ADVERTISEMENT

ನಮ್ಮ ಭಾಷೆ ನಮ್ಮ ತಿನಿಸು

ಮಕ್ಕಳ ದಿನಾಚರಣೆ ವಿಶೇಷ

ಡಾ.ನಾ.ಡಿಸೋಜ
Published 10 ನವೆಂಬರ್ 2018, 20:00 IST
Last Updated 10 ನವೆಂಬರ್ 2018, 20:00 IST
.
.   

ಪುಟ್ಟಜ್ಜಿ ಅಂಗಳದಲ್ಲಿ ಶ್ಯಾವಿಗೆ ಒಣಗಿಸುತ್ತಿದ್ದಳು. ಹಸಿಹಸಿ ಹಿಟ್ಟನ್ನ ಶ್ಯಾವಿಗೆ ಒರಳಲ್ಲಿ ಹಾಕಿ, ಮೇಲಿನಹಿಡಿ ಹಿಡಿದು ಒತ್ತಿದಾಗ ಶ್ಯಾವಿಗೆ ಎಳೆ ಎಳೆಯಾಗಿ ಕೆಳಗೆ ಒರಳಲ್ಲಿ ಬೀಳುತ್ತಿತ್ತು. ಅದನ್ನ ಹತ್ತಿರದಚಾಪೆಗೆ ಒಣಗಿಸಲು ಹಾಕಿ ಮತ್ತೆ ಶ್ಯಾವಿಗೆ ಒರಳಿನತ್ತ ಬರುತ್ತಿದ್ದಳು ಅಜ್ಜಿ. ಮಕ್ಕಳೆಲ್ಲ ಶಾಲೆಗೆ ಹೋದುದರಿಂದಇವಳ ಕೆಲಸ ಸುಸೂತ್ರವಾಗಿ ನಡೆದಿತ್ತು. ಮಕ್ಕಳ ಶಾಲೆ ಮುಗಿದು ಪೋಲಿ ಪಟಾಲಂ ಬರುವಷ್ಟರಲ್ಲಿಈ ಕೆಲಸ ಮುಗಿಸ ಬೇಕು ಅನ್ನುವುದು ಅಜ್ಜಿಯ ಆತುರ. ಇಲ್ಲವೆಂದರೆ ಮಕ್ಕಳು ಇಲ್ಲಿ ಸೇರಿ ಯಾವ ಕೆಲಸವೂ ಸುಸೂತ್ರವಾಗಿ ಆಗಲು ಬಿಡುವುದಿಲ್ಲ. ಅಲ್ಲದೆ ಆಮೇಲೆ ಬೇರೆ, ಅಂಗಳದಿಂದ ಬಿಸಿಲು ಹಿಂದೆಸರಿದು ಬಿಡುತ್ತದೆ. ಅಷ್ಟರಲ್ಲಿ ಮುಗಿಸಬೇಕು, ಅಜ್ಜಿ ಅವಸರ ಮಾಡತೊಡಗಿದಳು. ನಿರೀಕ್ಷಿಸಿದಷ್ಟು ಕೆಲಸಮುಗಿಯಿತು ಅನ್ನುವಾಗ ಕೇರಿಯ ತುದಿಯಲ್ಲಿ ಮಕ್ಕಳ ಗಲಾಟೆ ಕೇಳಿಸಿತು. "ಓ ಬಂತು ಪಟಾಲಮ್ಮು"ಎಂದು ಅಜ್ಜಿ ಎದ್ದಳು. ಒಣಹಾಕಿದ ಶ್ಯಾವಿಗೆ ಅಲ್ಲಿಯೇ ಉಳಿಯಿತು.ಮಕ್ಕಳೆಲ್ಲ ಮನೆಗೆ ಹೋಗಿ ಪಾಟೀಚೀಲ ಅಲ್ಲಿ ಇರಿಸಿ ಅಜ್ಜಿ ಮನೆಯತ್ತ ಬಂದರು. ಬರುವಾಗಲೇಕೂಗಿ ಕೊಂಡು ಬಂದವು, ‘ನ್ಯೂಡಲ್ಸ... ನ್ಯೂಡಲ್ಸ....ತಾಜಾ ತಾಜಾ ನ್ಯೂಡಲ್ಸ....ಅಜ್ಜಿ ಮನೆ ನ್ಯೂಡಲ್ಸ....ಗರಿಗರಿ ನ್ಯೂಡಲ್ಸ...’

