ADVERTISEMENT

PV Web Exclusive: ಹಸಿ ಆಹಾರ ಸೇವನೆ ಎಷ್ಟು ಉಪಯುಕ್ತ?

ಸುಧಾ ಹೆಗಡೆ
Published 1 ಡಿಸೆಂಬರ್ 2020, 10:37 IST
Last Updated 1 ಡಿಸೆಂಬರ್ 2020, 10:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೂಕ ಇಳಿಸುವ ಉತ್ಸಾಹದಲ್ಲಿರುವವರನ್ನು ಕೇಳಿ ನೋಡಿ, ಬೇಯಿಸದ ಹಸಿ ತರಕಾರಿ, ತಾಜಾ ಹಣ್ಣು, ಸಂಸ್ಕರಿಸದ ಧಾನ್ಯ, ಬೇಳೆಕಾಳಿನ ಡಯಟ್‌ ಪಟ್ಟಿಯನ್ನು ಮುಂದಿಡುತ್ತಾರೆ. ಈ ಒಟ್ಟಾರೆ ಪ್ಯಾಕೇಜ್‌ ತೂಕ ಇಳಿಸುವುದು ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಹಕಾರಿ. ಹಾಗೆಯೇ ಮಧುಮೇಹ, ಹೃದ್ರೋಗದಂತಹ ಸಮಸ್ಯೆಗಳನ್ನು ದೂರ ಇಡಬಹುದು ಎಂಬುದು ಬೇಯಿಸದ, ಕಚ್ಛಾ ಆಹಾರ ಸೇವಿಸುವವರ ವಾದ.

ಈ ಹಸಿ ಆಹಾರ ಸೇವನೆ ಎಷ್ಟೆಂದರೂ ಆದಿ ಮಾನವನ ಕಾಲದಿಂದ ಬಂದಿದ್ದು. ನಾಗರಿಕತೆ ಸುಧಾರಿಸಿದಂತೆ ಮಾಂಸವನ್ನು ಬೇಯಿಸಿ, ಉಪ್ಪು ಖಾರ ಹಾಕಿ ರುಚಿಕಟ್ಟಾಗಿ ಮಾಡಿಕೊಂಡು ತಿನ್ನುವುದು ಆರಂಭವಾಯಿತು. ಜೊತೆಗೆ ಸಸ್ಯಾಹಾರವನ್ನೂ ಕೂಡ. ಮತ್ತೆ ಅದೀಗ ಕಚ್ಛಾ ರೂಪದಲ್ಲಿ ನಮ್ಮ ಮುಂದೆ ಬಂದಿದ್ದು, ಕೆಲವರು ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೇಗಾನ್‌ ಅಂದರೆ ಕ್ಷೀರೋತ್ಪನ್ನವನ್ನು ಕೂಡ ತ್ಯಜಿಸಿ ಸಂಪೂರ್ಣ ಸಸ್ಯಾಹಾರಕ್ಕೆ ಒಲವು ತೋರಿಸುವವರೂ ಇದ್ದಾರೆ.

‘ಕಚ್ಛಾ ಸಸ್ಯಾಹಾರವೆಂದರೆ ಶೇ 70ರಷ್ಟು ಹಸಿ ತರಕಾರಿ, ಹಣ್ಣು ಸೇರಿರುತ್ತದೆ. ಹಾಗೆಯೇ ಒಣಹಣ್ಣು, ಬೀಜ, ಮೊಳಕೆ ಕಾಳು ಕೂಡ. ಕೆಲವು ತರಕಾರಿಗಳನ್ನು ಅರ್ಧ ಬೇಯಿಸಬಹುದು’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ. ಟಿ.ಎಸ್‌. ತೇಜಸ್‌.

ADVERTISEMENT

ತಾಜಾ ತರಕಾರಿ, ಹಣ್ಣು, ಒಣಹಣ್ಣು ಮೊದಲಾದವುಗಳನ್ನು ಕಚ್ಛಾ ಆಹಾರವೆಂದು ಗುರುತಿಸುವುದು ಸುಲಭ. ಆದರೆ ತರಕಾರಿ ಸಲಾಡ್‌ಗೆ ಸೇರಿಸುವ ಸಾಸ್‌, ಕೆಚಪ್‌, ಎಣ್ಣೆಯನ್ನು ಸಂಸ್ಕರಿಸಿರುತ್ತಾರಲ್ಲವೇ? ಹುರಿದು, ಬೇಯಿಸಿ ಮಾಡಿರುತ್ತಾರೆ. ಹೀಗಾಗಿ ಸಂಪೂರ್ಣ ಹಸಿ ಆಹಾರ ಸೇವಿಸುವಾಗ ಇವುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎನ್ನುತ್ತಾರೆ ನೈಸರ್ಗಿಕವಾದ ಆಹಾರ ಪದ್ಧತಿ ಪ್ರತಿಪಾದಕರಾದ ವಿನುತಾ ಹಿರೇಮಠ.

