ADVERTISEMENT

ಬೆಳಗಿನ ತಿಂಡಿಗೆ ಆನಂದ್ ದಮ್‌ ಬಿರಿಯಾನಿ...

ಶಶಿಕುಮಾರ್ ಸಿ.
Published 28 ಏಪ್ರಿಲ್ 2022, 10:17 IST
Last Updated 28 ಏಪ್ರಿಲ್ 2022, 10:17 IST
ಬೆಳಗಿನ ತಿಂಡಿಗೆ ಆನಂದ್ ದಮ್‌ ಬಿರಿಯಾನಿ...
ಬೆಳಗಿನ ತಿಂಡಿಗೆ ಆನಂದ್ ದಮ್‌ ಬಿರಿಯಾನಿ...   

ಸುಮಾರು ಎರಡು ವರ್ಷಗಳ ಹಿಂದಿನ ಮಾತಿದು. ಮಾವ ಹರೀಶ್ ಪೋನಾಯಿಸಿ ‘ಹೋಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣ ಬಳಿಗೆ ಬೇಗ ಬಾ’ ಎಂದ. ಏನಾಯಿತೊ ಏನೋ ಎಂಬ ಆತಂಕದಿಂದ ನಿದ್ದೆ ಮಂಪರಿನಲ್ಲೇ ಬೇಗ ಹೋದೆ. ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಬಳಿ ಮಾವ ಏನೋ ತಿನ್ನುತ್ತಿದ್ದ. ಆಶ್ಚರ್ಯವಾಯಿತು.

‘ಅಯ್ಯೊ ನಿನ್ನ ಮನೆ ಕಾಯೋಗ ಏನೋ ಆಗಬಾರದು ಆದಂತೆ ಫೋನಾಯಿಸಿ ಇಲ್ಲಿ ನೋಡಿದ್ರೆ ಬೆಳಿಗ್ಗೆಯೇ ತಿನ್ತಾ ಇದ್ದೀಯಾ’ ಎಂದು ಗೊಣಗಾಡುತ್ತಾ ಬಳಿ ಹೋದೆ. ಅಷ್ಟರಲ್ಲೇ ನನಗೂ ಒಂದು ಫ್ಲೇಟ್ ಆರ್ಡರ್‌ ಮಾಡಿದ್ದ ಮಾವ ಅದನ್ನು ತಂದು ಕೈಗಿಟ್ಟು ತಿನ್ನು ಎಂದ. ಆಗ ಪರಿಚಯವಾಗಿದ್ದೇ ಹೊಸಕೋಟೆಯ ಬ್ರೇಕ್‌ಫಾಸ್ಟ್‌ ಸ್ಪೆಷಲ್ ‘ಆನಂದ್‌ ದಮ್‌ ಬಿರಿಯಾನಿ’...

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಹಲವು ವಿಚಾರಗಳಿಗೆ ಖ್ಯಾತಿಯೂ ಹೌದು, ಕುಖ್ಯಾತಿಯೂ ಹೌದು. ಖ್ಯಾತಿ ವಿಚಾರಕ್ಕೆ ಬಂದರೆ ‘ಆನಂದ್ ದಮ್‌ ಬಿರಿಯಾನಿ’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಹೋಟೆಲ್‌ನ ಮಾಲೀಕ ಆನಂದ್. ಇಲ್ಲಿನ ದಮ್‌ ಬಿರಿಯಾನಿ ಸ್ವಾದಕ್ಕೆ ಮಾರುಹೋದ ಗ್ರಾಹಕರು ಇವರಿಗೆ ಆನಂದದಿಂದ ಕೊಟ್ಟ ಹೆಸರೇ ‘ಆನಂದ್ ದಮ್‌ ಬಿರಿಯಾನಿ’.

