ಜಗತ್ತಿನಾದ್ಯಂತ ನೂರಾರು ಪತ್ರಕರ್ತರು ನಡೆಸಿರುವ ತನಿಖೆಯ ಫಲವಾಗಿ ರಹಸ್ಯ ಹೂಡಿಕೆ, ತೆರಿಗೆ ತಪ್ಪಿಸಲು ಮಾಡಿರುವ ಹಣ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಭಾರತ ಸೇರಿದಂತೆ 91 ರಾಷ್ಟ್ರಗಳ ಹಾಲಿ ಮತ್ತು ಮಾಜಿ ರಾಜಕೀಯ ಮುಖಂಡರು, ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಮುಖರು, ಸೆಲೆಬ್ರಿಟಿಗಳ ರಹಸ್ಯ ಹಣಕಾಸು ದಾಖಲೆಗಳನ್ನು ಬಿಚ್ಚಿಟ್ಟಿರುವುದಾಗಿ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ಪ್ರಕಟಿಸಿದೆ.
ಇಂಗ್ಲೆಂಡ್‌ನಲ್ಲಿ ಬಿಬಿಸಿ ಮತ್ತು ದಿ ಗಾರ್ಡಿಯನ್ ಪತ್ರಿಕೆ, ಭಾರತದಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಒಳಗೊಂಡಂತೆ 150 ಮಾಧ್ಯಮಗಳ ಆರು ನೂರಕ್ಕೂ ಹೆಚ್ಚು ಪತ್ರಕರ್ತರು 2 ವರ್ಷಗಳು ತನಿಖೆ ನಡೆಸಿದ್ದಾರೆ. ಇದರಿಂದಾಗಿ 1.19 ಕೋಟಿಗೂ ಅಧಿಕ ರಹಸ್ಯ ದಾಖಲೆಗಳು ತೆರೆದುಕೊಂಡಿವೆ. ಇವುಗಳನ್ನು 'ಪಂಡೋರಾ ಪೇಪರ್ಸ್' ಎಂದು ಹೆಸರಿಸಲಾಗಿದೆ.
ಪಂಡೋರಾ ಪೇಪರ್ಸ್ ಬಗ್ಗೆ ಇನ್ನಷ್ಟು...
ಹಣಕಾಸು ಹೂಡಿಕೆಗಳಿಗೆ ಸಂಬಂಧಿಸಿದಂತೆ ಐಸಿಐಜೆ ಸಾಮೂಹಿಕವಾಗಿ ಸೋರಿಕೆ ಮಾಡಿರುವ ಮೂರನೇ ಪ್ರಮುಖ ದಾಖಲೆಗಳು ಪಂಡೋರಾ ಪೇಪರ್ಸ್. 2014ರಲ್ಲಿ ಲಕ್ಸ್‌ಲೀಕ್ಸ್, 2016ರಲ್ಲಿ ಪನಾಮಾ ಪೇಪರ್ಸ್ ಹಾಗೂ 2021ರಲ್ಲಿ ಪಂಡೋರಾ ಪೇಪರ್ಸ್. ಪನಾಮಾ ದಾಖಲೆಗಳಿಂದಾಗಿ ಐಸ್‌ಲೆಂಡ್ ಪ್ರಧಾನಿ ವಿರುದ್ಧ ಪ್ರತಿಭಟನೆಗಳು ನಡೆದು ರಾಜೀನಾಮೆ ನೀಡಿದ್ದರು ಹಾಗೂ ಭ್ರಷ್ಟಾಚಾರ ಆರೋಪಗಳಿಂದ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಸ್ಥಾನ ತೊರೆದರು.
ಶ್ರೀಮಂತರು ಮತ್ತು ಸಂಸ್ಥೆಗಳಿಗೆ ಸಾಗರೋತ್ತರ ವೃತ್ತಿಪರ ಹಣಕಾಸು ಸೇವೆಗಳನ್ನು ಒದಗಿಸುವ 14 ಸೇವಾದಾರರಲ್ಲಿದ್ದ ರಹಸ್ಯರ ದಾಖಲೆಗಳು ಸೋರಿಕೆಯಾಗಿದ್ದು, ಅವುಗಳ ಆಧಾರದ ಮೇಲೆ ಐಸಿಐಜೆ ತನಿಖೆ ನಡೆಸಿದೆ. ವ್ಯಕ್ತಿ ಅಥವಾ ಸಂಸ್ಥೆಯು ಕಡಿಮೆ ತೆರಿಗೆ, ಇಲ್ಲವೇ ತೆರಿಗೆಯೇ ಇಲ್ಲದ ಕಡೆ ಶೆಲ್ ಕಂಪನಿಗಳು, ಟ್ರಸ್ಟ್‌ಗಳು, ಫೌಂಡೇಷನ್‌ಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಹೂಡಿಕೆ ಮಾಡಲು ಹಣಕಾಸು ಸಂಸ್ಥೆಗಳು ಪೂರಕ ವ್ಯವಸ್ಥೆ ಕಲ್ಪಿಸುತ್ತವೆ.
