ADVERTISEMENT

ಆಹಾರ–ವಿಹಾರ: ಮುಂಗಾರಿಗೆ ಬಿಸಿಬಿಸಿ ಕಷಾಯ

ವಿವಿಧ ಬಗೆಯ ಕಷಾಯ ಮಾಡುವುದು ಹೇಗೆ?

ಕೃಷ್ಣಿ ಶಿರೂರ
Published 21 ಜೂನ್ 2024, 22:57 IST
Last Updated 21 ಜೂನ್ 2024, 22:57 IST
<div class="paragraphs"><p>ದೊಡ್ಡಪತ್ರೆ ಕಷಾಯ</p></div>

ದೊಡ್ಡಪತ್ರೆ ಕಷಾಯ

   

ಮುಂಗಾರು ಮಳೆ ಅದಾಗಲೇ ಅಡಿಯಿಟ್ಟಿದೆ. ಬಿರುಬೇಸಿಗೆ ಕಳಚಿಕೊಂಡು ಮುಂಗಾರು ಅಡಿಯಿಡುವ ಸಂಧಿ ಸಮಯದಲ್ಲಿ ಮಂದಿಯ ಆರೋಗ್ಯದಲ್ಲಿ ಕೊಂಚ ಏರುಪೇರಾಗುವುದು ಸಾಮಾನ್ಯ. ಬದಲಾಗುವ ಋತುಮಾನದಲ್ಲಿ ನಮ್ಮ ದೇಹ ಒಗ್ಗಿಕೊಳ್ಳುವಾಗ ಶೀತ, ನೆಗಡಿ, ಕಫ, ಕೆಮ್ಮು, ಜ್ವರ ಕಾಡುವುದು ಸಹಜ ಕೂಡ. ಚಿಕ್ಕ ಮಕ್ಕಳು, ವಯೋವೃದ್ಧರಲ್ಲಿ ಈ ಯಾತನೆ ತುಸು ಹೆಚ್ಚು. ಇನ್ನು ಶೀತ, ಕಫ ಪ್ರಕೃತಿಯುಳ್ಳವರಿಗೆ ಈ ಸಂಧಿಸಮಯ ಹೈರಾಣಾಗಿಸಬಹುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಂತೂ ಮುಂಗಾರು ಸಮಯದ ವೈರಾಣು ಜ್ವರಬಾಧೆ ಕಾಡದೇ ಇರದು. ಈ ಎಲ್ಲ ಅನಾರೋಗ್ಯ ಸಮಸ್ಯೆಗಳು ಗಂಭೀರವಲ್ಲದಿದ್ದರೂ ಅವು ಉಂಟು ಮಾಡುವ ಕಿರಿಕಿರಿಯಿಂದ ದೂರವಿಡಲು ಮನೆಮದ್ದು ನಮ್ಮಕೈಯಲ್ಲಿದೆ. ಅಡುಗೆ ಮನೆಯ ಒಗ್ಗರಣೆ ಡಬ್ಬಿ, ಹಿತ್ತಿಲಲ್ಲಿ ಬೆಳೆಯುವ ಕೆಲವು ಔಷಧಿ ಸಸ್ಯಗಳೇ ಇಲ್ಲಿ ಸಹಾಯಕ್ಕೆ ಬರಲಿವೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ‘ಕಷಾಯ’ವೇ ಇಂದಿನ ‘ಗ್ರೀನ್‌ ಟೀ’ ಎಂಬ ಹೈಟೆಕ್‌ ಹೆಸರಿನೊಂದಿಗೆ ಅಪ್‌ಗ್ರೇಡ್‌ ಆಗಿ ಮಾರುಕಟ್ಟೆಯಲ್ಲಿ ದೊಡ್ಡ ಜಾಗವನ್ನೇ ಆಕ್ರಮಿಸಿಕೊಂಡಿವೆ. ಕಷಾಯ ಆರೋಗ್ಯಕ್ಕೆ ಒಳ್ಳೆಯದೆಂದು ನಿತ್ಯ ಕುಡಿದರೆ ಕಷ್ಟವೇ. ವಾರಕ್ಕೆ ಎರಡು ಅಥವಾ ಮೂರು ಬಾರಿ, ಕಾಲು ಕಪ್‌ ಕುಡಿದರೆ ಉತ್ತಮ ಎಂಬುದು ಆಯುಷ್‌ ವೈದ್ಯರು ನೀಡುವ ಸಲಹೆ.  ಹಾಗಾದರೆ, ಯಾವ ಕಷಾಯ ಯಾವ ಅನಾರೋಗ್ಯ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ನೋಡೋಣ.

ಅಮೃತಬಳ್ಳಿ ಕಷಾಯ

ADVERTISEMENT

ಬೇಕಾಗುವ ಸಾಮಗ್ರಿ: ಅಮೃತಬಳ್ಳಿ ಎಲೆ 4 (ಕಾಂಡವನ್ನೂ ಬಳಸಬಹುದು)

ಮಾಡುವ ವಿಧಾನ: ಒಂದು ಲೋಟ ನೀರಿಗೆ ಅಮೃತಬಳ್ಳಿ ಎಲೆ ಅಥವಾ ಕಾಂಡವನ್ನು ಹಾಕಿ ಕುದಿಸಬೇಕು. ಒಂದು ಲೋಟ ನೀರು ಕಾಲು ಲೋಟಕ್ಕೆ ಬಂದಾಗ ಸೋಸಿ ಕುಡಿಯಬೇಕು. ಕುಡಿಯುವಾಗ ಕಹಿ ಅನಿಸಿದರೆ ಬೆಲ್ಲ ಸೇರಿಸಿ ಕುಡಿಯಬಹುದು.

