ADVERTISEMENT

ಮಾವಿನ ಮೌಲ್ಯವರ್ಧನೆ; 12 ಉತ್ಪನ್ನಗಳು ಮಾರುಕಟ್ಟೆಗೆ

ಲಾಕ್‌ಡೌನ್‌ನಲ್ಲಿ ಮಾಲತಿ ಮೈಗೂರ ಟೀಚರ್ ಪ್ರಯೋಗ

ಹರ್ಷವರ್ಧನ ಶೀಲವಂತ
Published 11 ನವೆಂಬರ್ 2020, 21:43 IST
Last Updated 11 ನವೆಂಬರ್ 2020, 21:43 IST
ಮ್ಯಾಂಗೊ ಬರ್ಫಿ
ಮ್ಯಾಂಗೊ ಬರ್ಫಿ   
""
""
""

ವೃತ್ತಿಯಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬದುಕು ಕಟ್ಟಿಕೊಡುವ, ನಾವಂದುಕೊಂಡ ‘ದಡ್ಡ’ ಮಕ್ಕಳನ್ನು ಜಾಣರಾಗಿಸುವ, ‘ಕ್ರಿಯಾಶೀಲ ಗೆಳೆಯರು ಬಳಗ‘ದ ಹೆಸರಾಂತ ವಿಜ್ಞಾನ ಶಿಕ್ಷಕಿ ಧಾರವಾಡದ ಮಾಲತಿ, ಪ್ರವೃತ್ತಿಯಿಂದ ಪ್ರಯೋಗಶೀಲ ಕೃಷಿಕ ಮಹಿಳೆ.

ಧಾರವಾಡ ತಾಲ್ಲೂಕು ದೇವರಹುಬ್ಬಳ್ಳಿಯಿಂದ ಮಲ್ಲೂರಿಗೆ ಹೋಗುವ ಮಾರ್ಗ ಮಧ್ಯೆ ಮೂರು ಎಕರೆ ಮಾವಿನತೋಟ ಇವರಿಗಿದೆ. ಧಾರವಾಡ ಆಪೂಸ್‌ ಪ್ರಜಾತಿಯ 140 ಮರಗಳಿವೆ. ಹಳಿಯಾಳ ತಾಲ್ಲೂಕಿನ ಎಲ್ಲ ನರ್ಸರಿಗಳಿಂದ ಆಯ್ದ ತಲಾ 25 ಪ್ರಜಾತಿಯ ಮಾವಿನ ತಳಿಗಳಿವೆ. ಹೊಸನಗರದ ರಾಮಚಂದ್ರಾಪುರ ಮಠದ ಗೋಶಾಲೆಯಿಂದ ಖರೀದಿಸಿದ, ಪಂಚಗವ್ಯ ಬಳಸಿ ಸಾವಯವ ತೋಟವನ್ನು ಅವರು ನಿರ್ವಹಿಸುತ್ತಿದ್ದಾರೆ.

ಕೋವಿಡ್ -19 ಲಾಕ್‌ಡೌನ್ ಸಂದರ್ಭ. ಮಾವಿನಮರಗಳಲ್ಲಿ ಹೂವು ಕಾಯಿಕಟ್ಟಿದ ಎಳವೆಯಲ್ಲೇ ಆಲಿಕಲ್ಲು ಮಳೆ ಸುರಿದಿತ್ತು. ಗಾಯದ ಮೇಲೆ ಬರೆ ಎಳೆದಂತೆ ಆಲಿಕಲ್ಲಿನ ಪೆಟ್ಟಿಗೆ ಕಾಯಿಗಳು ಕಪ್ಪಾದ ಪರಿ ದುಗುಡ ಹೆಚ್ಚಿಸಿತ್ತು.