1970ರಿಂದ ಸೃಷ್ಟಿಯಾಗಿರುವ ಖಾತೆಗಳ ದಾಖಲೆಗಳ ಲಭ್ಯವಾಗಿದ್ದು, ಹೆಚ್ಚಿನ ದಾಖಲೆಗಳು 1996ರಿಂದ 2020ರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿವೆ. ಈ ದಾಖಲೆಗಳ ಪ್ರಮಾಣ ಸುಮಾರು 3 ಟೆರಾಬೈಟ್‌ಗಳಷ್ಟಿದೆ. ಅಂದರೆ, ಸ್ಮಾರ್ಟ್‌ಫೋನ್‌ನ ಸುಮಾರು 7,50,000 ಫೋಟೊಗಳಿಗೆ ಸಮ. ಜಗತ್ತಿನಾದ್ಯಂತ 38 ಬೇರೆ ಬೇರೆ ಕಾನೂನು ವ್ಯಾಪ್ತಿಗಳಲ್ಲಿ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಈ ದಾಖಲೆಗಳು ಸೋರಿಕೆಯಾಗಿವೆ.
2016ರ ಪನಾಮಾ ಪೇಪರ್ಸ್ ದಾಖಲೆಗಳ ಸಂಗ್ರಹ ಪ್ರಮಾಣವು ಸುಮಾರು 2.6 ಟೆರಾಬೈಟ್ಸ್‌ಗಳಿತ್ತು.
ಜಗತ್ತಿನಾದ್ಯಂತ ರಾಜಕಾರಣಿಗಳು ಹಾಗೂ ಇತರರು ಒಪ್ಪಿತ ತೆರಿಗೆ ಪದ್ಧತಿಯ ಕುರಿತು ಚರ್ಚಿಸುತ್ತಿರುವ ಸಮಯದಲ್ಲೇ ಪಂಡೋರಾ ಪೇಪರ್ಸ್ ಸೋರಿಕೆ ವರದಿ ಹೊರ ಬಂದಿದೆ.
ಬಹಿರಂಗ ಆಗಿರುವುದೇನು?
ನೂರಾರು ರಾಜಕಾರಣಿಗಳು, ಮುಖಂಡರು, ಕೋಟ್ಯಧಿಪತಿಗಳು, ಧಾರ್ಮಿಕ ಮುಖಂಡರು, ಡ್ರಗ್ ಡೀಲರ್‌ಗಳು ಹಾಗೂ ಸೆಲೆಬ್ರಿಟಿಗಳ ಬಚ್ಚಿಟ್ಟ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪಂಡೋರಾ ಪೇಪರ್ಸ್ ಮೂಲಕ ಬಹಿರಂಗವಾಗಿವೆ. ಸಮುದ್ರ ತೀರಗಳ ರೆಸ್ಟೊರೆಂಟ್‌ಗಳು, ಐಷಾರಾಮಿ ಹಡಗುಗಳು, ದೊಡ್ಡ ಕಟ್ಟಡಗಳು ಸೇರಿದಂತೆ ವಿವಿಧ ರೂಪದಲ್ಲಿ ಮಾಡಿರುವ ಹೂಡಿಕೆಗಳಿಗೆ ಜಗತ್ತಿನಾದ್ಯಂತ 14 ಹಣಕಾಸು ಸೇವಾಧಾರ ಸಂಸ್ಥೆಗಳು ಪೂರಕ ಸೇವೆ ಒದಗಿಸಿವೆ. ಅವುಗಳ 1.2 ಕೋಟಿಯಷ್ಟು ದಾಖಲೆಗಳ ಮೂಲಕ ಪತ್ರಕರ್ತರು ತನಿಖೆ ನಡೆಸಿದ್ದಾರೆ.
ಸೌತ್ ಡಕೋಟಾದಲ್ಲಿ 81, ಫ್ಲೋರಿಡಾದಲ್ಲಿ 37 ಟ್ರಸ್ಟ್‌ಗಳು, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಸೀಶೆಲ್ಸ್, ಹಾಂಕಾಂಗ್, ಬಲೀಜ್ ಸೇರಿದಂತೆ 'ತೆರಿಗೆ ಇರದ ಸ್ವರ್ಗಗಳಲ್ಲಿ' ಹೂಡಿಕೆ ಅಥವಾ ವಹಿವಾಟು ಖಾತೆಗಳು ಸೃಷ್ಟಿಯಾಗಿವೆ.
