ಕ್ರಿಸ್ಮಸ್‌ಗೆ ಎರಡೇ ದಿನ ಬಾಕಿ ಇದ್ದು, ಕ್ರೈಸ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಖಾದ್ಯಗಳ ತಯಾರಿ ನಡೆಸುತ್ತಿದ್ದಾರೆ. ಚಿಕನ್ ಬಿರಿಯಾನಿ, ಮೀನಿನ ಖಾದ್ಯಗಳನ್ನು ಮಾಡಿ ಮನೆಗೆ ಬರುವ ಸಂಬಂಧಿಕರಿಗೆ, ಸ್ನೇಹಿತರಿಗೆ ಔತಣಕ್ಕೆ ಕರೆಯುತ್ತಾರೆ. ಮನೆಯಲ್ಲೆ ಸುಲಭವಾಗಿ, ರುಚಿಕರವಾಗಿ ಚಿಕನ್ ಬಿರಿಯಾನಿ, ಫಿಶ್ ಫ್ರೈ ಹಾಗೂ ಫಿಶ್ ಕರಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಅರ್ಧ ಕೆಜಿ ಸುರ್ಮಾ, ವಿನೇಗರ್, 1 ಲಿಂಬೆಹಣ್ಣು, 1 ಚಮಚ ಕೆಂಪು ಮೆಣಸಿನಕಾಯಿ ಖಾರದ ಪುಡಿ, ಕಾಲು ಚಮಚ ಧನಿಯಾ ಪುಡಿ, ಅರಿಸಿನ ಪುಡಿ.
ಮಾಡುವ ವಿಧಾನ:
ಮೊದಲಿಗೆ ಮೀನುಗಳನ್ನು ಸ್ವಚ್ಛವಾಗಿ ತೊಳೆದು ಅದಕ್ಕೆ ಉಪ್ಪು ಹಾಕಿ ಅರ್ಧ ಗಂಟೆವರೆಗೆ ಫ್ರಿಡ್ಜ್‌ನಲ್ಲಿ ಇಡಬೇಕು. ನಂತರ ಲಿಂಬೆಹಣ್ಣು, ಖಾರದಪುಡಿ, ಅರಿಸಿನ ಪುಡಿ ಎಲ್ಲವನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ವಿನೆಗರ್ ಹಾಕಿ ತೀರಾ ನೀರು ಅಲ್ಲದೇ, ಗಟ್ಟಿಯೂ ಅಲ್ಲದೇ ಮಧ್ಯಮ ಹಂತದಲ್ಲಿ ಕಲಿಸಬೇಕು.
ಫ್ರಿಡ್ಜ್‌ನಲ್ಲಿಟ್ಟಿರುವ ಮೀನುಗಳನ್ನು ತೆಗೆದು ಈ ಮುಂಚೆ ಕಲಿಸಿಟ್ಟಿರುವ ಮಸಾಲೆಯನ್ನು ಅದರಲ್ಲಿ ತುಂಬಬೇಕು. ನಂತರ ನಾನ್‌ಸ್ಟಿಕ್ ಹಂಚನ್ನು ಗ್ಯಾಸ್ ಮೇಲಿಟ್ಟು ಅದು ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮೀನಿನ ಎರಡು ಬದಿಗೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಫಿಶ್ ಫ್ರೈ ತಿನ್ನಲು ರೆಡಿ.
ರವೆ ಮೀನಿನ ಫ್ರೈ ಬೇಕಾದಲ್ಲಿ ಬಾಂಬೆ ರವಾ ಮತ್ತು ಸ್ವಲ್ಪ ಅಕ್ಕಿ ಹಿಟ್ಟನ್ನು ಕಲಿಸಿ ಅದರಲ್ಲಿ ಮೀನನ್ನು ಹೊರಳಾಡಿಸಿ ಬಾಣಲೆಯಲ್ಲಿ ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ತೆಗೆದರೆ ರವಾ ಫಿಶ್ ಫ್ರೈ ಸವಿಯಲು ರೆಡಿ.
ಬೇಕಾಗುವ ಸಾಮಾಗ್ರಿಗಳು:
ಅರ್ಧ ಕೆಜಿ ಮೀನು, 4 ಒಣ ಮೆಣಸಿನಕಾಯಿ, 1 ಚಮಚ ಹವೇಜ್, ಕಾಲು ಚಮಚ ಸಾಸಿವೆ, ಸ್ವಲ್ಪ ಜೀರಿಗೆ, 2 ಜುಮ್ಮನ್ ಕಾಯಿ, ಒಂದು ಬಟ್ಟಲು ಕೊಬ್ಬರಿ ತುರಿ, ಎರಡು ಟೊಮ್ಯಾಟೊ, ಸ್ವಲ್ಪ ಹುಣಸೆ ಹಣ್ಣು, 1 ಈರುಳ್ಳಿ, ಸ್ವಲ್ಪ ಹಸಿಶುಂಠಿ, ಒಂದು ಬೆಳ್ಳುಳ್ಳಿ
ಮಾಡುವ ವಿಧಾನ:
ಮೀನನ್ನು ಚೆನ್ನಾಗಿ ತೊಳೆದು ಉಪ್ಪು, ಸ್ವಲ್ಪ ವಿನೇಗರ್ ಹಾಕಿ ಇಡಬೇಕು. ಒಣ ಮೆಣಸಿನಕಾಯಿ, ಹವೇಜ್, ಸಾಸಿವೆ, ಜೀರಿಗೆ, ಜುಮ್ಮನ್ ಕಾಯಿ, ಕೊಬ್ಬರಿ ತುರಿ, ಟೊಮ್ಯಾಟೊ, ಹುಣಸೆ ಹಣ್ಣು, ಈರುಳ್ಳಿ ಎಲ್ಲವನ್ನು ಮಿಕ್ಸರ್‌ನಲ್ಲಿ ಸಣ್ಣಗೆ ರುಬ್ಬಿಕೊಳ್ಳಬೇಕು. ನಂತರ ನಿಮಗೆ ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಮೀನುಗಳನ್ನು ಹಾಕಿ 5 ನಿಮಿಷ ಕುದಿಸಬೇಕು.
