ADVERTISEMENT

ಕಾಳಜಿ | ಸಂಸ್ಕರಿಸಿದ ಆಹಾರ ಬೇಡವೇಕೆ?

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 0:22 IST
Last Updated 16 ನವೆಂಬರ್ 2024, 0:22 IST
   

ಹಸಿವನ್ನು ನೀಗಿಸುವ ನೆಪದಲ್ಲಿ ಬಹಳ ಬೇಗನೆ ಕೈಗೆಟುಕುವ ಹಾಗೂ ಬಾಯಿರುಚಿ ತಣಿಸಬಲ್ಲ ಪದಾರ್ಥಗಳನ್ನು ತಿನ್ನುವ ಅಭ್ಯಾಸವಿದ್ದರೆ ತುಸು ಯೋಚಿಸಿ. 

ವಿಶೇಷವಾಗಿ  ಪ್ಯಾಕ್ಡ್ ಫುಡ್ಸ್, ರೆಡಿ ಟು ಈಟ್, ಇನ್‌ಸ್ಟಂಟ್‌ ಆಹಾರಗಳು, ಕುರುಕಲು ತಿಂಡಿಗಳು, ಬೀದಿ ಬದಿಯ ಜಂಕ್‌ಫುಡ್ಸ್ ಹಾಗೂ ಮತ್ತಿತರ ಪ್ರೊಸೆಸ್ಡ್‌ ಆಹಾರವನ್ನು ಸೇವಿಸುವುದರಿಂದ ಅಗತ್ಯಕ್ಕಿಂತ ‌ಹೆಚ್ಚು ಉಪ್ಪು, ಸಕ್ಕರೆ, ಕೃತಕ ಬಣ್ಣ, ರಾಸಾಯನಿಕಗಳು ಹಾಗೂ ಕೃತಕ ಸಿಹಿಯನ್ನು ತಿನ್ನುತ್ತಿದ್ದೀರಿ ಎಂದರ್ಥ. 

ಆಲೂಗಡ್ಡೆ ಚಿಪ್ಸ್‌ ಪ್ಯಾಕ್‌ ತೆಗೆದುಕೊಂಡರೆ ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌, ಅನಗತ್ಯ ಕೊಬ್ಬು, ಹೆಚ್ಚು ಉಪ್ಪಿರುತ್ತದೆ. ಇದರಿಂದ ಹಾನಿಕಾರಕ ಮಸಾಲೆ ಪದಾರ್ಥಗಳು ವಿಷದಂತೆ ದೇಹ ಸೇರುತ್ತವೆ. ಈ ಎಲ್ಲಾ ಅಡ್ಡಿಟಿವ್ಸ್ ಸೇರಿಸಿದ ಆಹಾರಗಳು ನಮ್ಮ ನಾಲಗೆಯ ರುಚಿಮೊಗ್ಗುಗಳನ್ನು ಮಂದಗೊಳಿಸುತ್ತದೆ. ನಿತ್ಯ ತಿನ್ನಲು ಆರಂಭಿಸಿದರೆ  ‘ಸಾಮಾನ್ಯ ಆಹಾರ} ರುಚಿಯಿಲ್ಲದಂತೆ ಅನಿಸುತ್ತದೆ. ಕ್ರಮೇಣ ಜಂಕ್‌ಫುಡ್‌ಗಳ ಮೇಲೆ ಅವಲಂಬನೆ ಹೆಚ್ಚುತ್ತದೆ. ಇಂಥ ಆಹಾರದಿಂದ ಮಿದುಳಿನಲ್ಲಿ ಡೋಪಮೈನ್‌ ಬಿಡುಗಡೆಯಾಗುವ ಪ್ರಮಾಣ ಹೆಚ್ಚುತ್ತದೆ. ಡೋಪಮೈನ್‌ ಖುಷಿಯ ಹಾರ್ಮೋನ್‌ ಆಗಿದ್ದು, ಇದನ್ನು ತಿಂದಾಗ ಹೆಚ್ಚು ಖುಷಿ ಎನಿಸುತ್ತದೆ.  ಮದ್ಯವ್ಯಸನದಂತೆ ಇಂಥ ಆಹಾರಕ್ಕೂ ದಾಸರಾಗುವ ಸಾಧ್ಯತೆ ಇರುತ್ತದೆ. 