ಬಹಿರಂಗವಾಗಿರುವ ದಾಖಲೆಗಳ ಪೈಕಿ ಭಾರತೀಯರಿಗೆ ಸೇರಿದ್ದು ಎಷ್ಟು?
ತೆರಿಗೆ ಇರದ ಸ್ವರ್ಗಗಳಾಗಿರುವ ಹೊರ ರಾಷ್ಟ್ರಗಳಲ್ಲಿ ಸುಮಾರು 1,000 ಕಂಪನಿಗಳ ಮೂಲಕ ನೂರಾರು ಜನ ಹೂಡಿಕೆ ಮಾಡಿದ್ದಾರೆ. ಉನ್ನತ ಸ್ಥಾನಗಳಲ್ಲಿರುವ 336 ರಾಜಕಾರಣಿಗಳು, ಸರ್ಕಾರದ ಅಧಿಕಾರಿಗಳು, ದೇಶದ ನಾಯಕರು, ಸಂಪುಟ ಸಚಿವರು, ರಾಯಭಾರಿಗಳು ಹಾಗೂ ಇತರರು ಮಾಡಿರುವ ಹೂಡಿಕೆಗಳ ಬಗ್ಗೆ ದಾಖಲೆಗಳಿವೆ.
ಐಸಿಐಜೆ ಪ್ರಕಾರ, ಉದ್ಯಮಿ ಅನಿಲ್ ಅಂಬಾನಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನೀರವ್ ಮೋದಿ ಅವರ ಸೋದರಿ ಸೇರಿದಂತೆ ಆರು ಭಾರತೀಯರ ಹೆಸರುಗಳನ್ನು ಪಂಡೋರಾ ಪೇಪರ್ಸ್‌ನಲ್ಲಿ ಗುರುತಿಸಲಾಗಿದೆ.
ಇದರೊಂದಿಗೆ ರಷ್ಯಾ, ಅಮೆರಿಕ, ಟರ್ಕಿ ಸೇರಿ ಹತ್ತಾರು ರಾಷ್ಟ್ರಗಳ 130ಕ್ಕೂ ಹೆಚ್ಚು ಕೋಟ್ಯಧಿಪತಿಗಳು ರಹಸ್ಯ ಹೂಡಿಕೆಗಳನ್ನು ಮಾಡಿದ್ದಾರೆ. ಜಗತ್ತಿನ 330ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ರಾಜಕಾರಣಿಗಳು, ಗಣ್ಯರ ರಹಸ್ಯ ಖಾತೆಗಳು ದಾಖಲೆಗಳು ಸೋರಿಕೆಯಾಗಿವೆ. ಜೋರ್ಡನ್‌ನ ರಾಜ ಎರಡನೇ ಅಬ್ದುಲ್ಲಾ, ಇಂಗ್ಲೆಂಡ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಜೆಕ್ ರಿಪಬ್ಲಿಕನ್ ಪ್ರಧಾನಿ ಆ್ಯಂಡ್ರೆಜ್ ಬಾಬಿಸ್, ಕೀನ್ಯಾದ ಅಧ್ಯಕ್ಷ ಉಹುರು ಕೀನ್ಯಾಟಾ, ಈಕ್ವೆಡಾರ್ ಅಧ್ಯಕ್ಷ ಗಿಲೆರ್ಮೊ ಲಾಸೊ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಸಹವರ್ತಿಗಳ ದಾಖಲೆಗಳಿರುವುದು ತನಿಖೆಯಲ್ಲಿ ಪತ್ತೆಯಾಗಿವೆ.
* ಜೋಡರ್ನ್‌ನ ದೊರೆ ಎರಡನೇ ಅಬ್ದುಲ್ಲಾ: ಸುಮಾರು ಮೂರು ಡಜನ್ ಶೆಲ್ ಕಂಪನಿಗಳ ಸಹಾಯದಿಂದ 1995ರಿಂದ 2017ರ ನಡುವೆ ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಿ 106 ಮಿಲಿಯನ್ ಡಾಲರ್ ಮೌಲ್ಯದ ಮನೆಗಳನ್ನು ಖರೀದಿಸಿದ್ದಾರೆ.
