ADVERTISEMENT

ಮೊಟ್ಟೆಯ ಖಾದ್ಯ ವೈವಿಧ್ಯ

ರೇಷ್ಮಾ
Published 4 ಮಾರ್ಚ್ 2022, 19:30 IST
Last Updated 4 ಮಾರ್ಚ್ 2022, 19:30 IST
ಎಗ್‌ ಮಸಾಲ ಫ್ರೈ
ಎಗ್‌ ಮಸಾಲ ಫ್ರೈ   

ಎಗ್ ಘೀ ರೋಸ್ಟ್

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 3, ಟೊಮೆಟೊ – 3, ಈರುಳ್ಳಿ – 2 (ದೊಡ್ಡದು). ಒಣಮೆಣಸು – 6 ರಿಂದ 7, ಕಾಳುಮೆಣಸು – 1 ಚಮಚ, ಕೊತ್ತಂಬರಿ – 1ಚಮಚ, ಜೀರಿಗೆ – 1 ಚಮಚ, ಬೆಳ್ಳುಳ್ಳಿ – 6 ಎಸಳು, ದಾಲ್ಚಿನ್ನಿ ಎಲೆ – 1, ಶುಂಠಿ – 1 ಚಮಚ, ಅರಿಸಿನ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ, ಕರಿಬೇವು– 10 ಎಸಳು.

ತಯಾರಿಸುವ ವಿಧಾನ:

ADVERTISEMENT

ಪ್ಯಾನ್‌ಗೆ ಒಣಮೆಣಸು, ಕಾಳುಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಗೂ ದಾಲ್ಚಿನ್ನಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಈ ಎಲ್ಲವನ್ನೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದೇ ಪ್ಯಾನ್‌ಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಕರಿಬೇವು ಹಾಗೂ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೂ ಕೈಯಾಡಿಸಿ. ಅದಕ್ಕೆ ಅರಿಸಿನ, ಉಪ್ಪು ಸೇರಿಸಿ ರುಬ್ಬಿಕೊಂಡ ಮಸಾಲೆ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಟೊಮೆಟೊ ಸೇರಿಸಿ ಹದಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಮಾಡಿ ಹಾಕಿ. ಮಿಶ್ರಣ ದಪ್ಪಕ್ಕೆ ಆಗುವವರೆಗೂ ಕುದಿಸಿ.

ಎಗ್‌ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 3, ಎಣ್ಣೆ – 2 ಚಮಚ, ಈರುಳ್ಳಿ – 2 ದೊಡ್ಡದು, ಹಸಿಮೆಣಸು – 2, ಕರಿಬೇವು – 10 ಎಲೆಗಳು, ಖಾರದಪುಡಿ – ಅರ್ಧ ಚಮಚ, ಅರಿಸಿನ ಪುಡಿ – ಚಿಟಿಕೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – ಅರ್ಧ ಚಮಚ, ಕಾಳುಮೆಣಸಿನ ಹುಡಿ – ಅರ್ಧ ಚಮಚ

ತಯಾರಿಸುವ ವಿಧಾನ: ಪ‍್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಉಪ್ಪು ಹಾಗೂ ಅರಿಸಿನ ಪುಡಿ ಸೇರಿಸಿ ಕೈಯಾಡಿಸಿ. ಅದಕ್ಕೆ ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಸೇರಿಸಿ ಎರಡೂ ಭಾಗವನ್ನು ಚೆನ್ನಾಗಿ ಹುರಿದು ಪ್ಲೇಟ್‌ನಲ್ಲಿ ತೆಗೆದು ಇರಿಸಿಕೊಳ್ಳಿ. ನಂತರ ಅದೇ ಎಣ್ಣೆಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು ಹಾಗೂ ಕರಿಬೇವು ಸೇರಿಸಿ ಈರುಳ್ಳಿ ಮೆತ್ತಾಗಾಗುವರೆಗೂ ಹುರಿಯಿರಿ. ಅದಕ್ಕೆ ಖಾರದಪುಡಿ, ಅರಿಸಿನ ಹಾಗೂ ಉಪ್ಪು ಸೇರಿಸಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ವಾಸನೆ ಹೋಗುವವರೆಗೂ ಹುರಿಯಿರಿ. ಈ ಮಿಶ್ರಣಕ್ಕೆ ಕಾಳುಮೆಣಸಿನ ಹುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣವಾದ ಮೇಲೆ, ಇದಕ್ಕೆ ಬೇಯಿಸಿದ ಮೊಟ್ಟೆಯನ್ನು ಅರ್ಧಭಾಗ ಮಾಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಮೊಟ್ಟೆಯ ಎಲ್ಲಾ ಬದಿಗೂ ಮಿಶ್ರಣ ಹಿಡಿಯುವಂತೆ ನೋಡಿಕೊಳ್ಳಿ. ಆದರೆ ಮೊಟ್ಟೆಯನ್ನು ಎಚ್ಚರದಿಂದ ತಿರುವಿ ಹಾಕಿ. ಮೊಟ್ಟೆ ಹಾಕಿದ ಮೇಲೆ ಒಂದೆರಡು ನಿಮಿಷ ಕುದಿಸಿ.

ಎಗ್‌ ಮಸಾಲ ಫ್ರೈ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 4 (ಬೇಯಿಸಿದ್ದು), ಎಣ್ಣೆ – 3 ಚಮಚ, ಜೀರಿಗೆ – ಅರ್ಧ ಚಮಚ, ಬೆಳ್ಳುಳ್ಳಿ ಎಸಳು – 8, ಕರಿಬೇವು– 8 ರಿಂದ 10 ಎಲೆ, ಅರಿಸಿನ ಪುಡಿ – ಅರ್ಧ ಚಮಚ, ಖಾರದಪುಡಿ – 1 ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಚಿಕನ್ ಮಸಾಲ – 1 ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ, ಎಣ್ಣೆ – ಹುರಿಯಲು

ತಯಾರಿಸುವ ವಿಧಾನ: ಪ್ಯಾನ್‌ನಲ್ಲಿ ಎಣ್ಣೆ ಹಾಕಿ 2 ನಿಮಿಷ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ, ಜೀರಿಗೆ ಹಾಗೂ ಕರಿಬೇವು ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ಅದಕ್ಕೆ ಅರಿಸಿನ ಪುಡಿ, ಖಾರದಪುಡಿ, ಕಾಳುಮೆಣಸಿನ ಪುಡಿ, ಚಿಕನ್ ಮಸಾಲ ಪುಡಿ, ಕೊತ್ತಂಬರಿ ಪುಡಿ ಹಾಗೂ ಉಪ್ಪು ಸೇರಿಸಿ ಒಂದು ನಿಮಿಷ ಕೈಯಾಡಿಸಿ. ಅದಕ್ಕೆ ಮೊಟ್ಟೆ ಸೇರಿಸಿ ಒಂದು ನಿಮಿಷ ಹುರಿಯಿರಿ. ಮೊಟ್ಟೆಯ ಸಂಪೂರ್ಣ ಭಾಗಕ್ಕೆ ಮಸಾಲೆ ಹಿಡಿಯುವಂತೆ ಮೊಟ್ಟೆಯನ್ನು ಮಸಾಲೆಯಲ್ಲಿ ತಿರುಗಿಸಿ. ಇದು ಚೆನ್ನಾಗಿ ಹಿಡಿದ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.