ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಮಕ್ಕಳು ದೇಶದ ಸಂಪತ್ತು. ಸತ್ವಯುತ ಹಾಗೂ ಪೌಷ್ಟಿಕಯುಕ್ತ ಆಹಾರ ನಮ್ಮ ಮಕ್ಕಳಿಗೆ ಸಿಗುತ್ತಿದೆಯೇ? ಎಂಬುದರ ಬಗ್ಗೆ ಪೋಷಕರು ಆಗಾಗ್ಗೆ ಯೋಚಿಸಬೇಕು. ಮಕ್ಕಳು ಇಷ್ಟಪಡುತ್ತಾರೆ ಎನ್ನುವ ಕಾರಣಕ್ಕೆ ಜಂಕ್‌ಫುಡ್‌ಗಳನ್ನು ನೀಡಬಾರದು. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಾದರೆ ಆರು ತಿಂಗಳ ಮಗುವಿನಿಂದ ಆರು ವರ್ಷದ ಮಕ್ಕಳ ಊಟದ ತಟ್ಟೆಯಲ್ಲಿ ಕಡ್ಡಾಯವಾಗಿ ಏನೇಲ್ಲ ಇರಬೇಕು? ಎಂಬುದಕ್ಕೆ ಇಲ್ಲಿದೆ ಸರಳ ಉಪಾಯ.
ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ಶಿಶುವಿಗೆ ತಾಯಿಯ ಎದೆಹಾಲನ್ನಷ್ಟೇ ನೀಡಬೇಕು. ನಂತರದ ಪೋಷಣೆಗೆ ಕೇವಲ ಎದೆಹಾಲು ಸಾಕಾಗುವುದಿಲ್ಲ. ಶಿಶುವಿನ ಬೆಳವಣಿಗೆಗೆ ಮತ್ತು ಪೋಷಣೆಗೆ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ ಇದನ್ನು ತಾಯಿ ಹಾಲಿನ ಜತೆಗೆ ವೀನಿಂಗ್ ಫುಡ್‌ಗಳನ್ನು(weaning foods)ನೀಡಬೇಕಾಗುತ್ತದೆ. ಇದನ್ನು ಪೂರಕ ಆಹಾರವೆಂದೂ ಕರೆಯಲಾಗುತ್ತದೆ
ನಿಮ್ಮ ಮಗು ಬೆಳೆದಂತೆ, ಅದರ ಪೌಷ್ಟಿಕಾಂಶದ ಅಗತ್ಯಗಳು ಹೆಚ್ಚುತ್ತವೆ. ಮೊದಲ ಎರಡು ವರ್ಷಗಳಲ್ಲಿ, ಪ್ರತಿ ಊಟದ ಶೇ 75ರಷ್ಟು ಮಗುವಿನ ಮಿದುಳಿನ ಬೆಳವಣಿಗೆಗೆ ಹೋಗುತ್ತದೆ. ಆರು ತಿಂಗಳು ತುಂಬಿದ ನಂತರ ಮಗುವಿಗೆ ಮೊದಲು ಮನೆಯಲ್ಲಿ ತಯಾರಿಸಿದ ದ್ರವ ಆಹಾರವನ್ನು ಪರಿಚಯಿಸಬೇಕು. ತದನಂತರ ಘನ ಆಹಾರವನ್ನು ಕೊಡಬೇಕು. ದ್ರವ ಆಹಾರಗಳು ಎಂದರೆ ಹಸುವಿನ ಹಾಲು, ಹಣ್ಣಿನ ರಸ, ತರಕಾರಿ ಮತ್ತು ಸೊಪ್ಪಿನ ಸೂಪ್‌ಗಳು. ಚಮಚದಿಂದ ಶುರು ಮಾಡಿ ಹಂತ ಹಂತವಾಗಿ ಅದರ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಬೇಕು. ನಂತರ ಘನ ಆಹಾರವನ್ನು ಅಂದರೆ ಮೃದುವಾದ, ಚೆನ್ನಾಗಿ ಹಿಸುಕಿದ ಆಹಾರಗಳಾದ ಗಂಜಿ, ಹಿಸುಕಿದ ಹಣ್ಣುಗಳು, ತರಕಾರಿಗಳನ್ನು ದಿನಕ್ಕೆ ಎರಡು ಬಾರಿ ಕೊಡಬಹುದು. ಮಗುವಿಗೆ 6ರಿಂದ 8 ತಿಂಗಳು ಎದೆ ಹಾಲಿನ ಜೊತೆಗೆ ಪೂರಕ ಆಹಾರಗಳನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ನೀಡಬೇಕು. 9ರಿಂದ 24 ತಿಂಗಳುಗಳಲ್ಲಿ ದಿನಕ್ಕೆ ಕನಿಷ್ಠ ಮೂರು ಬಾರಿ ಆಹಾರವನ್ನು ಹೆಚ್ಚಿಸಬೇಕು.