ಹೊರಗೆ ತುಸು ಬಿಸಿಲಿತ್ತು. ಅಜ್ಜಿಗೆ ಕೆಲಸ ಮಾಡಿ ದಣಿವಾಗಿತ್ತು. ಸಿಟ್ಟು ಬರದಿದ್ದರೂ ಸಿಡುಕಿನಿಂದ ಆಕೆ ಮಕ್ಕಳತ್ತ ನೋಡಿದಳು.

‘ಅಲ್ರೇ, ಈ ಇಂಗ್ಲೀಷು ಪಂಗ್ಲೀಷನ್ನ ನಮ್ಮ ಮನೆಯೊಳಗೆ ತರಬೇಡಿ ಅಂತ ನಿಮಗೆ ನಾನು ಎಷ್ಟ ಸಾರಿ ಹೇಳಿಲ್ಲ....ಈಗ ಮತ್ತೆ ತಂದ್ರಾ?’

ADVERTISEMENT

ಆಕೆ ಸಿಟ್ಟಿನಿಂದಲೇ ದನಿ ಏರಿಸಿದಳು.

ಇವಳ ಸಿಟ್ಟಿನ ಮಾತಿಗೆ ಗಿರಿಜ, ನರ್ಮದಾ, ಕವಿತಾ, ಚಂದ್ರಿಕಾ, ಗೀತಾ, ಪರಿಮಳ, ವಿವೇಕ ಎಲ್ಲ ನಾಲಿಗೆ ಕಚ್ಚಿ ಕೊಂಡು ಮನೆ ಜಗಲಿ ಏರದೆ ಅಂಗಳದಲ್ಲೇ ನಿಂತರು. ಮಕ್ಕಳಿಗೆ ಇದು ಹಳೆಯ ಅನುಭವ. ಅಜ್ಜಿ ಏನನ್ನ ಬೇಕಾದರೂ ಸಹಿಸಿಕೊಳ್ಳುತ್ತಿದ್ದಳು. ಆದರೆ ಕನ್ನಡದ ಶಬ್ದಗಳಿಗೆ ಇಂಗ್ಲಿಷ್ ಶಬ್ದಗಳನ್ನ ಜೋಡಿಸುವುದನ್ನ ಸಹಿಸುತ್ತಿರಲಿಲ್ಲ. ರೈಲು ಬಸ್ಸು ಕಾರು ಮೊದಲಾದ ಶಬ್ದಗಳಿಗೆ ಸಮಾನಾಂತರವಾದ ಶಬ್ದಗಳಿಲ್ಲ. ಇಲ್ಲಿ ಬೇರೆ ದಾರಿ ಇಲ್ಲ. ಆ ಶಬ್ದಗಳನ್ನೇ ಹೇಳಬಹುದು. ಅವು ರೂಢಿಯಲ್ಲೂ ಇವೆ.

