ADVERTISEMENT

ಕೋವಿಡ್–19 ಲಾಕ್‌ಡೌನ್ | ಯಶಸ್ಸಿನ ಪಥದಲ್ಲಿ ಪಾಕಪ್ರವೀಣೆಯರು..

ರೇಷ್ಮಾ
Published 10 ಆಗಸ್ಟ್ 2020, 19:45 IST
Last Updated 10 ಆಗಸ್ಟ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾಗರದ ಮೂಲದ ಮಲ್ಲಿಕಾ ಬೆಂಗಳೂರಿನಲ್ಲಿ ಮನೆಯಲ್ಲೇ ಕೇಟರಿಂಗ್ ನಡೆಸುತ್ತಿದ್ದರು. ಮಲೆನಾಡು ಭಾಗದ ಅಪ್ಪೆ ಮಿಡಿ ಉಪ್ಪಿನಕಾಯಿ, ಸೀಕರಣೆ, ತೆಳ್ಳೇವು ಮುಂತಾದ ತಿನಿಸುಗಳಿಂದ ಅವರ ಕೇಟರಿಂಗ್‌ತುಂಬಾನೇ ಹೆಸರುವಾಸಿಯಾಗಿತ್ತು. ಮಾರ್ಚ್‌ನಿಂದ ಮೇವರೆಗೆ ಸಮಾರಂಭಗಳು ಹೆಚ್ಚು ನಡೆಯುತ್ತಿದ್ದ ಕಾರಣ ಭರ್ಜರಿ ಆರ್ಡರ್‌ಗಳು ಸಿಗುತ್ತಿದ್ದವು. ಆದರೆ ಈ ಬಾರಿ ಕೊರೊನಾದಿಂದ ಎಲ್ಲವೂ ಸ್ತಬ್ಧವಾಗಿದ್ದವು. ಆದರೆ ಸಮಯ ಹಾಳು ಮಾಡದೇ, ಸುಮ್ಮನೆ ಕೂರದ ಮಲ್ಲಿಕಾ ಅಕ್ಕಿ ಹಪ್ಪಳ, ತುಪ್ಪ, ಮಜ್ಜಿಗೆ ಮೆಣಸಿನಕಾಯಿ ಹೀಗೆ ದೀರ್ಘಕಾಲ ಬಾಳುವ ವಸ್ತುಗಳನ್ನು ತಯಾರಿಸಿ ಸಂಗ್ರಹಿಸಿಟ್ಟುಕೊಂಡರು. ಇದನ್ನೆಲ್ಲಾ ಮಾರಾಟ ಮಾಡಲು ಅವರು ಕಂಡುಕೊಂಡಿದ್ದು ಫೇಸ್‌ಬುಕ್ ಪುಟ. ಫೇಸ್‌ಬುಕ್‌ ಪುಟದಲ್ಲಿ ಆರ್ಡರ್ ನೀಡಿದವರಿಗೆ ಕೊರಿಯರ್ ಮೂಲಕ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಈಗ ನಾನು ತಯಾರಿಸಿದ ವಸ್ತುಗಳು ಕೆಡುವುದಿಲ್ಲ. ಆರ್ಡರ್ ಬಂದಷ್ಟು ಬರಲಿ. ಉಳಿದಿದ್ದು ಹಾಗೇ ಇಡುತ್ತೇನೆ. ಕೊರೊನಾ ಸರಿ ಹೋದ ಮೇಲೆ ಬಳಕೆಗೆ ಬರುತ್ತದೆ. ಸುಮ್ಮನೆ ಕೂರುವ ಬದಲು ಬರುವ ಅಡುಗೆ ಕಲೆಯನ್ನೇ ಈ ರೀತಿ ಉಪಯೋಗಿಸಿಕೊಂಡೆ’ ಎನ್ನುವ ಖುಷಿ ಅವರದ್ದು.

