲ್ಲೇ ಆದೇಶ ನೀಡಿತ್ತು. ಆದರೆ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ತನ್ನ ಆದೇಶವನ್ನು ಸಂಪೂರ್ಣವಾಗಿ ಮತ್ತು ಯಥಾವತ್ತಾಗಿ ಜಾರಿಗೆ ತರುವಂತೆ ಎಂದು ಸರ್ಕಾರಗಳಿಗೆ ಸೂಚಿಸಿತ್ತು.

‘ಪಟಾಕಿಗಳಿಂದ ವಾಯುಮಾಲಿನ್ಯ ಹೆಚ್ಚುತ್ತದೆ. ಇದನ್ನು ತಡೆಗಟ್ಟಿ, ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ’ ಎಂದು ದೆಹಲಿಯ ಬಾಲಕನೊಬ್ಬ ತನ್ನ ಪೋಷಕರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದ. ಆತನ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌, ಸಾಮಾನ್ಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು 2018ರ ಸಾಲಿನ ದೀಪಾವಳಿ ಹಬ್ಬಕ್ಕೂ ಮುನ್ನ ನಿಷೇಧಿಸಿತ್ತು. ಮತ್ತು ಕೇವಲ ಹಸಿರು ಪಟಾಕಿಗಳನ್ನು ಬಳಸಬಹುದು ಎಂದು ಆದೇಶಿಸಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿತು.

‘ಪಟಾಕಿ ಬಳಕೆಯ ನಂತರ ದೆಹಲಿಯಲ್ಲಿ ವಾತಾವರಣ ಮತ್ತು ವಾಯು ಗುಣಮಟ್ಟ ಎಷ್ಟು ಕುಸಿಯುತ್ತದೆ ಎಂಬುದನ್ನು ಎಲ್ಲರೂ ಗಮನಿಸಿದ್ದೀರಿ. ನಮಗೆ ಜನರ ಆರೋಗ್ಯವೇ ಮುಖ್ಯ. ಪಟಾಕಿ ಬಳಕೆಯಿಂದ ಜನರ ಆರೋಗ್ಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಹೀಗಾಗಿ ಪಟಾಕಿ ನಿಷೇಧವನ್ನು ತೆರವು ಮಾಡಲು ಸಾಧ್ಯವಿಲ್ಲ. ಕೆಲವರ ಮನೋರಂಜನೆಗಾಗಿ ದೇಶದ ಕೋಟ್ಯಂತರ ಜನರ ಆರೋಗ್ಯವನ್ನು ಬಲಿ ನೀಡಲು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿತ್ತು.

ADVERTISEMENT

ಸುಪ್ರೀಂ ಕೋರ್ಟ್‌ನ ಈ ಆದೇಶಕ್ಕೂ ಮುನ್ನ ದೇಶದ ಏಳು ರಾಜ್ಯಗಳು ಮತ್ತು ದೆಹಲಿ ಎಲ್ಲಾ ಸ್ವರೂಪದ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ, ಈ ಸಂಪೂರ್ಣ ನಿಷೇಧವನ್ನೂ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಹೀಗಾಗಿ ಈ ರಾಜ್ಯಗಳಲ್ಲೂ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ದೊರೆತಿದೆ. ಆದರೆ ಹಬ್ಬದ ದಿನಗಳಲ್ಲಿ ಸಂಜೆ 2 ತಾಸು ಮಾತ್ರ ಪಟಾಕಿ ಸುಡಬೇಕು, ಸಿಡಿಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ಆದೇಶವನ್ನು ಅನುಷ್ಠಾನಕ್ಕೆ ತರುವ ಹೊಣೆ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ.

