‘ಬರೀ ಕುರುಕಲು ತಿಂಡಿನೇ ತಿನ್ತಾರೆ ಡಾಕ್ಟ್ರೆ ನೀವಾದ್ರು ಸ್ವಲ್ಪ ಬುದ್ಧಿ ಹೇಳಿ. ನಿಮ್ಮ ಮಾತನ್ನಾದ್ರೂ ಕೇಳ್ತಾರೋ ನೋಡೋಣ’ – ಇದು ನನ್ನ ಬಳಿ ಬರುವ ಬಹುತೇಕ ಅಪ್ಪ–ಅಮ್ಮಂದಿರ ಅಹವಾಲು. ಇವರೆಲ್ಲ, ಜಂಕ್‌ಫುಡ್ ಹಾಗೂ ‘ಉಮಾಮಿ’ ರುಚಿಯ ಮೋಹಪಾಶಕ್ಕೆ ಸಿಲುಕಿರುವ ಮಕ್ಕಳನ್ನು, ಅದರಿಂದ ಬಿಡಿಸುವ ಬಗ್ಗೆ ಕೇಳುತ್ತಾರೆ.
ಇನ್ನೂ ಶಾಲಾ–ಕಾಲೇಜುಗಳಿಗೆ ಆರೋಗ್ಯ ಮಾಹಿತಿ ನೀಡುವ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಾಗ, ಅಲ್ಲಿನ ಶಿಕ್ಷಕರು, ‘ಡಾಕ್ಟ್ರೆ, ಬಿಸಿಯೂಟದಲ್ಲಿ ನೀಡುವ ಸಾಂಬಾರು, ತರಕಾರಿಗಳನ್ನೆಲ್ಲ ಮಕ್ಕಳು ತಟ್ಟೆಯಲ್ಲೇ ಬಿಡ್ತಾರೆ. ದಿನಾ ಚಿಪ್ಸ್, ಕುರ್‌ಕುರೆ.. ಇಂಥವು ಇದ್ದರೇನೇ ಇವರಿಗೆ ಖುಷಿ. ಮಕ್ಕಳಿಗೆ, ಈ ಬಗ್ಗೆಯೂ ಸ್ವಲ್ಪ ಹೇಳಿ’ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಇದು ಶಾಲಾ ಕಾಲೇಜು ಮಾತ್ರವಲ್ಲ, ಮದುವೆಯಂತಹ ಸಮಾರಂಭಗಳಿಗೂ ಕೃತಕ ಆಹಾರ, ಪಾನೀಯಗಳು ಲಗ್ಗೆ ಇಟ್ಟಿವೆ. ಇಂಥ ಆಹಾರ ಕೌಂಟರ್‌ನಲ್ಲಿ ವಯೋಭೇದವಿಲ್ಲದೇ ಜನ ಜಂಗುಳಿ ಇರುತ್ತದೆ. ಆ ಜನಸಂದಣಿಯಲ್ಲಿ, ‘ನಮ್ಮನೆಯ ಮಕ್ಕಳಿಗೆ ಮನೆ ತಿಂಡಿನೇ ಇಷ್ಟ ಆಗೋದಿಲ್ಲ’ ಎಂದು ಆಪಾದಿಸುವ ಪಾಲಕರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ!