ಬದಲಾದ ಕಾರ್ಯತಂತ್ರ
ಕೊರೊನಾ ಸೋಂಕು ಹರಡುವುದಕ್ಕಿಂತ ಮೊದಲು ಭಾರತದಲ್ಲಿ ಆಹಾರಕ್ಕೆ ಸಂಬಂಧಿಸಿದ ಉದ್ಯಮ ಸಾಕಷ್ಟು ಯಶಸ್ಸು ಗಳಿಸಿತ್ತು. ಯಾವುದೇ ಸರ್ಟಿಫಿಕೇಟ್‌ ಕೋರ್ಸ್ ಮಾಡದೇ, ಹೆಚ್ಚಿನ ಬಂಡವಾಳ ಹಾಕದೇ ಆಹಾರ ಉದ್ಯಮ ಸ್ಥಾಪಿಸಿದ ಮಹಿಳೆಯರು ಇದರಲ್ಲಿ ಹೆಸರು, ಹಣ, ಯಶಸ್ಸು ಗಳಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಕೋವಿಡ್‌–19 ಪಿಡುಗು ಆವರಿಸಿ ಅವರ ಬದುಕಲ್ಲಿ ಮೂಡಿದ್ದ ಆಶಾಕಿರಣಕ್ಕೆ ಕರಿನೆರಳು ಬೀಳುವಂತೆ ಮಾಡಿತ್ತು. ಇದರಿಂದ ಮೊದ ಮೊದಲು ಆತಂಕಕ್ಕೆ ಒಳಗಾದ ಮಹಿಳಾ ಬಾಣಸಿಗರು ಲಾಕ್‌ಡೌನ್‌ ತೆರವಾಗುವ ಹೊತ್ತಿಗೆ ಪರ್ಯಾಯ ಮಾರ್ಗ ಯೋಚಿಸಿದ್ದರು. ತಮ್ಮ ಕಾರ್ಯತಂತ್ರಗಳ ಮೂಲಕ ತಾವು ಗಳಿಸಿದ್ದ ಹೆಸರು ಹಾಗೂ ಸಂಪಾದನೆಯನ್ನು ಮರಳಿ ಗಳಿಸಲು ಲಾಕ್‌ಡೌನ್ ಸಮಯವನ್ನು ವಿನಿಯೋಗಿಸಿಕೊಂಡಿದ್ದರು. ಕೆಲವರು ವಾಸ್ತವವಾಗಿ ಹಿಂದಿಗಿಂತಲೂ ಉತ್ತಮ ಗಳಿಕೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ.

ADVERTISEMENT

‘ನಾನು ತಳ್ಳುಗಾಡಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಮಾಡಿ ಮಾರಾಟ ಮಾಡುತ್ತಿದ್ದೆ. ಕೊರೊನಾದಿಂದ ವ್ಯಾಪಾರ ನಿಂತಿತ್ತು. ಹೇಗೂ ಅಡುಗೆ ಕಲೆ ನನಗೆ ಸಿದ್ಧಿಸಿತ್ತು. ಅಲ್ಲದೇ ಕೊರೊನಾ ಕಾರಣದಿಂದ ಹೋಟೆಲ್‌ಗಳು ಬಂದ್ ಆಗಿದ್ದವು. ಆಗ ನಾನು ತಳ್ಳುಗಾಡಿ ಬಿಟ್ಟು ಮನೆಯಲ್ಲೇ ರೊಟ್ಟಿಯ ಜೊತೆ ದೋಸೆ, ತಟ್ಟೆ ಇಡ್ಲಿ ಮಾಡಿ ಮಾರಾಟ ಮಾಡುವ ಯೋಚನೆ ಮಾಡಿದೆ. ಮೊದಲು ಅಷ್ಟೊಂದು ವ್ಯಾಪಾರ ಆಗಿರಲಿಲ್ಲ. ಆದರೆ ಈಗ ಉತ್ತರಕರ್ನಾಟಕ ಮಾತ್ರವಲ್ಲ, ದಕ್ಷಿಣ ಕರ್ನಾಟಕ ಭಾಗದ ಮಂದಿಯೂ ನನ್ನ ಮನೆ ಬಳಿ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಕೊರೊನಾ ಸೋಂಕು ಕಡಿಮೆಯಾದ ನಂತರ ಇನ್ನೊಂದು ತಳ್ಳುಗಾಡಿ ಇರಿಸಿಕೊಂಡು ತಟ್ಟೆ ಇಡ್ಲಿ ಹಾಗೂ ದೋಸೆ ಮಾಡಿ ಮಾರಾಟ ಮಾಡುತ್ತೇನೆ’ ಎಂಬ ಆತ್ಮವಿಶ್ವಾಸದ ನುಡಿ ಧಾರಾವಾಡದ ಸುಜಾತಾ ಅವರದ್ದು.

ಮಲ್ಲಿಕಾ ಹಾಗೂ ಸುಜಾತಾರಂತೆ ಇನ್ನೂ ಹಲವು ‍ಪಾಕಪ್ರವೀಣೆಯರು ತಮ್ಮ ಅಡುಗೆಮನೆಯನ್ನು ಕೊರೊನಾ ಸಮಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಗ್ರಾಹಕರನ್ನು ಹಿಡಿದಿಡುವ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಜೊತೆಗೆ ಕೊರೊನಾ ಸಂಪೂರ್ಣ ಕಡಿಮೆಯಾದ ಬಳಿಕ ಹಿಂದಿಗಿಂತಲೂ ಉತ್ತಮವಾಗಿ ವ್ಯವಹಾರ ನಡೆಸುವ ಯೋಚನೆ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.