ADVERTISEMENT

ಕಪ್ಪಾದ ಮತ್ತು ಕೂಡಲೇ ನೆಲಕಚ್ಚಿದ ಮಾವಿನಕಾಯಿ ಹೆಕ್ಕಿ, ಸಾದಾ ಮತ್ತು ಮಿಡಿಯಂತೆ ಎರಡು ತೆರನಾದ ಉಪ್ಪಿನಕಾಯಿ ಹಾಕಿದರು. ರಸಂ ಮತ್ತು ಸಾಂಬಾರಿಗೆ ಬಳಸಲು ‘ರೆಡಿ ಟು ಯೂಸ್’ ಮಾದರಿಯಲ್ಲಿ ‘ಆಮ್ ಸೋಲ್’ ಹಸಿಕಾಯಿ ತುರಿಯ ಪುಡಿ ಹಾಗೂ ಮಾವಿನಕಾಯಿಯ ಹಪ್ಪಳ ‘ಆಮ್ ಪಾಪಡ್’ ಕೂಡ ತಯಾರಿಸಿದರು.

ಮಾವಿನ ಹಣ್ಣಿನ ವಿವಿಧ ಉತ್ಪನ್ನಗಳು

ಮರದಲ್ಲಿ ಉಳಿದ ಮಾವಿನಕಾಯಿಗಳು ಹಣ್ಣಾಗಿ, ಇನ್ನೇನು ಕೊಯ್ಲು ಮಾಡಬೇಕಿತ್ತು. ಅಷ್ಟು ಹೊತ್ತಿಗೆ ಬೆಲೆ ಪಾತಾಳಕ್ಕೆ ಕುಸಿಯಿತು. ಅವರು ಚಿಂತೆ ಮಾಡಲಿಲ್ಲ. ಬದಲಿಗೆ ತಮ್ಮ ಮಗ ರಂಗಕರ್ಮಿ ಮಕರಂದನ ಸಹಾಯದಿಂದ ಸಾವಯವ ಮಾವಿನಹಣ್ಣುಗಳ ಲಭ್ಯತೆ ಕುರಿತು ‘ಪಿಪಿಟಿ’ ತಯಾರಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡರು. ಎಲ್ಲರ ಬೇಡಿಕೆ ಒಂದೇ.. ‘ಮನೆಗೆ ತಲುಪಿಸಿ!’ ‘ಡೋರ್ ಡೆಲಿವರಿ ಫ್ರೀ’ ಮಾಡಬೇಕು!

ಹಾಗಾದರೆ, ದಾರಿ ಯಾವುದು? ಸದ್ಯ ಬೇಡಿಕೆ ಮತ್ತು ಬೆಲೆ ಎರಡೂ ಕುಸಿದಿವೆ. ಹಾಗಾಗಿ, ಹಣ್ಣನ್ನು ಮೌಲ್ಯವರ್ಧಿಸಿ, ಉತ್ಪನ್ನ ತಯಾರಿಸಿ ಇಟ್ಟರೆ, ಬೇಡಿಕೆ ಬಂದಾಗ ಮಾರಾಟ ಮಾಡಬಹುದು ಎಂಬ ಯೋಚನೆ ಬಂತು ಅವರಿಗೆ. ಕೂಡಲೇ ಹಣ್ಣಿನ ಮಾರಾಟದ ಗೊಡವೆ ಕೈಬಿಟ್ಟು, 25 ಸಾವಿರ ರೂಪಾಯಿಯ ಫ್ರೀಜರ್ ಖರೀದಿಸಿದರು. ಮೌಲ್ಯವರ್ಧನೆ ಶುರು ಮಾಡಿದರು. ಮೊದಲು ಮಾವಿನ ಹಣ್ಣಿನ ತಿರುಳು ನಿರ್ಜಲೀಕರಿಸಿ, ಪೇಸ್ಟ್ ರೂಪದಲ್ಲಿ ಸಂಗ್ರಹಿಸಿದರು. ಈ ಪೇಸ್ಟ್‌ ಅನ್ನು ಆರು ತಿಂಗಳು ಕಾಪಿಡಬಹುದು. ಇದನ್ನು ಬಳಸಿ ಮಾವು ಇಲ್ಲದ ಆಫ್‌ ಸೀಸನ್‌ನಲ್ಲೂ(ಯಾವಾಗಲಾದರೂ) ಶೀಕರಣಿ ಮಾಡಿಕೊಳ್ಳಬಹುದು.