‘ಆಹಾರ ವ್ಯಸನ’ಕ್ಕೆ ಕಾರಣ
ಇಂಥ ಆಹಾರ ಪದಾರ್ಥಗಳನ್ನು ಜನ ಮುಗಿಬಿದ್ದು ತಿನ್ನುವುದಕ್ಕೆ ಕಾರಣ, ಅವು ರುಚಿಯಾಗಿರುತ್ತವೆ ಎಂತಲೋ ಅಥವಾ ಪೌಷ್ಟಿಕಾಂಶಯುಕ್ತವಾಗಿವೆ ಎಂತಲೋ ಅಲ್ಲ. ಅವುಗಳಲ್ಲಿ ಹೆಚ್ಚು ಮಸಾಲೆ ಬೆರೆತಿರುತ್ತದೆ. ಅದರಿಂದ ಹೆಚ್ಚು ರುಚಿಯಾಗಿರುತ್ತದೆ. ಅಂದ ಹಾಗೆ, ಹೀಗೆ ಸೆಳೆಯುವ ಆಹಾರದಲ್ಲಿರುವ ಮಸಾಲೆ, ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿನ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಇತ್ಯಾದಿಗಳಲ್ಲ. ಬದಲಿಗೆ ಕೃತಕ ರುಚಿ ಹಾಗೂ ಪರಿಮಳ ಹೊಮ್ಮಿಸುವ ವಿವಿಧ ರಾಸಾಯನಿಕಗಳು ಮತ್ತು ಲವಣಗಳು. ಇಂಥವು ಕಳಪೆ ಆಹಾರದ ರುಚಿ ಹಾಗೂ ಪರಿಮಳಗಳನ್ನೂ ವರ್ಧಿಸುತ್ತವೆ. ನಿಜವಾದ ರುಚಿಯನ್ನು ಮರೆಮಾಚಿಸುತ್ತವೆ. ಹೀಗಾಗಿ ಮಕ್ಕಳು ಇಂಥ ಆಹಾರದ ವ್ಯಸನಕ್ಕೆ (ತಿಂದ ಆಹಾರವನ್ನೇ ಪದೇ ಪದೇ ತಿನ್ನುವುದು) ಒಳಗಾಗುತ್ತಾರೆ.
ಆಹಾರದಲ್ಲಿ ಇಂಥ ರಾಸಾಯನಿಕಗಳು ಬೆರೆತಿರುವ ವಿಚಾರ ಮಕ್ಕಳಿಗೆ ತಿಳಿಯುವುದಿಲ್ಲ. ಮಕ್ಕಳು ತಮ್ಮ ನಾಲಗೆಯಲ್ಲಿನ ರುಚಿಮೊಗ್ಗುಗಳು (ಟೇಸ್ಟ್ ಬಡ್ಸ್) ಇಷ್ಟಪಡುವುದನ್ನು ತಿನ್ನುತ್ತಾರೆ. ಈ ರಾಸಾಯನಿಕಗಳು ಮೆದುಳಿನ ಹಂತದಲ್ಲೇ ಹಸ್ತಕ್ಷೇಪ ಮಾಡಿ ಮಕ್ಕಳನ್ನು ಜಂಕ್‌ಫುಡ್ ವ್ಯಸನಿಗಳಾಗುವಂತೆ ಮಾಡುತ್ತವೆ. ಈ ವ್ಯಸನಕಾರಕ ರಾಸಾಯನಿಕಗಳಲ್ಲಿ ಬಹಳ ಮುಖ್ಯವಾದವು ಮಾನೊಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಹಾಗೂ ಆಸ್ಪರ್ಟೆಟ್. ಇವು ಅಮೈನೋ ಆಮ್ಲಗಳಾಗಿದ್ದು, ಮೆದುಳಿನಲ್ಲಿ ನರವಾಹಕಗಳಾಗಿ ಕೆಲಸಮಾಡುತ್ತವೆ. ಇವು ಅತಿಯಾದಾಗ ಮೆದುಳಿನ ನರಕೋಶಗಳನ್ನು ಪ್ರಚೋದಿಸಿ ಕ್ರಮೇಣ ಬಳಲುವಂತೆ ಮಾಡಿ, ಅವುಗಳನ್ನೇ ನಾಶ ಮಾಡುತ್ತವೆ.
ಎಂಎಸ್‌ಜಿ ಎಂದರೆ...
