ADVERTISEMENT

ದಿಢೀರ್ ದೋಸೆಗಳು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 12:04 IST
Last Updated 29 ಸೆಪ್ಟೆಂಬರ್ 2018, 12:04 IST
   

ಬೆಳ್ಳಿಗ್ಗೆಯೇ ಅಕ್ಕಿ, ಉದ್ದಿನಬೇಳೆ ಮಿಕ್ಕೆಲ್ಲಾ ಸಾಮಾನುಗಳನ್ನು ನೆನಸಿ, ರಾತ್ರಿ ಆಫೀಸಿನಿಂದ ಬಂದ ಮೇಲೆ ಅದನ್ನು ರುಬ್ಬಿ ಮತ್ತೆ ಮರುದಿವಸ ಬೆಳಿಗ್ಗೆ ಎದ್ದು ಎಲ್ಲರಿಗೂ ದೋಸೆ ಹಾಕಿಕೊಟ್ಟು ತಾನು ತಿಂದು, ಕಚೇರಿಗೆ ಹೋಗುವ ಹೊತ್ತಿಗೆ ಅಮ್ಮಂದಿರಿಗೆ ಸಾಕಾಗಿ ಹೋಗುತ್ತದೆ. ಇನ್ನೂ ಕೆಲವೊಮ್ಮೆ ಕಚೇರಿಯಿಂದ ಬರುವುದು ತಡವಾದರೆ ದೋಸೆಗೆ ಅಕ್ಕಿ ನೆನಸಿಡುವುದೆ ಮರೆತು ಹೋಗುತ್ತದೆ. ಮತ್ತೆ ಕೆಲವೊಮ್ಮೆ ರಾತ್ರಿ ದೋಸೆ ಹಿಟ್ಟು ರುಬ್ಬಿಟ್ಟುಕೊಂಡರು ಸಹ ಬೆಳಿಗ್ಗೆ ಕಚೇರಿಗೆ ಹೋಗುವ ಆತುರದಲ್ಲಿ ಅಲ್ಲಿಯೇ ಮರೆತು ಬೇರೆ ತಿಂಡಿ ಸಹ ಮಾಡುವುದು ಉಂಟು. ಅದಕ್ಕೆಂದೇ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ‘ದಿಢೀರ್ ದೋಸೆಗಳ’ ಪರಿಚಯಿಸಿದ್ದಾರೆ.

ದಿಢೀರ್ ಅಕ್ಕಿ ದೋಸೆ
ಸಾಮಗ್ರಿ: ಅಕ್ಕಿ-1ಕಪ್, ತೆಂಗಿನ ಕಾಯಿ ತುರಿ-ಅರ್ಧ ಬಟ್ಟಲು, ಅನ್ನ-ಅರ್ಧ ಬಟ್ಟಲು, ಉಪ್ಪು ರುಚಿಗೆ, ಸ್ವಲ್ಪ ಎಣ್ಣೆ.

ವಿಧಾನ: ಮೊದಲು ಅಕ್ಕಿಯನ್ನು ತೊಳೆದು ರುಬ್ಬಿಕೊಳ್ಳಿ, ನಂತರ ಅದು ಅರ್ಧ ನುಣ್ಣಗಾದ ಮೇಲೆ ತೆಂಗಿನ ಕಾಯಿ, ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಗಟ್ಟಿಯಿರುವ ದೋಸೆ ಹಿಟ್ಟನ್ನು ತಯಾರಿಸಿ. ಕಾದ ಹಂಚಿನ ಮೇಲೆ ಸ್ವಲ್ಪ ದಪ್ಪನಾಗಿ ದೋಸೆ ಹಾಕಿ. ಬೇಕೆಂದರೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿಯನ್ನು ಮೇಲೆ ಉದುರಿಸಿ.

ರಾಗಿ ದೋಸೆ


ಸಮಯವಿದ್ದಾಗ ಅರ್ಧ ಕೆ.ಜಿಯಷ್ಟು ಉದ್ದಿನಬೇಳೆಯನ್ನು ಪುಡಿಮಾಡಿಟ್ಟುಕೊಂಡರೆ ದಿಢೀರ್ ದೋಸೆಗಳನ್ನು ಮಾಡಲು ಸುಲಭ.

ADVERTISEMENT

ಸಾಮಗ್ರಿ:‌ ರಾಗಿ ಹಿಟ್ಟು ಒಂದೂವರೆ ಕಪ್, ಉದ್ದಿನ ಹಿಟ್ಟು-ಅರ್ಧ ಕಪ್, ಮಜ್ಜಿಗೆ-1 ಕಪ್, ಹಸಿ ಮೆಣಸಿನಕಾಯಿ-2, ಈರುಳ್ಳಿ-2, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.
ವಿಧಾನ: 1:3 ಪ್ರಮಾಣದಲ್ಲಿ ರಾಗಿ ಹಿಟ್ಟು, ಉದ್ದಿನ ಹಿಟ್ಟನ್ನು ಮಜ್ಜಿಗೆಯೊಂದಿಗೆ ಬೇರಿಸಿ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಅರ್ಧ ಗಂಟೆಯ ನಂತರ ಕಾದ ತವ ಮೇಲೆ ದೋಸೆ ಹಾಕಿ, ಇದನ್ನು ತುಪ್ಪದೊಂದಿಗೆ ಸವಿಯಲು ಕೊಡಿ.

ಮೈದಾ ಹಿಟ್ಟಿನ ದೋಸೆ


ಸಾಮಗ್ರಿ:
ಮೈದಾ ಹಿಟ್ಟು-1 ಕಪ್, ಅಕ್ಕಿ ಹಿಟ್ಟು-ಅರ್ಧ ಕಪ್, ಮೊಸರು-ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.

ವಿಧಾನ: ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಅದಕ್ಕೆ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಅರ್ಧ ಗಂಟೆಯ ನಂತರ ಕಾದ ತವ ಮೇಲೆ ದೋಸೆ ಹಾಕಿ,ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ.
ಯಾವುದೇ ದೋಸೆಯನ್ನಾಗಲಿ ಬಿಸಿ-ಬಿಸಿ ಇರುವಾಗಲೇ ತಿಂದರೆ ರುಚಿ ಹೆಚ್ಚು.

ರವೆ ಈರುಳ್ಳಿ ದೋಸೆ
ಸಾಮಗ್ರಿ:
ಚಿರೋಟಿ ರವೆ-1 ಕಪ್, ಅಕ್ಕಿ ಹಿಟ್ಟು-1 ಕಪ್, ತೆಂಗಿನ ಕಾಯಿ ತುರಿ-2 ಚಮಚ, ಹಸಿ ಮೆಣಸಿನಕಾಯಿ-2, ಈರುಳ್ಳಿ-2, ಸ್ವಲ್ಪ ಕೊತ್ತಂಬರಿ ಸೊಪ್ಪು, ಮೊಸರು-1 ಕಪ್, ಉಪ್ಪು ರುಚಿಗೆ, ಸ್ವಲ್ಪ ಎಣ್ಣೆ.
ವಿಧಾನ: ಚಿರೋಟಿ ರವೆ ಮತ್ತು ಅಕ್ಕಿ ಹಿಟ್ಟಿಗೆ ಮೊಸರು ಮತ್ತು ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಅರ್ಧ ಗಂಟೆಯ ನಂತರ ಕಾದ ತವ ಮೇಲೆ ದೋಸೆ ಹಾಕಿ. ಇದನ್ನು ಚಟ್ನಿ ಪುಡಿಯೊಂದಿಗೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.