ADVERTISEMENT

ಮಕ್ಕಳ ಊಟಕ್ಕೆರಂಗಿನ ಆಕರ್ಷಣೆ

ಪವಿತ್ರಾ ರಾಘವೇಂದ್ರ ಶೆಟ್ಟಿ
Published 9 ಮಾರ್ಚ್ 2020, 19:30 IST
Last Updated 9 ಮಾರ್ಚ್ 2020, 19:30 IST
   

ಮನೆ ಕ್ಲೀನ್ ಮಾಡಿ, ಬಟ್ಟೆ ಒಗೆದು, ಬಿಸಿ ಬಿಸಿ ಅಡುಗೆ ಮಾಡಿ ಇನ್ನೇನು ಮಗುವಿನ ತಟ್ಟೆಗೆ ಊಟ ಹಾಕಬೇಕು ಅನ್ನುವಾಗ ಎದೆಯಲ್ಲಿ ಢವ ಢವ ಶುರುವಾಗುತ್ತದೆ. ಇವತ್ತು ಏನು ಹೇಳಿ ಊಟ ಮಾಡಿಸಲಿ? ನಿನ್ನೆ ಹೇಳಿದ ಕಾಗೆ– ಗುಬ್ಬಚ್ಚಿ ಕಥೆಗಳು ಇಂದು ಅವನಿಗೆ ಹಳೆಯದು. ಊಟದ ತಟ್ಟೆ ಹಿಡಿದುಕೊಂಡು ಬರುತ್ತಲೇ ಮಕಾಡೆ ಮಲಗಿಬಿಡುತ್ತಾನೆ. ‘ಇವತ್ತು ನನಗೆ ಊಟ ಬೇಡ...’ ಎನ್ನುವ ರಾಗವೊಂದು ಶುರುವಾಗುತ್ತದೆ. ‘ಟಿವಿ ಹಚ್ಚಿಕೊಡು, ಮೊಬೈಲ್‌ನಲ್ಲಿ ಹಾಡು ಹಾಕಿಕೊಡು’ ಎನ್ನುವ ಬೇಡಿಕೆಗಳು ಮತ್ತೊಂದು ಕಡೆ. ಒಂದೊಂದು ತುತ್ತು ತಿನ್ನುವುದಕ್ಕೆ ಅರ್ಧ ಗಂಟೆ ಸತಾಯಿಸಿದವನಿಗೆ ಏಟು ಕೊಟ್ಟಾದರೂ ತಿನ್ನಿಸುವ ಎಂದರೆ ತಿಂದಿದ್ದು ನೆತ್ತಿಗೆ ಹತ್ತಿದರೆ ಕಷ್ಟ ಎಂಬ ಮತ್ತೊಂದು ತಲೆಬಿಸಿ! ಒಟ್ಟಾರೆ ಮಕ್ಕಳಿಗೆ ಊಟ ಮಾಡಿಸುವುದು ಎಂದರೆ ಅಮ್ಮಂದಿರಿಗೆ ದೊಡ್ಡ ಸವಾಲೇ ಸರಿ.

ಎದೆಹಾಲು ಬಿಡಿಸಿ ಊಟ ತಿನ್ನಿಸುವುದಕ್ಕೆ ಆರಂಭಿಸಿದಾಗ ಶುರುವಾಗುವ ಈ ತಲೆನೋವು ಅವರಿಗೆ ಹತ್ತು ವರ್ಷ ಆಗುವವರೆಗೂ ಅಮ್ಮಂದಿರನ್ನು ಕಾಡದೇ ಬಿಡುವುದಿಲ್ಲ. ‘ನೀ ಹೇಗೆ ಮಗೂಗೆ ಊಟ ಮಾಡಿಸ್ತಿಯಾ? ಏನು ಕೊಡ್ತಿಯಾ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಚಿಕ್ಕ ಮಗುವಿನ ತಾಯಂದಿರು ಒಟ್ಟಿಗೆ ಸೇರಿದಾಗ ಕೇಳುವುದು ಸಾಮಾನ್ಯ. ಯಾವ ತರಕಾರಿಯಿಂದ ಯಾವ ವಿಟಮಿನ್ ಸಿಗುತ್ತದೆ, ಯಾವ ಹಣ್ಣು ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಗೂಗಲ್ ಪೂರ್ತಿ ಜಾಲಾಡಬೇಕು. ಯಾವುದೋ ಯುಟ್ಯೂಬ್‌ನಲ್ಲಿ ಕಿಡ್ಸ್ ರೆಸಿಪಿ ಎಂದೆಲ್ಲಾ ತಡಕಾಡಬೇಕು. ಹಾಗೂ ಹೀಗೂ ಒಂದು ತುತ್ತು ಬಾಯಿಗಿಟ್ಟರೆ ತುಪಕ್ ಎಂದು ಉಗಿದು ಇಷ್ಟಗಲ ಬಾಯಿ ಬಿಟ್ಟು ನಗುವ ಮಗುವಿಗೆ ಅಮ್ಮಂದಿರು ಏನು ಮಾಡಬೇಕು?