ಆದರೆ ಕನ್ನಡದಲ್ಲಿ ಬಹಳಷ್ಟು ಉತ್ತಮ ಶಬ್ದಗಳಿವೆ ಅನ್ನುವಾಗ ಇಂತಹಾ ಶಬ್ದಗಳನ್ನ ಉಪಯೋಗಿಸ ಬಾರದು ಏಕೆ? ಇದು ಅವಳ ಪ್ರಶ್ನೆ. ಮಕ್ಕಳು ಕೂಡ ಈ ಮಾತಿಗೆ ತಮ್ಮ ಅನುಮತಿ ನೀಡಿದ್ದರು. ಹತ್ತಿರದ ಪಟ್ಟಣದ ದೊಡ್ಡ ಶಾಲೆಗಳಲ್ಲಿ ಕಲಿಯುತ್ತಿರುವ ಈ ಮಕ್ಕಳು ಇಂಗ್ಲೀಷ್ ಕಲಿಯುವುದರಲ್ಲಿ ಮುಂದಿದ್ದರು.

‘ನಾವು ಯಾವತ್ತೂ ಗೊತ್ತಿರೋ ಶಬ್ದಗಳಿಗೆ ಬದಲಾಗಿ ಇಂಗ್ಲಿಷ್ ಶಬ್ದಗಳನ್ನ ಉಪಯೋಗಿಸೋದಿಲ್ಲ’ ಎಂದು ಮಾತು ಕೊಟ್ಟಿದ್ದರು. ಹಾಗೆಯೇ ಅಜ್ಜಿಯ ಜೊತೆಯಲ್ಲಿ ಮಾತನಾಡುವಾಗ, ಅಜ್ಜಿಯ ಮನೆ ಜಗಲಿ ಮೇಲೆ ಇದ್ದಾಗ ಹಾಗೇ ನಡೆದುಕೊಳ್ಳುತ್ತಿದ್ದರು. ಆದರೆ ಇವತ್ತು ಮಾತ್ರ ಅವರು ಆ ಶಬ್ದದ ನೆನಪು ತಟ್ಟನೆ ಆಗದೆ ಪೆಚ್ಚಾದರು. ಅಜ್ಜಿಯೂ ಸೆರಗನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ನಿಂತಳು.

‘ಈಗ ನಾನು ಮಾಡಿ ಒಣ ಹಾಕಿದೀನಲ್ಲ ಇದನ್ನ ನಮ್ಮ ಕನ್ನಡದಲ್ಲಿ ಏನೂಂತ ಕರೀತಾರೆ ಅನ್ನೋದನ್ನ ನೀವು ಹೇಳಬೇಕು’ ಎಂದು ತುಸು ಬಿಗಿಯಾಗಿಯೇ ನುಡಿದು:

‘ಅಲ್ಲೀ ತನಕ ನೀವು ಈ ಮನೆ ಜಗಲಿ ಮೇಲೆ ಹತ್ತಬಾರದು’ ಎಂದು ಆದೇಶ ಹೊರಡಿಸಿದಳು ಪುಟ್ಟಜ್ಜಿ.

ಮಕ್ಕಳೆಲ್ಲ ಕಕ್ಕಾವಿಕ್ಕಿಯಾದರು. ಒಬ್ಬರ ಮುಖ ಒಬ್ಬರು ನೋಡಿಕೊಂಡರು. ನಿಧಾನವಾಗಿ ನಿಂತಲ್ಲಿಂದ ಕದಲಿ ಕೋಳೀ ಗೂಡು, ಕಟ್ಟೆ, ಕಣಜ, ಹುಲ್ಲಿನ ಬಣವೆ, ಬೀಸುವ ಕಲ್ಲು, ಹಡಿ ಮಂಚ, ಎಂದೆಲ್ಲ ಒಬ್ಬೊಬ್ಬರೇ ಒಂದೊಂದು ಜಾಗ ಹುಡುಕಿಕೊಂಡು ಕುಳಿತರು. ಯಾರಿಗೂ ಸಿಟ್ಟು ಬರಲಿಲ್ಲ. ಬೇಸರ ಆಗಲಿಲ್ಲ. ತಮ್ಮ ಬಗ್ಗೆಯೇ ಅವರಿಗೆ ಬೇಸರ ಬಂದಿತು. ಅಜ್ಜಿ ಮಾಡಿದ್ದು ಒಂದು ರುಚಿಕರವಾದ ತಿಂಡಿ.

