ಪ್ರತಿ ವರ್ಷ ಕೊನೆಗೊಂಡಾಗಲೂ ಹಿನ್ನೋಟವಿದ್ದೇ ಇರುತ್ತದೆ. ನಂತರ ಮುನ್ನೋಟ ಎಂದು ಒಂದಿಷ್ಟು ದಿನಗಳ ಕಾಲ ಸಂಭ್ರಮಿಸುತ್ತೇವೆ. ಆಯಾ ಕ್ಷೇತ್ರಗಳ ಪರಿಣತರು ಅಲ್ಲೊಂದಿಷ್ಟು ಭೂತ, ಇಲ್ಲೊಂದಿಷ್ಟು ಭವಿಷ್ಯ ಎಲ್ಲವನ್ನೂ ಮಿಶ್ರ ಮಾಡಿ ನಡುವಿನ ವರ್ತಮಾನವನ್ನು ಹೊಸೆದು ರಂಗನ್ನು ಸೇರಿಸಿಬಿಡುತ್ತಾರೆ. ಮಳೆ– ಬೆಳೆ, ಹಣಕಾಸು, ರಾಜಕೀಯ, ವಿದೇಶಾಂಗ ನೀತಿ.. ಎಂದೆಲ್ಲ ಒಂದಿಷ್ಟು ನೋಟಗಳು ಹೊರಳಾಡಿದರೂ ಆರೋಗ್ಯ ವಲಯದ ಬಗ್ಗೆ ಮಾತ್ರ ಯಾರೂ ಏನನ್ನೂ ಹೇಳಲು ಹೋಗುವುದಿಲ್ಲ, ಕಾರಣ ಅದರ ಬಗ್ಗೆ ಯಾರಿಂದಲೂ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಕಳೆದ ವರ್ಷ ಆಗಿದ್ದೂ ಅದೇ. ಮೊದಲ ಎರಡು ತಿಂಗಳು ಬಡವರನ್ನು ಬಿಟ್ಟು ಉಳಿದವರು ಚೆನ್ನಾಗಿ ತಿಂದರು, ಕುಡಿದರು.. ಮಾರ್ಚ್‌ನಲ್ಲಿ ಎರಡು ವಾರಗಳು ಉರುಳಿಕೊಂಡು ಮೂರನೇ ವಾರದಲ್ಲಿ ಬಿಸಿ ಮುಟ್ಟಿತು. ನಾವು ಹೇಗೆ ಬದುಕಬೇಕು, ಹೇಗೆ ತಿನ್ನಬೇಕು ಮತ್ತು ಏನನ್ನು ತಿನ್ನಬೇಕು ಎನ್ನುವುದನ್ನು ಜಗತ್ತನ್ನೇ ಆವರಿಸಿದ ಪಿಡುಗು ನಮಗೆ ಆದೇಶ ನೀಡಲಾರಂಭಿಸಿತು.
ಆನ್‌ಲೈನ್‌ಲ್ಲಿ ದವಸ– ಧಾನ್ಯ, ತರಕಾರಿ– ಹಣ್ಣು ತರಿಸಿಕೊಂಡೆವು. ನೇರವಾಗಿ ತೋಟದಿಂದಲೇ ಸಾವಯವ ತರಕಾರಿಗೂ ಮುಗಿಬಿದ್ದರು ಜನ. ಹೆಚ್ಚಾಗಿ ಸಸ್ಯಾಹಾರವನ್ನು, ತರಕಾರಿ– ಸೊಪ್ಪು ಅವಲಂಬಿಸಿದ ಮಂದಿ ರೋಗ ನಿರೋಧಕ ಶಕ್ತಿ ಎಂಬ ಅಮೂಲ್ಯ ಪದವನ್ನು ಬಾಯಿಪಾಠ ಮಾಡಿದರು. ಆರಂಭದಲ್ಲಿ ಹೋಟೆಲ್– ರೆಸ್ಟೋರೆಂಟ್‌ಗಳು ಬಂದ್ ಆಗಿದ್ದರಿಂದ, ಲಾಕ್‌ಡೌನ್ ಎಂಬುದು ಎಲ್ಲರನ್ನೂ ಮನೆಯಲ್ಲೇ ಲಾಕ್ ಮಾಡಿದ್ದರಿಂದ, ಜೊತೆಗೆ ಆಹಾರದ ಮೇಲೂ ವೈರಸ್ ಜಂಪ್ ಹೊಡೆಯುತ್ತದೆ ಎಂಬ ಹೆದರಿಕೆಗೆ ಜೋತು ಬಿದ್ದು ತರಿಸಿದ ಕಾಳು– ಬೇಳೆ, ತರಕಾರಿಯನ್ನು ಕ್ವಾರಂಟೈನ್ ಮಾಡಿ, ನಾಲ್ಕಾರು ಸಲ ಉಪ್ಪು ನೀರಿನಲ್ಲಿ ತೊಳೆದು ಮನೆಯಲ್ಲೇ ಆರೋಗ್ಯಕರ ಆಹಾರ ತಯಾರಿಕೆ ಶುರುವಾಯಿತು. ಹೌದು, ಇದು ಆರೋಗ್ಯಕರವೇ. ಯಾವುದನ್ನೂ ವ್ಯರ್ಥ ಮಾಡದೆ, ತರಕಾರಿ ಸಿಪ್ಪೆಯಿಂದಲೂ ಗೊಜ್ಜು ತಯಾರಿಸಿ ಅದರ ಆರೋಗ್ಯಕರ ಗುಣಗಳನ್ನು ತಾರೀಫು ಮಾಡಿದೆವು. ಮನೆಯಲ್ಲೇ ಬ್ರೆಡ್, ಉಪ್ಪಿನಕಾಯಿ, ಚಟ್ನಿಪುಡಿ ತಯಾರಿಕೆಯೂ ನಡೆಯಿತು. ಹೋಟೆಲ್‌ಗಳು ಪುನಃ ತೆರೆದರೂ ಹೆಚ್ಚಿನ ಜನ ಮನೆಯಲ್ಲೇ ತಯಾರಿಸಿದ ಆಹಾರದ ಮೇಲೆ ಅವಲಂಬಿತರಾಗಿದ್ದು ಒಂದು ಸಕಾರಾತ್ಮಕ ಬೆಳವಣಿಗೆ. ಇದಕ್ಕಾಗಿಯಾದರೂ ಕೋವಿಡ್ ತಂದ ಬದಲಾವಣೆ ಎಂದು ಕೃತಜ್ಞತೆ ಹೇಳಲೇಬೇಕು.