ಮಾವಿನಹಣ್ಣಿನ ಮೌಲ್ಯವರ್ಧನೆ ಇಷ್ಟಕ್ಕೆ ನಿಲ್ಲಲಿಲ್ಲ. ಮಾವಿನಹಣ್ಣಿನ ರಸದಿಂದ ಲಡ್ಡು, ಮಾವಿನ ಹಣ್ಣಿನ ಬರ್ಫಿ ಹಾಗೂ ಹಣ್ಣಿನ ರಾಯತಾವನ್ನೂ ಸಿದ್ಧಪಡಿಸಿದರು. ಹೆಚ್ಚು ದಿನ ತಾಳಿಕೆ ಬರುವಂತೆ ಸಿದ್ಧಪಡಿಸಿದ ಈ ಉತ್ಪನ್ನಗಳನ್ನು ಫ್ರೀಜರ್‌ನಲ್ಲಿ ಇಡಲಾಯಿತು. ಇದರ ಜತೆಗೆ 12 ತಿಂಗಳು ಇಟ್ಟು ಬಳಸಬಹುದಾದ ಮಾವಿನಹಣ್ಣಿನ ‘ಆಮ್ ಜಾಮ್’ ಅನ್ನೂ ಸಿದ್ಧಪಡಿಸಿದರು.

ಮೌಲ್ಯವರ್ಧಿತ ಉತ್ಪನ್ನಗಳ ಸಂಗ್ರಹಿಸುವ ಫ್ರೀಜರ್

10 ರಿಂದ 12 ಮಾವಿನಹಣ್ಣುಗಳಿಗೆ 1 ಕೆ.ಜಿ ತಿರುಳು ರಸ ಸಿಗುತ್ತದೆ. ಒಂದು ಕೆ.ಜಿ ತಿರುಳು ರಸದಿಂದ ಒಟ್ಟು 50 ಕೆ.ಜಿಯಷ್ಟು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದು ಮೇಡಂ ಅನುಭವದ ಮಾತು.

ಮಾವಿನ ತಿರುಳು ತೆಗೆದ ಮೇಲೆ ಉಳಿಯುವ ಗೊಪ್ಪ(ವಾಟೆ) ಮತ್ತು ಅದರೊಳಗಿನ ಬೀಜವನ್ನು ಬಿಸಾಡಲು ಮನಸ್ಸಾಗಲಿಲ್ಲ. ಹಾಗಾಗಿ, 100 ಗೊಪ್ಪಗಳನ್ನು ಸಸಿ ತಯಾರಿಸಲು ಮೀಸಲಿಟ್ಟು, ಬಾಕಿ ಗೊಪ್ಪಗಳ ಬೀಜ ಸೀಳಿ ‘ಮುಖವಾಸ’ ಬಾಯಿ ಸ್ವಚ್ಛಗೊಳಿಸುವ ಸುವಾಸಿತ ‘ಗೊಪ್ಪದ ಅಡಕೆ’ ತಯಾರಿಸಿದರು. ಇದರಲ್ಲಿ ‘ಸಿ-12’ ಪೋಷಕಾಂಶ ಹೆಚ್ಚಿದ್ದು, ಆಹಾರ ಜೀರ್ಣಿಸುವುದಕ್ಕೂ ಪೂರಕವಾಗಿ ಕೆಲಸ ಮಾಡುತ್ತದೆ.