ಹಾಲು ಬೆಲ್ಲದ ರಸ ಹಾಕಿಕೊಂಡು ಅವರು ಬಹಳ ಸಾರಿ ತಿಂದಿದ್ದರು. ಆದರೆ ಅದರ ಹೆಸರೇ ತಮಗೆ ಗೊತ್ತಿಲ್ಲವೆ. ಯಾವುದೋ ಇಂಗ್ಲಿಷ್ ಹೆಸರು ನಾಲಿಗೆಯ ತುದಿಯಲ್ಲಿ ಇದೆ. ಆದರೆ ನಮ್ಮದೇ ಆದ ಒಂದು ಸೊಗಸಾದ ತಿಂಡಿಯ ಹೆಸರು ಗೊತ್ತಿಲ್ಲವೆ. ಛೇ. ನಾಚಿಕೆಗೇಡು.

ಅಜ್ಜಿ ಒಳ ಹೋದಳು. ಮಕ್ಕಳು ಜಂತಿ ನೋಡುತ್ತ, ಹೊರಗಿನ ಇಳಿ ಬಿಸಿಲು ನೋಡುತ್ತ. ಮೇಯುವ ದನ ಕರು ನೋಡುತ್ತ ಕುಳಿತರು. ಕೆಲವರು ನೆನಪಿನ ಬಾವಿಗೆ ಪಾತಾಳ ಗರಡಿ ಹಾಕಿ ಕುಲಕುತ್ತ ಕುಳಿತರು. ಆಗ ಹೊಡಿ ಮಂಚದ ಮೇಲೆ ಕುಳಿತ ಕವಿತಾ ನಿಧಾನವಾಗಿ ನುಡಿದಳು:

‘ಸಂಡಿಗೆ....’

ಪಿಶ್ ಎಂದು ನಕ್ಕಳು ಚಂದ್ರಿಕಾ.

‘ಅಲ್ಲ ಮಂಡಿಗೆ’ ಎಂದಳು ನರ್ಮದಾ.

ಒಬ್ಬೊಬ್ಬರು ಒಂದೊಂದು ಹೆಸರನ್ನ ಹೇಳ ತೊಡಗಿದರು. ‘ನಿಪ್ಪಿಟ್ಟು, ಕರ್ಜಿಕಾಯಿ, ಎರದೆಪ್ಪ, ಕೋಡು ಬಳೆ, ಶಂಕರ ಪೊಳೆ, ಕಡಬು, ಎಲೆಗಡಬು, ಸುರಳಿ, ಕಜ್ಜಾಯ, ಮತ್ತೆ ಮತ್ತೆ.....‘

ಒಂದೊಂದೇ ಹೆಸರು ಹೇಳಿಕೊಂಡು ಎಲ್ಲರೂ ನಕ್ಕರು. ಒಮ್ಮೆ ನಗು ಮತ್ತೊಮ್ಮೆ ಬಿಗು. ಒಣಗುತ್ತಿರುವ ವಸ್ತುವಿನ ಹೆಸರು ಏನು ಎಂಬುದು ಯಾರಿಗೂ ಗೊತ್ತಿಲ್ಲ. ನೆನಪಾಗುತ್ತಿಲ್ಲ. ನಿಧಾನವಾಗಿ ಕತ್ತಲಾಗತೊಡಗಿತು. ಗದ್ದೆಗೆ ಹೋದವರು ಪೇಟೆಗೆ ಹೋದವರು ತಿರುಗಿ ಬಂದರು. ಅಜ್ಜಿ ಮನೆ ಜಗಲಿಯ ಮೇಲಿನ ಮಕ್ಕಳನ್ನ ನೋಡಿ ಕೆಲವರು ‘ಏನಜ್ಜಿ ಬೀಸೋಕಲ್ಲು, ಹಡಿ ಮಂಚ, ನೇಗಿಲು ಕಾಯಲಿಕ್ಕೆ ಜನ ಇಟ್ಟಿದೀಯಾ? ಏನು ಸಮಾಚಾರ?’ ಎಂದು ಕೇಳಿದರು.

