ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಚಾನಕ್ಕಾಗಿ ಕಣ್ಣಿಗೆ ಬಿದ್ದಿದ್ದು ಹಳದಿ ಬೋರ್ಡ್‌ನ ‘ಮನೆ ಹೋಳಿಗೆ’ ಅಂಗಡಿ. ಅಂಗಡಿ ಮುಂದೆ ಹತ್ತಾರು ಮಂದಿ ಕೈಯಲ್ಲಿ ತಟ್ಟೆ ಹಿಡಿದುಕೊಂಡು ಹೋಳಿಗೆ ಮೆಲ್ಲುತ್ತಿದ್ದರು. ಅಂಗಡಿ ಮುಂಭಾಗದ ಬೋರ್ಡ್‌ನಲ್ಲಿ ಪೈನಾಪಲ್, ಕರ್ಜೂರ, ಕ್ಯಾರೆಟ್, ಬಾದಾಮಿ, ಕೋವಾ ಹೋಳಿಗೆ... ಹೀಗೆ ಭಿನ್ನ ವಿಭಿನ್ನ ಹೋಳಿಗೆಗಳ ಹೆಸರು ಕಾಣಿಸಿತು. ಹೆಸರು ಕೇಳಿದರೆ ಬಾಯಲ್ಲಿ ನೀರು ಬರಿಸುವ ಹೋಳಿಗೆಯನ್ನು ತಿನ್ನದೇ ಹಾಗೇ ಹೋಗೋಕಾಗುತ್ತದೆಯೇ? ಬರೀ ಕಾಯಿಕೊಬ್ಬರಿ, ಬೇಳೆ ಒಬ್ಬಟ್ಟು ರುಚಿ ನೋಡಿದ್ದ ನನಗೆ ಹೊಸ ರುಚಿ ನೋಡುವ ಮನಸಾಯಿತು.
ಗೋಡೆಯಲ್ಲಿ ನೇತು ಹಾಕಿದ್ದ ‘ಪೈನಾಪಲ್ ಹೋಳಿಗೆ ಸಿಗುತ್ತದೆ– ₹30’ ಕಂಡಿತು. ಅದನ್ನೇ ಕೊಡುವಂತೆ ತಿಳಿಸಿದೆ. ತುಪ್ಪ ಸುರಿದಿದ್ದ ಪೈನಾಪಲ್ ಕಣಕ ತುಂಬಿದ್ದ ಹೋಳಿಗೆ ಬಾಯಿಗಿಟ್ಟಾಗ ತುಪ್ಪ ಹಾಗೂ ಪೈನಾಪಲ್ ಘಮ ಇದರ ಸವಿಯನ್ನು ಹೆಚ್ಚಿಸಿತು. ನಂತರ ಖೋವಾ ಹೋಳಿಗೆ ಒಂದು ತುಂಡು ಮುರಿದು ಬಾಯಿಗಿಟ್ಟಾಗ ಸಿಹಿ ಸ್ವಲ್ಪ ಜಾಸ್ತಿ ಇತ್ತು. ಆದರೆ ರುಚಿ, ಪರಿಮಳದಿಂದ ಅದೂ ಇಷ್ಟವಾಗುತ್ತದೆ. ಕ್ಯಾರೆಟ್ ಹೋಳಿಗೆಯ ಬಣ್ಣ ಸ್ವಲ್ಪ ಕೆಂಪಾಗಿದ್ದು, ನೋಡಲು ಆಕರ್ಷಕವಾಗಿತ್ತು. ಬಿಸಿಬಿಸಿ ಕ್ಯಾರೆಟ್ ಹೋಳಿಗೆ, ಸಕ್ಕರೆ ಹೋಳಿಗೆ ಹೊಸ ಹೋಳಿಗೆ ರುಚಿಯಿಂದ ಹೊಟ್ಟೆ ಸೇರಿತು.