ನಂತರ ಗ್ಯಾಸ್ ಮೇಲೆ ಒಂದು ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ನಾಲ್ಕು ಹಸಿಮೆಣಸಿನಕಾಯಿ ಉದ್ದಕ್ಕೆ ಕತ್ತರಿಸಿರುವುದು, ಸಾಸಿವೆ, ಜೀರಿಗೆ ಹಾಗೂ ಕರಿಬೇವನ್ನು ಒಗ್ಗರಣೆ ಹಾಕಿ ಅದನ್ನು ಈ ಮುಂಚೆ ಕುದಿಸಿದ ಮಸಾಲೆ ಹಾಕಬೇಕು. ಒಗ್ಗರಣೆಯ ನಂತರ ಮತ್ತೆ ಕುದಿಸಬಾರದು. ಈಗ ಫಿಶ್ ಕರಿ ತಿನ್ನಲು ರೆಡಿ.
ಬೇಕಾಗುವ ಸಾಮಗ್ರಿಗಳು:
1 ಕೆಜಿ ಬಾಯ್ಲರ್ ಚಿಕನ್, 1 ಕೆ.ಜಿ ಅಕ್ಕಿ(ಬಾಸ್ಮತಿ/ ಜೀರಾ ರೈಸ್), 100 ಗ್ರಾಂ ಹಸಿಶುಂಠಿ, 100 ಗ್ರಾಂ ಬೆಳ್ಳುಳ್ಳಿ, 1 ಕಟ್ ಪುದೀನಾ, 1 ಕಟ್ ಕೊತ್ತಂಬರಿ, 50 ಗ್ರಾಂ ಹಸಿಮೆಣಿಸಿನಕಾಯಿ, ಈರುಳ್ಳಿ, ಟೊಮ್ಯಾಟೊ
ಮಾಡುವ ವಿಧಾನ:
ಮೊದಲಿಗೆ ಬೆಳ್ಳುಳ್ಳಿ, ಹಸಿಶುಂಠಿ, ಕೊತ್ತಂಬರಿ ಹಾಗೂ ಹಸಿಮೆಣಸಿನಕಾಯಿಯನ್ನು ನೀರು ಮುಟ್ಟಿಸದೇ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ನಂತರ ಪುದೀನಾವನ್ನು ಸಣ್ಣಗೆ ಹಾಗೂ ಈರುಳ್ಳಿ, ಟೊಮ್ಯಾಟೊ ಅನ್ನು ಕತ್ತರಿಸಿಟ್ಟುಕೊಳ್ಳಬೇಕು. ಒಂದೆಡೆ ಅಕ್ಕಿಯನ್ನು ನೆನೆಯಲು ಇಡಬೇಕು. ನಂತರ ದೊಡ್ಡ ಬಾಣಲಿಯನ್ನು ಗ್ಯಾಸ್ ಮೇಲಿಟ್ಟು 250 ಗ್ರಾಂ ಎಣ್ಣೆ ಹಾಕಿ ಅದು ಕಾದ ಮೇಲೆ ಏಲಕ್ಕಿ, ದಾಲ್ಚಿನ್ನಿ, ಲವಂಗ ಹಾಕಬೇಕು. ನಂತರ ಬಿರಿಯಾನಿ ಎಲೆ, ಕತ್ತರಿಸಿಟ್ಟುಕೊಂಡಿರುವ ಪುದೀನಾ, ಈರುಳ್ಳಿ ಹಾಕಿ ನಂತರ ಈ ಮುಂಚೆ ಮಾಡಿಟ್ಟುಕೊಂಡ ಪೇಸ್ಟ್ ಹಾಕಿ ಚೆನ್ನಾಗಿ ಕಲಿಸಿ . ಧನಿಯಾ ಪುಡಿ, ಒಂದು ಚಮಚ ಬಿರಿಯಾನಿ ಮಸಾಲ ಪುಡಿ, ಟೊಮ್ಯಾಟೊ ಹಾಕಿ ಅದಕ್ಕೆ ತೊಳೆದಿಟ್ಟ ಚಿಕನ್ ಹಾಕಿ ಬೇಯಿಸಲು ಬಿಡಬೇಕು.
ಮತ್ತೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ನೆನೆಸಿಟ್ಟ ಅಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಬೇಕು. ಶೇ 80ರಷ್ಟು ಅನ್ನ ಆದಾಗ, ನೀರು ಬಸಿದು ಚಿಕನ್ ಪಾತ್ರೆಗೆ ಹಾಕಿ ಚೆನ್ನಾಗಿ ಕಲಿಸಿ, ಮೇಲೆ ಕೊತ್ತಂಬರಿ, ಪುದೀನಾ ಸೊಪ್ಪು ಹಾಕಿ 20 ರಿಂದ 25 ನಿಮಿಷ ಬೇಯಿಸಬೇಕು. ನಂತರ ಬಿರಿಯಾನಿ ಮೇಲೆ ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಕಲಿಸಿದರೆ ರುಚಿಕರವಾದ ಬಿರಿಯಾನಿ ಸವಿಯಲು ರೆಡಿ. ಇದನ್ನು ಮೊಸರು ಚಟ್ನಿಯೊಂದಿಗೆ ತಿಂದರೆ ರುಚಿ ಹೆಚ್ಚು.
ಮಾಹಿತಿ: ಫ್ರಾಂಜಲಾ ನವೀನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.