‘ಸೊಸಿ ಅಡಗಿ ಮಾಡಿ, ಬುತ್ತಿ ಕಟ್ತಾಳ್ರಿ. ನಾ ಅಷ್ಟರೊಳಗ ನೆಲಾ ಕಸಾ ಮಾಡಿ, ಸ್ನಾನ ಮಾಡಿ ತಯಾರ ಆಗ್ತೇನಿ. ಪೂಜಿ ಮಾಡ್ಕೊಂಡು ಚಾ ಕುಡದು ಮಂಜಮುಂಜೇನೆ ಊರು ಬಿಟ್ವಿ ಅಂದ್ರ ಮತ್ತ ಸಂಜೀಕ ಮನಿ ಮುಟ್ಟೂದ್ರಿ’
ಅರವತ್ತರ ಗಡಿ ದಾಟಿರುವ ಮುದುಕಮ್ಮ, 60ರ ಹೊಸಿಲಲ್ಲಿರುವ ಲಕ್ಷ್ಮಮ್ಮ ತಮ್ಮ ಕತೆ ಹೇಳುತ್ತಿದ್ದರು. ಇವರಿಬ್ಬರೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನದ ಆಸುಪಾಸಿನಲ್ಲಿ ರೊಟ್ಟಿ ಬುತ್ತಿ ಮಾರಾಟ ಮಾಡುವ ಅನ್ನಪೂರ್ಣೆಯರು. ಮೂವತ್ತು ನಲ್ವತ್ತು ವರ್ಷಗಳಿಂದ ಇವರೆಲ್ಲ ಬುಟ್ಟಿಯಲ್ಲಿ ಬುತ್ತಿಯೂಟವನ್ನು ಹೊತ್ತು ತಂದು, ಇಲ್ಲಿ ಮಾರಾಟ ಮಾಡಿ ಮನೆ ಸೇರುತ್ತಾರೆ. ಅವರ ದಿನಚರಿ, ಬದುಕಿನ ತುಣುಕು ಅವರ ಮಾತಲ್ಲೇ ಇಲ್ಲಿದೆ...
ಇದು ಹಿಂದಿನ ದಿನದಿಂದನ ತಯಾರಿ ಚಾಲು ಇರ್ತದ್ರಿ. ಖಟಿ ರೊಟ್ಟಿ ಬೇಕಾದ್ರ ಮತ್ತ ಅವು ಕಾವು ಉಣ್ಣಬೇಕು. ಅಂದ್ರ ಕುರುಕುರು ಆಗ್ತಾವ. ಖಟಿಯಾದ್ರ ಯಾರು ಉಣ್ತಾರ ಬಿಡ್ರಿ..? ಬೆಳಗಿನ ಜಾವ ಮೊದಲು ಬಿಸಿರೊಟ್ಟಿ ಮಾಡಿ, ಅಂಗವಸ್ತ್ರದಾಗ ಸುತ್ತಿಡ್ತಾರ‍್ರೀ . ಇನ್ನೊಂದ್ಕಡೆ ಬ್ಯಾಳಿ ಪಲ್ಲೆ, ಹಿಟ್ಟಿನ ಪಲ್ಲೆ ಮಾಡಾಕ ಏನು ಬೇಕೋ ಹೆಚ್ಚಿಡ್ತೀವಿ. ನಮ್ಮ ಹಿತ್ತಲದಾಗ ಬೆಳಿಯೂ ಬದನಿಕಾಯಿ, ಬೆಂಡಿಕಾಯಿ, ಸೌತಿಕಾಯಿ, ಅವರಿಕಾಯಿ ಹಿಂಗ ಇವನ್ನ, ರಾಜಗಿರಿ, ಸಬ್ಬಸಗಿ, ಉಳ್ಳಾಗಡ್ಡಿ ಪಲ್ಲೆ ಮಾಡ್ಕೊಂಡು ಬರ್ತೇವಿ. ಏನೂ ಬೆಳದಿರಲಿಲ್ಲ, ತುಟ್ಟಿ ಅನಿಸ್ತು ಅಂದ್ರ ಕಾಳು ಕಡಿ ಅಂತೂ ಇದ್ದೇ ಇರ್ತಾವಲ್ರಿ. ಮಳಿಗಾಲದಾಗ ಕಾಳುಕಡಿ ಮಾಡೂದು, ಚಳಿಗಾಲದಾಗ ತಪ್ಪಲಪಲ್ಯ, ಬ್ಯಾಸಗಿಯೊಳಗ ಮೊಸರು, ಮಜ್ಗಿ ಹಿಂಗ ಏನರೆ ಮಾಡ್ತೀವಿ.