ಎದೆ ಹಾಲು ನೀಡದವರು 6ರಿಂದ 24 ತಿಂಗಳ ವಯಸ್ಸಿನ ಮಗುವಿಗೆ ಹಸುವಿನ ಹಾಲಿನ ಜೊತೆಗೆ ಪೂರಕ ಆಹಾರಗಳನ್ನು ಕನಿಷ್ಠ 4-5 ಬಾರಿ ಕೊಡಬೇಕು. ಮಗುವಿನ ವಯಸ್ಸಿನ ಅನುಗುಣವಾಗಿ ಆಹಾರ ಪ್ರಮಾಣ ಮತ್ತು ಊಟವನ್ನು ಹೆಚ್ಚಿಸಬೇಕು. ಉದಾಹರಣೆಗೆ ಪ್ಯೂರೀಸ್ (ಹಣ್ಣುಗಳು, ಆಲೂಗಡ್ಡೆ, ತರಕಾರಿಗಳು, ಬಟಾಣಿ ಆಧಾರಿತ ಪ್ಯೂರಿಗಳು) ಮಾಲ್ಟ್‌ಗಳು (ರಾಗಿ, ಮಿಶ್ರ ಕಾಳುಗಳು) ಜತೆಗೆ ನಟ್ಸ್ ಅಂಡ್ ಸೀಡ್ಸ್ ಅಂದರೆ ಎಣ್ಣೆ ಬೀಜಗಳ ಪೇಸ್ಟ್, ಪುಡ್ಡಿಂಗ್‌ಗಳು (ಓಟ್ಸ್, ಮೊಟ್ಟೆ, ಅವಲಕ್ಕಿ ಆಧಾರಿತ ಪುಡ್ಡಿಂಗ್‌ಗಳು).
ಎಂಟು ತಿಂಗಳ ನಂತರ ಸಂಪೂರ್ಣವಾಗಿ ಚೆನ್ನಾಗಿ ಬೇಯಿಸಿದ ಪೂರ್ತಿ ಮೊಟ್ಟೆ, ಮಾಂಸ ಆಹಾರಗಳನ್ನು ಸಣ್ಣ ಸಣ್ಣ ಪ್ರಮಾಣದ ಶಿಶುಗಳಿಗೆ ಪರಿಚಯಿಸಬೇಕು. ಇದನ್ನು ಸೇವಿಸದವರು ಪೌಷ್ಟಿಕಾಂಶಗಳ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಬೇಳೆಕಾಳುಗಳನ್ನು ಸೇರಿಸಬೇಕು. ಉದಾಹರಣೆಗೆ ಪೊಂಗಲ್, ಕಿಚಡಿ, ದಾಲ್ ರೈಸ್ ಮತ್ತು ಇತರೆ ಬೇಳೆ ತರಕಾರಿ ಆಧಾರಿತ ತಿಂಡಿಗಳು. ಊಟದಲ್ಲಿ ಕೇವಲ ಹಾಲನ್ನು ಮಾತ್ರ ಕೊಡುವುದರಿಂದ ಅದು ಮಗುವಿಗೆ ಸಾಕಾಗಲ್ಲ. ಇದರ ಜೊತೆಗೆ ಹಾಲಿನಿಂದ ತಯಾರಿಸಿದ ಆಹಾರಗಳು ಮತ್ತು ದಿನದಲ್ಲಿ ಒಂದು ಮಗುವಿಗೆ ಕನಿಷ್ಠ 300-500 ಎಂಎಲ್‌ನಷ್ಟು ಹಾಲು ಅಗತ್ಯವಿರುತ್ತದೆ.
