ಹುಣಸೆಹಣ್ಣಿನ ಹುಳಿ
ಬೇಕಾಗುವ ಸಾಮಗ್ರಿಗಳು ಹುಣಸೆಹಣ್ಣು- ನೆಲ್ಲಿಕಾಯಿ ಗಾತ್ರದ್ದು, ಉಪ್ಪು- ಮುಕ್ಕಾಲು ಚಮಚ, ಗಟ್ಟಿಬೆಲ್ಲ- ಕಾಲು ಲೋಟ, ರುಬ್ಬಿದ ತೆಂಗಿನಕಾಯಿ - 2 ಚಮಚ, ಈರುಳ್ಳಿ- ಅರ್ಧ, ಒಗ್ಗರಣೆಗಾಗಿ- ಒಣಮೆಣಸು, ಸಾಸಿವೆ
ತಯಾರಿಸುವ ವಿಧಾನ: ಹುಣಸೆಹಣ್ಣನ್ನು ಅರ್ಧ ಗಂಟೆ ನೆನೆಸಿ. ಇದನ್ನು ನುರಿದು ಜಿಗಟನ್ನು ತೆಗೆದು ಉಪ್ಪು, ಗಟ್ಟಿಬೆಲ್ಲ, ರುಬ್ಬಿದ ತೆಂಗಿನಕಾಯಿ ಅಥವಾ ಹಾಲು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಅರ್ಧ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿ. ಇದಕ್ಕೆ ಒಗ್ಗರಣೆ ಕೊಡಬೇಕು. ಅದಕ್ಕಾಗಿ ಎಣ್ಣೆಯಲ್ಲಿ ಒಣಮೆಣಸು, ಸಾಸಿವೆ ಸಿಡಿಸಿ ಒಗ್ಗರಣೆ ಮಾಡಿ ಇವೆಲ್ಲವನ್ನು ಹಾಕಬೇಕು.
**
ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು: ಒಂದು ಸೌತೆಕಾಯಿ, ಬೂದುಕುಂಬಳಕಾಯಿ ಅಥವಾ ಸೀಮೆ ಬದನೆಕಾಯಿ, ಕಡಲೆಬೇಳೆ- 2-3 ಚಮಚ, ಹಸಿಮೆಣಸಿನಕಾಯಿ - 5-6, ಉಪ್ಪು - ರುಚಿಗೆ, ಅರಿಶಿಣ ಪುಡಿ - ಚಿಟಿಕೆ, ಜೀರಿಗೆ - ಒಂದು ಚಮಚ, ಕೊತ್ತಂಬರಿ ಬೀಜ - 2 ಚಮಚ, ಕರಿಮೆಣಸು - ಅರ್ಧ ಚಮಚ, ಬೆಳ್ಳುಳ್ಳಿ - 5-6 ಎಸಳು, ಹಸಿಶುಂಠಿ - ಅರ್ಧ ಇಂಚಿನಷ್ಟು
ತಯಾರಿಸುವ ವಿಧಾನ: ಸೌತೆಕಾಯಿ, ಬೂದುಕುಂಬಳಕಾಯಿ ಅಥವಾ ಸೀಮೆ ಬದನೆಕಾಯಿಯ ಸಿಪ್ಪೆ ತೆಗೆದು ಹೋಳು ಮಾಡಿ ಬೇಯಿಸಿ. ಕಡಲೆಬೇಳೆಯನ್ನು ಮೊದಲೇ ನೀರಿನಲ್ಲಿ ನೆನೆಸಿಡಿ. ಈಗ ನೆನೆಸಿಟ್ಟಿರುವ ಕಡಲೆಬೇಳೆ, ಹಸಿಮೆಣಸಿನಕಾಯಿ, ಉಪ್ಪು, ಅರಿಶಿಣಪುಡಿ, ಜೀರಿಗೆ, ಕೊತ್ತಂಬರಿಬೀಜ, ಕರಿಮೆಣಸು, ಬೆಳ್ಳುಳ್ಳಿ, ಹಸಿಶುಂಠಿ ಸಣ್ಣಗೆ ಹೆಚ್ಚಿ ಎಲ್ಲ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಎಲ್ಲವನ್ನೂ ಹಾಕಿ ಕುದಿಸಿ. ಇದಕ್ಕೆ ಮೊಸರು ಅಥವಾ ಹುಳಿಮಜ್ಜಿಗೆ ಹಾಕಿದರೆ ಮುಗಿಯಿತು.