ಸಂಸ್ಕರಿಸದ, ಸಾವಯವ ತರಕಾರಿ, ಹಣ್ಣು, ಬಾದಾಮಿ, ಪಿಸ್ತಾದಂತಹ ನಟ್‌, ಮೊಳಕೆ ಬಂದ ಹೆಸರು, ಕಡಲೆ, ಮಸೂರ, ಮಡಕೆ, ಹಸಿರು ಬಟಾಣಿ, ಬೀನ್ಸ್‌ ಇವುಗಳಲ್ಲಿ ಸೇರಿಸಬಹುದು.

ಸಂಸ್ಕರಿಸಿದ, ರಿಫೈನ್‌ ಆಹಾರ, ಕೆಫಿನ್‌ ಇವುಗಳನ್ನು ಬಿಡುವುದು ಒಳ್ಳೆಯದು ಎನ್ನುತ್ತಾರೆ ಡಾ. ತೇಜಸ್‌.

ಹೆಚ್ಚು ತರಕಾರಿ, ಮೊಳಕೆ ಕಾಳು..

ಸಲಾಡ್‌, ಸ್ಮೂದಿ, ಸೂಪ್‌ನಲ್ಲಿ ತರಕಾರಿ ಬಳಸಬಹುದು. ಉಪ್ಪಿನಕಾಯಿಯಲ್ಲೂ ಹಸಿ ತರಕಾರಿಗಳಾದ ಕ್ಯಾರೆಟ್‌, ಲಿಂಬು, ನೆಲ್ಲಿಕಾಯಿ, ಮಾವಿನಕಾಯಿ, ಮಾವಿನ ಶುಂಠಿ ಬಳಕೆ ಮಾಡಬಹುದು. ತಾಜಾ ಹಣ್ಣು, ಆಯಾ ಕಾಲಕ್ಕೆ ಬಿಡುವ ಹಣ್ಣು ಯಾವತ್ತಿದ್ದರೂ ಒಳ್ಳೆಯದೇ. ಆದರೆ ಕೆಲವೊಮ್ಮೆ ಒಣಗಿಸಿದ ಹಣ್ಣನ್ನು ಬಳಸಬಹುದು. ಹಣ್ಣಿನ ರಸ, ಸ್ಮೂದಿ ಕೂಡ ಈ ಡಯಟ್‌ನಲ್ಲಿ ಬರುತ್ತವೆ. ಇನ್ನು ಸೋಯಾ ಹಾಲು ಕೂಡ ಸೇವಿಸಬಹುದು. ಮೊಳಕೆ ಬಂದ ಗೋಧಿ ಹೆಚ್ಚು ಪೌಷ್ಟಿಕ ಎನ್ನುತ್ತಾರೆ ತಜ್ಞರು. ವೇಗಾನ್‌ ಅಲ್ಲದವರು ಬೆಣ್ಣೆ ಬಳಸಬಹುದು. ಕೋಲ್ಡ್‌ ಪ್ರೆಸ್‌ ಮಾಡಿದ ಕೊಬ್ಬರಿ ಎಣ್ಣೆ, ಅಗಸೆ ಎಣ್ಣೆ ಕೂಡ ಒಳ್ಳೆಯದೇ. ಬಾರ್ಲಿ ನೆನೆಹಾಕಿದ ನೀರು, ಹೆಸರುಕಾಳಿನ ತಂಪು, ಎಳ್ಳಿನ ತಂಪು ಕುಡಿಯಬಹುದು.

ಈ ಹಸಿ ಅಥವಾ ಕಚ್ಛಾ ಆಹಾರದಲ್ಲಿ ಕ್ಯಾಲರಿ ಕಡಿಮೆ. ಹೀಗಾಗಿ ಇಂಥದ್ದೇ ಸಮಯದಲ್ಲಿ ತಿನ್ನಬೇಕು ಎಂಬ ನಿಯಮವಿಲ್ಲ. ಜೊತೆಗೆ ನಾರಿನಂಶ ಹೆಚ್ಚಿರುವುದರಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ತೃಪ್ತಿಯಾಗಿರುತ್ತದೆ.

