ಎಗ್ ಮಸಾಲೆ ಫ್ರೈ
ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 4 (ಬೇಯಿಸಿದ್ದು), ಕರಿಬೇವು – 6 ಎಸಳು, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಕಾಲು ಚಮಚ, ಖಾರದಪುಡಿ – ಅರ್ಧ ಚಮಚ, ಅರಿಸಿನ – ಚಿಟಿಕೆ, ಗರಂ ಮಸಾಲೆ – ಬೇಕಾದರೆ, ಎಣ್ಣೆ – ಕರಿಯಲು
ತಯಾರಿಸುವ ವಿಧಾನ: ಪ್ಯಾನ್ ಬಿಸಿಗಿಟ್ಟು ಬಿಸಿಯಾದ ಮೇಲೆ ಎಣ್ಣೆ ಹಾಕಿ. ಅದಕ್ಕೆ ಒಂದು ಚಮಚ ಎಣ್ಣೆ, ಅರಿಸಿನ, ಖಾರದಪುಡಿ, ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡುತ್ತಿರಬೇಕು. ಈಗ ಬೇಯಿಸಿ ಅರ್ಧಕ್ಕೆ ಕತ್ತರಿಸಿ ಇರಿಸಿಕೊಂಡಿದ್ದ ಮೊಟ್ಟೆಯನ್ನು ಖಾರದ ಮಿಶ್ರಣಕ್ಕೆ ಸೇರಿಸಿ. ಅದನ್ನು ಸಣ್ಣ ಉರಿಯಲ್ಲಿ 1 ನಿಮಿಷ ಹುರಿದುಕೊಳ್ಳಬೇಕು. ನಂತರ ತಿರುವಿ ಹಾಕಿ ಮೊಟ್ಟೆಯ ಮೇಲೆ ಗರಂ ಮಸಾಲ ಉದುರಿಸಬೇಕು. ಮತ್ತೆ ಮೊಟ್ಟೆಯನ್ನು ತಿರುವಿ ಹಾಕಿ ಮಧ್ಯಮ ಉರಿಯಲ್ಲಿ ಪುನಃ ಒಂದು ನಿಮಿಷ ಬೇಯಿಸಿ ತೆಗೆದಿರಿಸಿ. ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು ಹಾಕಿ ಮೊಟ್ಟೆಯ ಮೇಲೆ ಉದುರಿಸಿ.
**
ಮೊಟ್ಟೆ ದೋಸೆ
ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 2, ಉಪ್ಪು – ರುಚಿಗೆ ತಕ್ಕಷ್ಟು, ಖಾರದಪುಡಿ – ಕಾಲು ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಈರುಳ್ಳಿ – 1 ಸಣ್ಣಗೆ ಹೆಚ್ಚಿದ್ದು, ಬೆಣ್ಣೆ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ದೋಸೆ ಹಿಟ್ಟು – 2 ಕಪ್
ತಯಾರಿಸುವ ವಿಧಾನ: ಕಪ್‌ನಲ್ಲಿ ಮೊಟ್ಟೆ ಒಡೆದು ಹಾಕಿ, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ನೊರೆ ಬರುವವರೆಗೂ ಕಲೆಸಿ. ನಂತರ ಒಂದು ತವಾವನ್ನು ಬಿಸಿ ಮಾಡಿ ಮಧ್ಯಮ ಉರಿಯಲ್ಲಿ ಇರಿಸಿಕೊಂಡು ಅಗಲವಾದ ದೋಸೆ ಹಾಕಿ. ದೋಸೆ ದಪ್ಪವಾಗಿರಲಿ, ದೋಸೆ ಹಾಕಿದ ಕೂಡಲೇ ಅದರ ಮೇಲೆ ತುಪ್ಪ ಚಿಮುಕಿಸಿ. ದೋಸೆ ಮೇಲೆ ಮೊಟ್ಟೆ ಹಾಕಿ ಅದರ ಮೇಲೆ ಖಾರದ ಪುಡಿ ಚಿಮುಕಿಸಿ, ಮುಚ್ಚಿ ಅರ್ಧ ನಿಮಿಷ ಬೇಯಿಸಿ. ನಂತರ ಮೇಲೆ ಬೆಣ್ಣೆಯ ತುಂಡುಗಳನ್ನು ಇರಿಸಿ. ಕರಗಿದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿ ಹಾಕಿ. ಒಂದು ನಿಮಿಷ ಹಾಗೇ ಇರಿಸಿ, ನಂತರ ತೆಗೆದು ಸಾಂಬಾರ್ ಅಥವಾ ಚಟ್ನಿ ಜೊತೆ ತಿನ್ನಲು ಕೊಡಿ.
**
ಡಾಬಾ ಶೈಲಿಯ ಎಗ್ ಬುರ್ಜಿ
ಬೇಕಾಗುವ ಸಾಮಗ್ರಿಗಳು: ಎಣ್ಣೆ – 3 ಚಮಚ, ಹಸಿಮೆಣಸು – 3, ಈರುಳ್ಳಿ – 4 ದೊಡ್ಡದು, ಟೊಮೆಟೊ – 1, ಉಪ್ಪು – ರುಚಿಗೆ, ಅರಿಸಿನ – ಚಿಟಿಕೆ, ಕೊತ್ತಂಬರಿ ಪುಡಿ – 1 ಚಮಚ, ಖಾರದಪುಡಿ – 2 ಚಮಚ, ಗರಂ ಮಸಾಲೆ – ಅವಶ್ಯಕತೆ ಇದ್ದರೆ, ಮೊಟ್ಟೆ – 8
ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯೊಂದಕ್ಕೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹಸಿಮೆಣಸು ಹಾಕಿ ಕೈಯಾಡಿಸಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಹೆಚ್ಚಿದ ಟೊಮೆಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಗೂ ಅರಿಸಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದರೆ ಗರಂ ಮಸಾಲ ಸೇರಿಸಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಟೊಮೆಟೊ ಬೇಯುವವರೆಗೂ ಬೇಯಿಸಿಕೊಳ್ಳಿ. ಅಷ್ಟರಲ್ಲಿ ಮೊಟ್ಟೆಯನ್ನು ಚೆನ್ನಾಗಿ ಕಲೆಸಿಕೊಳ್ಳಿ. ಅದನ್ನು ಒಲೆಯ ಮೇಲಿರುವ ಮಿಶ್ರಣಕ್ಕೆ ಸೇರಿಸಿ ಕೊತ್ತಂಬರಿ ಸೊಪ್ಪು ಹಾಕಿ ಒಂದು ನಿಮಿಷ ಹಾಗೇ ಬಿಡಿ. ನಂತರ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮೊಟ್ಟೆ ಸ್ವಲ್ಪ ಗಟ್ಟಿಯಾದ ಮೇಲೆ ಉದುರುದುರಾಗಿ ಎಗ್ ಬುರ್ಜಿ ತಯಾರಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.