* ಟೋನಿ ಬ್ಲೇರ್ ಸುಮಾರು 4,00,000 ಡಾಲರ್ ಆಸ್ತಿ ತೆರಿಗೆ ಉಳಿಸಿಕೊಂಡಿದ್ದಾರೆ.
* ಚೆಕ್ ಪ್ರಧಾನಿ ಆ್ಯಂಡ್ರೆಜ್ 2009ರಲ್ಲಿ ಶೆಲ್ ಕಂಪನಿಗಳ ಮೂಲಕ ಫ್ರಾನ್ಸ್‌ನಲ್ಲಿ 22 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಖರೀದಿಸಿದ್ದಾರೆ.
ವಿದೇಶಗಳಲ್ಲಿ ಟ್ರಸ್ಟ್‌ಗಳು; ಭಾರತದಲ್ಲಿ ಕಾನೂನು ಬಾಹಿರವೇ?
ಕಂಪನಿ ಅಥವಾ ವ್ಯಕ್ತಿಯ ಆಸ್ತಿಯನ್ನು ಗಮನಿಸುವ ಮೂರನೇ ವ್ಯಕ್ತಿ ಟ್ರಸ್ಟಿ. ಬೃಹತ್ ವ್ಯಾಪಾರ–ವಹಿವಾಟು ನಡೆಸುವವರು ಅವರ ಆಸ್ತಿಗಳು, ಹಣಕಾಸು ಹೂಡಿಕೆಗಳು, ಷೇರುಗಳು ಹಾಗೂ ರಿಯಲ್ ಎಸ್ಟೇಟ್ ಆಸ್ತಿಯನ್ನು ಒಂದೇ ಕಡೆ ನಿರ್ವಹಿಸಲು ಟ್ರಸ್ಟ್‌ಗಳು ಸಹಕಾರಿಯಾಗುತ್ತವೆ.
ದೇಶದ ವ್ಯಕ್ತಿ ಭಾರತದ ಹೊರ ಭಾಗದಲ್ಲಿ ಟ್ರಸ್ಟ್ ಸ್ಥಾಪಿಸುವುದು ಕಾನೂನು ಸಮ್ಮತವಾಗಿದೆ. ಭಾರತೀಯ ಟ್ರಸ್ಟ್‌ಗಳ ಕಾಯ್ದೆ, 1882ರ ಪ್ರಕಾರ ಟ್ರಸ್ಟಿಯು ಫಲಾನುಭವಿಗಳ ಪರವಾಗಿ ಆಸ್ತಿಯ ನಿರ್ವಹಣೆ ನಡೆಸಬಹುದು. ದೇಶದ ಹೊರಗೆ ಅಥವಾ ಇತರೆ ತೆರಿಗೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಟ್ರಸ್ಟ್ ಸ್ಥಾಪನೆಗೆ ಭಾರತದಲ್ಲಿ ಅವಕಾಶವಿದೆ.
ಭಾರತೀಯರು ವಿದೇಶಗಳಲ್ಲಿನ ಟ್ರಸ್ಟ್‌ಗೆ ಸಂಬಂಧಿಸಿದ ಆಸ್ತಿಗಳು, ವಿದೇಶಿ ಹೂಡಿಕೆಗಳ ಕುರಿತು ವರದಿ ಸಲ್ಲಿಸಬೇಕಾಗುತ್ತದೆ. ಆದರೆ, ಅನಿವಾಸಿ ಭಾರತೀಯರು (ಎನ್‌ಆರ್‌ಐ) ಅಂಥ ವಿವರಗಳನ್ನು ಬಹಿರಂಗ ಪಡಿಸಬೇಕಿರುವುದಿಲ್ಲ.
ಭಿನ್ನ ತೆರಿಗೆ ಪದ್ಧತಿ ಹೊಂದಿರುವ ಇತರೆ ರಾಷ್ಟ್ರಗಳಲ್ಲಿ ಟ್ರಸ್ಟ್ ಸ್ಥಾಪನೆಯಾದರೆ, ಆ ಕಂಪನಿಗೆ ಕಚೇರಿ ಅಥವಾ ಕೆಲಸಗಾರರ ಅಗತ್ಯವಿರುವುದಿಲ್ಲ. ಇದರ ಕುರಿತು ಪಂಡೋರಾ ಪೇಪರ್ಸ್ ಎತ್ತಿ ತೋರಿದೆ.
ಏನಿದು ತೆರಿಗೆ ಇರದ ಸ್ವರ್ಗ?
