ಭುವನೇಶ್ವರ: ಮಧುಮೇಹಿಗಳಿಗಾಗಿ ಒಡಿಶಾದ ರೈತ ಉಮೇಶ್ ನಾಯಕ್ ಎಂಬುವವರು RNR15048 ಸೋನಾ ಎಂಬ ಭತ್ತದ ತಳಿಯನ್ನು ಬೆಳೆಯುತ್ತಿದ್ದು, ಇದು ಕಡಿಮೆ ಕಾರ್ಬೊಹೈಡ್ರೇಟ್ ಅಂಶ ಹೊಂದಿದೆ ಎಂದೆನ್ನಲಾಗಿದೆ.
ಬದಲಾದ ಜೀವನಶೈಲಿಯಲ್ಲಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಕ್ಕರೆ ಅಂಶ ಹೆಚ್ಚು ಇರುವ ಆಹಾರ ಸೇವನೆ ಮಧುಮೇಹಿಗಳಿಗೆ ನಿಷಿದ್ಧ. ಅದರಲ್ಲೂ ಅಕ್ಕಿಯ ಪದಾರ್ಥಗಳನ್ನು ತಿನ್ನುವಂತಿಲ್ಲ ಎಂದು ವೈದ್ಯರು ಕಟ್ಟುನಿಟ್ಟಾಗಿ ಹೇಳುವುದುಂಟು. ರಕ್ತಕ್ಕೆ ಗ್ಲೈಕೆಮಿಕ್ ಬಿಡುಗಡೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಭತ್ತದ ತಳಿಯನ್ನು ಜಾಪುರದ ಬಿಂಜಾರ್ಪುರದ ಉಮೇಶ್ ಬೆಳೆದಿದ್ದಾರೆ.
ಸಾಮಾನ್ಯ ಭತ್ತದ ತಳಿಗಳಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣ ಶೇ 71ರಷ್ಟಿರುತ್ತದೆ. ಆದರೆ ಉಮೇಶ್ ಅವರು ಬೆಳೆದಿರುವ ಈ ತಳಿಯಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣ ಶೇ 50ಕ್ಕಿಂತ ಕಡಿಮೆ ಎಂದೆನ್ನಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಉಮೇಶ್ ಅವರು, ಅದನ್ನು ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡರು. ವಿಭಿನ್ನ ಬಗೆಯ ಭತ್ತದ ತಳಿಯನ್ನು ಬೆಳೆಯುವ ಯೋಜನೆ ಹಾಕಿಕೊಂಡರು. ಸದ್ಯ ಈ RNR15048 ಸೋನಾ ತಳಿಯ ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸಿದ್ದಾರೆ ಎಂದು ವರದಿಯಾಗಿದೆ.
ಕೃಷಿ ಅಧಿಕಾರಿ ಜ್ಞಾನಪ್ರಕಾಶ್ ಸಾಹು ಪ್ರತಿಕ್ರಿಯಿಸಿ, ‘ಉಮೇಶ್ ಅವರ ಕೃಷಿ ಭೂಮಿಗೆ ಭೇಟಿ ನೀಡಿದ್ದೇನೆ. ಅವರು ಈ ಕಡಿಮೆ ಕಾರ್ಬೊಹೈಡ್ರೇಟ್ ಇರುವ ಭತ್ತದ ತಳಿಯನ್ನು ಬೆಳೆಯುತ್ತಿದ್ದಾರೆ. ಈ ತಳಿಯ ಬೆಳವಣಿಗೆ ಪ್ರದೇಶವನ್ನು ಹೆಚ್ಚಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಕಡೆ ನಾವು ಯೋಚಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಕಾಲಾಭಾತಿ ಎಂಬ ಕಪ್ಪು ಬಣ್ಣದ ಅಕ್ಕಿ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಹಿಂದೆಯೂ ಸುದ್ದಿಯಲ್ಲಿತ್ತು. ಪಶ್ಚಿಮ ಬಂಗಾಳದ ರೈತರು ಬೆಳೆದ ಇಂಥ ಕಪ್ಪು ಕಪ್ಪು ಅಕ್ಕಿ ಕೆ.ಜಿ.ಗೆ ₹200ರಂತೆ ಬೆಂಗಳೂರಿನಲ್ಲಿ ಮಾರಾಟವಾಗಿದ್ದು ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.