ಲಾಕ್‌ಡೌನ್ ಅನುಭವಿಸಿ ತಿಳಿದಿದ್ದ ಜನರಲ್ಲಿ ಏನಿದು ಸೀಲ್‌ಡೌನ್ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ...
'ನಿಮಗೆ ಕೈಮುಗಿದು ಕೇಳಿಕೊಳ್ತೀನಿ. ಮನೆಯೊಳಗೆ ಇರಿ. ಇಲ್ಲದಿದ್ದರೆ ನಾನು ಕಠಿಣ ಆದೇಶಗಳನ್ನು ಮಾಡಬೇಕಾಗುತ್ತೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆಯಷ್ಟೇ (ಏ.9) ರಾಜ್ಯದ ಜನರಿಗೆ ಮನವಿ ಮಾಡಿದ್ದರು.
ಅವರು ಹೀಗೆ ಕೈಮುಗಿದು ಲಾಕ್‌ಡೌನ್ ಆದೇಶಕ್ಕೆ ಬೆಲೆಕೊಡಿ ಎಂದು ಜನರನ್ನು ವಿನಂತಿಸುವ ಮೊದಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ 15 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್‌ಗೆ (ಸೀಲ್ಡ್) ಆದೇಶ ಹೊರಡಿಸಿತ್ತು.ಮಧ್ಯಪ್ರದೇಶ ಮತ್ತು ನವದೆಹಲಿಯಲ್ಲಿಯೂ ಜಾರಿಯಾಗಿದೆ. ಒಡಿಶಾ ರಾಜ್ಯದ ಸಚಿವ ಸಂಪುಟ ಏಪ್ರಿಲ್ 30ರವರೆಗೆ ನಿರ್ಬಂಧ ವಿಸ್ತರಣೆಗೆ ತೀರ್ಮಾನಿಸಿತ್ತು.
ಇದೀಗ ಕರ್ನಾಟಕದಲ್ಲಿಯೂ ಇಂಥ ಕಠಿಣ ಕ್ರಮಗಳು ಜಾರಿಯಾಗುತ್ತಿವೆ. ಆರಂಭದ ಹೆಜ್ಜೆಯಾಗಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಜಾರಿಗೆ ಚಿಂತನೆ ನಡೆದಿತ್ತು. ಗುರುವಾರ ರಾತ್ರಿ (ಏ.9) ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳು 'ಪ್ರಜಾವಾಣಿ'ಗೆ ದೃಢಪಡಿಸಿದ್ದರು.
ಈ ಚಿಂತನೆಯ ಮುಂದುವರಿದ ಭಾಗವೆನ್ನುವಂತೆ ಶುಕ್ರವಾರ ಮುಂಜಾನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನ ಶಿವಾಜಿನಗರ ಹಾಗೂ ಪಾದರಾಯನಪುರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್ ಆದೇಶ ಜಾರಿ ಮಾಡಿದೆ.
ಲಾಕ್‌ಡೌನ್ ಅನುಭವಿಸಿ ತಿಳಿದಿದ್ದ ಜನರಲ್ಲಿ ಏನಿದು ಸೀಲ್‌ಡೌನ್ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ...
* ಇಷ್ಟು ದಿನ ನಮಗೆ ನಿಷೇಧಾಜ್ಞೆ (ಸೆಕ್ಷನ್ 144) ಮತ್ತು ಕರ್ಫ್ಯೂ ಮಾತ್ರ ಗೊತ್ತಿತ್ತು. ಕೆಲ ದಿನಗಳ ಹಿಂದೆ ಲಾಕ್‌ಡೌನ್ ಪದವನ್ನೂ ಕೇಳಿದೆವು. ಈಗ ಸೀಲ್ಡ್, ಸೀಲ್‌ಡೌನ್ ಮತ್ತು ಹಾಟ್‌ಸ್ಪಾಟ್ ಸೀಲ್ ಪದಗಳು ಕೇಳಿ ಬರುತ್ತಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಪದ ಬಳಕೆಯಾದರೂ ಈ ಮೂರೂ ಪದಗಳ ಅರ್ಥ ಒಂದೇ ಆಗಿದೆ. ಲಾಕ್‌ಡೌನ್‌ಗಿಂತ ತೀವ್ರವಾಗಿ, ನಿಖರವಾಗಿ ಮತ್ತು ಕಟ್ಟುನಿಟ್ಟಾಗಿ ನಿರ್ಬಂಧದ ಆದೇಶ ಜಾರಿಗೆ ತರುವುದು ಇದರ ಉದ್ದೇಶ.
