ADVERTISEMENT

ಬ್ಯಾಚುಲರ್ಸ್‌ ಫ್ರೆಂಡ್ಲಿ ಖಾದ್ಯಗಳು

ಪ್ರಜಾವಾಣಿ ವಿಶೇಷ
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST
ಎಗ್‌ ಬುರ್ಜಿ
ಎಗ್‌ ಬುರ್ಜಿ   

ಶಿಕ್ಷಣ, ಉದ್ಯೋಗದ ಸಲುವಾಗಿ ಯುವಕ-ಯುವತಿಯರು ಸ್ವಂತ ಊರು ಬಿಟ್ಟು ನಗರ ಸೇರುತ್ತಿರುವುದು ಸಾಮಾನ್ಯ. ಹೀಗೆ ಬಂದವರಿಗೆ ಮನೆಯಲ್ಲಿ ಸಿಗುತ್ತಿದ್ದ ಸ್ವಾದಿಷ್ಟವಾದ ಆಹಾರದ ಕೊರತೆಕಾಡುವುದು ಸಾಮಾನ್ಯ. ಅನ್ನ ಮಾಡುವುದನ್ನು ಕಲಿತಿದ್ದರೂ, ಅನ್ನಕ್ಕೆ ಬೇಕಾದ ಸಾಂಬಾರ್, ಗೊಜ್ಜು, ಗ್ರೇವಿ, ಪಲ್ಯಗಳಂತಹ ಖಾದ್ಯಗಳನ್ನು ತಯಾರಿಸುವುದು ತುಸು ಕಷ್ಟವೇ. ‘ರುಚಿ ರುಚಿಯಾದ ಅಡುಗೆ ಬೇಕು. ಆದರೆ ಅಂಥದ್ದೆಲ್ಲ ಮಾಡುವುದಕ್ಕೆ ಬರುವುದಿಲ್ಲವಲ್ಲ’ ಎಂದು ಪರದಾಡುವ ಬ್ಯಾಚುಲರ್‌ಗಳಿಗೆ ಸುಲಭವಾಗಿ, ಸರಳವಾಗಿ, ರುಚಿಕರವಾಗಿ ಮಾಡಿಕೊಳ್ಳಬಹುದಾದ ಖಾದ್ಯಗಳು ಇಲ್ಲಿವೆ.

ಸಿಂಪಲ್ಲಾಗಿ ಎಗ್‌ ಬುರ್ಜಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 2, ಅಡುಗೆ ಎಣ್ಣೆ – ಕಾಲು ಟೇಬಲ್‌ ಚಮಚ, ಕರಿಬೇವು – ಸ್ವಲ್ಪ, ಈರುಳ್ಳಿ – 1, ಸಾಸಿವೆ – ಕಾಲು ಟೀ ಚಮಚ, ಜೀರಿಗೆ – ಕಾಲು ಟೀ ಚಮಚ, ಗರಂ ಮಸಾಲ – ಅರ್ಧ ಟೀ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಹಸಿಮೆಣಸು – 2, ಸ್ವಲ್ಪ ಕೊತ್ತಂಬರಿ ಸೊಪ್ಪು.

ADVERTISEMENT

ತಯಾರಿಸುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ, ಕರಿಬೇವು, ಸಾಸಿವೆ, ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಈರುಳ್ಳಿಯನ್ನು ಚೆನ್ನಾಗಿ ಹುರಿಯಬೇಕು. ಸ್ಟೌವ್‌ ಉರಿಯನ್ನು ಸಣ್ಣಗೆ ಮಾಡಿ. ಒಂದು ಪಾತ್ರೆಗೆ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಉಪ್ಪು ಮತ್ತು ಗರಂ ಮಸಾಲೆ ಸೇರಿಸಿ, ಪಾತ್ರೆಗೆ ಅಂಟದಂತೆ ಸೌಟಿನಲ್ಲಿ ನಿರಂತರವಾಗಿ ತಿರುವುತ್ತಿರಬೇಕು. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಉದುರಿಸಬೇಕು.

ಪಿಜ್ಜಾ ಎಗ್‌ ಆಮ್ಲೆಟ್‌
ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 2, ಸ್ವಲ್ಪ ಅಡುಗೆ ಎಣ್ಣೆ, ಸಾಸಿವೆ – ಕಾಲು ಟೀ ಚಮಚ, ಸ್ವಲ್ಪ ಕರಿಬೇವು, 1 ಈರುಳ್ಳಿ, 1 ಸಣ್ಣ ಟೊಮೆಟೊ, ಹಸಿಮೆಣಸು, ಅರ್ಧ ಟೀ ಚಮಚ ಗರಂ ಮಸಾಲ, ಅರ್ಧ ಟೀ ಚಮಚದಷ್ಟು ಉಪ್ಪು.