ಸುಳ್ಳು ಯಾಕ ಹೇಳೂನ್ರಿ, ಮೊದಲೆಲ್ಲ ಎರಡು ರೊಟ್ಟಿ ಅಂದ್ರ ಹಂಚಿನಗಲ ರೊಟ್ಟಿ ಇರ್ತಿದ್ವು. ಈಗ ಅಂಗೈ ಅಗಲ ಮಾಡ್ತೀವಿ. ಒಲಿ ಖರ್ಚು ಹೆಚ್ಚಾಗ್ತದ. ಕೊಡೋರು ಹೆಚ್ಗಿ ಮಾಡಿದ್ರ ಕೊಡೂದಿಲ್ಲ. ನಾವೇನು ಕುಂದ್ರಾಕ ಕುರ್ಚಿ, ಟೇಬಲ್ ತರೂದಿಲ್ಲ. ಬನದಮ್ಮನ ಅಂಗಳದಾಗ ಭಕ್ತರು ನೆಲದ ಮ್ಯಾಲೆ ಚಕ್ಕಳಮಕ್ಕಳ ಹಾಕ್ಕೊಂಡು ಕುಂತು ಉಂಡ್ರಂದ್ರ ನಮಗೂ ಸಮಾಧಾನ. ಅವರಿಗೂ ಸಮಾಧಾನ.
ಅವ್ವಾರ, ಸೋಡಾ ಹಾಕೂದಾಗಲಿ, ಬಣ್ಣಾ ಹಾಕೂದಾಗಲಿ ಏನೂ ಮಾಡೂದಿಲ್ಲ. ಬುತ್ತಿಯೂಟಕ್ಕ ತಂದಿದ್ದನ್ನೇ ನಾವೂ ಉಣ್ತೀವಿ. ಸುಳ್ಳೂ ತಟವಟ ಗೊತ್ತಿಲ್ಲ ನೋಡ್ರಿ... ಬನದಮ್ಮ ನಡಿಸಿಕೊಂಡು ಹೊಂಟಾಳ. ನಡಕೊಂಡು ಹೊಂಟದ. ಹೆಣ್ಮಕ್ಕಳ ಜೀವನ ಸರಳಲ್ರಿ, ಅಂಥಾ ದೇವಾನುದೇವತೆಗಳೇ ಕಷ್ಟ ಉಂಡು ಗೆದ್ದು ಬಂದಾರ. ಇನ್ನ ನಾವಂತೂ ಮನುಷಾರು. ಎಲ್ಲಾ ದೇವರ ಮ್ಯಾಲೆ ಭಾರ ಹಾಕೂದದ, ಹಾಡೂದದ, ಉಣ್ಣೂದದ, ಮುನ್ನಡಿಯೂದದ.
ಹೆಣ್ಮಕ್ಕಳು ದಗದ ಮಾಡ್ಲಿಕ್ರ ನಡಿಯೂದೆ ಇಲ್ರಿ.. ಬದುಕಿನ ಬಂಡಿಗೆ ನಾವ ಹೆಚ್ಗಿ ಶಕ್ತಿ ಕೊಡಬೇಕಾಗ್ತದ. ಹೊರಗ ದುಡೀಲಿಕ್ರ, ಮನೀ ಕೆಲಸೇನು ಕಡಿಮಿ ಇರ್ತಾವಂತೀರಿ? ಮಕ್ಕಳನ್ನ ಜ್ವಾಕಿ ಮಾಡಬೇಕು. ಅಡಗಿಮನಿ ನೋಡಬೇಕು.. ಹೊರಗೂ ಮೈಕೈ ಮಣ್ಣು ಮಾಡ್ಕೊಬೇಕು. ಅಂಥಾ ಜೀವದಂಥಾ ಜೀವಾನ್ನ ಧರಿಗೆ ತರ್ತೀವಿ. ಇನ್ನ ಆ ನೋವು, ಕಷ್ಟದ ಮುಂದ ಇವೆಲ್ಲ ಯಾವ ಲೆಕ್ಕ?
ಅನುಕೂಲ ಹೆಚ್ಚೇನಿಲ್ಲ. ಆದ್ರ ಮನಸಿಗೆ ಬೇಕನಿಸಿದ್ರ ಎಲ್ಲಾನೂ ಬೇಕನಸ್ತದ್ರಿ. ಅದಕ್ಕ ಎಲ್ಲಿ ನಿಲುಗಡೆ ಅನ್ನೂದದ? ತಗೀರಿ.. ಮಾತೀಗೆ ಕೊನಿ ಇರೂದಿಲ್ಲ. ಬೇಕಂದ್ರ ಬೇಕನಸ್ತದ. ಬ್ಯಾಡಂದ್ರ ಅರಾಮಿರ್ತೀವಿ.
ಹೀಗೆ ಹೇಳುತ್ತ ತಮ್ಮ ಬುತ್ತಿ ಬುಟ್ಟಿಯನ್ನು ಹೊತ್ತು ಹೊರಟರು ಅನ್ನಪೂರ್ಣೆಯರು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.