ADVERTISEMENT

ಕೇಳಿ ‘ಕಳಲೆ’ ಖಾದ್ಯದ ರುಚಿ

ಬೀರಣ್ಣ ನಾಯಕ ಮೊಗಟಾ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ಬೆಟ್ಟದಿಂದ ಕಿತ್ತುತಂದ ಕಳಲೆ
ಬೆಟ್ಟದಿಂದ ಕಿತ್ತುತಂದ ಕಳಲೆ   

ಮಲೆನಾಡಿನಲ್ಲಿ ಮಳೆಗಾಲ ನಾಂದಿ ಹಾಡಿತೆಂದರೆ ಬೆಟ್ಟಗುಡ್ಡಗಳಿಂದ ಇಳಿದು ಬರುವವರಿಗೆ ಕಳಲೆ ಪ್ರಿಯರ ಕೇಳುವ ಮೊದಲ ಪ್ರಶ್ನೆ ‘ಕಳಲೆ ಮೂಡಿದ್ಯೆನೋ....’ ಎನ್ನುವುದು. ಕಳಲೆ ಬಿದಿರಿನ ಹಿಂಡಿನಿಂದ ಮೂಡಿ ಬರುವ ಎಳೆ ಸಸ್ಯ. ಸಸ್ಯ ಹಾಗೂ ಮಾಂಸಹಾರಿಗಳಿಬ್ಬರೂ ಇಷ್ಟ ಪಡುವ ಕಳಲೆಯ ಖಾದ್ಯದ ರುಚಿ ತಿಂದವರಿಗೆ ಗೊತ್ತು.

ಹುಲ್ಲಿನಜಾತಿಯ ಬಿದಿರು ಅತಿ ವೇಗವಾಗಿ ಬೆಳೆಯುತ್ತದೆ. ಒಂದರಿಂದ ಒಂದೂವರೆ ಅಡಿಯ ಬಿದಿರಿನ ಮೊಳಕೆ(ಕಳಲೆ)ಯಿಂದ ವಿಶೇಷವಾಗಿ ಯಲ್ಲಾಪುರ, ಸಿರ್ಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಸಾಮಾನ್ಯವಾಗಿ ಬಿದಿರು ಬೆಳೆಯುವ ಪ್ರದೇಶದದ ಜನರ ಮಳೆಗಾಲದ ಒಂದು ಆಹಾರವೇ ಕಳಲೆ.

ಈ ಬಿದಿರಿನ ಮೊಳಕೆಯನ್ನು ಸುಲಿದು ಸಣ್ಣದಾಗಿ ಕತ್ತರಿಸಿ ಇಡೀ ರಾತ್ರಿ ಉಪ್ಪುನೀರಿನಲ್ಲಿ ನೆನೆಯಲು ಇಡುತ್ತಾರೆ. ಅನಂತರ ಖಾದ್ಯಕ್ಕೆ ತಕ್ಕಹಾಗೆ ಕತ್ತರಿಸಿ ಅಡುಗೆ ತಯಾರಿಸುತ್ತಾರೆ. ಮಾಂಸಹಾರಿಗಳು ಕಳಲೆಯ ಜೊತೆಗೆ ಹಸಿ ಮತ್ತು ಒಣ ಸಿಗಡಿ, ಒಣಗಿಸಿದ ಚಿಪ್ಪೆಕಲ್ಲಿನ ಮಾಂಸ, ಬುಗಸಿ(ಒಣಗಿಸಿದ ಅತಿ ಚಿಕ್ಕ ಮೀನು) ಮುಂತಾದವುಗಳನ್ನು ಬಳಸುತ್ತಾರೆ. ಕಳಲೆಯಿಂದ ಪಲ್ಯ, ಸಾರು, ವಡೆ, ಫ್ರೈ, ಹಸಿ, ಹುಳಗಾ, ಉಪ್ಪಿನಕಾಯಿ ಮುಂತಾದವುಗಳನ್ನು ತಯಾರಿಸುತ್ತಾರೆ. ಕಳಲೆಯನ್ನು ಮಾವಿನಕಾಯಿ ಕಾಪಾಡುವಂತೆ ಉಪ್ಪುನೀರಿನಲ್ಲಿಟ್ಟು ವರ್ಷ ಪೂರ್ತಿ ಬಳಸುತ್ತಾರೆ. ವರ್ಷದಲ್ಲಿ ಒಮ್ಮೆಯಾದರೂ ಕಳಲೆ ತಿಂದರೆ ಆರೋಗ್ಯಕ್ಕೆ ಹಿತ ಎಂಬುದು ಕಳಲೆ ಪ್ರಿಯರ ನಂಬಿಕೆ.

ADVERTISEMENT

ಕಳಲೆಯ ಮೇಲೂ ಅರಣ್ಯ ಇಲಾಖೆಯವರ ಕಣ್ಣು ಬಿದ್ದಿದೆ. ಮೊದಲಿನ ಹಾಗೆ ಕಳಲೆಯನ್ನು ಮಾರಾಟ ಮಾಡುವುದು ನಿಷಿದ್ಧ. ಆದರೂ ರೈತರು ಅಲ್ಲಿಲ್ಲಿ ಕಳಲೆ ಕಿತ್ತು ತರುತ್ತಾರೆ. ಶತಮಾನಗಳಿಂದ ಕಳಲೆ ನಮ್ಮ ಆಹಾರದ ಒಂದು ಭಾಗ ಎನ್ನುವುದು ಇಲ್ಲಿನ ಜನರ ಅಂಬೋಣ.

ಕಳಲೆಯಿಂದ ಸಿದ್ಧಪಡಿಸಿದ ಪಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.