ADVERTISEMENT

ಫುಡ್‌ ಲೇಬಲಿಂಗ್‌ ಕುರಿತು ಅರಿವಿರಲಿ:

ಆರೋಗ್ಯದ ಹಿತದೃಷ್ಟಿಯಿಂದ ಫುಡ್‌ ಲೇಬಲಿಂಗ್‌ ಗಮನಿಸುವುದು ಅಗತ್ಯ. ಗ್ರಾಹಕರಿಗೆ ಮಾಹಿತಿ ನೀಡುವ ಫುಡ್‌ ಲೇಬಲಿಂಗ್‌ನಲ್ಲಿ ಪ್ರತಿ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಸೇರಿಸಲಾಗಿದೆ ಎಂಬುದರ ಕುರಿತು ಮಾಹಿತಿ ಇರುತ್ತದೆ. ಎಷ್ಟು ಪ್ರಮಾಣದಲ್ಲಿ ವಿಟಮಿನ್‌, ಖನಿಜಗಳು,  ಪೋಷಕಾಂಶಗಳನ್ನು ಹೊಂದಿದೆ ಎಂಬುದನ್ನು ನೋಡಬಹುದು. ಕ್ಯಾಲೊರಿಗಳು, ಒಟ್ಟು ಕಾರ್ಬೋಹೈಡ್ರೇಟ್‌ಗಳು, ನಾರಿನಂಶ, ಕೊಬ್ಬು, ಉಪ್ಪು ಮತ್ತು ಸಕ್ಕರೆ, ಟ್ರಾನ್ಸ್ ಕೊಬ್ಬಿನಾಮ್ಲಗಳಂಥ ವಿವರಗಳಿಗೆ  ಗಮನ ನೀಡಿದರೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಯಂಥ ಆರೋಗ್ಯ ಸಮಸ್ಯೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. 

ಪನ್ನೀರ್, ಟೊಪೊ, ಪೀನಟ್ ಬಟರ್ ಸಂಸ್ಕರಿಸಿದ ಪದಾರ್ಥಗಳಾಗಿದ್ದರೂ ಅದರ ಬಳಕೆ ಅನಿವಾರ್ಯ.ಅದರಲ್ಲಿಯೂ ಸಸ್ಯಾಹಾರಿಗಳಿಗೆ ನಿತ್ಯದ ಪ್ರೋಟಿನ್‌ ಅನ್ನು ಒದಗಿಸುತ್ತದೆ. ಆದರೆ,  ಸಂಸ್ಕರಿಸಿದ ಆಹಾರ ನಮ್ಮ ಅಡುಗೆಮನೆಯಲ್ಲಿ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಿರ್ಧರಿಸುವುದು ಒಳಿತು. ಎಲ್ಲ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ, ಸಂರಕ್ಷಕಗಳು ಮತ್ತು ಅಡಿಟಿವ್ಸ್‌  ನೈಸರ್ಗಿಕ ರೂಪದಲ್ಲಿ ಇರಬೇಕು. ಆಹಾರದ ಮೂಲರೂಪ ಬದಲಾಗಬಾರದು. ಸರಳವಾಗಿ ಹೇಳುವುದಾದರೆ ಶೂನ್ಯ ಕ್ಯಾಲೋರಿಸ್‌ ಕೊಡುವ ಆಹಾರಗಳಾಗಿರಬಾರದು. 

ಸಂಸ್ಕರಿಸಿದ ಆಹಾರ ಎಷ್ಟೇ ಹಿತವಾಗಿದ್ದರೂ ಅದಕ್ಕೆ ಮಿತಿ ಹಾಕಿಕೊಳ್ಳುವುದು ಒಳಿತು. 

-ಲೇಖಕಿ, ಕ್ಲಿನಿಕಲ್ ನ್ಯೂಟ್ರಿಷಿಯನಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.