ಉಪಯೋಗ: ವೈರಾಣು ಜ್ವರ ಬಾಧೆಯನ್ನು ತಗ್ಗಿಸಲಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ.

ದೊಡ್ಡಪತ್ರೆ ಕಷಾಯ

ಬೇಕಾಗುವ ಸಾಮಗ್ರಿ: ದೊಡ್ಡಪತ್ರೆ 4, ತುಳಸಿ ದಳ 2, ಶುಂಠಿ(ಅರ್ಧ ಇಂಚು), ಅರಿಸಿನ ಪುಡಿ (ಒಂದು ಚಮಚ)

ಮಾಡುವ ವಿಧಾನ: ಒಂದು ಲೋಟ ನೀರಿಗೆ ದೊಡ್ಡಪತ್ರೆ, ತುಳಸಿ ದಳ, ಶುಂಠಿ, ಅರಿಸಿನ ಪುಡಿಯನ್ನು ಹಾಕಿ ಕುದಿಯಲು ಬಿಡಿ. ಒಂದು ಲೋಟ ನೀರು ಕಾಲು ಲೋಟಕ್ಕೆ ಬರುವಷ್ಟು ಕುದಿಸಿದ ನಂತರ ಸೋಸಿ ಬಿಸಿಬಿಸಿಯಾಗಿ ಕುಡಿಯಬೇಕು.

ಉಪಯೋಗ: ಮಕ್ಕಳಿಗೆ, ದೊಡ್ಡವರಿಗೆ ಕಫ ಕಟ್ಟಿಕೊಂಡಲ್ಲಿ ಈ ಕಷಾಯ

ಪರಿಹಾರ ನೀಡಲಿದೆ.

ಶುಂಠಿ–ತುಳಸಿ ಕಷಾಯ

ಬೇಕಾಗುವ ಸಾಮಗ್ರಿ: ಶುಂಠಿ (ಒಂದು ಇಂಚು), ತುಳಸಿ 5 ದಳ, ಲಿಂಬು (ಅರ್ಧ), ಜೇನುತುಪ್ಪ (2ಚಮಚ).

ಮಾಡುವ ವಿಧಾನ: ಒಂದು ಲೋಟ ನೀರಿಗೆ ಶುಂಠಿ, ತುಳಸಿ ಹಾಕಿ ಕುದಿಸಿ, ಕಾಲು ಲೋಟಕ್ಕೆ ಇಳಿಸಬೇಕು. ಸೋಸಿದ ನಂತರ ಲಿಂಬು ರಸ, ಜೇನು ತುಪ್ಪ ಸೇರಿಸಿ ಚೆನ್ನಾಗಿ ಕದಡಿ ಬಿಸಿಯಿರುವಾಗಲೇ ಕುಡಿಯಬೇಕು.

ಉಪಯೋಗ: ಶೀತ, ಗಂಟಲುಕೆರೆತ, ನೆಗಡಿ ಕಫ ಸಮಸ್ಯೆಗೆ ಪರಿಹಾರ ನೀಡುವುದು.

ಕಾಳುಮೆಣಸಿನ ಕಷಾಯ

ಬೇಕಾಗುವ ಸಾಮಗ್ರಿ: ಕಾಳುಮೆಣಸು (ಕರಿ ಅಥವಾ ಬಿಳಿ) 1ಚಮಚ, ಜೀರಿಗೆ 1 ಚಮಚ, ಕೊತ್ತಂಬರಿ ಬೀಜ 1 ಚಮಚ, ಮೆಂತೆ ಕಾಲು ಚಮಚ, ಬೆಲ್ಲ ದೊಡ್ಡ ಚಮಚ.

ಮಾಡುವ ವಿಧಾನ: ಒಂದು ಲೋಟ ನೀರಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಮೆಂತೆ ಸ್ವಲ್ಪ ಜಜ್ಜಿ ಹಾಕಿ ಕುದಿಸಬೇಕು. ಅರ್ಧ ಲೋಟಕ್ಕೆ ಇಳಿದ ನಂತರ ಬೆಲ್ಲ ಸೇರಿಸಿ ಸ್ವಲ್ಪ ಕುದಿಸಿ, ಇಳಿಸಿ ನಂತರ ಸೋಸಿ ಬಿಸಿಯಿರುವಾಗಲೇ ಕುಡಿಯಬೇಕು. ಬೇಕಾದರೆ ಬಿಸಿ ಹಾಲು ಬೆರೆಸಿ ಕುಡಿಯಬಹುದು.

ಉಪಯೋಗ: ಶೀತ, ಗಂಟಲುಕೆರೆತ, ಕೆಮ್ಮು, ಜ್ವರ, ತಲೆಭಾರ ಸಮಸ್ಯೆಗೆ ಪರಿಹಾರ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.