* ‘ಸೀಲ್‌ಡೌನ್ ಜಾರಿಗೆ ಬಂದರೆ ಮುಖ್ಯ ರಸ್ತೆ, ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಎಲ್ಲ ಒಳ ರಸ್ತೆಗಳನ್ನು ಬಂದ್ ಮಾಡಲಾಗುವುದು. ರಸ್ತೆಯೊಳಗೆ ಬರಲು, ವಾಪಸ್ ಹೋಗಲು ಕಟ್ಟುನಿಟ್ಟಿನ ಕಣ್ಗಾವಲಿನ ಒಂದೇ ಸ್ಥಳಇರುತ್ತದೆ.
* ಲಾಕ್‌ಡೌನ್ ಇದ್ದಾಗ ಜನರು ಔಷಧಿ, ದಿನಸಿ ಖರೀದಿ, ಹಾಲು, ತರಕಾರಿ ಖರೀದಿ, ಆಸ್ಪತ್ರೆಗೆಂದು ಮನೆಗಳಿಂದ ಹೊರಬರಲು ನಿರ್ದಿಷ್ಟ ಸಮಯದಲ್ಲಿ ಅವಕಾಶ ಇರುತ್ತದೆ. ಆದರೆ ಸೀಲ್ಡ್ ಆದೇಶ ಇದ್ದಾಗ ಮನೆಗಳಿಗೇ ಅತ್ಯಗತ್ಯ ವಸ್ತುಗಳನ್ನು ಸರ್ಕಾರ ಪೂರೈಸುತ್ತದೆ. ಜನರು ಮನೆಗಳಿಂದ ಹೊರಗೆ ಬರುವಂತಿಲ್ಲ.
* ಅಂಬುಲೆನ್ಸ್ ಮತ್ತು ವೈದ್ಯಕೀಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
* ಮನೆಯಿಂದ ಹೊರಗೆ ಜನರು ಬಂದರೆ ಸರ್ಕಾರ ಅಂಥವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ.
* ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ ಸೀಲ್ಡ್ ಆದೇಶ ಜಾರಿ ಮಾಡಿದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಶಂಕಿತ ಸೋಂಕಿತರಿಂದ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳಿಸುತ್ತಾರೆ.
* ಸೋಂಕು ದೃಢಪಟ್ಟವರ ಪ್ರವಾಸ ಇತಿಹಾಸವನ್ನು (ಟ್ರಾವೆಲ್ ಹಿಸ್ಟರಿ) ವಿವರಣಾತ್ಮಕವಾಗಿ ಕಲೆಹಾಕಲಾಗುತ್ತದೆ. ಸೋಂಕಿತರ ಒಡನಾಟಕ್ಕೆ ಬಂದಿದ್ದವರನ್ನು ಗುರುತಿಸಿ, ಪ್ರತ್ಯೇಕಗೊಳಿಸಿ, ಕೈಗಳ ಮೇಲೆ ಸೀಲ್ ಹಾಕಿ ಕ್ವಾರಂಟೈನ್ ಮಾಡಲಾಗುತ್ತದೆ.
* ಈಗಾಗಲೇ ವಿತರಿಸಿರುವ ಪಾಸ್‌ಗಳು ಅನೂರ್ಜಿತಗೊಳ್ಳುತ್ತವೆ. ಅಗತ್ಯವಿರುವವರಿಗೆ ಹೊಸದಾಗಿ ಪಾಸ್‌ಗಳನ್ನು ವಿತರಿಸಲಾಗುತ್ತದೆ.
* ರಾಜಸ್ಥಾನದ ಭಿಲ್ವಾಡಾದಲ್ಲಿ ಮೊದಲ ಬಾರಿಗೆ ಹಾಟ್‌ಸ್ಪಾಟ್ ಸೀಲ್ ಪ್ರಾಯೋಗಿಕವಾಗಿ ಜಾರಿ ಮಾಡಲಾಯಿತು. ಅಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಇತರ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಲು ಮುಂದಾಗಿವೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.