**
ಕಂಚಿಕಾಯಿ ಅಪ್ಪೆ ಹುಳಿ
ಬೇಕಾಗುವ ಸಾಮಗ್ರಿಗಳು: ನೀರು - 1 ಲೀಟರ್, ಉಪ್ಪು - ರುಚಿಗೆ ತಕ್ಕಷ್ಟು, ಸಕ್ಕರೆ - 2 ಚಮಚ, ತೆಂಗಿನಕಾಯಿ ಹಾಲು - 6 ಚಮಚ, ಕೊಬ್ಬರಿ ಎಣ್ಣೆ - 1 ಚಮಚ, ಹಸಿಮೆಣಸಿನಕಾಯಿ - 1
ತಯಾರಿಸುವ ವಿಧಾನ: ಒಂದು ಲೀಟರ್ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ತೆಂಗಿನಕಾಯಿ ಹಾಲು ಹಾಕಿ. ಒಂದು ಕಂಚಿಕಾಯಿಯ ಸಿಪ್ಪೆ ತೆಗೆದು ಅದನ್ನು ಹಿಂಡಿ ರಸ ತೆಗೆಯಬೇಕು. ಅದಕ್ಕೆ ಒಂದು ಚಮಚ ಕೊಬ್ಬರಿಎಣ್ಣೆ, ಒಂದು ಹಸಿಮೆಣಸಿಕಾಯಿ ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ಮೇಲೆ ಮಾಡಿದ ಮಿಶ್ರಣವನ್ನು ಸೇರಿಸಿ.
**
ತರಕಾರಿ ಹುಳಿ
ಬೇಕಾಗುವ ಸಾಮಗ್ರಿಗಳು: ಯಾವುದಾದರೂ ಇಷ್ಟದ ತರಕಾರಿ, ತೊಗರಿಬೇಳೆ - ಅರ್ಧ ಬಟ್ಟಲು, ಹಸಿ ಈರುಳ್ಳಿ - 1, ಬೆಳ್ಳುಳ್ಳಿ - 4-5 ಎಸಳು , ಖಾರದ ಪುಡಿ - ಅರ್ಧ ಚಮಚ, ಮಸಾಲೆಪುಡಿ - ಅರ್ಧ ಚಮಚ, ಕಾಯಿತುರಿ - ಸ್ವಲ್ಪ, ಉಪ್ಪು- 1 ಚಮಚ
ತಯಾರಿಸುವ ವಿಧಾನ: ಯಾವುದಾದರೂ ಇಷ್ಟದ ತರಕಾರಿಯನ್ನು ಅರ್ಧ ಬಟ್ಟಲು ತೊಗರಿಬೇಳೆಯೊಂದಿಗೆ ಬೇಯಿಸಿಕೊಳ್ಳಬೇಕು. ಹಸಿ ಈರುಳ್ಳಿ, ಬೆಳ್ಳುಳ್ಳಿ, ಖಾರದಪುಡಿ, ಮಸಾಲೆಪುಡಿ, ಸ್ವಲ್ಪ ಕಾಯಿತುರಿ, ಒಂದು ಚಮಚ ಉಪ್ಪು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಸಣ್ಣಕ್ಕೆ ಹೆಚ್ಚಿ ಹಾಕಿ. ಅರ್ಧ ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣನ್ನು ನೀರಿನಲ್ಲಿ ಕಿವುಚಿ ಹಾಕಿ ಒಂದು ಚೂರು ಬೆಲ್ಲ ಹಾಕಿ, ಸಾಸಿವೆ, ಕರಿಬೇವು, ಇಂಗಿನ ಪುಡಿ ಹಾಕಿ ಕುದಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.