ಮಕ್ಕಳಿಗೆ ಯಾವ ರೀತಿಆಹಾರ ನೀಡಬೇಕು?
ಊಟ ತಿನ್ನುವ ವಿಷಯದಲ್ಲಿ ಒಂದೊಂದು ಮಗು ಒಂದೊಂದು ರೀತಿ. ಎಲ್ಲಾ ಮಕ್ಕಳಿಗೂ ಬೇಕಾಗುವ ಆಹಾರದ ಪ್ರಮಾಣ ಒಂದೇ ರೀತಿ ಇರುವುದಿಲ್ಲ. ಅವರವರ ದೇಹದ ಗುಣಕ್ಕೆ ತಕ್ಕಂತೆ ಊಟ ಮಾಡುತ್ತಾರೆ. ಬಲವಂತದಿಂದ ಮಕ್ಕಳಿಗೆ ಊಟ ಮಾಡಿಸುವ ಬದಲು ಊಟದ ಮೇಲೆ ಮಕ್ಕಳಿಗೆ ಆಸಕ್ತಿ ಬರುವಂತೆ ಮಾಡಬೇಕು.

ADVERTISEMENT

ಹೀಗಿರಲಿ ಮಕ್ಕಳ ಊಟ
* ಕೆಲವು ಮಕ್ಕಳಿಗೆ ದಪ್ಪವಾದ ಚಪಾತಿ ಇಷ್ಟವಿರುವುದಿಲ್ಲ. ಅಂತಹವರಿಗೆ ಅಂಗೈ ಅಗಲದ ಚಪಾತಿ ಮಾಡಿ ಕೊಡಿ. ಸೊಪ್ಪು ತಿನ್ನದ ಮಕ್ಕಳಿಗೆ ಮೆಂತ್ಯೆ ಸೊಪ್ಪು, ಮೂಲಂಗಿ, ಕ್ಯಾರೆಟ್ ತುರಿ ಮೊದಲಾದವುಗಳನ್ನು ಸೇರಿಸಿ ಚಪಾತಿ ಮಾಡಿಕೊಟ್ಟರೆ ರುಚಿಕರವಾಗಿರುತ್ತದೆ. ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ.

* ಆರೋಗ್ಯಕ್ಕೆ ಒಳ್ಳೆಯದು ಎಂದು ತರಕಾರಿ, ಹಣ್ಣುಗಳನ್ನು ಒಂದೇ ಸಲ ತಿನ್ನು ತಿನ್ನು ಎಂದು ಬಲವಂತ ಮಾಡುವ ಬದಲು ಬೇರೆ ಬೇರೆ ಆಕಾರದಲ್ಲಿ ಅವುಗಳನ್ನು ಕತ್ತರಿಸಿ ಕೊಡಿ. ಅವರಿಗೆ ಕೊಡುವ ಆಹಾರವನ್ನು ಆದಷ್ಟು ಆಕರ್ಷಕವಾಗಿ ಮಾಡಿಕೊಡಿ.

* ದಿನಾ ಒಂದೇ ಬಗೆಯ ಆಹಾರ ನೀಡುವ ಬದಲು ಆಗಾಗ ಮೆನು ಬದಲಾಯಿಸಿ. ಅವರಿಗೆ ಏನು ಇಷ್ಟ ಎಂದು ಕೇಳಿ. ಅಡುಗೆ ಮಾಡುವಾಗ ಅವರನ್ನು ಹತ್ತಿರ ನಿಲ್ಲಿಸಿಕೊಳ್ಳಿ. ತರಕಾರಿ ಕುರಿತು ಅವರಿಗೆ ಸಾಧ್ಯವಾದರೆ ತಿಳಿಸಿಹೇಳಿ.

* ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ. ಆಗ ಮಗು ಕೂಡ ನಮ್ಮನ್ನು ನೋಡಿ ಕಲಿಯುತ್ತದೆ.

* ಇನ್ನು ಊಟ– ತಿಂಡಿಯನ್ನು ತಟ್ಟೆಗೆ ಹಾಕಿ ಅವರಿಗೆ ತಿನ್ನುವುದಕ್ಕೆ ಬಿಟ್ಟುಬಿಡಿ. ಇದರಿಂದ ಅವರು ಊಟದ ಕಡೆ ಬೇಗ ಆಕರ್ಷಿರಾಗುತ್ತಾರೆ.

* ಆದಷ್ಟು ಜಂಕ್ ಫುಡ್, ಕೇಕ್‌ಗಳಿಂದ ಅವರನ್ನು ದೂರವಿಡಿ.ಅವರಿಗೆ ಯಾವ ತರಕಾರಿ ಇಷ್ಟ ಎಂಬುದನ್ನು ಕೇಳಿ. ಶಾಲೆಯಲ್ಲಿ ಅವರ ಸ್ನೇಹಿತರು ಏನು ಊಟ ತರುತ್ತಾರೆ ಎಂಬುದನ್ನು ವಿಚಾರಿಸಿ.

* ಚಪಾತಿಯನ್ನು ಸುರುಳಿ ಸುತ್ತಿ ಮಾಡಿಕೊಡುವುದು, ದೋಸೆ ಮೇಲೆ ಕ್ಯಾರೆಟ್ ತುರಿ ಹಾಕಿ ಕೊಡುವುದು ಮಾಡಿಕೊಡಿ.

* ಮಗು ಯಾವುದಾರೂ ಆಹಾರ ಬೇಡ ಎನ್ನುತ್ತಿದ್ದರೆ ಅದಕ್ಕೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಿ. ಕೆಲವು ತರಕಾರಿಯ ವಾಸನೆ ಮಕ್ಕಳಿಗೆ ಹಿಡಿಸುವುದಿಲ್ಲ. ಆಗ ಬಲವಂತ ಮಾಡಬೇಡಿ.

* ಸೂಪ್, ಹಣ್ಣುಗಳ ಜ್ಯೂಸ್, ಸಲಾಡ್ ಮಾಡಿಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.