ಡಿವಿಜಿ ರಸ್ತೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ತಲೆ ಎತ್ತಿದ ಭಾಸ್ಕರ್ ಅವರ ‘ಮನೆ ಹೋಳಿಗೆ’ ಶುಚಿ, ರುಚಿ ಎರಡಕ್ಕೂ ಹೆಸರುವಾಸಿ. ಇಲ್ಲಿ ಬರೋಬ್ಬರಿ 15ಕ್ಕೂ ಹೆಚ್ಚು ವಿಧದ ಹೋಳಿಗೆಗಳು ಸಿಗುತ್ತವೆ. ಮಾವಿನಹಣ್ಣು, ಹಲಸಿನ ಹಣ್ಣಿನ ಹೋಳಿಗೆಗಳಿಗೆ ಈಗ ಇಲ್ಲಿ ಭಾರಿ ಬೇಡಿಕೆ. ಜೊತೆಗೆ ಅಂಜೂರ, ಕೊಬ್ಬರಿ–ಸಕ್ಕರೆ, ಬೇಳೆ, ಡ್ರೈ ಕೊಕೊನಟ್, ಕ್ಯಾರೆಟ್ ಮಿಕ್ಸ್, ಕಾಯಿ, 50–50, ಗುಲ್ಕನ್, ಬಿಳಿ ಹೋಳಿಗೆ, ಗ್ರೇವಿ, ವೆಜಿಟೆಬಲ್ ಖಾರಾ ಹೋಳಿಗೆಗಳ ಮೇಲೆ ತುಪ್ಪ ಸವರಿ ಕೊಟ್ಟರೆ ಸಿಹಿ ಪ್ರಿಯರಿಗೆ ಸ್ವರ್ಗ ಸಿಕ್ಕಂತೆ. ಇಲ್ಲಿಯ ವಿಶೇಷ ಎಂದರೆ ಶುಗರ್ ಫ್ರೀ ಹೋಳಿಗೆ. ಸಕ್ಕರೆ ಕಾಯಿಲೆಯಿಂದ ಹೋಳಿಗೆ ತಿನ್ನುವ ಭಾಗ್ಯ ಇಲ್ಲ ಎಂದು ಬೇಸರ ಮಾಡಿಕೊಂಡವರಿಗೆ ಇದು ಸರಿಯಾದ ಆಯ್ಕೆ. ಇಲ್ಲಿ ಹೋಳಿಗೆ ಬೆಲೆ ₹15ರಿಂದ ₹35ರವರೆಗೆ ಇದೆ.
ಇಲ್ಲಿ ಹೋಳಿಗೆಗಳಿಗೆ ಯಾವುದೇ ಹಾನಿಕಾರಕ ಬಣ್ಣಗಳನ್ನು ಬಳಸುವುದಿಲ್ಲ. ಹಣ್ಣು, ಮೈದಾ, ಬೆಲ್ಲ, ತುಪ್ಪ, ಸಕ್ಕರೆ, ಬೇಳೆ, ಅರಿಶಿಣ, ತುಪ್ಪಗಳಿಂದ ತಯಾರಿಸುತ್ತಾರೆ. ‘ಮಕ್ಕಳು ಇಷ್ಟಪಡುವ ಆಕರ್ಷಕ ಹೋಳಿಗೆಗಳನ್ನು ತಯಾರಿಸುವ ಯೋಚನೆ ಇದೆ. ಚಾಕೊಲೇಟ್, ಸ್ಟ್ರಾಬೆರಿ, ಕಿವಿ ಹಣ್ಣುಗಳಿಂದ ಮುಂದಿನ ದಿನಗಳಲ್ಲಿ ಹೋಳಿಗೆ ಸಿದ್ಧವಾಗಲಿವೆ. ಇದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದೇವೆ’ ಎಂದು ಭಾಸ್ಕರ್ ತಮ್ಮ ಕನಸುಗಳನ್ನು ಬಿಚ್ಚಿಟ್ಟರು.
ಹೋಳಿಗೆ ಬೇಕಿದ್ದಲ್ಲಿ...
