ADVERTISEMENT

ನಳಪಾಕ: ಗೇರುಹಣ್ಣಿನ ರಸರುಚಿಗಳು

ಸೌಖ್ಯ ಮೋಹನ್
Published 22 ಏಪ್ರಿಲ್ 2022, 19:30 IST
Last Updated 22 ಏಪ್ರಿಲ್ 2022, 19:30 IST
ಗೇರುಹಣ್ಣಿನ ಹಲ್ವಾ
ಗೇರುಹಣ್ಣಿನ ಹಲ್ವಾ   

ಗೇರುಹಣ್ಣಿನ ಹಲ್ವಾ

ಬೇಕಾಗುವ ಸಾಮಗ್ರಿಗಳು: ಗೇರುಹಣ್ಣು 5-6, ಸಕ್ಕರೆ – 1 ಕಪ್, ಕೇಸರಿ, ಗೋಡಂಬಿ ಚೂರುಗಳು – ಅರ್ಧ ಕಪ್, ಕಾರ್ನ್‌ಫ್ಲೋರ್ – 1/2ಕಪ್, ಚಿಟಿಕೆ ಉಪ್ಪು, ತುಪ್ಪ – 1ಕಪ್

ತಯಾರಿಸುವ ವಿಧಾನ: ಗೇರುಹಣ್ಣಿನ ತೊಟ್ಟಿನ ಭಾಗವನ್ನು ಕತ್ತರಿಸಿ ಮಿಕ್ಸಿಗೆ ಹಾಕಿ. ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ದಪ್ಪತಳದ ಬಾಣಲೆಗೆ ಹಾಕಿ. 5 ನಿಮಿಷ ಮಗುಚಿ. ನಂತರ ಸಕ್ಕರೆ ಹಾಕಿ. ಚೆನ್ನಾಗಿ ಮಗುಚಿ. ಕಾರ್ನ್‌ಫ್ಲೋರ್‌ಗೆ ನೀರು ಸೇರಿಸಿ ಕದಡಿ ಗೇರುಹಣ್ಣಿನ ಮಿಶ್ರಣಕ್ಕೆ ಹಾಕಿ. ಚೆನ್ನಾಗಿ ತಿರುಗಿಸುತ್ತಾ ಇರಿ. ಮಧ್ಯೆ-ಮಧ್ಯೆ ತುಪ್ಪ ಸೇರಿಸಿಕೊಳ್ಳುತ್ತಾ ಹೋಗಿ. ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ. ಕೇಸರಿಯನ್ನು ಸೇರಿಸಿ. ತಳ ಬಿಡುವವರೆಗೆ ಮಗುಚುತ್ತಾ ಹೋಗಿ. ಗಟ್ಟಿಯಾದ ಮೇಲೆ ಒಂದು ಪ್ಲೇಟಿಗೆ ಹಾಕಿ. ಸ್ವಲ್ಪ ತಣಿದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

ADVERTISEMENT

ಗೇರುಹಣ್ಣಿನ ಪಡ್ಡು

ಬೇಕಾಗುವ ಸಾಮಗ್ರಿಗಳು: ಅಕ್ಕಿ – 3 ಕಪ್, ಗೇರುಹಣ್ಣು 5 ರಿಂದ 6, ಅವಲಕ್ಕಿ – 1 ಕಪ್, ಕಾಯಿತುರಿ – 1 ಕಪ್, ಏಲಕ್ಕಿ – 2, ಬೆಲ್ಲ – 1ಕಪ್, ಉಪ್ಪು, ತುಪ್ಪ

ತಯಾರಿಸುವ ವಿಧಾನ: ಅಕ್ಕಿಯನ್ನು 6 ರಿಂದ 6 ಗಂಟೆ ನೆನೆಸಿ. ನಂತರ ಗೇರುಹಣ್ಣು, ಅವಲಕ್ಕಿ, ಕಾಯಿತುರಿ, ಉಪ್ಪು, ಏಲಕ್ಕಿ, ಬೆಲ್ಲ ಹಾಕಿ. ನುಣ್ಣಗೆ ರುಬ್ಬಿ, 2ರಿಂದ 3 ಗಂಟೆ ಹಾಗೇ ಇಡಿ. ಈ ಹಿಟ್ಟು ದೋಸೆಹಿಟ್ಟಿನ ಹದಕ್ಕೆ ಇರಲಿ. ನಂತರ ಪಡ್ಡಿನ ಕಾವಲಿ ಕಾದ ಮೇಲೆ ತುಪ್ಪ ಹಾಕಿ, ಹುಟ್ಟು ಹಾಕಿ ಎರಡೂ ಕಡೆ ಬೇಯಿಸಿ. ತುಪ್ಪದ ಜೊತೆ ತಿನ್ನಿ. ತೆಳುವಾದ ಗೇರುಹಣ್ಣಿನ ಪರಿಮಳ ಬರುವ ಈ ಪಡ್ಡು/ಅಪ್ಪಂ ಬಹಳ ರುಚಿ.