ಈ ಎಂಎಸ್‌ಜಿ ಎನ್ನುವುದು ಗ್ಲುಟಮಿಕ್ ಆಸಿಡ್ ಎಂಬ ಅತ್ಯವಶ್ಯವಲ್ಲದ ಅಮೈನೊ ಆಮ್ಲ. ಇದನ್ನು ಸೋಡಿಯಂ ಜೊತೆ ಮಿಶ್ರಣ ಮಾಡಿ ರುಚಿ ಹಾಗೂ ಪರಿಮಳಕಾರಕವಾಗಿ ಆಹಾರದೊಂದಿಗೆ ಬಳಸುತ್ತಾರೆ. ಭಾರತ, ಚೀನಾ, ಜಪಾನ್ ಸೇರಿದಂತೆ ಜಗತ್ತಿನಾದ್ಯಂತ ಎಂಎಸ್‌ಜಿಯನ್ನು ಆಹಾರ ಪರಿಮಳಕಾರಕವಾಗಿ ಬಳಕೆಯಾಗುತ್ತಿದೆ. ಫಿಜ್ಜಾ, ಬರ್ಗರ್, ಫ್ರೆಂಚ್‌ಫ್ರೈಸ್, ಪಾಸ್ತಾ, ಸೂಪ್, ಸಾಸ್, ಚಿಪ್ಸ್, ಕೃತಕ ತಂಪು ಪೇಯಗಳು, ಎನರ್ಜಿ ಡ್ರಿಂಕ್ಸ್, ಹಣ್ಣಿನ ರಸ, ಕೆಚಪ್, ಇನ್‌ಸ್ಟಂಟ್ ಸ್ನ್ಯಾಕ್ಸ್‌ನಂತಹ ಸಂಸ್ಕರಿತ ಆಹಾರಗಳಲ್ಲಿ ಇದನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದಾರೆ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸಿಹಿ, ಕಹಿ, ಉಪ್ಪು ಮತ್ತು ಹುಳಿ – ಇವು ವೈಜ್ಞಾನಿಕವಾಗಿ ನಾಲ್ಕು ಮೂಲ ರುಚಿಗಳು. ಇವುಗಳನ್ನು ನಾಲಿಗೆಯ ಮೇಲಿರುವ ನಿರ್ದಿಷ್ಟ ರುಚಿಮೊಗ್ಗುಗಳು ಗುರುತಿಸಿ ಇದರಿಂದ ಮೆದುಳಿಗೆ ಸಂದೇಶ ಹೋಗಿ ನಮ್ಮ ಮುಮ್ಮೆದುಳಿನಲ್ಲಿರುವ ರುಚಿ ಕೇಂದ್ರಗಳು ವಿವಿಧ ರುಚಿಗಳನ್ನು ಗ್ರಹಿಸುತ್ತವೆ. ಇದೊಂದು ಸಂಕೀರ್ಣವಾದ ವ್ಯವಸ್ಥೆ. 1908ರಲ್ಲಿ ಕಿಕುನೇ ಇಕಿಡಾ ಎನ್ನುವ ವಿಜ್ಞಾನಿ ‘ಉಮಾಮಿ’ ಎಂಬ ಐದನೆಯ ರುಚಿ ಇರುವ ಬಗ್ಗೆ ವರದಿ ಮಾಡಿದ್ದರು. ಇದು ಉಪ್ಪು ಮತ್ತು ಖಾರಗಳ ಸಮ್ಮಿಶ್ರಣದ ರುಚಿ ಕೊಡುವಂತದ್ದು. ಇಂಥದ್ದೇ ರುಚಿ ಹೊಂದಿರುವ ಹಲವು ಸಂಸ್ಕರಿತ ಆಹಾರಗಳು ಮಾರುಕಟ್ಟೆಯಲ್ಲಿವೆ.
ಪರಿಣಾಮಗಳೇನು ?
ಮಾನೊಸೋಡಿಯಂ ಗ್ಲುಟಮೇಟ್ ನಂತಹ ರಾಸಾಯನಿಕಗಳಿಂದ ಹದಗೊಳ್ಳಲ್ಪಟ್ಟ ಹಾಗೂ ಉಮಾಮಿ ರುಚಿಯ ಆಹಾರ ನಾಲಿಗೆಯಲ್ಲಿರುವ ರುಚಿಮೊಗ್ಗುಗಳನ್ನು (ಟೇಸ್ಟ್ ಬಡ್ಸ್) ಪ್ರಚೋದಿಸಿ ಆಸ್ವಾದನಾಭರಿತ ರುಚಿ ಹಾಗೂ ಪರಿಮಳಗಳನ್ನು ಹೆಚ್ಚಿಸುತ್ತದೆ. ಮಾದಕ ದ್ರವ್ಯ ಸೇವಿಸಿದಾಗ ಆಗುವ ಪರಿಣಾಮವನ್ನೇ ಉಂಟುಮಾಡಿ ಇನ್ನೂ ಹೆಚ್ಚು ತಿನ್ನಬೇಕೆನಿಸುವ ಹಾಗೆ ಮಾಡುತ್ತದೆ. ಜೊತೆಗೆ ಮೆದುಳಿನಲ್ಲಿ ಡೋಪಮಿನ್ ಎಂಬ ನರವಾಹಕಗಳನ್ನು ಉತ್ಪಾದಿಸುವಂತೆ ಮಾಡುತ್ತದೆ. ಈ ಡೋಪಮಿನ್ ಪ್ರತಿಫಲ ವ್ಯವಸ್ಥೆಯ ಮುಖ್ಯವಾದ ನರವಾಹಕ. ಇದರಿಂದ ತಾತ್ಕಾಲಿಕವಾಗಿ ಸಂತೋಷದ ಅನುಭವವಾಗಿ ಮತ್ತೆ ಮತ್ತೆ ಅದೇ ಆಹಾರ ವನ್ನು ತಿನ್ನ ಬೇಕೆನ್ನುವ ಬಯಕೆಯಾಗುತ್ತದೆ. ಇದರಿಂದ ಮೆದುಳಿನ ಜೀವಕೋಶಗಳು ನಿಧಾನವಾಗಿ ನಾಶವಾಗುತ್ತವೆ.