ಇಲ್ಲಿ ಹಬ್ಬದ ಸಮಯದಲ್ಲಿ ದೂರವಾಣಿ ಮುಖಾಂತರ ಆರ್ಡರ್ ಪಡೆಯುವ ವಿಧಾನ ಇಲ್ಲ. ಬೇರೆ ಸಂದರ್ಭಗಳಲ್ಲಿ ಫೋನ್ ಮೂಲಕವೂ ಹೋಳಿಗೆ ಆರ್ಡರ್ ಮಾಡಬಹುದು. ಅಂಗಡಿಗೆ ಹೋದರೆ ಕೆಲವೇ ನಿಮಿಷಗಳಲ್ಲಿ ನೀವು ಬಯಸುವ ಹೋಳಿಗೆಗೆಗಳನ್ನು ಬಿಸಿ ಬಿಸಿಯಾಗಿ ಸಿದ್ದಪಡಿಸಿ ಕೊಡುತ್ತಾರೆ.
ಇಲ್ಲಿ ಕುರುಕಲು ತಿಂಡಿಗಳೂ ಸಿಗುತ್ತವೆ. ಖಾರ, ರವೆ ಉಂಡೆ, ಕಜ್ಜಾಯ, ಬೇಸನ್ ಉಂಡೆ, ಸಜ್ಜಪ್ಪ, ಕರ್ಜಿಕಾಯಿ, ಮದ್ದೂರ್ ವಡಾ, ಅಂಬೊಡೆ, ಉಪ್ಪಿನ ಕಾಯಿ, ಸಾಂಬಾರ್ ಪುಡಿ, ಚಟ್ನಿ ಪುಡಿ ಸೇರಿದಂತೆ ಕಾಂಡಿಮೆಂಟ್ಸ್ ತಿಂಡಿಗಳೂ ನಿಮ್ಮನ್ನು ಆಕರ್ಷಿಸುತ್ತವೆ. ಹಬ್ಬ ಬಂತೆಂದರೆ ಎಲ್ಲರ ಮನೆಯಲ್ಲಿಯೂ ಹೋಳಿಗೆಯದ್ದೇ ಘಮ ಇರುತ್ತದೆ. ಆದರೆ ನಗರದ ಜಂಜಾಟಗಳಿಂದ ಹೋಳಿಗೆ ಮಾಡಲಾಗದವರೇ ಹೆಚ್ಚು. ಅಂಥವರು ಶುದ್ಧ, ರುಚಿಯಾದ ಹೋಳಿಗೆಯನ್ನು ‘ಮನೆ ಹೋಳಿಗೆ’ಯಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಿ ಹಬ್ಬದ ಸವಿ ಸವಿಯಬಹುದು.
ಭಾಸ್ಕರ್ ಮನೆ ಹೋಳಿಗೆ ಆರಂಭ
ಭಾಸ್ಕರ್ ಅವರ ಸುವ್ಯವಸ್ಥಿತ ಮನೆ ಹೋಳಿಗೆ ರೂಪುಗೊಂಡ ಬಗೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಕುಂದಾಪುರ ಇವರ ಊರು. ಮನೆಯಲ್ಲಿ ಬಡತನ. 11 ವರ್ಷದವರಿದ್ದಾಗಲೇ ಕೆಲಸಕ್ಕೆ ಸೇರಿದರು. 20 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹನುಮಂತ ನಗರ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸಮೀಪದಲ್ಲಿ ಭಟ್ಟರು ಒಬ್ಬರು ತಯಾರಿಸುತ್ತಿದ್ದ ಹೋಳಿಗೆಯನ್ನು ಮನೆ ಮನೆಗೂ ತಲುಪಿಸುತ್ತಿದ್ದರು. ಜೊತೆಗೆ ಅಂಗಡಿಗಳಿಗೂ ಮಾರುತ್ತಿದ್ದರು.