ತಯಾರಿಸುವ ವಿಧಾನ: ಕರಿಬೇವಿನ ಎಲೆ, ಈರುಳ್ಳಿ, ಟೊಮೆಟೊ, ಹಸಿಮೆಣಸುಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಲೋಟದೊಳಗೆ ಮೊಟ್ಟೆಯನ್ನು ಒಡೆದು ಹಾಕಿ. ಹೆಚ್ಚಿಕೊಂಡ ಎಲ್ಲವನ್ನು ಲೋಟದೊಳಗೆ ಹಾಕಿ. ಉಪ್ಪು ಮತ್ತು ಗರಂ ಮಸಾಲೆಯನ್ನು ಸೇರಿಸಿ. ಚಮಚದಿಂದ ಚೆನ್ನಾಗಿ ಕದಡಿಕೊಳ್ಳಿ. ಕಾವಲಿಗೆ ಸುತ್ತಲೂ ಎಣ್ಣೆ ಸಿಂಪಡಿಸಿ. ಸಾಸಿವೆ ಕಾಳುಗಳನ್ನು ಉದುರಿಸಿ. ಕಾವಲಿ ಚೆನ್ನಾಗಿ ಬಿಸಿಯಾದಂತೆ ಮಿಶ್ರಣ ಮಾಡಿಕೊಂಡ ಪದಾರ್ಥವನ್ನು ಪೂರ್ತಿ ಕಾವಲಿಯನ್ನು ಆವರಿಸುವಂತೆ ಸುರಿಯಿರಿ. ಕಾವಲಿ ಮೇಲೆ ತಟ್ಟೆ ಮುಚ್ಚಿ. 2 ರಿಂದ 3 ನಿಮಿಷಕ್ಕೆ ಮುಚ್ಚಳವನ್ನು ತೆಗೆದು, ದೋಸೆ ಕಡ್ಡಿ(ಮಗುಚೊ ಕೈ) ಸಹಾಯದಿಂದ ಮಗುಚಿ ಹಾಕಿ. ಸ್ವಲ್ಪ ಹೊತ್ತು ಬೇಯಿಸಿದರೆ, ದಪ್ಪಗೆ ಪಿಜ್ಜಾದಂತೆ ಊದಿಕೊಂಡ ಆಮ್ಲೆಟ್‌ ರೆಡಿ.

ಚಿಕನ್‌ ಸುಕ್ಕ

ಬೇಕಾಗುವ ಸಾಮಗ್ರಿಗಳು: ಚಿಕನ್‌- 1 ಕೆ.ಜಿ, ಈರುಳ್ಳಿ- 2, ಉಪ್ಪು- 2 ಟೀ ಚಮಚದಷ್ಟು, ಅಡುಗೆ ಎಣ್ಣೆ- 1 ಟೇಬಲ್‌ ಚಮಚ, ತೆಂಗಿನತುರಿ- ಅರ್ಧ ಕಪ್‌, ಕೊತ್ತಂಬರಿ- 2 ಟೇಬಲ್‌ ಚಮಚ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಅರ್ಧ ಟೀ ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ಅರಿಸಿನ- ಅರ್ಧ ಟೀ ಚಮಚ, ಬೆಳ್ಳುಳ್ಳಿ- 4/5 ಎಸಳು, ಶುಂಠಿ- ಸಣ್ಣ 1 ತುಂಡು, ಲವಂಗ- 4-5, ಚಕ್ಕೆ- ಸಣ್ಣ 1 ತುಂಡು/ಎಲೆಯಾದರೆ ಪೂರ್ತಿ ಒಂದು, ಬ್ಯಾಡಗಿ ಮೆಣಸಿನಕಾಯಿ- 10, ಗುಂಟೂರು ಮೆಣಸಿನಕಾಯಿ- 10, ಹುಣಸೆಹಣ್ಣು- 1 ಸಣ್ಣ ತುಂಡು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಕೋಳಿ ಮಾಂಸ ಬೇಯಿಸುವುದು ಮತ್ತು ಮಸಾಲೆಯನ್ನು ಸಿದ್ಧಪಡಿಸಿಕೊಳ್ಳುವುದು ಎಂಬ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಿಕೊಳ್ಳಬೇಕು.

ಮಾಂಸ ಬೇಯಿಸುವುದು: ಒಂದು ಅಗಲವಾದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಉದ್ದುದ್ದು ಹೆಚ್ಚಿದ ಅರ್ಧ ಈರುಳ್ಳಿ, ಸ್ವಲ್ಪ ಕರಿಬೇವಿನ ಸೊಪ್ಪು, ಕಾಲು ಚಮಚ ಸಾಸಿವೆ ಹಾಕಿ. ಈರುಳ್ಳಿ ಬೆಂದು ಕೆಂಪಾದ ಮೇಲೆ ಚಿಕನ್‌ ಹಾಕಿ. ಕಾಲು ಟೀ ಚಮಚ ಅರಿಸಿನ, 2 ಟೀ ಚಮಚದಷ್ಟು ಉಪ್ಪು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಬೇಯಲು ಬಿಡಿ.

ಮಸಾಲೆ ಸಿದ್ಧಪಡಿಸಿಕೊಳ್ಳಿ: ಚಿಕನ್‌ ಬೇಯುವವರೆಗೆ ಮಸಾಲೆ ಸಿದ್ಧಪಡಿಸಿಕೊಳ್ಳಿ. ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಸ್ಟೌವ್‌ ಸಣ್ಣ ಉರಿಯಲ್ಲಿರಲಿ. ಸ್ವಲ್ಪ ಕರಿಬೇವು, ಸಾಸಿವೆ, ಜೀರಿಗೆ, ಕೊತ್ತಂಬರಿ, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹುರಿದುಕೊಳ್ಳಿ. ಮಿಕ್ಸಿ ಜಾರಿಗೆ ಹಾಕಿ. ಹುಣಸೆಹಣ್ಣಿನ ತುಂಡನ್ನು ಅದಕ್ಕೆ ಸೇರಿಸಿ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಇಷ್ಟು ಹೊತ್ತಿಗೆ ಚಿಕನ್ ಬೆಂದಿರುತ್ತದೆ. ಬೆಂದಿರುವ ಚಿಕನ್‌ಗೆ ರುಬ್ಬಿದ ಮಸಾಲೆಯನ್ನು ಹಾಕಿ, ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಘಮ ಘಮ ಚಿಕನ್‌ ಸುಕ್ಕ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.