ತಿಂಡಿಪ್ರಿಯರೇ, ನಿಮಗೆಂದೇ ಮೀಸಲಿದೆ ವಿ.ವಿ.ಪುರಂನ ಫುಡ್ ಸ್ಟ್ರೀಟ್. ಅಕ್ಷರಶಃ ಇಲ್ಲೊಂದು ಆಹಾರದ ನಿತ್ಯ ಜಾತ್ರೆ.
ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್ ಹತ್ತಿರದ ಈ ಬೀದಿ ಸಂಜೆಯಾಗುತ್ತಿದ್ದಂತೆ ಜನಜಂಗುಳಯಿಂದ ತುಳುಕುತ್ತದೆ. ಇಲ್ಲಿನ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ.ಮಧ್ಯಾಹ್ನ ಮೂರು ಗಂಟೆಯಾಗುತ್ತಿದ್ದಂತೆ ಅಂಗಡಿಗಳು ತೆರೆದುಕೊಳ್ಳಲು ಆರಂಭಿಸುತ್ತವೆ. ಮುಕ್ಕಾಲು ಕಿ.ಮೀ ಇರುವ ಈ ಬೀದಿಯ ತುಂಬಾ ಆರು ಗಂಟೆಯ ವೇಳೆಗೆಲ್ಲಾ ತಿಂಡಿಪೋತರಿಂದ ಗಿಜಿಗುಡುತ್ತಿರುತ್ತದೆ. ಇದು ಯುವಜೋಡಿಗಳ ನೆಚ್ಚಿನ ತಾಣವೂ ಹೌದು. ಇಲ್ಲಿನ ತಿಂಡಿ ತಿನಿಸುಗಳು ಇತರೆಡೆಗಳಗಿಂತಲೂ ವಿಶೇಷ ಮತ್ತು ಹೆಚ್ಚು ರುಚಿಕಟ್ಟು. ಇಲ್ಲಿಗೆ ವಾರದ ಯಾವುದೇ ದಿನವಾದರು ಬರಬಹುದು.
ಏನೇನು ಸಿಗುತ್ತವೆ
ಇಲ್ಲಿ ಅವರೆ ಕಾಳಿನ ಹೋಳಿಗೆ ಮಜಾನೇ ಬೇರೆ. ಅವರೆ ಬೇಳೆಯಿಂದ ಮಾಡಿದ ಹೋಳಿಗೆ, ದೋಸೆ, ಉಪ್ಪಿಟ್ಟು, ಹಿತಕಬೇಳೆ, ಎಳ್ಳವರೆ, ಅವರೆ ಬೇಳೆ ಮಸಾಲೆ ಇಡ್ಲಿ, ಉಸಲಿ, ಪಲಾವ್, ವಡೆ, ಬೆಂಗಳೂರು ಬೋಂಡಾ ಸೇರಿದಂತೆ ಥರಹೇವಾರಿ ಅವರೇಕಾಯಿ ಖಾದ್ಯಗಳು ಆಹಾರ ಪ್ರಿಯರ ಹೊಟ್ಟೆ ತಣಿಸುತ್ತವೆ. ಅವರೆ ಕಾಳಿನ ಸಿಹಿತಿಂಡಿಗಳು ಪ್ರಮುಖ ಆಕರ್ಷಣೆ. ಅವರೆಕಾಯಿ ಹಲ್ವ, ಮೈಸೂರು ಪಾಕ್, ಜೆಲೇಬಿ, ಅವರೆ ಕಾಳು ಬರ್ಫಿ, ಸೋನ್ ಪಾಪಡಿ ಕೂಡ ಲಭ್ಯ.
ಪೆರಿಪೆರಿ:ಆಲೂಗಡ್ಡೆಯಿಂದ ಮಾಡುವ ಖಾರವಾದ, ಗರಿಗರಿಯಾದ ಪೆರಿಪರಿ ತುಂಬ ರುಚಿಕರ. ಜೊತೆಗೆ ಜೋಳದ ರೊಟ್ಟಿ, ಮೊಸರು ಕೋಡುಬಳೆ, ಒತ್ತು ಶಾವಿಗೆ, ಕಾಯಿ ಒಬ್ಬಟ್ಟು, ಬೇಳೆ ಒಬ್ಬಟ್ಟು, ಖಜ್ಜಾಯ, ನಿಪ್ಪಟ್ಟು, ಮೈಸೂರು ಮಸಾಲ, ಪಡ್ಡು ತಿನಿಸುಗಳು ಬಾಯಲ್ಲಿ ನೀರೂರಿಸುವಂಥವು.