2-6 ವರ್ಷದ ಮಕ್ಕಳಿಗೆ ಸಾಕಷ್ಟು ಆಹಾರಗಳನ್ನು ಒದಗಿಸಬೇಕಾಗುತ್ತದೆ. ಈ ಹಂತದಲ್ಲಿ ಮಕ್ಕಳಿಗೆ ಸಮತೋಲಿತ ಮತ್ತು ಪೌಷ್ಟಿಕ ಆಹಾರದ ಅಗತ್ಯತೆ ಹೆಚ್ಚು ಇರುತ್ತದೆ. ದೇಹದ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ದೈಹಿಕ ಚಟುವಟಿಕೆ ಹೆಚ್ಚು ಇರುವುದರಿಂದ ಸಮರ್ಪಕತೆಯನ್ನು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್‌ಗಳು (ವಿಟಮಿನ್ ಸಿ) ಖನಿಜಗಳ (ಕಬ್ಬಿಣ, ಕ್ಯಾಲ್ಸಿಯಂ) ಅವಶ್ಯಕತೆಯಿರುತ್ತದೆ.
ಒಟ್ಟಾರೆ, 6 ತಿಂಗಳ ಮಗುವಿನಿಂದ ಆರು ವರ್ಷದ ಮಕ್ಕಳ ಆಹಾರವು ವಿವಿಧ ರೀತಿಯ ಆಹಾರಗಳಾದ ಸೊಪ್ಪು, ತರಕಾರಿ, ಪಿಷ್ಟ ಆಹಾರಗಳು, ಹಣ್ಣುಗಳು ಮತ್ತು ಹೆಚ್ಚು ಪ್ರೊಟೀನ್ ಇರುವ ಆಹಾರಗಳನ್ನು (ಮೊಟ್ಟೆ, ಮಾಂಸ, ಎಣ್ಣೆ ಬೀಜಗಳ, ಬೇಳೆ ಕಾಳುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು) ಒಳಗೊಂಡಿರಬೇಕು. ಬಹಳ ಮುಖ್ಯವಾಗಿ 6 ತಿಂಗಳ ನಂತರ ಮಗುವಿಗೆ ಕಡ್ಡಾಯವಾಗಿ ವೀನಿಂಗ್ ಫುಡ್‌ಗಳನ್ನು ಕೊಡಬೇಕು. ಇಲ್ಲವಾದರೆ ಇದರಿಂದ ಮಗುವಿಗೆ ಅಪೌಷ್ಟಿಕತೆ ಮತ್ತು ಬೆಳವಣಿಗೆ ಕುಂಠಿತವಾಗಬಹುದು.
ಮಕ್ಕಳ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಸಂಸ್ಕರಿಸಿದ ಆಹಾರಗಳಾದ ಬಿಸ್ಕೆಟ್, ಚಿಪ್ಸ್, ಕೇಕ್, ಫ್ರೋಜನ್ ಫ್ರೂಟ್ಸ್, ಜ್ಯೂಸ್, ಬೇಕರಿ ಪದಾರ್ಥಗಳು, ಕುರುಕಲು ತಿಂಡಿಗಳನ್ನು ಅಭ್ಯಾಸ ಮಾಡಿಸದೇ ಮನೆಯಲ್ಲೇ ಮಾಡಿದ ರುಚಿಕರವಾದ, ಸತ್ವಯುತವಾದ ಪೌಷ್ಟಿಕ ತಿಂಡಿಗಳನ್ನು ಮಾಡಿಕೊಡುವುದು ಹೆಚ್ಚು ಸೂಕ್ತ.
–ಲೇಖಕಿ, ಕ್ಲಿನಿಕಲ್ ನ್ಯೂಟ್ರಿಷಿಯನಿಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.