ಪುಟ್ಟಜ್ಜಿ ಇರುವ ವಿಷಯ ಹೇಳಿದಳು. ‘ಹಾಗೋ. ನಾವು ತಿನ್ನೋ ಪದಾರ್ಥನಾ ನಾವೇ ಮರೆತರೆ ಹೇಗೆ, ಅಲ್ವಾ’ ಊರಿನ ಹಿರಿಯರು ರಾಗ ಎಳೆದರು.

ಮಕ್ಕಳಿಗೆ ಮತ್ತೂ ಅವಮಾನವಾಯಿತು. ಎಲ್ಲರ ಮುಖಗಳು ಬಾಡಿದವು. ಇನ್ನ ಕೆಲವರು ಅಳುವುದೊಂದೇ ಬಾಕಿ. ಕತ್ತಲು ಕವಿದ ಹಾಗೆ ಮಕ್ಕಳ ಹೆಸರು ಹಿಡಿದು ಅವರ ಮನೆಗಳಿಂದ ಅಪ್ಪ ಅಮ್ಮ ಕರೆಯತೊಡಗಿದರು. ಅಜ್ಜಿಗೂ ಇದು ಸರಿ ಅಲ್ಲ ಅನಿಸಿತು. ಕತ್ತಲಾದ ಮೇಲೂ ಮಕ್ಕಳು ಮನೆಗೆ ಬಾರದಿದ್ದರೆ ಪಾಲಕರು ಗಾಬರಿ ಆಗುತ್ತಾರೆ. ಜಗಲಿಯ ಮೇಲೆ ನಿಂತು ಅಜ್ಜಿ ಎಲ್ಲರನ್ನ ಕರೆದಳು.

‘ಮೇಲೆ ಬನ್ನಿ....’

ಮಕ್ಕಳೆಲ್ಲ ಎದ್ದು ಜಗಲಿಯ ಮೇಲೆ ಹೋದರು. ಎಲ್ಲ ಅಜ್ಜಿ ಎದುರು ತಲೆ ತಗ್ಗಿಸಿ ನಿಂತರು. ‘ನೀವೆಲ್ಲ ಒಂದು ಗಾದೆ ಕೇಳೀದೀರಾ ಅಲ್ವಾ?’ ಮಕ್ಕಳು ಕುತೂಹಲದ ಕಣ್ಣುಗಳನ್ನ ಅಜ್ಜಿಯತ್ತ ಬೀರಿದರು.

‘ಮನೇಲಿ ಗುಂಡಾಕಾರ, ದಾರೀಲಿ ಚಕ್ರಾಕಾರ. ಇಲ್ಲಿಗೂ ಬಂದೆಯಾ ಜಡೆ ಶಂಕರಾ’ ಅಜ್ಜಿ ಮಾತು ಮುಗಿದಿರಲಿಲ್ಲ ಎಲ್ಲ ಮಕ್ಕಳೂ ಕೂಗಿ ಕೊಂಡರು ‘ಅದು ಶ್ಯಾವಿಗೆ...ಶ್ಯಾವಿಗೆ ಶ್ಯಾವಿಗೆ’
ಭಲೆ ಅಂದಳು ಅಜ್ಜಿ. ‘ನಾವು ನಮ್ಮ ಭಾಷೆ, ನಮ್ಮ ತಿನಿಸು. ನಮ್ಮ ದೇಶಾನ ನಾವೇ ಮರೀಬಾರದು’. ಮಕ್ಕಳು ಕೇಕೆ ಹಾಕುತ್ತ ಅಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಚದುರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.