ಆರ್ಯ ವೈಶ್ಯ ಚಾಟ್ಸ್ ಕಾರ್ನರ್
ಇಲ್ಲಿ ಜಲ್ ಜೀರಾ ಮಸಾಲ, ಫಾಂಟಾ ಮಸಾಲ, ಸ್ರ್ಕೈಬ್ ಮಸಾಲ, ಲಿಮ್ಕಾಮಸಾಲ, ಮಾಜ್ಹಾ ಮಸಾಲ, ಆಲ್ ಮಿಕ್ಸ್ ಮಸಾಲ ದೊರೆಯುತ್ತದೆ. ಇವುಗಳನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ ಎನ್ನುತ್ತಾರೆ ಅಂಗಡಿ ಮಾಲೀಕರು.
ಇಲ್ಲಿ ಪಾವ್ ಭಾಜಿ, ವಡಾ ಪಾವ್, ತವಾ ಪಲಾವ್, ಮಸಾಲಾ ಪಾವ್, ಆಲೂ ಫ್ರೈ, ಜೈನ್ ಪಾವ್ ಭಾಜಿ, ಫಿಂಗರ್ ಚಿಪ್ಸ್ ಮುಂತಾದವುಗಳು ದೊರೆಯುತ್ತವೆ. ಚೈನೀಸ್ ಕಾರ್ನರ್‌ನಲ್ಲಿ ಗೋಬಿ ಮಂಚೂರಿ, ಮಶ್ರೂಮ್ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಪನ್ನೀರ್ ಮಂಚೂರಿ, ರೋಲ್ ರುಮಾಲಿ ರೋಟಿ ಖಾದ್ಯಗಳು ಸೆಳೆಯುವಂಥವು.
ಈ ರಸ್ತೆಯ ಕೊನೆಯಲ್ಲಿನ ಪ್ರೂಟ್ ಸೆಂಟರ್‌ನಲ್ಲಿ ₹ 20 ರಿಂದ ನೂರು ರೂಪಾಯಿಯವರೆಗಿನ ಜ್ಯೂಸ್‌ಗಳಿವೆ. ಸ್ಟ್ರಾಬೆರಿ, ಲಸ್ಸಿ ಪಾನಕಾ, ಬಾದಾಮಿ ಹಾಲು, ಪೈನಾಪಲ್ ಜ್ಯೂಸ್, ಆ್ಯಪಲ್ ಜ್ಯೂಸ್, ಗುಲ್ಕನ್ ಐಸ್ ಕ್ರೀಂ, ಪ್ರೂಟ್ ಸಲಾಡ್, ಬೆಣ್ಣೆ ಐಸ್ ಕ್ರೀಂ ಸವಿಯಬಹುದು. ಬೆಲೆ ಕಡಿಮೆ.
*
ಇಲ್ಲಿ ಸಿಗುವ ಅವರೆಬೇಳೆ ಹೋಳಿಗೆ ಎಂದರೆ ನನಗೆ ತುಂಬಾ ಇಷ್ಟ. ಈ ರೀತಿಯ ಆಹಾರದ ಮೇಳವನ್ನು ಎಲ್ಲಿಯೂ ನೋಡಿಲ್ಲ. ಇಲ್ಲಿ ಸಿಗುವ ತಿಂಡಿಗಳು ಮನೆಯ ತಿಂಡಿಯ ರೀತಿಯೇ ಇರುತ್ತವೆ.
– ಪ್ರಶಾಂತ್
*
ಇದೊಂದು ತಿಂಡಿಗಳ ಹಬ್ಬವೇ ಸರಿ. ಇದನ್ನು ನೋಡುತ್ತಿದ್ದರೆ ನಮ್ಮೂರಿನ ಜಾತ್ರೆ ನೆನಪಾಗುತ್ತದೆ. ಇಲ್ಲಿನ ಜಾಮೂನು ಮತ್ತು ಅವರೆಕಾಳಿನ ದೋಸೆ ನನಗೆ ಪಂಚ ಪ್ರಾಣ. ವಾರದಲ್ಲಿ ಮೂರು ದಿನವಾದರೂ ಇಲ್ಲಿಗೆ ಬರುತ್ತೇವೆ.
– ಅರ್ಪಿತಾ ವಿ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.