ಪ್ರೊಬಯೊಟಿಕ್ ಆಹಾರ
ಮೊದಲೇ ಹೇಳಿದ ಹಾಗೆ ಈಗ ಆರೋಗ್ಯಕರವಾಗಿರುವುದಕ್ಕೆ ಈಗ ಮೊದಲ ಆದ್ಯತೆ, ನಿತ್ಯದ ಮಂತ್ರ. ಜಠರದಲ್ಲಿ, ಸಣ್ಣ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ (ಬ್ಯಾಕ್ಟೀರಿಯಾ ಮಾತ್ರವಲ್ಲ, ಪ್ರೋಟೊಝೋವ ಮತ್ತಿತರ ಸೂಕ್ಷ್ಮಾಣು ಜೀವಿಗಳನ್ನು ಸೇರಿಸಿ ಮೈಕ್ರೊಬಯೋಮ್ ಎನ್ನಲಾಗುತ್ತದೆ) ಗಳನ್ನು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿದ್ದೇವೆ. ಅಂತಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.
ಪ್ರೊಬಯೊಟಿಕ್ ಆಹಾರ, ಅಂದರೆ ಜೀವಂತವಾದ, ಒಳ್ಳೆಯ ಬ್ಯಾಕ್ಟೀರಿಯಾಗಳಿಂದ ಕೂಡಿದ ಆಹಾರ ಸೇವಿಸಿದರೆ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ. ಜೀರ್ಣಶಕ್ತಿ, ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯುತ್ತವೆ ಎನ್ನುತ್ತಾರೆ ಲೈಫ್‌ಸ್ಟೈಲ್ ಕಾಯಿಲೆಗಳ ತಜ್ಞ ಡಾ. ಟಿ.ಎಸ್. ತೇಜಸ್.
ಪ್ರೊಬಯೋಟಿಕ್ ಎನ್ನುವುದು ಪ್ರಿಬಯೋಟಿಕ್‌ನಲ್ಲಿರುವ ನಾರಿನಂಶದಿಂದ ಫ್ಯಾಟಿ ಆ್ಯಸಿಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಬೆಳ್ಳುಳ್ಳಿ, ಈರುಳ್ಳಿ, ಇಡಿ ಧಾನ್ಯ, ಬೇಳೆಕಾಳು,ಬಾಳೆಹಣ್ಣು ಮೊದಲಾದವುಗಳಲ್ಲಿ ಈ ಅಂಶವಿದ್ದು, ಊಟಕ್ಕೆ, ತಿಂಡಿಗೆ ಬಳಸಬಹುದು.
ಇನ್ನು ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿಯೇ ಪ್ರೊಬಯೊಟಿಕ್ ಅಂಶವಿರುತ್ತದೆ. ಇವುಗಳೆಂದರೆ ಮೊಸರು ಹಾಗೂ ತರಕಾರಿಯಿಂದ ಮಾಡಿ, ಹುಳಿ ಬರಿಸಿದ ಉಪ್ಪಿನಕಾಯಿ. ಹಾಗೆಯೇ ಹುದುಗು ಬರಿಸಿದ ಗ್ರೀನ್ ಟೀ. ಸಕ್ಕರೆ, ಹಾಗೆಯೇ ಕೃತಕ ಸಿಹಿ ಈ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಅಪರೂಪಕ್ಕೆ ಸಿಹಿ ಸೇವಿಸಿದರೆ ಏನೂ ತೊಂದರೆಯಿಲ್ಲ ಎನ್ನುತ್ತಾರೆ ತಜ್ಞರು. ಹಾಗಂತ ಪ್ರಮಾಣ ಹೆಚ್ಚಿರಬಾರದು. ಸಂಬಾರು ಪದಾರ್ಥ, ಅತ್ಯಂತ ಹೆಚ್ಚಿನ ನಾರಿನಂಶ, ಹಾಗೆಯೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವುದು ಬೇಡ ಎನ್ನುತ್ತಾರೆ ಡಾ. ತೇಜಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.