ADVERTISEMENT

ಸಂದರ್ಶನ | ಕಲಬೆರಕೆ ಜಾಲದ ವಿರುದ್ಧ ಹೋರಾಡಲು ಸಿಬ್ಬಂದಿ, ಅನುದಾನ ಬೇಕು

ಆರ್. ಹರಿಶಂಕರ್
Published 9 ಜೂನ್ 2021, 15:12 IST
Last Updated 9 ಜೂನ್ 2021, 15:12 IST
ಪಂಕಜ್‌ ಕುಮಾರ್‌ ಪಾಂಡೆ 
ಪಂಕಜ್‌ ಕುಮಾರ್‌ ಪಾಂಡೆ    

ಬಿಗಿ ಕಾನೂನುಗಳಿದ್ದರೂ, ರಾಜ್ಯ ಸರ್ಕಾರದಲ್ಲಿ ಆಹಾರ ಸುರಕ್ಷತೆ ಕಾಪಾಡಲು ಆಯುಕ್ತಾಲಯ ಕಚೇರಿಯೇ ಇದ್ದರುಆಹಾರ ಕಲಬೆರಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ‘ಸಮರ್ಥವಾಗಿ ಕೆಲಸ ಮಾಡಲು ನಮಗೆ ಸೂಕ್ತ ಸಿಬ್ಬಂದಿ, ಅನುದಾನದ ಅಗತ್ಯವಿದೆ’ ಎಂಬುದು ಆಹಾರ ಸುರಕ್ಷತಾ ಆಯುಕ್ತಾಲಯದ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರ ಮಾತು. ಸಂದರ್ಶನದ ಅಕ್ಷರರೂಪ ಇಲ್ಲಿದೆ.

ರಾಜ್ಯದಲ್ಲಿ ಈ ವರ್ಷ ಆಹಾರ ಕಲಬೆರಕೆಯ ಎಷ್ಟುಪ್ರಕರಣಗಳು ದಾಖಲಾಗಿವೆ?

ಕಳೆದ ಒಂದು ವರ್ಷದ ಅವಧಿಯಲ್ಲಿ 316 ಆಹಾರ ಕಲಬೆರಕೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 249 ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳಲ್ಲಿ,67 ಪ್ರಕರಣಗಳು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಾಗಿವೆ.

ADVERTISEMENT

ಕಲಬೆರಕೆಯಿಂದಾಗಿ ರಾಜ್ಯದಲ್ಲಿ ಸಾವು ಸಂಭವಿಸಿದ ಪ್ರಕರಣಗಳು ವರದಿಯಾಗಿದೆಯೇ?

ಈವರೆಗೆ ಒಂದೂ ವರದಿಯಾಗಿಲ್ಲ.

ಕಲಬೆರಕೆ ಮಾಫಿಯಾಗಳು ರಾಜ್ಯದಲ್ಲಿಸಕ್ರಿಯವಾಗಿವೆಯೇ?

ನಮಗೆ ಮಾಹಿತಿ ಇಲ್ಲ. ಅಂಥ ಪ್ರಕರಣಗಳು ವರದಿಯಾಗಿಲ್ಲ.

ಹೋಟೆಲ್‌, ಆಹಾರ ಉದ್ದಿಮೆಗಳ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆಯೇ?

ರಾಜ್ಯದಲ್ಲಿ ಈವರೆಗೆ 11,6,066 ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. 3,39,129 ಆಹಾರ ಉದ್ದಿಮೆಗಳನ್ನು ನೋಂದಣಿ ಮಾಡಲಾಗಿದೆ. ನೋಂದಣಿಯಾಗಬೇಕಿಗಿರುವ ಆಹಾರ ಉದ್ದಿಮೆಗಳನ್ನು ಪತ್ತೆ ಹಚ್ಚಿ ವರದಿ ನೀಡಲು ಹಾಗೂ ಕ್ರಮ ಕೈಗೊಳ್ಳಲು ಜಿಲ್ಲಾ ಆಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಹಾರ ಸುರಕ್ಷತೆ ಕುರಿತ ತರಬೇತಿಯನ್ನು ಪ್ರತಿವರ್ಷ ಎಲ್ಲ ರೀತಿಯ ಆಹಾರ ಉದ್ದಿಮೆಗಳಿಗೆ ನೀಡಲಾಗುತ್ತಿದೆ.

ಕಲಬೆರಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದಿಂದ ಪ್ರಯತ್ನಗಳೇನಾದರೂ ಆಗುತ್ತಿವೆಯೇ?