ADVERTISEMENT

ಮಾವ ಪರಿಚಯಿಸಿಕೊಟ್ಟ ಆ ಹೋಟೆಲ್‌ಗೆ ಸ್ನೇಹಿತರ ಜತೆ ಹಾಗೂ ಒಬ್ಬನೇ ಹೋಗಿದ್ದುಂಟು. ತಿನ್ನಬೇಕು ಎನಿಸಿದಾಗ ಆನಂದ್‌ ಬಿರಿಯಾನಿ ಹೋಟೆಲ್ ಮುಂದೆ ನನ್ನ ಬೈಕ್ ಹಾಜರ್ ಇರುತ್ತಿತ್ತು. ಅಷ್ಟರ ಮಟ್ಟಿಗೆ ಅಲ್ಲಿನ ಬಿರಿಯಾನಿ ರುಚಿ ಹಿಡಿಸುತ್ತದೆ. ಅದೇ ರೀತಿ ಕಳೆದ ಭಾನುವಾರವು ಬೈಕ್ ಆ ಹೋಟೆಲ್‌ನತ್ತ ತಿರುಗಿತ್ತು. ಅಷ್ಟರಲ್ಲಾಗಲೇ ಜನಜಂಗುಳಿಯಿಂದ ತುಂಬಿದ್ದ ಹೋಟೆಲ್‌ನಲ್ಲಿ ಬಿರಿಯಾನಿ ಟೋಕನ್ ಖರೀದಿಗಾಗಿ ‘ತಾ ಮುಂದು ನಾ ಮುಂದು’ ಎಂದು ನೂಕುನುಗ್ಗಲು ಉಂಟಾಗಿತ್ತು.

ಹೋಟೆಲ್‌ ಮಾಲೀಕರನ್ನು ಪರಿಚಯ ಮಾಡಿಕೊಂಡ ನಾನು ಕೇಳುವ ಮುನ್ನವೇ ಬಿಸಿ ಬಿಸಿ ಬಿರಿಯಾನಿ ಅಡಿಕೆ ತಟ್ಟೆಯಲ್ಲಿ ಹಾಕಿಕೊಂಡು ತಂದ ಅವರು ಟೇಸ್ಟ್‌ ಮಾಡಿ ಸರ್ ಎಂದರು. ಹೆಚ್ಚು ಮಸಾಲೆಯಿಲ್ಲದೆ, ಪಕ್ಕ ಹಳ್ಳಿ ಸೊಗಡಿನ ಶೈಲಿಯ ಆ ಬಿರಿಯಾನಿ ಘಮಘಮಿಸುತ್ತಿತ್ತು. ಅದರ ಸುವಾಸನೆಯು ಮೂಗಿಗೆ ಬಡಿಯುತ್ತಿದ್ದಂತೆ ನನ್ನ ನಾಲಿಗೆ ಜಾಗೃತಗೊಂಡಿತ್ತು. ಅನ್ನದೊಳಗೆ ಹುದುಗಿದ್ದ ಹದವಾಗಿ ಬೇಯಿಸಿದ ಕುರಿ ಮಾಂಸದ ತುಂಡುಗಳು ಬಾಯಲ್ಲಿ ನೀರೂರಿಸುತ್ತಿತ್ತು. ಅಪರೂಪದ ನಲ್ಲಿ (ಕುರಿ ಮಾಂಸದ ಕಾಲಿನ ಮೂಳೆ) ಸಹ ಅದರಲ್ಲಿತ್ತು.

ಬಿರಿಯಾನಿ ರುಚಿ ನಾಲಿಗೆಗೆ ತಾಗುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಇದೇ ಹೋಟೆಲ್‌ನಲ್ಲಿ ಸವಿದಿದ್ದ ರುಚಿಯ ನೆನಪಾಯಿತು. ರುಚಿ ಹಾಗೂ ಗುಣಮಟ್ಟದಲ್ಲಿ ಅಂದಿಗೂ ಇಂದಿಗೂ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಕುರಿ ಮಾಂಸದ ದರ ಹೆಚ್ಚಾಗಿರುವುದರಿಂದಲೆನೋ ತಟ್ಟೆಯಲ್ಲಿ ಮಾಂಸದ ತುಂಡುಗಳು ಪ್ರಮಾಣ ಕ್ಷೀಣಿಸಿದಂತಿತ್ತು. ಕೆಲ ಗ್ರಾಹಕರ ಪ್ರತಿಕ್ರಿಯೆಯೂ ಹಾಗೆಯೇ ಇತ್ತು. ಆದರೆ, ಜೀರಾ ಸಂಬಾ, ಬಾಸೂಮತಿ, ಕೇಸರ್ ಕೇಳಿ ಎಂಬ ಮೂರು ಬಗೆಯ ಅಕ್ಕಿಯಿಂದ ತಯಾರಿಸಿದ್ದ ಬಿರಿಯಾನಿ ಅನ್ನ ಮಾಂಸದ ತುಂಡುಗಳ ಕೊರತೆ ನೀಗಿಸುತ್ತದೆ. ಕೊಡುವ 170 ರೂಪಾಯಿಗೆ ಖಂಡಿತ ಮೋಸವಾಗದು.