ಗೇರುಹಣ್ಣಿನ ಸಾಸ್ವೆ

ಬೇಕಾಗುವ ಸಾಮಗ್ರಿಗಳು: ಗೇರುಹಣ್ಣು – 2, ಕಾಯಿತುರಿ – 1 ಕಪ್, ಸಾಸಿವೆ – ಕಾಲು ಚಮಚ, ಒಣಮೆಣಸು – 5 ರಿಂದ 6, ಜೀರಿಗೆ – ಕಾಲು ಚಮಚ, ಉಪ್ಪು, ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಸಾಸಿವೆ, ಜೀರಿಗೆ

ತಯಾರಿಸುವ ವಿಧಾನ: ಮೊದಲು ಗೇರುಹಣ್ಣಿನ ತೊಟ್ಟಿನ ಭಾಗ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಅದಕ್ಕೆ ಉಪ್ಪು ಹಾಕಿಡಿ. ಬಾಣಲೆಯಲ್ಲಿ ಜೀರಿಗೆ, ಒಣಮೆಣಸು ಹುರಿದು ಅದನ್ನು ಕಾಯಿತುರಿ ಮತ್ತು ಸಾಸಿವೆ ಜೊತೆಗೆ ಸೇರಿಸಿ ಸಣ್ಣಗೆ ರುಬ್ಬಿ. ಅದನ್ನು ಗೇರುಹಣ್ಣಿನ ಭಾಗಕ್ಕೆ ಸೇರಿಸಿ. ಒಗ್ಗರಣೆ ಕೊಡಿ. ಸ್ವಲ್ಪ ಬೆಲ್ಲ ಬೇಕಾದರೆ ಹಾಕಿಕೊಳ್ಳಬಹುದು.

ಗೇರುಹಣ್ಣಿನ ತಂಬುಳಿ

ಬೇಕಾಗುವ ಸಾಮಗ್ರಿಗಳು: ಗೇರುಹಣ್ಣು – 5 ರಿಂದ 6, ತೆಂಗಿನತುರಿ – ಒಂದು ದೊಡ್ಡ ಕಪ್, ಉಪ್ಪು, ಸೂಜಿಮೆಣಸು/ಗಾಂಧಾರಿಮೆಣಸಿನ ಪೇಸ್ಟ್, ಒಗ್ಗರಣೆಗೆ – ಕೊಬ್ಬರಿ ಎಣ್ಣೆ, ಜೀರಿಗೆ, ಸಾಸಿವೆ, ಒಣಮೆಣಸು

ತಯಾರಿಸುವ ವಿಧಾನ: ಮೊದಲು ಗೇರುಹಣ್ಣನ್ನು ಹಿಂಡಿ ರಸ ತೆಗೆದಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಸೇರಿಸಿ. ತೆಂಗಿನತುರಿಯನ್ನು ರುಬ್ಬಿ, ತೆಂಗಿನಹಾಲನ್ನು ತೆಗೆಯಿರಿ. ಇದನ್ನು ಗೇರುಹಣ್ಣಿನ ರಸಕ್ಕೆ ಸೇರಿಸಿ. ಸೂಜಿಮೆಣಸಿನ ಪೇಸ್ಟ್ ಅನ್ನು ಹಾಕಿ. ನಂತರ ಒಗ್ಗರಣೆ ಕೊಡಿ. ಇದನ್ನು ಹಾಗೇ ಕುಡಿಯಬಹುದು. ಅನ್ನಕ್ಕೂ ಉಪಯೋಗಿಸಬಹುದು.

ಗೇರುಹಣ್ಣಿನ ಫ್ಲಿಟ್ಟರ್ಸ್

ಬೇಕಾಗುವ ಸಾಮಗ್ರಿಗಳು: ಗೇರುಹಣ್ಣು 4ರಿಂದ 5, ರವೆ – ಅರ್ಧ ಕಪ್, ಕಾಯಿತುರಿ – ಮುಕ್ಕಾಲು ಕಪ್,
ಬೆಲ್ಲ – ಕಾಲು ಕಪ್, ಗೋಡಂಬಿ ಚೂರು, ಉಪ್ಪು, ಕರಿಯಲು ಎಣ್ಣೆ, ಏಲಕ್ಕಿಪುಡಿ ಚೂರು

ತಯಾರಿಸುವ ವಿಧಾನ: ಗೇರುಹಣ್ಣಿನ ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದುಹಾಕಿ. ನಂತರ ಉಳಿದ ಭಾಗವನ್ನು ಹೋಳು ಮಾಡಿ, ಅದಕ್ಕೆ ಬೆಲ್ಲ, ಕಾಯಿತುರಿ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿ. ಉಪ್ಪು ಹಾಕಿ. ನಂತರ ರವೆಯನ್ನು ಹಾಕಿ. ನೀರು ಸೇರಿಸುವ ಅಗತ್ಯ ಇಲ್ಲ. ಕೈಯಲ್ಲಿ ತೆಗೆದು ಮೆತ್ತನೆ ಉಂಡೆ ಮಾಡುವ ಹದಕ್ಕಿರಲಿ. ಮುಳ್ಕ/ಸುಟ್ಟವ್ವು ರೀತಿಯಲ್ಲಿ ಎಣ್ಣೆಯಲ್ಲಿ ಕರಿಯಿರಿ. ನಿಜಕ್ಕೂ ಒಳ್ಳೆಯ ರುಚಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.