ಬೀನ್ಸ್‌, ಹೆಸರುಕಾಳು, ಕಡಲೆ ಮತ್ತಿತರ ಕಾಳುಗಳನ್ನು ನೀರಿನಲ್ಲಿ ನೆನೆ ಹಾಕಿ, ಮೊಳಕೆ ಬರಿಸಿದರೆ ಪೌಷ್ಟಿಕಾಂಶ ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣ ಎಂಜೈಮ್‌ಗಳು ಎನ್ನುತ್ತಾರೆ ತಜ್ಞರು. ಒಂದಿಡೀ ರಾತ್ರಿ ನೆನೆ ಹಾಕಿದರೂ ಏನೂ ತೊಂದರೆಯಿಲ್ಲ ಎಂಬುದು ಅವರ ಅಂಬೋಣ, ನಂತರ ನೀರನ್ನು ತೆಗೆದು ಪ್ಲೇಟ್‌ ಮೇಲೆ ಆರಲು ಬಿಡಿ. ಡಬ್ಬಿಯಲ್ಲಿ ಹಾಕಿಟ್ಟರೆ ಒಂದಾರು ತಾಸಿನಲ್ಲೇ ಮೊಳಕೆ ಬರುತ್ತದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ನಾಲ್ಕಾರು ದಿನ ಇಟ್ಟುಕೊಂಡು ಬಳಸಬಹುದು.

ಇನ್ನು ದ್ರಾಕ್ಷಿ, ಟೊಮೆಟೊ, ಹಾಗಲಕಾಯಿ ಮೊದಲಾದವುಗಳನ್ನು ಬಿಸಿಲಿನಲ್ಲಿ ಒಣ ಹಾಕಿ ಬಳಸಬಹುದು.

ವೈದ್ಯರ ಸಲಹೆ ಅಗತ್ಯ

ಈ ಕಚ್ಛಾ ಆಹಾರದ ಡಯಟ್‌ ಸಸ್ಯಾಹಾರಿಗಳಿಗೆ, ಗ್ಲುಟನ್‌ರಹಿತ ಆಹಾರ ಸೇವಿಸುವವರಿಗೆ ಒಳ್ಳೆಯದು. ಆದರೆ ಮಕ್ಕಳು, ವೃದ್ಧರು, ಯಾವುದೇ ಕಾಯಿಲೆ ಇರುವವರಿಗೆ ಅಷ್ಟು ಉತ್ತಮವಾದ ಡಯಟ್‌ ಅಲ್ಲ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರಾದ ಮುರಳಿ ಅಂಬಟ್‌. ತರಕಾರಿ ಅಥವಾ ಮಾಂಸದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಗಳು, ಉದಾಹರಣೆಗೆ ಇ ಕೊಲಿ ಬ್ಯಾಕ್ಟೀರಿಯ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸುವುದರಿಂದ ನಾಶವಾಗುತ್ತದೆ ಎಂದು ಅವರು ಕಾರಣ ಕೊಡುತ್ತಾರೆ. ಹಾಗೆಯೇ ಇದು ಗರ್ಭಿಣಿಯರಿಗೂ ಒಳ್ಳೆಯದಲ್ಲ. ಯಾವುದಕ್ಕೂ ಪೌಷ್ಟಿಕಾಂಶ ತಜ್ಞರ ಸಲಹೆ ಪಡೆದು ಡಯಟ್‌ ಅನುಸರಿಸಿ ಎಂದು ಅವರು ಕಿವಿಮಾತು ಹೇಳುತ್ತಾರೆ.

ಕಚ್ಛಾ ಆಹಾರದಲ್ಲಿ ಕ್ಯಾಲರಿ ಕಡಿಮೆ, ಸಕ್ಕರೆ ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ನಾರಿನಾಂಶ, ಆ್ಯಂಟಿ ಆಕ್ಸಿಡೆಂಟ್‌, ಪೋಟ್ಯಾಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ವಿಟಮಿನ್‌ ಎ ಅಂಶ ಕೂಡ ಜಾಸ್ತಿ ಎನ್ನುತ್ತಾರೆ ತಜ್ಞರು. ನಾರಿನಾಂಶದಿಂದಾಗಿ ಹೊಟ್ಟೆ ತುಂಬುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರ ಇಡಬಹುದು. ಸ್ಯಾಚುರೇಟೆಡ್‌ ಕೊಬ್ಬಿನಂಶ ಕಡಿಮೆ. ಸಂಸ್ಕರಿಸದ ಆಹಾರವಾಗಿರುವುದರಿಂದ ಸೋಡಿಯಂ ಅಂಶವೂ ಕಡಿಮೆ.

ಆದರೆ ವಿಟಮಿನ್‌ ಡಿ. ಕಬ್ಬಿಣದ ಅಂಶ, ವಿಟಮಿನ್‌ ಬಿ12, ಝಿಂಕ್‌ ಕಡಿಮೆಯಾಗಬಹುದು ಎಂದು ಎಚ್ಚರಿಸುತ್ತಾರೆ ಡಾ. ತೇಜಸ್‌. ಹೀಗಾಗಿ ಸಂಪೂರ್ಣ ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು ಎಂದೆಲ್ಲ ಡಯಟ್ ಮಾಡುವ ಬದಲು ಬೇಯಿಸಿದ ಆಹಾರವನ್ನೂ ಅಗತ್ಯ ಪ್ರಮಾಣದಲ್ಲಿ ಸೇವಿಸುವುದು ಒಳಿತು ಎನ್ನುವುದು ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.