ಮಾರಾಟ–ಖರೀದಿಗೆ ನಿಯಮ ಪಾಲನೆ ಕಡ್ಡಾಯ

ಹಸಿರು ಪಟಾಕಿಗೆ ಅವಕಾಶವಿದ್ದರೂ ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ಪಟಾಕಿ ಸಿಡಿಸಲು ಒಲವು ತೋರಿರಲಿಲ್ಲ. ಕೋವಿಡ್‌ ಪರಿಸ್ಥಿತಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಮತ್ತೆ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಜನರು ದೀಪಾವಳಿ ಸೇರಿದಂತೆ ಸಾಲು ಹಬ್ಬಗಳ ಸಡಗರದಲ್ಲಿದ್ದಾರೆ. ಪಟಾಕಿ ಮಾರಾಟಗಾರರು ಹಾಗೂ ಸಾರ್ವಜನಿಕರು, ಈ ಸಂಭ್ರಮದಲ್ಲಿ ಮೈಮರೆತರೆ ಮತ್ತೊಂದು ಬಿಕ್ಕಟ್ಟು ಎದುರಿಸಬೇಕಾದೀತು ಎಂಬ ಎಚ್ಚರಿಕೆಯಲ್ಲಿ, ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲನೆಯೊಂದಿಗೆ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿ ಹೊರಡಿಸಿವೆ. ಆ ಪ್ರಕಾರ, ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10ರವರೆಗೆ ಪಟಾಕಿ ಸಿಡಿಸಲು ಅವಕಾಶವಿದೆ, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55ರಿಂದ 12.30ರವರೆಗೆ, 35 ನಿಮಿಷಗಳ ಅವಕಾಶ ನೀಡಲಾಗಿದೆ.

ಈ ಸಂಬಂಧ ಆಯಾ ರಾಜ್ಯಗಳೂ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿವೆ.

ಆದರೆ, ವಾಯು ಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿಯಲ್ಲಿ ಸೆ.28ರಿಂದ ಜನವರಿ 1, 2022ರವರೆಗೆ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಚಂಡೀಗಡದಲ್ಲೂ ಸಂಪೂರ್ಣವಾಗಿ ನಿಷೇಧವಿದೆ.

ಬಿಹಾರದ ಹಲವೆಡೆ, ಆಗ್ರಾದಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧವಿದೆ.

ಪಶ್ಚಿಮ ಬಂಗಾಳ, ಪಂಜಾಬ್‌ನಲ್ಲಿ ರಾತ್ರಿ 8ರಿಂದ 10ರವರೆಗೆ ಎರಡು ಗಂಟೆ ಅವಧಿಗೆ, ಹಸಿರು ಪಟಾಕಿ ಸಿಡಿಸಲು ಹಾಗೂ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55ರಿಂದ 12ರವರೆಗೆ ಅವಕಾಶ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚಾತ್‌ ಪೂಜಾ ದಿನ ಬೆಳಿಗ್ಗೆ ಎರಡು ಗಂಟೆ ಅವಕಾಶ ನೀಡಲಾಗಿದೆ.

ತಮಿಳುನಾಡು, ಅಪಾಯಕಾರಿ ಪಟಾಕಿಗಳ ತಯಾರಿಕೆ ಮತ್ತು ಮಾರಾಟ ನಿಷೇಧಿಸಿದೆ.

ಕರ್ನಾಟಕದಲ್ಲಿ ನ 1ರಿಂದ– ನ.10ರವರೆಗೆ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶವಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ.

ಪಟಾಕಿ ಮಾರಾಟಕ್ಕೆಂದು ಹಾಕಲಾದ ತಾತ್ಕಾಲಿಕ ಮಳಿಗೆಗಳು ಸಾರ್ವಜನಿಕ ವಸತಿ ಸ್ಥಳಗಳಿಂದ ದೂರ ಇರಬೇಕು. ತೆರೆದ ಮೈದಾನಗಳು ಅಥವಾ ಸಾಕಷ್ಟು ಗಾಳಿಯಾಡುವ/ ಸ್ಥಳಾವಕಾಶ ಇರಬೇಕು. ಎರಡು ಮಳಿಗೆಗಳ ನಡುವೆ ಆರು ಮೀಟರ್‌ ಅಂತರವಿರಬೇಕು.