ಅಲ್ಲದೇ, ‘ಲೆಫ್ಟಿನ್’ ಎಂಬ ಬೊಜ್ಜು ನಿಯಂತ್ರಣದ ಹಾರ್ಮೋನಿನ ಸಂದೇಶಗಳಿಗೆ ನೀಡಬೇಕಾದ ಮೆದುಳಿನ ಪ್ರತಿಕ್ರಿಯೆಯನ್ನು ಮಾರ್ಪಡಿಸುತ್ತದೆ. ಇದರಿಂದ ಬೊಜ್ಜು ಕೂಡ ಹೆಚ್ಚಾಗುತ್ತದೆ. ಮೇದೊಜೀರಕಾಂಗ (ಪ್ಯಾಂಕ್ರಿಯಾಸ್) ಇನ್ಸುಲಿನ್ ಹಾರ್ಮೋನು ಉತ್ಪಾದನೆಯನ್ನು ಇನ್ನಷ್ಟು ಪ್ರಚೋದಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತಾ ಮತ್ತೆ ಮತ್ತೆ ಬೇಗನೆ ಹಸಿವು ಉಂಟುಮಾಡುತ್ತದೆ. ಆದ್ದರಿಂದ ಎಷ್ಟೇ ಜಂಕ್‌ಫುಡ್ ಸೇವಿಸಿದರೂ ಒಂದು ಗಂಟೆಗೊಳಗೆ ಮತ್ತೆ ಆಹಾರ ತಿನ್ನಬೇಕೆನಿಸುತ್ತದೆ.
ದೀರ್ಘಕಾಲ ಎಂಎಸ್‌ಜಿ ಮಿಶ್ರಿತ ಆಹಾರ ಸೇವನೆಯಿಂದ, ಅಲ್ಜಮೈರ್ (ಮರೆವಿನ ಕಾಯಿಲೆ), ಪಾರ್ಕಿನ್‌ಸನ್ಸ್, ಮೂರ್ಛೆರೋಗ, ಅಲರ್ಜಿ, ಆಸ್ತಮಾ, ಏಕಾಗ್ರತೆಯ ಕೊರತೆ, ಎದೆನೋವು, ಮನಸ್ಸು ಗೊಂದಲಕ್ಕೊಳಗಾಗುವುದು, ಭೇದಿ, ಬಂಜೆತನ, ಬೆವರು, ಎದೆ ಹೊಡೆದುಕೊಳ್ಳುವಿಕೆ.. ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸುತ್ತದೆ.
ಇನ್ನು ಕೃತಕ ಸಿಹಿ ತಿನಿಸುಗಳು, ಸಿಹಿ ಪಾನೀಯ ಹಾಗೂ ಹಣ್ಣಿನ ರಸಗಳಲ್ಲಿ ಬಳಸುವ ಆಸ್ಪರ್ಟೇಮ್ ಕೂಡ ತಲೆನೋವು, ತಲೆಸುತ್ತು, ನಿದ್ರೆಯ ತೊಂದರೆ, ಸುಸ್ತು, ಅಲ್ಜಮೈರ್, ಮಧುಮೇಹದಂತಹ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಜಂಕ್‌ಫುಡ್‌ನಿಂದ ದೂರವಿರುವುದು ತುಂಬಾ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.