ಸತತ 30 ದಿನಗಳು, ಮನೆಯ ಆರು ಜನರ ಪ್ರತಿದಿನದ 12 ತಾಸುಗಳ ಶ್ರಮದಿಂದ 12 ನಮೂನೆಯ ಮೌಲ್ಯವರ್ಧಿತ ಮಾವಿನ ಉತ್ಪನ್ನಗಳು ಸಿದ್ಧವಾದವು. ₹1.75 ಲಕ್ಷದಷ್ಟು ಉತ್ಪನ್ನ ಮಾರಾಟವಾಯಿತು. ಲಾಕ್‌ಡೌನ್‌ನಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ್ಣು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಾಡಲು ಸಾಧ್ಯವಾಗಿದ್ದು ಸಾಧನೆಯೇ ಸರಿ.

‘ಕಳೆದ ವರ್ಷ ₹3.75 ಲಕ್ಷ ಮೊತ್ತದ ಮಾವಿನ ಹಣ್ಣುಗಳು ಮಾರಾಟವಾಗಿದ್ದವು. ಈ ಬಾರಿ ನಷ್ಟದ ನಡುವೆಯೂ ನಮ್ಮ ತೋಟದ ವಾರ್ಷಿಕ ನಿರ್ವಹಣೆಯ ಖರ್ಚು ಗಳಿಸಿದ್ದು ಸಮಾಧಾನ ತಂದಿದೆ’ ಎನ್ನುತ್ತಾರೆ ಮಾಲತಿ.

ಮೌಲ್ಯವರ್ಧಿತ ಧಾರವಾಡ ಆಪೂಸ್ ಮಾವಿನ ಕಾಯಿ/ಹಣ್ಣುಗಳ ಉತ್ಪನ್ನಗಳೊಂದಿಗೆ ಮಾಲತಿ ಮುಕುಂದ ಮೈಗೂರ

‘ಪಡಕೊಂಡು ಬಂದಿದ್ ಮಾತ್ರ ಉಣ್ಣಬಹುದ’

‘ನಾವು ಗಳಿಸಿದ್ದನ್ನೆಲ್ಲ ಉಣ್ಣಾಕ ಆಗೋದಿಲ್ಲ; ನಾವು ಪಡಕೊಂಡು ಬಂದಿದ್ದನ್ನ ಮಾತ್ರ ಉಣ್ಣಬಹುದ ಅನ್ನೋ ಸತ್ಯ ನಮಗ ಕೃಷಿ ಕಲಸ್ತದ’ ಎಂದರು ಮಾಲತಿಯವರಿಗೆ ಮೌಲ್ಯವರ್ಧನೆ, ಮಾರುಕಟ್ಟೆಯಲ್ಲಿ ಕೈ ಜೋಡಿಸಿದ ಪತಿ ಮುಕಂದ ಮೈಗೂರ.

‘ಕೋವಿಡ್ -19 ಲಾಕ್‍ಡೌನ್ ಆಗಿರದಿದ್ರ, ಧಾರವಾಡ ಆಪೂಸ್ ಮಾವಿನಹಣ್ಣುಗಳ ಪರ್ಯಾಯ ಮೌಲ್ಯವರ್ಧನೆ ಬಗ್ಗೆ ನಾವು ತಲೀನ ಕೆಡಿಸಿಕೊಳ್ಳತಿದ್ದಿಲ್ಲ. ಕೊನೆ ಪಕ್ಷ ಕೋವಿಡ್-19 ಅನ್‍ಲಾಕ್ ಪ್ರಕ್ರಿಯೆ ಶುರು ಆಗಿ, ಆಪ್ತರಿಗಾದ್ರೂ ಹಂಚೋವರೆಗೆ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ನಮಗ ಸೃಷ್ಟಿ ಆಯ್ತು. ‘ಅವಶ್ಯಕತೆಯೇ ಅನ್ವೇಷಣೆಯ ತಾಯಿ’ ಅಂತಾರಲ್ಲ ಹಂಗ’ ಎಂದು ಖುಷಿಯಿಂದ ಹೇಳಿದರು.

ಮಾಹಿತಿಗಾಗಿ ಮಾಲತಿ ಮುಕುಂದ ಮೈಗೂರ ಸಂಪರ್ಕ ಸಂಖ್ಯೆ: 94488 22199)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.