ಅಂಗಡಿಕಾರರು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರಿಗಾಗಿ ಆರು ಅಡಿ ಅಂತರವನ್ನು ಗುರುತಿಸಬೇಕು. ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಮಾರಾಟಗಾರರು ಮತ್ತು ಗ್ರಾಹಕರು ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಪರವಾನಗಿ ಪಡೆದ ವ್ಯಕ್ತಿ ಸ್ಟಾಲ್‌ನಲ್ಲಿ ಹಾಜರಿರಬೇಕು.‌ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಕುಸಿದ ಪಟಾಕಿ ಮಾರುಕಟ್ಟೆ

ದೇಶದಲ್ಲಿ 2018ರ ನಂತರ ಪಟಾಕಿ ಮಾರಾಟ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. 2018ರಲ್ಲಿ ಹಸಿರು ಪಟಾಕಿ ಷರತ್ತಿನ ಮಧ್ಯೆಯೂ ಅಂದಾಜು ₹20,000 ಕೋಟಿ ಮೌಲ್ಯದಷ್ಟು ಪಟಾಕಿ ಮಾರಾಟವಾಗಿತ್ತು. ಅಲ್ಲಿಯವರೆಗೆ ಪ್ರತಿ ವರ್ಷ ಪಟಾಕಿ ಮಾರುಕಟ್ಟೆಯು ಶೇ 7-10ರಷ್ಟು ಏರಿಕೆ ಕಂಡಿತ್ತು. ಆದರೆ 2018ರಲ್ಲಿ ಸಾಮಾನ್ಯ ಪಟಾಕಿ ನಿಷೇಧದ ನಂತರ ಪಟಾಕಿ ಮಾರಾಟ ಕುಸಿದಿದೆ.

2019ರಲ್ಲೂ ಹಸಿರು ಪಟಾಕಿ ಮಾರಾಟ ಸಾಮಾನ್ಯ ಸ್ಥಿತಿಗೆ ಮರಳಿರಲಿಲ್ಲ. ಹಸಿರು ಪಟಾಕಿಗಳ ದರ ಹೆಚ್ಚಾದ ಕಾರಣ, ಮಾರಾಟವೂ ಕುಸಿದಿತ್ತು. 2020ರಲ್ಲಿ ಕೋವಿಡ್‌ ಲಾಕ್‌ಡೌನ್‌ ಮತ್ತು ಆರ್ಥಿಕ ಮುಗ್ಗಟ್ಟಿನ ಕಾರಣ ಪಟಾಕಿ ಮಾರಾಟ ಸಂಪೂರ್ಣ ಕುಸಿದಿತ್ತು. 2021ರಲ್ಲಿ ಪಟಾಕಿ ಮಾರಾಟವು ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿಷೇಧದಕರಿಛಾಯೆ ಮತ್ತು ಹಲವು ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ ಘೋಷಿಸಿದ್ದ ಕಾರಣ ಈ ಬಾರಿ ಪಟಾಕಿ ತಯಾರಿಕೆಯೇ ಕಡಿಮೆಯಾಗಿತ್ತು. ಹೀಗಾಗಿ ಈ ಬಾರಿಯೂ ಮಾರುಕಟ್ಟೆ ಸಾಮಾನ್ಯ ಪರಿಸ್ಥಿತಿಗೆ ಮರಳಲಿಲ್ಲ.

ದೇಶದಲ್ಲಿ ಮಾರಾಟವಾಗುವ ಒಟ್ಟು ಪಟಾಕಿಗಳಲ್ಲಿ ಶೇ 60ರಷ್ಟು ಪಟಾಕಿಯು ತಮಿಳುನಾಡಿನ ಶಿವಕಾಶಿ ಪಟ್ಟಣದಲ್ಲಿ ತಯಾರಾಗುತ್ತದೆ. ಉಳಿದಂತೆ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌ ಮತ್ತು ಪಶ್ಚಿಮ ಬಂಗಾಳದ ಕೆಲವೆಡೆ ಪಟಾಕಿ ತಯಾರಿಕಾ ಉದ್ಯಮಗಳಿವೆ. ಈಚೆಗೆ ಚೀನಾ ತಯಾರಿಕೆಯ ಪಟಾಕಿಗಳೂ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಈ ಬಾರಿ ಚೀನಾದ ಪಟಾಕಿಗಳಿಗೆ ಮಾರುಕಟ್ಟೆ ಸಂಪೂರ್ಣ ಕುಸಿದಿದೆ.