ಬಿರಿಯಾನಿ ತಿಂದು ಮುಗಿಸಿದ ನನ್ನ ನಾಲಿಗೆ ಎದುರು ನೋಡುತ್ತಿದ್ದದ್ದು ಕಾಲುಸೂಪಿನ ರುಚಿಗೆ. ರಾತ್ರಿಯಿಡಿ ಬೆಂದು ಸಿದ್ಧಗೊಂಡ ಸೂಪಿನ ಸ್ವಾದ ಹೆಚ್ಚಿಸಿದ್ದು ನಲ್ಲಿ (ಕುರಿ ಮಾಂಸದ ಕಾಲಿನ ಮೂಳೆ). ಬಾಯಿಗಿರಿಸಿ ಅದರ ರುಚಿ ಹೀರಿದ ನನಗೆ ಈ ಹೋಟೆಲ್‌ ನಿತ್ಯವೂ ತೆರೆಯುವಂತಿದ್ದರೆ ಆಹಾ ಎಷ್ಟು ಚೆನ್ನಾಗಿರುತ್ತಿತ್ತು ಎನಿಸಿತು. ಕರಿಮೆಣಸು, ಉಪ್ಪು ಹಾಗೂ ಖಾರವನ್ನು ರುಚಿಗೆ ತಕ್ಕಷ್ಟು ಹಾಕಲಾಗಿತ್ತು. ಅದರ ಸುವಾಸನೆಗೆ ಹೊಟ್ಟೆ ಹಿಗ್ಗಿ ತುತ್ತಿನ ಚೀಲದಲ್ಲಿ ಇನ್ನೂ ಖಾಲಿ ಜಾಗ ಇದೆ ಎಂದು ಪ್ರಚೋದನೆ
ನೀಡುತ್ತಿತ್ತು. ಕ್ಷಣಾರ್ಧದಲ್ಲಿ ಬಿರಿಯಾನಿ ಹಾಗೂ ಕಾಲು ಸೂಪು ಖಾಲಿಯಾಗಿತ್ತು.

2 ಕೆ.ಜಿ.ಯಿಂದ 300 ಕೆ.ಜಿ
‘17 ವರ್ಷಗಳ ಹಿಂದೆ ಟೀ, ಕಾಫಿ ಅಂಗಡಿ ಇಟ್ಟಿದ್ದೆ. ಅಂಗಡಿಗೆ ಬರುತ್ತಿದ್ದ ಬಹುತೇಕ ಗ್ರಾಹಕರು ಟಿಫಿನ್ ಏನಾದರೂ ಮಾಡಿ ಎಂದು ಒತ್ತಾಯಿಸುತ್ತಿದ್ದರು. ಆಗ ಹೊಳೆದದ್ದೆ ಟಿಫಿನ್‌ಗೆ ಬಿರಿಯಾನಿ ಮಾಡಿದರೆ ಹೇಗೆ ಎಂದು. ಪ್ರಾರಂಭಿಸಿಬಿಟ್ಟೆ. ಅದು ಕ್ಲಿಕ್ ಆಯಿತು’ ಎನ್ನುತ್ತಾರೆ ಆನಂದ್.

‘ಪ್ರಾರಂಭದಲ್ಲಿ ಎರಡು ಕೆ.ಜಿ. ಕುರಿ ಮಾಂಸದಿಂದ ಬಿರಿಯಾನಿ ಮಾಡಲು ಆರಂಭಿಸುತ್ತಿದೆ. ನಾಲಿಗೆಗೆ ರುಚಿ ಸಿಕ್ಕಿದ್ದರಿಂದಲೇನೋ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹೋಟೆಲ್‌ಗೆ ಬರಲಾರಂಭಿಸಿದರು. ಈಗ 300 ಕೆ.ಜಿ. ಮಾಂಸದಿಂದ ಬಿರಿಯಾನಿ ಮಾಡುವಷ್ಟರ ಮಟ್ಟಿಗೆ ಹೋಟೆಲ್ ಬೆಳೆದು ನಿಂತಿದೆ.’