ಆಹಾರ ಕಲಬೆರಕೆ ಕುರಿತು ಜಾಗೃತಿ ಮೂಡಿಸಲು Food Safety On Wheels ಎಂಬಸಂಚಾರಿ ಆಹಾರ ಪ್ರಯೋಗಾಲಯಕ್ಕೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಅದು ಗ್ರಾಹಕರಿಗೆ, ಆಹಾರ ವಹಿವಾಟುದಾರರಿಗೆ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಇದರ ಜತೆಗೇ (ಜೂನ್ 7) ವಿಶ್ವ ಆಹಾರ ಸುರಕ್ಷತಾ ದಿನಾಚರಣೆ (world food safety Day) ಮತ್ತು ವಿಶ್ವಆಹಾರ ಸುರಕ್ಷತಾ ಪಾಕ್ಷಿಕ ದಿನಾಚರಣೆಯನ್ನೂ ನಮ್ಮ ಆಯುಕ್ತಾಲಯದಿಂದ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಆಹಾರ ಸುರಕ್ಷತಾ ಆಯುಕ್ತಾಲಯಕ್ಕೆ ಸೂಕ್ತ ಅನುದಾನ ಸಿಗುತ್ತಿದೆಯೇ? ಗುಣಮಟ್ಟದ ಮೇಲೆ ನಿಗಾ ಇರಿಸಲು ವೈಜ್ಞಾನಿಕ ಸವಲತ್ತುಗಳು ಇವೆಯೇ?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತಾಲಯಕ್ಕೆ ಪ್ರತ್ಯೇಕವಾದ ಲೆಕ್ಕ ಶೀರ್ಷಿಕೆ ಮಂಜೂರಾಗಿಲ್ಲ. ಆದರೆ, 2019–20ನೇ ಸಾಲಿನಲ್ಲಿ ಜನಾರೋಗ್ಯ ಪ್ರಯೋಗಶಾಲೆಗಳು ಮತ್ತು ಆಹಾರ ಸುರಕ್ಷತೆ ಕಾರ್ಯಕ್ರಮಕ್ಕೆ 12.60 ಕೋಟಿ ಅನುದಾನ ಸಿಕ್ಕಿದೆ. ಪ್ರತ್ಯೇಕಲೆಕ್ಕ ಶೀರ್ಷಿಕೆ ನೀಡಲು ಸರ್ಕಾರಕ್ಕೆಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮಲ್ಲಿ ಒಂದು ರಾಜ್ಯಮಟ್ಟದ ಆಹಾರ ಪ್ರಯೋಗಾಲಯ ಮತ್ತು ಮೂರು ವಿಭಾಗೀಯ ಆಹಾರ ಪ್ರಯೋಗಾಲಯಗಳಿವೆ. ರಾಜ್ಯ ಆಹಾರ ಪ್ರಯೋಗಾಲಯದಲ್ಲಿ 3 ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಮೈಸೂರು ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ದೆಹಲಿಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಶೀಘ್ರದಲ್ಲೇ ಅತ್ಯಾಧುನಿಕ ಯಂತ್ರೋಪಕರಣ ಪೂರೈಕೆಯಾಗಲಿದೆ. ಇವುಗಳ ಸಹಾಯದಿಂದ ಆಹಾರ ಗುಣಮಟ್ಟದ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ.

ಆಹಾರ ಕಲಬೆರಕೆ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಜಾರಿ ದಳ ವಿಭಾಗದಿಂದ ಸರ್ವೇಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಲಬೆರಕೆ ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ತಿಳಿವಳಿಕೆ/ಉತ್ತಮೀಕರಣ ನೋಟಿಸ್‌ ನೀಡಿ ದಂಡ ವಿಧಿಸಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ಆಹಾರ ಮಾದರಿಯನ್ನು ಸಂಗ್ರಹಿಸಿ ಅಸುರಕ್ಷಿತ/ ಕಡಿಮೆ ಗುಣಮಟ್ಟದ ಆಹಾರಗಳನ್ನು ಪತ್ತೆಹಚ್ಚಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತಿದ್ದಾರೆ.

ಆಹಾರ ಕಲಬೆರಕೆ ತಡೆಗೆ ತುರ್ತಾಗಿ ಆಗಬೇಕಿರುವ ಕ್ರಮಗಳೇನು?ಶಾಶ್ವತವಾದ ಪರಿಹಾರಗಳೇನು?

ಆಹಾರ ಕಲಬೆರಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಇದಕ್ಕೆ ಅನುದಾನಬೇಕು. ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳಿಗೆ ಕಾಲಕಾಲಕ್ಕೆ ಆಹಾರ ಕಲಬೆರಕೆ ಕುರಿತು ತರಬೇತಿ ನೀಡಬೇಕು. ಸರ್ಕಾರವು ಅಗತ್ಯ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕಾತಿಯನ್ನು ಮಾಡಬೇಕು. ರಾಜ್ಯದ ಎಲ್ಲ ಆಹಾರ ಪ್ರಯೋಗಾಲಯಗಳನ್ನು ಉನ್ನತೀಕರಿಸುವುದೂ ಕೂಡ ಶಾಶ್ವತ ಪರಿಹಾರಗಳಲ್ಲಿಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.