ನಿಷೇಧಕ್ಕೆ ಆಕ್ಷೇಪ

‘ಹಿಂದೂಗಳ ಹಬ್ಬಗಳನ್ನು ಗುರಿ ಮಾಡಿಕೊಂಡು ಪಟಾಕಿಯನ್ನು ನಿಷೇಧ ಮಾಡಲಾಗಿದೆ’ ಎಂಬರ್ಥದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 2018ರಿಂದಲೂ ಇಂತಹ ಸಂದೇಶಗಳು ಹರಿದಾಡುತ್ತಿವೆ. ಈ ಆದೇಶದ ವಿರುದ್ಧ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ‘ಯಾವ ಸಮುದಾಯವನ್ನೂ ಗುರಿ ಮಾಡಿಕೊಂಡು ನಾವು ಈ ಆದೇಶ ನೀಡಿಲ್ಲ. ಜನರ ಆರೋಗ್ಯವಷ್ಟೇ ಮುಖ್ಯ’ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು.

‘ಪಟಾಕಿ ನಿಷೇಧದಿಂದ ಅಂದಾಜು 4 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅವರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ’ ಎಂದು ತಮಿಳುನಾಡು ಸರ್ಕಾರವು ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿತ್ತು. ಆದರೆ ತಮಿಳುನಾಡು ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು, ನಿಷೇಧವನ್ನು ಮುಂದುವರಿಸಿತು.

ಹಸಿರು ಪಟಾಕಿಗೆ ಏಕೆ ಮಹತ್ವ?

ಹಸಿರು ಪಟಾಕಿ ಎಂಬುದು, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಪರಿಕಲ್ಪನೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ, ‘ಹಸಿರು ಪಟಾಕಿ’ ಬಳಕೆಗೆ ಅನುಮತಿ ನೀಡಲಾಗಿದೆ.

ಹಸಿರು ಪಟಾಕಿಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇದರರ್ಥ ಕಡಿಮೆ ಮಾಲಿನ್ಯ ಹೊರಸೂಸುವಿಕೆಯಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ.

ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳು ಭಿನ್ನ.ಅಲ್ಯೂಮಿನಿಯಂ, ಲಿಥಿಯಂ, ಬೇರಿಯಂ, ಸೀಸ, ಆರ್ಸೆನಿಕ್‌, ಪೊಟ್ಯಾಷಿಯಂ ನೈಟ್ರೇಟ್ ಅಥವಾ ಕಾರ್ಬನ್ ಮೊದಲಾದ ರಾಸಾಯನಿಕಗಳನ್ನು ಹಸಿರು ಪಟಾಕಿಗಳು ಹೊಂದಿರುವುದಿಲ್ಲ. ಹೀಗಾಗಿ ಇವು ಪರಿಸರದ ಮೇಲೆ ಹಾನಿ ಮಾಡಬಹುದಾದ ಹಾನಿಯ ಪ್ರಮಾಣ ಕಡಿಮೆ.

ಸರಳವಾಗಿ ಹೇಳುವುದಾದರೆ, ಹಸಿರು ಪಟಾಕಿಗಳು ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಕಡಿಮೆ ಅಪಾಯ ಉಂಟು ಮಾಡುತ್ತವೆ. ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಪಟಾಕಿಗಳಿಗೆ ಬಳಸುವ ಕಚ್ಚಾವಸ್ತುಗಳಿಗೆ ಬದಲಾಗಿ, ಪರ್ಯಾಯ ಕಚ್ಚಾ ವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ.

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ 30ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಬೇರಿಯಂ ನೈಟ್ರೇಟ್ ರಾಸಾಯನಿಕವು ಭಾರೀ ಹೊಗೆ ಹೊರಸೂಸುತ್ತದೆ. ಆದರೆ ಹಸಿರು ಪಟಾಕಿಗಳಿಗೆ ಬೇರಿಯಂ ನೈಟ್ರೇಟ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಅಥವಾ ಈ ರಾಸಾಯನಿಕ ಇಲ್ಲದೆಯೇ ಪಟಾಕಿ ತಯಾರಿಸುವುದರಿಂದ ಹೊಗೆ ಹೊರಸೂಸುವಿಕೆ ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಹಸಿರು ಪಟಾಕಿಗಳು ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಶಬ್ದ ಉತ್ಪತ್ತಿ ಪ್ರಮಾಣದಲ್ಲೂ ಗಮನಾರ್ಹ ಎನಿಸಿವೆ. ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬಲ್‌ ಶಬ್ದ ಹೊರಸೂಸುತ್ತವೆ. ಆದರೆ ಹಸಿರು ಪಟಾಕಿಗಳು 110ರಿಂದ 125 ಡೆಸಿಬಲ್‌ ಶಬ್ದ ಮಾಡುತ್ತವೆ. ಹೀಗಾಗಿ ಕಿವಿಗಳಿಗೆ ಪಟಾಕಿ ಸದ್ದಿನಿಂದ ಆಗುವ ಅಪಾಯ ಕೊಂಚ ಕಡಿಮೆಯಾಗುತ್ತದೆ.