‘ಸಂತೆಯಿಂದ ತಂದ ನಾಟಿ ಕುರಿ ಮಾಂಸವನ್ನೇ ಬಳಸುತ್ತೇವೆ. ಬಿರಿಯಾನಿ ವಿಭಿನ್ನವಾಗಿರಲಿ ಎಂಬ ಕಾರಣಕ್ಕೆ ಒಮ್ಮೆ ಜೀರಾ ಸಂಬಾ, ಬಾಸೂಮತಿ, ಕೇಸರ್ ಕೇಳಿ ಅಕ್ಕಿ ಬಳಸಿ ತಯಾರಿಸಿದ್ದೆವು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂತು. ಅದನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಭಾನುವಾರ 1,800–2,000 ಫ್ಲೇಟ್‌
ಬಿರಿಯಾನಿ ಮಾರಾಟ ಮಾಡುತ್ತೇವೆ. ಉಳಿದ ದಿನಗಳಲ್ಲಿ 500 ಪ್ಲೇಟ್‌ ಬಿರಿಯಾನಿ ಮಾರಾಟವಾಗುತ್ತದೆ. ಹೋಟೆಲ್‌ನಲ್ಲಿ ಬಾಣಸಿಗರು ಅಂತ ಪ್ರತ್ಯೇಕವಾಗಿ ಯಾರೂ ಇಲ್ಲ. ನಾನೇ ಮಾಡಿಕೊಂಡು ಬಂದಿದ್ದೇವೆ. ನನ್ನ ಮಾರ್ಗದರ್ಶನದಲ್ಲಿ ಸಿಬ್ಬಂದಿಯೂ ಮಾಡುತ್ತಾರೆ.’

‘ಸೀಮಿತ ಅವಧಿ ಹಾಗೂ ಸೀಮಿತ ದಿನದಂದೇ ಬಿರಿಯಾನಿ ಮಾಡಬೇಕು ಎಂದು ಪ್ರಾರಂಭದಲ್ಲೇ ನಿರ್ಧರಿಸಿದ್ದೆ. ಅದರಂತೆ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 7 ರಿಂದ ಬೆಳಿಗ್ಗೆ 9.30ರ ವರೆಗೆ ಕೇವಲ ಮೂರೂವರೆ ಗಂಟೆ ಮಾತ್ರ ಬಿರಿಯಾನಿ ಮಾರಾಟ ಮಾಡುತ್ತೇವೆ. ಅದೇ ಪದ್ಧತಿ ಇದುವರೆಗೆ ನಡೆದುಕೊಂಡು ಬಂದಿದೆ.’

‘ಗ್ರಾಹಕರಿಗೆ ಅತ್ಯುತ್ತಮ ರುಚಿ ನೀಡುವುದೊಂದೆ ನಮ್ಮ ಗುರಿ. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಎಣ್ಣೆ, ಅಕ್ಕಿ, ಮಾಂಸ, ಮಸಾಲೆ ಪದಾರ್ಥಗಳನ್ನು ನಾನೇ ಪರಿಶೀಲಿಸಿ ತೆಗೆದುಕೊಳ್ಳುತ್ತೇನೆ. ಬಿರಿಯಾನಿಗೆ ಬೇಕಾದ ಮಸಾಲೆ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸುತ್ತೇವೆ. ನಾಟಿ ಕೊತ್ತಂಬರಿ, ನಾಟಿ ಶುಂಠಿ, ನಾಟಿ ಬೆಳ್ಳುಳ್ಳಿ ಮಾತ್ರ ಬಳಸುತ್ತೇವೆ. ಇದು ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ. ಹೀಗಾಗಿಯೇ ದೇವನಹಳ್ಳಿ, ವಿಜಯಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಮಾಲೂರು, ಆನೇಕಲ್ ಹಾಗೂ ಬೆಂಗಳೂರಿನ ಬಹುತೇಕ ಭಾಗಗಳಿಂದ ಗ್ರಾಹಕರು ಈ ಹೋಟೆಲ್‌ಗೆ ಬರುತ್ತಾರೆ. ರುಚಿ ಹಾಗೂ ಗುಣಮಟ್ಟ ಕಾಯ್ದುಕೊಂಡ ಕಾರಣಕ್ಕೆ ಬಿರಿಯಾನಿಯ ಕಂಪು ಇಷ್ಟು ಭಾಗಗಳಿಗೆ ಹರಡಿದೆ ಎಂದು ಸಂತಸದಿಂದಲೇ ಹೇಳುತ್ತಾರೆ ಆನಂದ್.

**

ಸಮಯ: ಭಾನುವಾರ, ಮಂಗಳವಾರ ಶುಕ್ರವಾರ ಬೆಳಿಗ್ಗೆ 7ರಿಂದ 9.30

ಒಂದು ಪ್ಲೇಟ್‌ ಬಿರಿಯಾನಿ: ₹170,

ಕಾಲುಸೂಪು– ₹120

ಸ್ಥಳ: ಚನ್ನಬೈರೇಗೌಡ ಕ್ರೀಡಾಂಗಣ ಸಮೀಪ, ಸೂಲಿಬೆಲೆ ರಸ್ತೆ, ಹೊಸಕೋಟೆ.

ಟೇಬಲ್ ಕಾಯ್ದಿರಿಸಲು: 97425 00103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.