ಅತ್ಯಂತ ಕಡಿಮೆ ತೆರಿಗೆ ಅಥವಾ ತೆರಿಗೆಯಿಂದ ವಿನಾಯಿತಿ ಇರುವ ರಾಷ್ಟ್ರ ಅಥವಾ ನಿರ್ದಿಷ್ಟ ಸ್ಥಳವನ್ನು 'ತೆರಿಗೆ ಇರದ ಸ್ವರ್ಗ' (ಟ್ಯಾಕ್ಸ್ ಹೆವೆನ್) ಎಂದು ಕರೆಯಲಾಗುತ್ತದೆ. ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಬಯಸುವ ಹಲವು ರಾಷ್ಟ್ರಗಳ ನಾಗರಿಕರಿಗೆ ಈ ಸ್ಥಳಗಳು ಉಳಿತಾಯದ ತಾಣಗಳಾಗಿ ಕಾಣುತ್ತವೆ. ಜಗತ್ತಿನಾದ್ಯಂತ ಇಂಥ ಎಷ್ಟು ಟ್ಯಾಕ್ಸ್ ಹೆವೆನ್‌ಗಳಿವೆ ಎಂಬುದರ ಸರಿಯಾದ ಪಟ್ಟಿ ಲಭ್ಯವಿಲ್ಲ.
ಪಂಡೋರಾದಲ್ಲಿ ಗುರುತಿಸಿರುವ ವಿದೇಶಗಳ 956 ಕಂಪನಿಗಳ ಪೈಕಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನಲ್ಲೇ ಎರಡನೇ ಮೂರರಷ್ಟು ಕಂಪನಿಗಳು ಸ್ಥಾಪನೆಯಾಗಿವೆ. ತೆರಿಗೆ ಇರದ ಸ್ವರ್ಗಗಳಲ್ಲಿನ ರಹಸ್ಯತೆ ಮತ್ತು ಕ್ಲಿಷ್ಟಕರ ವ್ಯವಸ್ಥೆಯ ಕಾರಣಗಳಿಂದಾಗಿ ತೆರಿಗೆ ಉಳಿಸಿಕೊಂಡ ಒಟ್ಟು ಸಂಪತ್ತಿನ ಲೆಕ್ಕ ಗೊತ್ತುಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ.
ಗ್ರೀಕ್ ಪುರಾಣ ಮತ್ತು ಪಂಡೋರಾ
ಗ್ರೀಕ್ ಪುರಾಣಗಳ ಪ್ರಕಾರ, ಪಂಡೋರಾ; ಅಗ್ನಿ ದೇವರಿಂದ ಸೃಷ್ಟಿಯಾದ ಮೊದಲ ಮಹಿಳೆ. ಆಕೆಗೆ ರಹಸ್ಯವಾದ ಪೆಟ್ಟಿಗೆಯೊಂದನ್ನು ಕೊಟ್ಟಿರುತ್ತಾರೆ ಹಾಗೂ ಅದರಲ್ಲಿ ಎಲ್ಲ ದುಷ್ಟ ಶಕ್ತಿಗಳನ್ನೂ ಅಡಗಿಸಿಡಲಾಗಿರುತ್ತದೆ. ಅದನ್ನು ತೆರೆಯದಂತೆ ಎಚ್ಚರಿಕೆ ನೀಡಲಾಗಿರುತ್ತದೆ. ಕುತೂಹಲ ತಾಳಲಾರದೆ, ಪಂಡೋರಾ ಆ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಕೆಟ್ಟ ಶಕ್ತಿಗಳು ಜಗತ್ತಿನಲ್ಲಿ ಹರಡಿಕೊಳ್ಳುತ್ತವೆ. ಅದಕ್ಕೆ 'ಪಂಡೋರಾ ಪೆಟ್ಟಿಗೆ' ಎಂಬ ಹೆಸರಿದೆ.
ಭ್ರಷ್ಟರು ಮತ್ತು ಗಣ್ಯ ವ್ಯಕ್ತಿಗಳು ಮುಚ್ಚುಮರೆಯಲ್ಲಿ ನಡೆಸುತ್ತಿರುವ ವ್ಯವಹಾರಗಳನ್ನು ಕಾಪಿಟ್ಟುಕೊಳ್ಳಲು ಹೊರರಾಷ್ಟ್ರಗಳ ಖಾತೆಗಳನ್ನು ಬಳಸಿಕೊಂಡಿರುವ ಕುರಿತು ರಹಸ್ಯ ದಾಖಲೆಗಳು ಲಭ್ಯವಾಗಿದೆ. ಅದೇ ಕಾರಣಕ್ಕೆ ಈ ದಾಖಲೆಗಳಿಗೆ 'ಪಂಡೋರಾ ಪೇಪರ್ಸ್' ಎಂದು ಕರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.