ಹಸಿರು ಪಟಾಕಿಗಳಲ್ಲಿ ಮೂರು ವಿಧಗಳಿವೆ: ಸೇಫ್ ವಾಟರ್ ರಿಲೀಸರ್, ಸೇಫ್ ಥರ್ಮೈಟ್ ಕ್ರ್ಯಾಕರ್ ಮತ್ತು ಸೇಫ್ ಮಿನಿಮಲ್ ಅಲ್ಯೂಮಿನಿಯಂ ಕ್ರ್ಯಾಕರ್ಸ್. ಹಸಿರು ಪಟಾಕಿ ತಯಾರಕರು ಸಿಎಸ್‌ಐಆರ್–ಎನ್‌ಇಇಆರ್‌ಐ ಮಾನದಂಡಗಳ ಪ್ರಕಾರ ಉತ್ಪಾದನೆ ಮಾಡಬೇಕಾಗುತ್ತದೆ.

ಎಲ್ಲ ಅನುಕೂಲಗಳು ಕಂಡುಬಂದರೂ, ಈ ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ದುಬಾರಿಯಾಗಿವೆ. ಸರ್ಕಾರದಿಂದ ನೋಂದಣಿಯಾಗಿರುವ ಮಾರಾಟಗಾರರಿಂದ ಅಥವಾ ಆನ್‌ಲೈನ್‌ನಲ್ಲಿ ಹಸಿರು ಪಟಾಕಿ ಖರೀದಿಸಬಹುದು. ಮಾರುಕಟ್ಟೆಯಲ್ಲಿರುವ ಯಾವುದು ‘ಹಸಿರು ಪಟಾಕಿ’ ಎಂದು ಗುರುತಿಸಲು ಜನರಿಗೆ ಅನುಕೂಲವಾಗಲಿ ಎಂದು ಪೊಟ್ಟಣಗಳ ಮೇಲೆ ಲೋಗೊ ಮುದ್ರಿಸಲಾಗಿರುತ್ತದೆ. ಜೊತೆಗೆ ಕ್ಯೂಆರ್‌ ಕೋಡ್‌ ಸಹ ಇದ್ದು, ಜನರು ಅವುಗಳನ್ನು ಸ್ಕ್ಯಾನ್ ಮಾಡಿ ಗುರುತಿಸಬಹುದು.

ಹಸಿರು ಪಟಾಕಿಗಳು ಮಾಲಿನ್ಯ ತಗ್ಗಿಸುತ್ತವೆ ಎಂಬ ವಾದವನ್ನು ಪರಿಸರವಾದಿಗಳು ಒಪ್ಪುವುದಿಲ್ಲ. ‘ಶೇ 30ರಷ್ಟು ಮಾಲಿನ್ಯ ತಗ್ಗುತ್ತದೆ ಎಂಬುದು ಗಮನಾರ್ಹ ವಿಷಯವಲ್ಲ.ಪಟಾಕಿಗಳು ವಾಯು ಮಾಲಿನ್ಯಕ್ಕೆ ಕಾರಣವೆಂದು ತಿಳಿದಿದ್ದರೂ ಅವುಗಳನ್ನು ಸಿಡಿಸಲು ಏಕೆ ಅವಕಾಶ ನೀಡಲಾಗುತ್ತಿದೆ’ ಎಂದು ಅವರು ಪ್ರಶ್ನಿಸುತ್ತಾರೆ.

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.