ಸ್ನೇಹಿತರ ಸಲಹೆಯಿಂದ ತಾವೇ ಹೋಳಿಗೆ ಮಾಡಲು ಪ್ರಾರಂಭಿಸಿದರು. ಆದರೆ ಅಂಗಡಿ ಮಾಡುವ ಯೋಚನೆ ಅವರಿಗೆ ಇರಲಿಲ್ಲ. ನೇರವಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೋಳಿಗೆ ತಲುಪಿಸುವ ಕನಸು ಅವರಿಗಿತ್ತು. ಡಿವಿಜಿ ರಸ್ತೆಯಲ್ಲಿರುವ ಉಪಹಾರ ದರ್ಶಿನಿಯಲ್ಲಿಯೂ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ಇದೇ ಹೋಟೆಲ್ ಮಾಲೀಕರಾದ ಸಂಜಯ್ ಪ್ರಭಾಕರ್ ಅಂಗಡಿ ಮಾಡಲು ಜಾಗ ಕೊಟ್ಟರು. ರಾಘವೇಂದ್ರ ಐತಾಳ ಅವರಿಂದ ಹಣಕಾಸು ಸಹಾಯ ಪಡೆದು ಧೈರ್ಯವಾಗಿ ಅಂಗಡಿ ಹಾಕಿದರು. ಆದರೆ ಈಗ ಅದೆಲ್ಲಾ ಇತಿಹಾಸ. ನೂರಕ್ಕೂ ಹೆಚ್ಚು ಕೆಲಸಗಾರರಿಗೆ ಅವರೇ ಆಶ್ರಯ ನೀಡಿದ್ದಾರೆ.
ಮನೆ ಹೋಳಿಗೆ
ನಗರದಲ್ಲಿ ಭಾಸ್ಕರ್ ಅವರ ‘ಮನೆ ಹೋಳಿಗೆ’ಯ ನಾಲ್ಕು ಶಾಖೆಗಳಿವೆ. ಡಿವಿಜಿ ರೋಡ್, ಜಯನಗರ ಮಯ್ಯಾಸ್ ಎದುರು, ಕತ್ತರಿಗುಪ್ಪೆ ವಾಟರ್ ಟ್ಯಾಂಕ್ ಸಮೀಪ, ಆರ್.ಆರ್.ನಗರ–ಬಿಇಎಮ್‌ಎಲ್ ಲೇಔಟ್ ಮುಖ್ಯ ರಸ್ತೆ. ಸಂಪರ್ಕಕ್ಕಾಗಿ: 9886584789, 9742672871
* ನನಗೆ ಈಗಲೂ ದುಡ್ಡು ಮಾಡುವ ಅತಿಯಾದ ಆಸೆ ಇಲ್ಲ. ನಮ್ಮ ಹೋಳಿಗೆಗೆ ಬೇಡಿಕೆ ಹೆಚ್ಚಾದ ಮೇಲೆ ಹಲವರು ಹಣ ಹೂಡಲು ಮುಂದೆ ಬಂದಿದ್ದರು. ಬೆಂಗಳೂರಿನಲ್ಲಿ ಶಾಖೆಗಳನ್ನು ವಿಸ್ತರಿಸುವ ಬೇಡಿಕೆ ಇಟ್ಟಿದ್ದರು. ಆದರೆ ನನಗೆ ಅದೆಲ್ಲಾ ಇಷ್ಟ ಇಲ್ಲ. ನನ್ನ ಅಂಗಡಿಯಲ್ಲಿ ಶುಚಿ, ರುಚಿ, ಗುಣಮಟ್ಟ ಎಂದಿಗೂ ಕಡಿಮೆಯಾಗಬಾರದು ಅನ್ನುವುದೇ ನನ್ನ ಉದ್ದೇಶ. ಮುಂದಿನ ಹತ್ತು ವರ್ಷಗಳಿಗೂ ಭಾಸ್ಕರ್ಸ್ ಮನೆ ಹೋಳಿಗೆ ಹೆಸರು ಕೇಳಿದರೆ ಬಾಯಲ್ಲಿ ನೀರು ಬರಬೇಕು.
–ಭಾಸ್ಕರ್, ಮನೆ ಹೋಳಿಗೆ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.