ADVERTISEMENT

ಯುಟ್ಯೂಬ್‌ ಸ್ಟಾರ್‌ | ಅಜ್ಜನ ಅಡುಗೆ ಖ್ಯಾತಿಯ ನಾರಾಯಣ ರೆಡ್ಡಿ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ನವೆಂಬರ್ 2019, 5:07 IST
Last Updated 1 ನವೆಂಬರ್ 2019, 5:07 IST
Grandpa Kitchen ಖ್ಯಾತಿಯ ನಾರಾಯಣ ರೆಡ್ಡಿ
Grandpa Kitchen ಖ್ಯಾತಿಯ ನಾರಾಯಣ ರೆಡ್ಡಿ    

ಹೈದರಾಬಾದ್‌: ಯುಟ್ಯೂಬ್‌ನಲ್ಲಿ ಸಂಚಲನ ಮೂಡಿಸಿ, ಹೊಸ ಟ್ರೆಂಡ್ ಹುಟ್ಟುಹಾಕಿದ್ದGrandpa Kitchen(ಅಜ್ಜನ ಅಡುಗೆ) ಯುಟ್ಯೂಬ್‌ ಚಾನೆಲ್ಖ್ಯಾತಿಯ ನಾರಾಯಣ ರೆಡ್ಡಿ (73) ಅ.27ರಂದು ತೆಲಂಗಾಣದಲ್ಲಿ ನಿಧನರಾದರು. ಕಳೆದ ಕೆಲ ದಿನಗಳಿಂದ ವಯೋ ಸಹಜ ಸಮಸ್ಯೆಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು.

‘ಪ್ರೀತಿಸಲು ಬದುಕಿ, ಗಳಿಸಿದ್ದನ್ನು ಹಂಚಿಕೊಳ್ಳಿ, ಸದಾ ಖುಷಿಯಾಗಿರಿ...’ ಎನ್ನುವ ಸಂದೇಶ ಸಾರುತ್ತಿದ್ದ ನಾರಾಯಣರೆಡ್ಡಿ ತಮ್ಮ ಯುಟ್ಯೂಬ್‌ ವಿಡಿಯೊಗಳಲ್ಲಿಯೂ ಖುಷಿಯನ್ನೇ ಹಂಚಿದವರು. ಯುಟ್ಯೂಬ್‌ನಲ್ಲಿದ್ದ ನಾರಾಯಣ ರೆಡ್ಡಿ ಅವರGrandpa Kitchen ಚಾನೆಲ್‌ಗೆ60 ಲಕ್ಷಕ್ಕೂ ಹೆಚ್ಚು ಸಬ್‌ಸ್ಕೈಬರ್ಸ್‌ (ಚಂದಾದಾರರು)ಇದ್ದರು.

ತೆರೆದ ಬಯಲಿನಲ್ಲಿ ಸೌದೆ ಒಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಅಜ್ಜ ಅಡುಗೆ ಮಾಡುತ್ತಿದ್ದರು. ಆಂಧ್ರ–ತೆಲಂಗಾಣ ಶೈಲಿಯ ಪಾರಂಪರಿಕ ಬಿರಿಯಾನಿ ಜೊತೆಗೆ ಪಿಜ್ಜಾ, ಬರ್ಗರ್‌, ಕೇಕ್‌... ಸೇರಿದಂತೆಅತ್ಯಾಧುನಿಕ ತಿನಿಸುಗಳತಯಾರಿಕೆಯನ್ನೂ ಅಜ್ಜ ಹೇಳಿಕೊಡುತ್ತಿದ್ದರು.ಯುಟ್ಯೂಬ್‌ನಲ್ಲಿ ರೆಸಿಪಿ ಹೇಳಿಕೊಡಲೆಂದು ದೊಡ್ಡ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ನಾರಾಯಣ ರೆಡ್ಡಿ ನಂತರ ಅದನ್ನೆಲ್ಲಾ ಅನಾಥಾಶ್ರಮಗಳ ಮಕ್ಕಳಿಗೆ ಹಂಚುತ್ತಿದ್ದರು.

ADVERTISEMENT

ವಿಶ್ವದ ಹಲವು ದೇಶಗಳಲ್ಲಿ ಅವರ ಅಭಿಮಾನಿ ಬಳಗ ಬೆಳೆಯಲು ಇದೂ ಒಂದು ಕಾರಣವಾಗಿತ್ತು.

ನಾರಾಯಣರೆಡ್ಡಿ ಅವರು ಭಾನುವಾರವೇ ನಿಧನರಾಗಿದ್ದಾರೆ. ಆದರೆ ಹೊರ ಜಗತ್ತಿಗೆ ಈ ವಿಷಯ ತಿಳಿದದ್ದು ಮಾತ್ರ ಗುರುವಾರ ಯುಟ್ಯೂಬ್‌ನಲ್ಲಿ ಅವರ ಅಂತಿಮ ಯಾತ್ರೆಯ ವಿಡಿಯೊ ಪಬ್ಲಿಷ್ ಆದ ನಂತರವೇ.

‘ಲವಿಂಗ್, ಶೇರಿಂಗ್ ಅಂಡ್ ಕೇರಿಂಗ್, ದಿಸ್ ಈಸ್ ಮೈ ಫ್ಯಾಮಿಲಿ’ (ಪ್ರೀತಿಸುವುದು, ಹಂಚುವುದು ಮತ್ತು ಕಾಳಜಿ ಮಾಡುವುದು... ಇದು ನನ್ನ ಕುಟುಂಬ)ಎನ್ನುವ ಅಜ್ಜನ ಮಾತುಗಳೊಂದಿಗೆ ಅಂತಿಮ ಯಾತ್ರೆಯ ವಿಡಿಯೊ ಶುರುವಾಗುತ್ತೆ. ಅಜ್ಜನ ಬದುಕಿನ ಕೆಲ ಅಮೂಲ್ಯ ಕ್ಷಣಗಳನ್ನು ದಾಖಲಿಸಿರುವ ಈ ವಿಡಿಯೊದಲ್ಲಿರುವ ಅಂತ್ಯ ಸಂಸ್ಕಾರದ ವಿಧಿಗಳನ್ನು ನೋಡಿದವರು ಹನಿಗಣ್ಣಾಗಿದ್ದಾರೆ.

ಅಜ್ಜ ಯುಟ್ಯೂಬ್‌ ಲೋಕಕ್ಕೆ ಬಂದಿದ್ದು ಆಗಸ್ಟ್‌ 2017ರಲ್ಲಿ.ಅಜ್ಜನ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ220 ವಿಡಿಯೊಗಳ ಪೈಕಿ, ಫ್ರೆಂಚ್‌ ಪ್ರೈಸ್‌ ವಿಡಿಯೊ 3.7 ಕೋಟಿ ವ್ಯೂಸ್‌ನೊಂದಿಗೆ ಅಪಾರ ಜನಮೆಚ್ಚುಗೆ ಗಳಿಸಿತ್ತು. 100 ಮ್ಯಾಗಿ ಪ್ಯಾಕ್‌ಗಳೊಂದಿಗೆ ನೂಡಲ್ ಮಾಡುವ ವಿಡಿಯೊ ಇವರ ಮತ್ತೊಂದು ವೈರಲ್‌ ಪೋಸ್ಟ್‌. ಕಳೆದ ವಾರ ಹುಷಾರು ತಪ್ಪಿದಾಗ ಒಮ್ಮೆ ಯುಟ್ಯೂಬ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಅವರ ಅಂತಿಮ ಯಾತ್ರೆಯ ವಿಡಿಯೊ ಪಬ್ಲಿಷ್ ಆಗಿದೆ.

ಅಂತಿಮ ಯಾತ್ರೆಯ ವಿಡಿಯೊ ಈಗಾಗಲೇ 30 ಲಕ್ಷ ವ್ಯೂಸ್‌ ಪಡೆದಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಸಂತಾಪ ಸಂದೇಶ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.